DasaraLatest

ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?

ದಸರಾ ರಜೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮೈಸೂರು ನಗರ ಮತ್ತು ಸುತ್ತಮುತ್ತಲಿರುವ ಪ್ರವಾಸಿ ತಾಣಗಳಿಗೆ ಲಗ್ಗೆಯಿಡುತ್ತಾರೆ.  ನಗರವನ್ನೆಲ್ಲ ಸುತ್ತಾಡಿಕೊಂಡು ನಗರದಲ್ಲಿರುವ ಪ್ರವಾಸಿ ತಾಣಗಳನ್ನೆಲ್ಲ ಕಣ್ತುಂಬಿಕೊಳ್ಳುವುದೇ ಒಂಥರಾ ಮಜಾ.. ಬಹಳಷ್ಟು ಜನರು ಈ ಸಮಯಕ್ಕಾಗಿಯೇ ಕಾಯುವುದು ಮಾಮೂಲಿಯಾಗಿದೆ. ಹೀಗಾಗಿ ಮೈಸೂರಿನಲ್ಲಿರುವ ಒಂದಷ್ಟು ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ.

ದೂರದಿಂದ ಮೈಸೂರು ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹೃದಯಭಾಗದಲ್ಲಿರು ಅರಮನೆ ಕಾಣಿಸುತ್ತದೆ. ಅದರ ಎದುರಿಗಿನ ಚಾಮುಂಡಿಬೆಟ್ಟ ಕಣ್ಮುಂದೆ ಬರುತ್ತದೆ. ಚಾಮುಂಡಿಬೆಟ್ಟವು ಮೈಸೂರಿನ ಜನರ ಅಧಿದೇವತೆ, ಯದುವಂಶದ ಕುಲದೈವ ಶ್ರೀ ಚಾಮುಂಡೇಶ್ವರಿಯ ನೆಲೆವೀಡು ಆಗಿದೆ. ಈ ಬೆಟ್ಟ ಸಮುದ್ರ ಮಟ್ಟಕ್ಕಿಂತ 3,489 ಅಡಿ ಎತ್ತರದಲ್ಲಿರುವ ಮೈಸೂರಿನ ಆಕರ್ಷಣೀಯ ಧಾರ್ಮಿಕ ಕ್ಷೇತ್ರ ಮತ್ತು ಹಸಿರನೈಸಿರಿಯಲ್ಲಿರುವ ಪ್ರೇಕ್ಷಣೀಯ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ:ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ?

ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿಗೆ ಬೆಟ್ಟದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷವಾಗಿದ್ದು, ಆ ದಿನಗಳಲ್ಲಿ ವಿಶೇಷಪೂಜೆ ಇರುತ್ತದೆ.  ಸಿಂಹವಾಹಿನಿ ಚತುರ್ಭುಜಧಾರಿಣಿಯಾದ ಇಲ್ಲಿನ ಚಾಮುಂಡೇಶ್ವರಿಯನ್ನು ನೋಡುವುದೇ ಭಕ್ತರಿಗೆ ಮಹದಾನಂದ. ಈ ಬೆಟ್ಟದಲ್ಲಿ ಮತ್ತೊಂದು ಆಕರ್ಷಣೀಯ ಸ್ಥಳವೆಂದರೆ ಸಮ್ಮರ್ ಪ್ಯಾಲೇಸ್ ಎಂದು ಕರೆಯಲ್ಪಡುವ ರಾಜೇಂದ್ರ ವಿಲಾಸ ಅರಮನೆ.  ಹಾಗೆಯೇ ಬೆಟ್ಟದ 700 ಮೆಟ್ಟಿಲುಗಳ ಬಳಿ ದೊಡ್ಡದೇವರಾಜ ಒಡೆಯರ್ ಅವರಿಂದ ನಿರ್ಮಿಸಲ್ಪಟ್ಟಿರುವ 16 ಅಡಿ ಎತ್ತರ 26 ಅಡಿ ಉದ್ದದ ಕಲ್ಲಿನ ಬೃಹತ್ ನಂದಿ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಇದನ್ನೂ ಓದಿ:ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ…

ಇನ್ನು ನಗರದಲ್ಲಿ ಅಡ್ಡಾಡಿದರೆ  ಗಗನವನ್ನು ಚುಂಬಿಸಿ ಬಿಡುತ್ತವೇನೋ ಎಂಬಂತಿರುವ ಎರಡು ಬೃಹತ್ ಗೋಪುರಗಳುಳ್ಳ ಗೋಥಿಕ್ ಮಾದರಿಯಲ್ಲಿ ನಿರ್ಮಿಸಲ್ಪಟ್ಟ ಕಲಾನೈಪುಣ್ಯದ ಕಟ್ಟಡ ಮೈಸೂರಿನ ಸಂತ ಫಿಲೋಮಿನಾ ಚರ್ಚ್.  1933ರಲ್ಲಿ ಈ ಕ್ರೈಸ್ತ ದೇವಾಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಶಂಕುಸ್ಥಾಪನೆ ಮಾಡಿದ್ದರು.  ಇಲ್ಲಿನ ಬೋಧನಾ ಮಂದಿರದಲ್ಲಿರುವ ಸಂತ ಫಿಲೋಮಿನಾಳ ವಿಗ್ರಹ ಅತ್ಯಂತ ಆಕರ್ಷಣೀಯವಾಗಿದೆ.  ಈ ಚರ್ಚ್ ತನ್ನ ಕಲಾತ್ಮಕ ಚೆಂದದಿಂದಲೇ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.

