DasaraLatest

ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಲ್ಲಿನ ಅರಮನೆ, ಮೃಗಾಲಯ ಇನ್ನಿತರ ಪ್ರವಾಸಿ ತಾಣಗಳನ್ನೆಲ್ಲ ನೋಡಿದ ಬಳಿಕ ಮೈಸೂರು ಮಹಾರಾಜರ ಬಗ್ಗೆ ತಿಳಿಯಬೇಕೆಂಬ ಬಯಕೆ ಬಂದೇ ಬರುತ್ತದೆ.. ಹೀಗಾಗಿ ಮೈಸೂರು ಮಹಾರಾಜರ ಇತಿಹಾಸವನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ..

ಇತಿಹಾಸದ ಮೆಲುಕು ಹಾಕಿದರೆ ಸುಧೀರ್ಘ 550 ವರ್ಷಗಳ ಕಾಲ ಸುಮಾರು 25 ಮಹಾರಾಜರು ಸಂಸ್ಥಾನವನ್ನು ಆಳಿರುವುದು ತಿಳಿದು ಬರುತ್ತದೆ. ಇವತ್ತು ಮೈಸೂರಿನಲ್ಲಿ ಅಡ್ಡಾಡಿದರೆ ರಸ್ತೆ, ಕಟ್ಟಡ, ಅರಮನೆ ಹೀಗೆ ಎಲ್ಲವೂ ಮೈಸೂರಿನ ಇತಿಹಾಸವನ್ನು ಹೇಳುತ್ತಾ ಹೋಗುತ್ತವೆ.. ಇಲ್ಲಿನ ಅರಮನೆಗಳು, ಕಟ್ಟಡಗಳು, ರಸ್ತೆಗಳು ಹೀಗೆ ಎಲ್ಲವೂ ಇವತ್ತಿಗೂ ರಾಜರನ್ನು ನೆನಪು ಮಾಡಿಕೊಳ್ಳುವಂತೆ ಮಾಡುತ್ತವೆ.

ಮಹಾರಾಜರು ತಮ್ಮ ಆಡಳಿತದ ಕಾಲದಲ್ಲಿ ಸಾಮ್ರಾಜ್ಯ ವಿಸ್ತರಣೆಯ ಜತೆ ಜತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ  ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಲ್ಲದೆ, ಹಲವು ಯೋಜನೆಗಳನ್ನು ಜಾರಿಗೆ ಬಂದಿತಂದಿದ್ದರಿಂದ ದೇಶ ವಿದೇಶಗಳಲ್ಲಿ ಮೈಸೂರಿನ ಹೆಸರು ರಾರಾಜಿಸುವಂತಾಗಿದೆ.

ಮೈಸೂರು ಸಾಮ್ರಾಜ್ಯ ಹೇಗೆ ಉದಯವಾಯಿತು? ಯಾರು ಇದನ್ನು ಸ್ಥಾಪನೆ ಮಾಡಿದರು ಆ ನಂತರ ಯಾವ ರಾಜರುಗಳು ಮೈಸೂರು ರಾಜ್ಯವನ್ನು ಆಳಿದರು? ಹೀಗೆ ಎಲ್ಲವನ್ನು ತಿಳಿಯಬೇಕಾದರೆ ನಾವು  ಸುಮಾರು 626 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಏಕೆಂದರೆ ಮೈಸೂರು ರಾಜರ ಆಡಳಿತವು 1399ರಿಂದ ಆರಂಭವಾಗುತ್ತದೆ ಎಂಬುದು ಇತಿಹಾಸ ಹೇಳುತ್ತದೆ. ಅಷ್ಟೇ ಅಲ್ಲದೆ  ಯದುರಾಯರು ಯದುವಂಶದ ಸ್ಥಾಪಕರಾಗಿದ್ದು ಅವರ ಮೂಲಕವೇ ಯದು ವಂಶದ ಮೈಸೂರು ರಾಜ್ಯದ ಆಡಳಿತ ಶುರುವಾಗುತ್ತದೆ.

ಆದರೆ ಅದಕ್ಕೂ ಮುನ್ನು ಯಾರು ಈ ಯದುರಾಯರು ಎಂಬುದನ್ನು ತಿಳಿಯಬೇಕಾಗುತ್ತದೆ. ಈ ಬಗ್ಗೆ ತಿಳಿಯುತ್ತಾ ಹೋದಂತೆ ಯದುವಂಶದ ಆರಂಭದ ರೋಚಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಉತ್ತರದ ದ್ವಾರಕಾಪಟ್ಟಣದ ರಾಜದೇವನ ಮಗನೇ ಯದುರಾಯ. ಯದುರಾಯರು ತನ್ನ ಸಹೋದರ ಕೃಷ್ಣರಾಯರೊಂದಿಗೆ ಚೆಲುವನಾರಾಯಣಸ್ವಾಮಿಯ ದರ್ಶನ ಮಾಡುವ ಸಲುವಾಗಿ ಮೇಲುಕೋಟೆಗೆ ಬರುತ್ತಾರೆ. ಅಲ್ಲಿಂದ ಹಿಂತಿರುಗಿ ಕಾವೇರಿ ನದಿ ದಾಟಿ ಮೈಸೂರನ್ನು ತಲುಪುತ್ತಾರೆ.

