ವಾರಾಂತ್ಯದ ಮೂರು ದಿನಗಳ ಮೈಸೂರು ಸಂತೆಗೆ ನೀವೂ ಬನ್ನಿ.. ಏನೆಲ್ಲ ವಿಶೇಷತೆಗಳಿವೆ?
ಮನರಂಜನೆ ನೀಡುವುದು ಮೈಸೂರು ಸಂತೆ-2026ರ ಉದ್ದೇಶ

ಮೈಸೂರು: ವಾರಾಂತ್ಯದ ಮೂರು ದಿನಗಳ ಕಾಲ ಮೈಸೂರು ನಾಗರಿಕರು, ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ಮನಸ್ಸಿಗೆ ಮುದ ನೀಡುವ ಮತ್ತು ವ್ಯಾಪಾರೋದ್ಯಮವನ್ನು ಉತ್ತೇಜಿಸುವ, ಮನರಂಜನೆ ಪಡೆಯುವಂತೆ ಮಾಡುವ, ಒತ್ತಡವನ್ನೆಲ್ಲ ಬದಿಗೊತ್ತಿ ಒಂದಷ್ಟು ಸಮಯವನ್ನು ಖುಷಿಯಾಗಿ ಕಳೆಯುವ ಸಲುವಾಗಿ ಭರತ್ ಗೌಡ, ಕಾರ್ತಿಕ್ ಮಹೇಶ್, ಡಾ. ಪೂಜಾ ಜೋಶಿ, ಸ್ಮಿತಾ ಬಾಲು, ಸ್ನೇಹಲ್ ಇಗೂರ್ ಮತ್ತು ರಮ್ಯಾ ಗೌಡ ಅವರನ್ನೊಳಗೊಂಡ ತಂಡವು ಮೈಸೂರಿನಲ್ಲಿ ಮೂರು ದಿನಗಳ ಕಾಲ ಮೈಸೂರು ಸಂತೆಯನ್ನು ಆಯೋಜಿಸುತ್ತಿದೆ.

ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಹಾಗೂ ಮೈಸೂರಿನ ಹಿರಿಮೆಯನ್ನು ಸಾರುವ, ಸಂಗೀತ, ಹಾಸ್ಯ, ನೃತ್ಯ, ಮನರಂಜನೆಯನ್ನು ನೀಡುವುದು ಮೈಸೂರು ಸಂತೆ-2026ರ ಉದ್ದೇಶವಾಗಿದೆ. ಹೀಗಾಗಿ ಒಂದಷ್ಟು ಸಮಯವನ್ನು ಒತ್ತಡ ಮುಕ್ತ ಮತ್ತು ಸಂತಸದಿಂದ ಕಳೆಯಲು ಇಚ್ಚಿಸುವವರು ಇದೇ ಫೆಬ್ರವರಿ 6, 7 ಮತ್ತು 8ರಂದು ಮೂರು ದಿನಗಳ ಕಾಲ ಬಿಡುವು ಮಾಡಿಕೊಂಡು ನಗರದ ಐತಿಹಾಸಿಕ ಮಹಾರಾಜ ಕಾಲೇಜು ಮೈದಾನದ ಕಡೆಗೆ ಹೆಜ್ಜೆ ಹಾಕಬಹುದಾಗಿದೆ.
ಮೂರು ದಿನಗಳ ಕಾಲವೂ ಪ್ರತಿದಿನ ಬೆಳಿಗ್ಗೆ 11ರಿಂದ ರಾತ್ರಿ 10 ಗಂಟೆವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುವ ಈ ಕಾರ್ಯಕ್ರಮವು ಮಹಿಳಾ ಹಾಗೂ ಸ್ಥಳೀಯ ಉದ್ಯಮಶೀಲತೆಗೆ ಉತ್ತೇಜನ ನೀಡುವ ಜೊತೆಗೆ ಕುಟುಂಬಗಳು, ಸ್ನೇಹಿತರು ಮತ್ತು ಪ್ರವಾಸಿಗರಿಗೆ ಸಂತೋಷದ ಸಮಯ ಕಳೆಯುವ ವೇದಿಕೆಯಾಗಲಿದೆ

ಕಾರ್ಯಕ್ರಮದ ಉದ್ಘಾಟನೆ ಫೆಬ್ರವರಿ 6ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಮಧು ಚಂದನ್, ಬಿಗ್ಬಾಸ್ ಸ್ಪರ್ಧಿ, ನಿರೂಪಕಿ ಹಾಗೂ ನಟಿ ಮಿಸ್ ಜಾನ್ವಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್, ಆರ್ವಿ ವಿಶ್ವವಿದ್ಯಾಲಯದ ಉಪ ಕುಲಪತಿ ಹಾಗೂ ನಿರ್ದೇಶಕ ಪ್ರೊ. ಉನಿಯಾಲ್, ಗ್ಲೋಬಲ್ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಜಯಚಂದ್ರ ರಾಜು ಪಿ., ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ (ರಾಜಸ್ವ) ಸೋಮಶೇಖರ್, ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿಶಂಕರ್ ಬಿ.ಎಸ್. ಉಪಸ್ಥಿತರಿರುವರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ವ್ಯಾಪರೀದ್ಯಮಿಗಳು 100ಕ್ಕೂ ಹೆಚ್ಚು ಆಯ್ದ ಮಳಿಗೆಗಳಲ್ಲಿ ಹಬ್ಬದ ವಸ್ತ್ರಗಳು, ಕೈತೋಟದ ಕಲಾಕೃತಿಗಳು, ಮನೆ ಅಲಂಕಾರ ವಸ್ತುಗಳು ಹಾಗೂ ಜೀವನಶೈಲಿ ಉತ್ಪನ್ನಗಳನ್ನ ಮಾರಾಟ ಮಾಡಲಿದ್ದಾರೆ.

ಸ್ಥಳೀಯ ಹಾಗೂ ಬಹುಪಾಕ ಶೈಲಿಯ ಆಹಾರ ಮಳಿಗೆಗಳು, ಮಕ್ಕಳಿಗಾಗಿ ವಿಶೇಷ ಆಟ-ಚಟುವಟಿಕೆ ವಲಯ, ಕಾರ್ಯಾಗಾರಗಳು, ಸಂವಹನಾತ್ಮಕ ಕಾರ್ಯಕ್ರಮಗಳು ಮತ್ತು ಐಷಾರಾಮಿ ಕಾರು-ಬೈಕ್ ಪ್ರದರ್ಶನಗಳು ಸಂತೆಯ ಪ್ರಮುಖ ಆಕರ್ಷಣೆಗಳಾಗಿವೆ.
ಪ್ರತಿದಿನ ಸಂಜೆ 6ರಿಂದ ಕನ್ನಡ ಗೀತೆಗಳ ಗಾಯನ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರು ಸಂತೆಗೆ ಮೆರುಗು ನೀಡಲಿವೆ. ಮೈಸೂರು ಸಂತೆ-2026ಕ್ಕೆ ಪ್ರವೇಶ ಶುಲ್ಕ ಕೇವಲ ₹60 ಮಾತ್ರವಾಗಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಹಬ್ಬದ ಅನುಭವವನ್ನು ನೀಡಲಿದೆ. ಇನ್ನೇಕೆ ತಡ ನಿಮ್ಮ ಎಲ್ಲ ಕೆಲಸವನ್ನು ಬದಿಗೊತ್ತಿ ಮೈಸೂರು ಸಂತೆಯಲ್ಲಿ ಭಾಗವಹಿಸಿ ಖುಷಿಪಡಿ…