ಇದನ್ನೂ ಓದಿ: ನೀವೇಕೆ ಒಮ್ಮೆ ಹಿಮದ ಮಳೆಯಲ್ಲಿ ಮಿಂದೇಳಬಾರದು?

ನಗರದಲ್ಲಿ ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಕರ್ನಾಟಕದಲ್ಲೇ ಅತಿದೊಡ್ಡದೆನಿಸಿರುವ ಚಾಮರಾಜೇಂದ್ರ ಮೃಗಾಲಯವಿದೆ.  ದೋಣಿ ವಿಹಾರಕ್ಕೆ ಕಾರಂಜಿ ಕೆರೆ ಇದೆ.  ವಾಯುವಿಹಾರಕ್ಕೆ ಕುಕ್ಕರಹಳ್ಳಿ ಕೆರೆ ಏರಿ ಇದೆ.  ಮಕ್ಕಳ ಮನೋರಂಜನೆಗೆ ರೈಲ್ ಮ್ಯೂಸಿಯಂ ಮತ್ತು ಜವಾಹರ್ ಬಾಲಭವನ, ಗಾಂಧಿವನ ಹಾಗೂ ಜಿ.ಆರ್.ಎಸ್. ಫ್ಯಾಂಟಸಿ ಪಾರ್ಕ್ ಇದೆ.  ರುಚಿ ರುಚಿ ತಿನಿಸು, ಜೊತೆ ಜೊತೆಯಲ್ಲಿ ನಲಿವಿನ ಆಟ, ಸೊಗಸಿನ ನೋಟಕೆ ದಸರಾ ವಸ್ತು ಪ್ರದರ್ಶನವಿದೆ.  ಹೀಗೆ ಎಲ್ಲವೂ ಇದ್ದು ಇವೆಲ್ಲವೂ ದಸರಾ ಮಹೋತ್ಸವದಲ್ಲಿ ಮತ್ತಷ್ಟು ರಂಗುರಂಗಾಗಿ ಆಕರ್ಷಿಸುತ್ತದೆ.

ಇದನ್ನೂ ಓದಿ: ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ…

ಮೈಸೂರು ನಗರದ ಹೊರವಲಯದಲ್ಲಿ ಅಡ್ಡಾಡಿದರೆ ಅಂದದ ಅಣೆಕಟ್ಟು ಕೆ.ಆರ್.ಎಸ್ ಜಲಾಶಯವಿದ್ದು ಅಲ್ಲಿಗೂ ಹೋಗಿ ಬರಬಹುದು. ಶ್ರೀರಂಗಪಟ್ಟಣಕ್ಕೆ ತೆರಳಿದರೆ ದೇಗುಲ, ಕೋಟೆ ಕೊತ್ತಲ ನೋಡಿಕೊಂಡು, ರಂಗನತಿಟ್ಟು ಪಕ್ಷಿಧಾಮಕ್ಕೂ ಹೋಗಿ ಬರಬಹುದಾಗಿದೆ. ಮೈಸೂರು ನಗರ ದರ್ಶನದ ಜೊತೆ, ಜೊತೆಗೆ ದಕ್ಷಿಣದ ಶ್ರೀಶೈಲ ಮುಡುಕುತೊರೆ ಬೆಟ್ಟ, ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ, ಸೋಮನಾಥಪುರದ ಶ್ರೀ ಚನ್ನಕೇಶವ, ತಲಕಾಡು ಪಂಚಲಿಂಗೇಶ್ವರ, ತಿರುಮಕೂಡಲಿನ ತ್ರಿವೇಣಿ ಸಂಗಮ, ದೇವಿ, ಬೆಳಗೊಳದ ಬಲಮುರಿ ಹಾಗೂ ಎಡಮುರಿ ಹೀಗೆ ಹತ್ತು ಹಲವು ತಾಣಗಳಿಗೂ ಹೋಗಿ ಬರಬಹುದಾಗಿದೆ.

ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…

ನಿಸರ್ಗ ಪ್ರೇಮಿಗಳು ನಾಗರಹೊಳೆ ಉದ್ಯಾನ,ಹೆಚ್.ಡಿ.ಕೋಟೆಯಲ್ಲಿರುವ ಜಲಾಶಯಗಳನ್ನು ನೋಡಿಕೊಂಡು ಸಫಾರಿ ಮಾಡಿಕೊಂಡು ಬರಲು ಅವಕಾಶವಿದೆ. ಮೈಸೂರಿನಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರಿಗೆ ಸುತ್ತಮುತ್ತ ನೋಡಲು ಹಲವು ತಾಣಗಳಿದ್ದು ಎಲ್ಲವನ್ನೋ ನೋಡಿಕೊಂಡು ಹಿಂತಿರುಗಬಹುದಾಗಿದೆ. ಹೀಗಾಗಿಯೇ ದಸರಾ ರಜೆಗೆ ಮೈಸೂರಿನ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದು ಮಾಮೂಲಿಯಾಗಿದೆ.

-B M Lavakumar

admin
the authoradmin

Leave a Reply