ಈ ಸಮಯದಲ್ಲಿ ಮೈಸೂರನ್ನು ಆಳುತ್ತಿದ್ದ ಪಾಳೆಗಾರರಾಗಿದ್ದ ಚಾಮರಾಜ ತೀರಿಕೊಂಡಿರುತ್ತಾರೆ.  ಅವರ ಹೆಂಡತಿ ಹಾಗೂ ಸುಂದರ ಮಗಳಿಗೆ ಮೈಸೂರು ಸೀಮೆಯ ದಳವಾಯಿಯಾಗಿದ್ದ ಕೊರಗಳ್ಳಿ ಮಾರನಾಯಕ  ಹಿಂಸೆ ನೀಡುತ್ತಿರುತ್ತಾನೆ.ಇಷ್ಟೇ ಅಲ್ಲದೆ ಪುತ್ರಿ ದೇವಾಜಮ್ಮಣಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಪೀಡಿಸುತ್ತಿರುತ್ತಾನೆ. ಇದನ್ನು ತಿಳಿದ ಯದುರಾಯರು ಮಹಾರಾಣಿಯ ಸಹಾಯಕ್ಕೆ ಬರುವುದರೊಂದಿಗೆ ಮಾರನಾಯಕನನ್ನು ಕೊಲ್ಲುತ್ತಾರೆ. ಈ ವೇಳೆ ಮಹಾರಾಣಿ ತನ್ನ ಪುತ್ರಿ ದೇವಾಜಮ್ಮಣಿಯನ್ನು ಯದುರಾಯರಿಗೆ ಕೊಟ್ಟು ಮದುವೆ ಮಾಡುತ್ತಾರೆ. ಅಲ್ಲಿಂದ ಮೈಸೂರಿನಲ್ಲಿ ಯದುವಂಶದ ಆಡಳಿತ ಆರಂಭವಾಗುತ್ತದೆ..

ಯದುರಾಯರ ಬಳಿಕ 1423 ರಿಂದ 1459ರವರೆಗೆ ಒಂದನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್, 1459ರಿಂದ 1478ರವರೆಗೆ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಪುತ್ರ ತಿಮ್ಮರಾಜ ಒಡೆಯರ್ ಆಡಳಿತ ನಡೆಸಿದರೆ, ನಂತರ 1478ರಿಂದ 1513ರವರೆಗೆ ಎರಡನೇ ಹಿರಿಯ ಚಾಮರಾಜ ಒಡೆಯರ್, 1513 ರಿಂದ 1553ರವರೆಗೆ ಮೂರನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಆಡಳಿತ ನಡೆಸುತ್ತಾರೆ.

1553ರಿಂದ 1572ರವರೆಗೆ ಆಡಳಿತ ನಡೆಸಿದ ಎರಡನೆಯ ತಿಮ್ಮರಾಜ ಒಡೆಯರ್ ಮೈಸೂರನ್ನು ವಿಸ್ತರಿಸಿದರು. 1572ರಿಂದ1576ರವರೆಗೆ ನಾಲ್ಕನೇ ಬೋಳಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಐದನೇ ಬೆಟ್ಟದ ಚಾಮರಾಜ ಒಡೆಯರ್ 1576ರಿಂದ 1578ರವರೆಗೆ ಕೇವಲ ಎರಡು ವರ್ಷಗಳ ಕಾಲ ಆಡಳಿತ ನಡೆಸಿದರಲ್ಲದೆ, ವೈರಾಗ್ಯ ತಾಳಿದ ಅವರು ಆಡಳಿತವನ್ನು ತನ್ನ ಸಹೋದರರಿಗೆ ವಹಿಸಿಕೊಟ್ಟರು.

