ArticlesLatestVideos

ನೀರೆಯರ ಮನಗೆದ್ದ ಮೈಸೂರು ಸಿಲ್ಕ್ ಸೀರೆ! ಮೈಸೂರಲ್ಲಿ ಕಾರ್ಖಾನೆ ಸ್ಥಾಪನೆ ಆಗಿದ್ದು ಹೇಗೆ?

ಮೈಸೂರು ಸಿಲ್ಕ್ ಸೀರೆಯನ್ನು ಇಷ್ಟಪಡದ ಹೆಣ್ಮಕ್ಕಳು ವಿರಳವೇ ಎನ್ನಬೇಕು.. ಇವತ್ತು ಮೈಸೂರು ಸಿಲ್ಕ್ ದೇಶ ವಿದೇಶಗಳಲ್ಲಿ ಗಮನಸೆಳೆಯುತ್ತಿದೆ ಎನ್ನುವುದಾದರೆ ಅದಕ್ಕೆ ಮೈಸೂರನ್ನು ಆಳಿದ ಮಹಾರಾಜರು ಕಾರಣ ಎನ್ನುವುದನ್ನು ಒಪ್ಪಿಕೊಳ್ಳಬೇಕು.. ಮೈಸೂರು ಮಹಾರಾಜರು ನೀಡಿದ ಕೊಡುಗೆಗಳು ಇವತ್ತಿಗೂ ಮೈಸೂರು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗುವಂತೆ ಮಾಡಿವೆ. ಇಲ್ಲಿನ ಐತಿಹಾಸಿಕ ದಸರಾ ಸೇರಿದಂತೆ  ಹಲವು ಉತ್ಪನ್ನಗಳು ಇಂದಿಗೂ ತನ್ನದೇ ಆದ ಖ್ಯಾತಿಯನ್ನು ಪಡೆದಿದ್ದು, ಎಲ್ಲರೂ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿರುವುದರಲ್ಲಿ ಎರಡು ಮಾತಿಲ್ಲ.

ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮೈಸೂರು ಪಾಕ್ ಸೇವಿಸಿ, ಮೈಸೂರು ಮಲ್ಲಿಗೆ ಮುಡಿದು, ಮೈಸೂರ್ ಸಿಲ್ಕ್ ಸೀರೆಗಳನ್ನು ಖರೀದಿಸಿ ತಮ್ಮ ಊರಿಗೆ ಹಿಂತಿರುಗುವುದು ವಿಶೇಷ.. ಸಾಮಾನ್ಯವಾಗಿ ದೂರದಿಂದ ಬರುವ ಪ್ರವಾಸಿಗರು ಮೈಸೂರಿಗೆ ತೆರಳಿದರೆ ಮೈಸೂರು ಸಿಲ್ಕ್ ಸೀರೆಯನ್ನು ಖರೀದಿಸಲೇ ಬೇಕೆಂಬ ಸಂಕಲ್ಪ ಮಾಡುವವರಿದ್ದಾರೆ ಎಂದರೆ ಮೈಸೂರು ಸಿಲ್ಕ್ ಎಷ್ಟರ ಮಟ್ಟಿಗೆ ಹೆಂಗಳೆಯರ ಮನಗೆದ್ದಿದೆ ಎಂಬುದು ಗೊತ್ತಾಗಿ ಬಿಡುತ್ತದೆ.

ಇತರೆ ರೇಷ್ಮೆ ಸೀರೆಗಳಿಗೆ ಹೋಲಿಸಿದರೆ ಮೈಸೂರು ಸಿಲ್ಕ್  ಜರಿ, ಕುಸುರಿ, ವಿನ್ಯಾಸ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಗಮನಸೆಳೆಯುತ್ತದೆ. ಇಷ್ಟೇ ಅಲ್ಲದೆ ನುರಿತ ಕುಶಲಕರ್ಮಿಗಳಿಂದ  ಈ ಸೀರೆ ತಯಾರಾಗುತ್ತದೆ. ಹೀಗಾಗಿಯೇ ಈ ಸೀರೆ ಜರಿ ಮಾಸದೆ, ಹೊಚ್ಚ ಹೊಸದಂತೆ ಕಾಣುತ್ತದೆ. ಕುಸುರಿ ವಿನ್ಯಾಸದ ಸೀರೆ, ದೊಡ್ಡ ಬುಟ್ಟಾ ಪಲ್ಲು ಸೀರೆ, ಶ್ರೀಮಂತ ಪಲ್ಲು ಸೀರೆ, ಜವಾರ್ ಅಂಚಿನ ಸೀರೆ, ಸಣ್ಣ ಮಾವಿನ ಸೀರೆ, ಜರಿ ಪ್ರಿಂಟೆಡ್ ಸೀರೆ, ಟಿಶ್ಯೂ ಸೀರೆ ಸಾಂಪ್ರದಾಯಿಕ ಜರಿ ಸೀರೆ ಹೀಗೆ 115 ಬಗೆಯ 300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳು ಮೈಸೂರಿನ ಕಾರ್ಖಾನೆಗಳಲ್ಲಿ ತಯಾರಾಗುತ್ತಿವೆ.

