ಕೃತಜ್ಞತಾ ಭಾವದ ಕೊರತೆ ಜಗತ್ತಿನ ಸಮಸ್ಯೆಗಳಿಗೆ ಕಾರಣ:ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ

ಮೈಸೂರು: ಇಂದು ಜಗತ್ತಿನ ಜನರ ಮನಸ್ಸು ಸಂಕುಚಿತಗೊಳ್ಳುತ್ತಿದ್ದು ಆರೋಪ ಪ್ರತ್ಯಾರೋಪ, ಸ್ಪರ್ಧೆ, ಸ್ವಾರ್ಥ, ಲೋಭ, ಲಾಲಸೆ, ಬೇರೆಯವರ ಬೆಳವಣಿಗೆಯನ್ನು ಸಹಿಸದೆ ಅವರ ಕಾಲನ್ನು ಎಳೆಯುವಂತಹ ಪ್ರವೃತ್ತಿಯಿಂದ ಭಸ್ಮಾಸುರನ ಹಾಗೆ ತನ್ನ ಕಾಲಿಗೆ ತಾನೇ ಕೊಡಲಿ ಪೆಟ್ಟನ್ನು ಹಾಕಿಕೊಳ್ಳುತ್ತಿದ್ದಾನೆ. ಕೃತಜ್ಞತಾ ಭಾವದ ಕೊರತೆ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ ಪುರಸ್ಕೃತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು
ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ದಿಂದ ಐಶ್ವರ್ಯ ಪೆಟ್ರೋಲ್ ಬಂಕ್ ಎದುರು ನಡೆಯುತ್ತಿರುವ ಸೋಮನಾಥನ ದಿವ್ಯ ದರ್ಶನ ಮೇಳದಲ್ಲಿ ಭಾಗವಹಿಸಿ ಮಾತನಾಡಿ, ಜೀವನದಲ್ಲಿ ಅತಿ ಮುಖ್ಯವಾದದ್ದು ಕೃತಜ್ಞತಾ ಭಾವ ಜೀವನದಲ್ಲಿ ನಮಗೆ ಏನೆಲ್ಲಾ ಸಿಕ್ಕಿದೆಯೋ ಅದರ ಪ್ರತಿಯಾಗಿ ನಾವು ಮನಸ್ಸಿನ ಆಳದಿಂದ ಧನ್ಯವಾದಗಳು ತಿಳಿಸುವುದರಿಂದ ನಮಗೆ ಅದು ಇನ್ನಷ್ಟು ವೃದ್ಧಿಯಾಗುತ್ತಾ ಹೋಗುತ್ತದೆ ಎಂದರು. ಇದನ್ನ ನಮಗೆ ನಾವೇ ಮಾಡಿಕೊಳ್ಳತ್ತಾ ಹೋಗಬಹುದು.
ಉದಾಹರಣೆಗೆ ಹೃದಯ ತಾಯಿ ಗರ್ಭದಿಂದ ಇಲ್ಲಿಯವರೆಗೆ ಅದು ತನ್ನ ಸೇವೆಯನ್ನು ಸಲ್ಲಿಸುತ್ತಾ ಇದೆ ಎಂದಾದರೂ ಅದಕ್ಕೆ ಕೃತಜ್ಞತೆ ಸಲ್ಲಿಸಿದ್ದೇವೆಯೇ? ವಯಸ್ಸಾದ ನಂತರ ಮಂಡಿ ನೋವು ಕಾಲು ನೋವು ಅಂತ ಬೈದುಕೊಳ್ಳುತ್ತೇವೆ. ಚೆನ್ನಾಗಿದ್ದಾಗ ಎಂದಾದರೂ ಅದಕ್ಕೆ ಕೃತಜ್ಞತೆ ಹೇಳಿದ್ದೇವೆಯೇ? ನಾವು ಬಳಕೆ ಮಾಡುತ್ತಿರುವ ಪ್ರತಿಯೊಂದು ವಸ್ತುಗಳು ಪ್ರಕೃತಿ ಪಶು ಪಕ್ಷಿ ಪ್ರಾಣಿಗಳು ಮರ ಗಿಡಗಳು ನೀರು ಗಾಳಿ ಭೂಮಿ ಬಿಸಿಲು ಜೊತೆಗಾರರು ಭಗವಂತ ಎಲ್ಲರೂ ಮನುಷ್ಯನ ಸುಖಕ್ಕಾಗಿ ಇದ್ದೇವೆಯೇ ಹೊರತು ದುಃಖಕ್ಕಾಗಿ ಅಲ್ಲ. ಆದರೆ ಮನುಷ್ಯ ಎಲ್ಲರಿಗೂ ದುಃಖ ಕೊಡುವವನೇ ಆಗಿದ್ದಾನೆ.

ಮತ್ತೆ ಯಾವಾಗ ಸುಖ ಕೊಡುತ್ತಾನೆ. ಕೃತಜ್ಞತಾ ಭಾವಗಳು, ಧನ್ಯವಾದಗಳು, ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಒಂದು ಸೆಕೆಂಡಲ್ಲಿ ಪರಿಹಾರವನ್ನು ಕೊಡಿಸುತ್ತದೆ ಎಂದು ವಿವರಿಸಿದರು. ಅದಕ್ಕಾಗಿ ಈಶ್ವರೀಯ ವಿಶ್ವವಿದ್ಯಾಲಯವು ಇಂತಹ ಬೃಹತ್ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಿ ಅವರಲ್ಲಿ ಇರುವಂತಹ ಕೃತಜ್ಞತಾ ಭಾವವನ್ನು ಜಾಗೃತಿಗೊಳ್ಳಿಸುವಂತಹ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಿ.ಕೆ.ರಂಗನಾಥ್, ಮೇಳಾದ ಮುಖ್ಯ ಸಂಚಾಲಕಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಡಾಕ್ಟರ್ ಲಕ್ಷ್ಮೀಜಿ, ಬಿಕೆ ರಶ್ಮಿಜೀ, ಬಿಕೆ ಶಿವಲೀಲಾಜಿ, ಛಾಯಾಗ್ರಾಹಕ ಕುಮಾರ್, ಶಿವಪ್ಪ, ಪೊಲೀಸ್ ನಿವೃತ್ತ ಅಧಿಕಾರಿ ಸಿದ್ದಯ್ಯ, ನಿವೃತ್ತ ಅರಣ್ಯ ಅಧಿಕಾರಿ ಪುಟ್ಟ ಶೇಖರ ಮೂರ್ತಿ, ಲಕ್ಷ್ಮಮ್ಮ, ರಾಧಾ, ಹಾಜರಿದ್ದರು