ಆ ನಂತರ ಆಡಳಿತ ವಹಿಸಿಕೊಂಡ ಒಂದನೇ ರಾಜ ಒಡೆಯರ್ 1578ರಿಂದ 1617ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಅಂದರೆ 1610ರಲ್ಲಿ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತಲ್ಲದೆ, ದಸರಾ ಆಚರಣೆಯೂ ಜಾರಿಗೆ ಬಂದಿತು. 1617ರಿಂದ 1637ರವರೆಗೆ ಆರನೇ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಮೈಸೂರು ರಾಜ್ಯ ಇನ್ನಷ್ಟು ವಿಸ್ತಾರಗೊಂಡಿತು.

1637ರಲ್ಲಿ ಪಟ್ಟಕ್ಕೆ ಬಂದ ಇಮ್ಮಡಿರಾಜ ಒಡೆಯರ್ ವೀರರಾಗಿದ್ದರಲ್ಲದೆ ಒಂದೇ ವರ್ಷದಲ್ಲಿ ಮಲೆವರಗಂಡ, ಸಂಗೀತಲೋಲ, ವೀರ ಶೂರ, ಸಾಹಿತ್ಯ ರತ್ನಾಕರ, ಅಭಯ ಪ್ರತಾಪಾಧೀಶ್ವರ ಮುಂತಾದ ಬಿರುದು ಪಡೆದರಾದರೂ ಒಂದೇ ವರ್ಷವಷ್ಟೆ ಆಡಳಿತ ನಡೆಸಿದ್ದು, ಆ ನಂತರ 1638ರಿಂದ 1659 ರಣಧೀರ ಕಂಠೀರವ ನರಸರಾಜ ಒಡೆಯರ್ ಸುಮಾರು 20ವರ್ಷಗಳ ಕಾಲ ಆಡಳಿತ ನಡೆಸಿದರು. 1659ರಿಂದ 1672ರವರೆಗೆ ಆಡಳಿತ ನಡೆಸಿದ ದೊಡ್ಡ ದೇವರಾಜ ಒಡೆಯರ್ ಪರಾಕ್ರಮಿಯಾಗಿದ್ದು, ರಾಜಕುಲತಿಲಕ, ರಾಜಮಾರ್ತಾಂಡ, ರಾಜಾಧಿರಾಜ, ಪರಮೇಶ್ವರ ಮುಂತಾದ ಬಿರುದು ಪಡೆದುಕೊಂಡರು.

1672ರಿಂದ 1704ರವರೆಗೆ ರಾಜ್ಯಭಾರ ಮಾಡಿದ ಚಿಕ್ಕದೇವರಾಜ ಒಡೆಯರ್ ಪಂಡಿತರೂ, ಮಹಾಪರಾಕ್ರಮಿಯೂ ಆಗಿದ್ದರು. ಇವರು ಶಿವಾಜಿ ಮತ್ತು ಔರಂಗಜೇಬನ ಸಮಕಾಲೀನರಾಗಿದ್ದರು. ರಾಜ್ಯಭಾರ ವಹಿಸಿಕೊಂಡ ಐದು ದಿನದಲ್ಲಿ ದಂಡೆತ್ತಿ ಬಂದ ಮಧುರೆಯ ಚೊಕ್ಕನಾಯಕನೆಂಬ ಪಾಳೇಗಾರನನ್ನು ಎದುರಿಸಿ ಜಯಪಡೆದರಲ್ಲದೆ, ಸತ್ಯಮಂಗಲ ಮತ್ತು ಧರ್ಮಪುರಂ ಎಂಬ ಎರಡು ಚಿಕ್ಕ ರಾಜ್ಯವನ್ನು ತಮ್ಮ ವಶ ಮಾಡಿಕೊಂಡರು.

ಚಿಕ್ಕದೇವರಾಜ ಒಡೆಯರ್ ಪುತ್ರರಾದ ಕಂಠೀರವ ಮಹಾರಾಜ ಒಡೆಯರ್ 1704ರಿಂದ 1713ರವರೆಗೆ ಆಡಳಿತ ನಡೆಸಿದರು ಇವರ ಪುತ್ರ ದೊಡ್ಡ ಕೃಷ್ಣರಾಜ ಒಡೆಯರ್ ಕೇವಲ ಹನ್ನೆರಡು ವರ್ಷಕ್ಕೆ ಪಟ್ಟಕ್ಕೇರಿದರು. 1714ರಿಂದ 1732ರವರೆಗೆ ಆಡಳಿತ ನಡೆಸಿದರು. ದೊಡ್ಡ ಕೃಷ್ಣರಾಜ ಒಡೆಯರ್ ಮಕ್ಕಳಿಲ್ಲದ ಕಾರಣ ಚಾಮರಾಜ ಒಡೆಯರ್ ಅವರನ್ನು ದತ್ತು ತೆಗೆದುಕೊಂಡರು. ಚಾಮರಾಜ ಒಡೆಯರ್ 1732ರಿಂದ 1734ರವರೆಗೆ ರಾಜ್ಯವಾಳಿದರು.

ಇವರ ಬಳಿಕ ಎರಡನೇ ಇಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದು 1734ರಿಂದ 1766ರವರೆಗೆ ರಾಜ್ಯಾಭಾರ ನಡೆಸಿದರು. ಇಮ್ಮಡಿ ಕೃಷ್ಣರಾಜ ಒಡೆಯರ್ ನಂತರ ನವಾಬ್ ಹೈದರಾಲಿ ಖಾನರ ಸಲಹೆ ಮೇರೆಗೆ ಚಲುವಾಜಮ್ಮಣ್ಣಿ ಅವರು ನಂಜರಾಜ ಒಡೆಯರ್ ಗೆ ಪಟ್ಟ ಕಟ್ಟಿದರು ಅವರು 1766ರಿಂದ 1770ರವರೆಗೆ ರಾಜಭಾರ ನಡೆಸಿದರು.

1770 ರಿಂದ 1776ರವರೆಗೆ ಎಂಟನೇ ಬೆಟ್ಟದ ಚಾಮರಾಜ ಒಡೆಯರ್ ಆಡಳಿತ ನಡೆಸಿದರಾದರೂ ಹೈದರಾಲಿಯೇ ಸರ್ವಾಧಿಕಾರಿಯಾಗಿದ್ದನು. 1776ರಿಂದ 1796ರವರೆಗೆ ಒಂಬತ್ತನೇ ಖಾಸಾ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಬಹಳಷ್ಟು ಐತಿಹಾಸಿಕ ಘಟನೆಗಳು ನಡೆದವು. ಮೂರನೇ ಮುಮ್ಮಡಿ ಕೃಷ್ಣರಾಜ ಒಡೆಯರ್ 1799ರಿಂದ 1863ರವರೆಗೆ ಆಡಳಿತ ನಡೆಸಿದ್ದು, ಇವರ ಹುಟ್ಟು ಹೆಸರು ನಂಜರಾಜ ಒಡೆಯರ್. ನಂಜುಂಡೇಶ್ವರ ಅನುಗ್ರಹದಿಂದ ಜನಿಸಿದ್ದರಿಂದ ಆ ಹೆಸರು ಇಡಲಾಯಿತು.

1863ರಿಂದ 1894ರವರೆಗೆ ರಾಜ್ಯವಾಳಿದ ಚಾಮರಾಜೇಂದ್ರ ಒಡೆಯರ್  ಅವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತುಪುತ್ರರಾಗಿದ್ದು, 18ನೇ ವಯಸ್ಸಲ್ಲೇ ರಾಜ್ಯಭಾರವನ್ನು ವಹಿಸಿಕೊಂಡಿದ್ದರು. 1884ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ 1940ರಲ್ಲಿ ಕಾಲವಾದರು. 1919ರಲ್ಲಿ ಜನಿಸಿದ ಜಯಚಾಮರಾಜೇಂದ್ರ ಒಡೆಯರ್ ಗೆ 1940ರಲ್ಲಿ ಪಟ್ಟಾಭಿಷೇಕ ನಡೆಯಿತು. ಇವರು ರಾಜ್ಯಭಾರ ವಹಿಸಿಕೊಂಡ ಏಳು ವರ್ಷಕ್ಕೆ ಭಾರತ ಸ್ವಾತಂತ್ರ್ಯವಾಯಿತು. ಅಲ್ಲಿಗೆ ರಾಜಾಡಳಿತ ಕೊನೆಗೊಂಡಿತು.  ಸ್ವಾತಂತ್ರ್ಯ ನಂತರ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಮತ್ತು ಅವರ ಎರಡನೇ ಪತ್ನಿ ಮಹಾರಾಣಿ ತ್ರಿಪುರ ಸುಂದರಿ ದೇವಿಯ ಏಕೈಕ ಪುತ್ರರಾಗಿ  20 ಫೆಬ್ರವರಿ 1953 ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಜನಿಸಿದರು. ಇವರ ನಿಧನದ ನಂತರ ಮಕ್ಕಳಿಲ್ಲದ ಕಾರಣಕ್ಕೆ ಪತ್ನಿ ಪ್ರಮೋದಾದೇವಿ ಒಡೆಯರ್ ಅವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದತ್ತು ಪುತ್ರನಾಗಿ ಸ್ವೀಕರಿಸಿದ್ದಾರೆ. ಅವರು ಇದೀಗ ಸಂಸದರಾಗಿದ್ದಾರೆ.

 

B M Lavakumar

admin
the authoradmin

2 Comments

Leave a Reply