ಮೈಸೂರಿಗೆ ಬರುವ ಪ್ರವಾಸಿಗರಿಗೆ  ಎಲ್ಲೆಂದರಲ್ಲಿ ಸಿಗಲಿ ಎಂಬ ಕಾರಣಕ್ಕಾಗಿ  ನಗರದ ಪ್ರಮುಖ ಸ್ಥಳಗಳಾದ ಜೆಎಲ್‌ಬಿ ರಸ್ತೆ, ನೀಲಗಿರಿ ರಸ್ತೆ ಹಾಗೂ ಮೃಗಾಲಯದ ಬಳಿ ಸೇರಿದಂತೆ ಹಲವೆಡೆ ಮಾರಾಟದ ಮಳಿಗೆ ತೆರೆಯಲಾಗಿದೆ. ಇಷ್ಟೇ ಅಲ್ಲದೆ  ನೇರವಾಗಿ ಮಾನಂದವಾಡಿ ರಸ್ತೆಯಲ್ಲಿರುವ ಕಾರ್ಖಾನೆಗೆ ತೆರಳಿ ತಮಗೊಪ್ಪುವ ರೇಷ್ಮೆ ಸೀರೆಗಳನ್ನು ಖರೀದಿಸಲು ಅವಕಾಶವನ್ನು  ಮಾಡಿಕೊಡಲಾಗಿದೆ. ಇದೆಲ್ಲದರ ನಡುವೆ ಮೈಸೂರಿನಲ್ಲಿ ರೇಷ್ಮೆ ಸೀರೆಗಳ ತಯಾರಿಕೆಯ ಕಾರ್ಖಾನೆ ಆರಂಭದ ಬಗ್ಗೆ ಹೇಳಲೇ ಬೇಕಾಗುತ್ತದೆ. ಇವತ್ತು ನಾವೆಲ್ಲರೂ ಹೆಮ್ಮೆ ಪಡುವ ಮೈಸೂರು ಸಿಲ್ಕ್ ಸ್ಥಾಪನೆಯಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಎನ್ನುವುದೇ ಖುಷಿಪಡುವ ವಿಚಾರವಾಗಿದೆ.

1912ರಲ್ಲಿ ಬ್ರಿಟನ್‌ನಲ್ಲಿ ನಡೆದ ರಾಣಿ ವಿಕ್ಟೋರಿಯಾ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವಕ್ಕೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ತೆರಳಿದ್ದರು. ಆಗ ಅಲ್ಲಿನ ರಾಜ ಮನೆತನದವರು ಧರಿಸಿದ್ದ ಯಂತ್ರ ನಿರ್ಮಿತ ರೇಷ್ಮೆ ವಸ್ತ್ರಗಳು ಅವರ ಗಮನಸೆಳೆಯಿತು. ಇದನ್ನು ಮೈಸೂರಿನಲ್ಲೇ ಏಕೆ ತಯಾರಿಸಬಾರದು  ಎಂದು ಆಲೋಚಿಸಿದ ಅವರು  ಆ ಕುರಿತಂತೆ ಮಾಹಿತಿ ಪಡೆದು ಸ್ವಿಡ್ಜರ್ ಲ್ಯಾಂಡ್ ನಿಂದ 32 ವಿದ್ಯುತ್ ಮಗ್ಗಗಳನ್ನು ಮೈಸೂರಿಗೆ ತರಿಸಿಕೊಂಡು ರೇಷ್ಮೆ ಸೀರೆ ತಯಾರಿಸುವ ಕಾರ್ಖಾನೆಗೆ ಚಾಲನೆ ನೀಡಿದರು. ಅವತ್ತಿನಿಂದ ಇವತ್ತಿನವರೆಗೆ ಹಲವು ವಿಧದಲ್ಲಿ ಅಭಿವೃದ್ಧಿಗೊಂಡು ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ  ಕಾರ್ಖಾನೆ ಹಲವು ರೀತಿಯ ರೇಷ್ಮೆ ಸೀರೆಗಳನ್ನು ತಯಾರು ಮಾಡುತ್ತಾ ತನ್ನದೇ ಆದ ಹೆಸರನ್ನು ದೇಶ ವಿದೇಶಗಳಲ್ಲಿ ಮಾಡಿದೆ.

ಮೈಸೂರು ಸಿಲ್ಕ್ ನ ವಿಶೇಷತೆಗಳನ್ನು ನೋಡಿದ್ದೇ ಆದರೆ ಶೇಕಡ ನೂರರಷ್ಟು ಉತ್ತಮ ರೇಷ್ಮೆ ಮತ್ತು ಚಿನ್ನದ ಜರಿ ಮಿಶ್ರಣದಿಂದ ಸೀರೆ ತಯಾರಾಗುತ್ತದೆ. ಜತೆಗೆ ಭಾರತದ ಮೊದಲ ರೇಷ್ಮೆ ಉತ್ಪಾದನಾ ಘಟಕವಾಗಿ  ಮೈಸೂರು ಸಿಲ್ಕ್ ನೇಯ್ಗೆ ಕಾರ್ಖಾನೆ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ ಆಗಿ ಸರ್ಕಾರದ ಅಧೀನದಲ್ಲಿ ನಡೆಯುತ್ತಾ ಬಂದಿದೆ. ಇತಿಹಾಸದ ಪುಟಗಳನ್ನು ತಿರುವಿದರೆ ಮೈಸೂರು ರಾಜ್ಯದಲ್ಲಿ ರೇಷ್ಮೆಯನ್ನು ಟಿಪ್ಪು ಸುಲ್ತಾನ್ ಪರಿಚಯಿಸಿದರೂ  ಅದಕ್ಕೊಂದು ಉದ್ಯಮದ ಮಾನ್ಯತೆ ನೀಡಿ ಜಗದ್ವಿಖ್ಯಾತವಾಗುವಂತೆ ಮಾಡಿದ್ದು,  ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಹೀಗಾಗಿ ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ.

ಇವತ್ತಿಗೂ ಮದುವೆ ಇನ್ನಿತರ ಶುಭಸಮಾರಂಭಗಳಲ್ಲಿ ಮೈಸೂರು ಸಿಲ್ಕ್ ಸೀರೆಯನ್ನುಟ್ಟು ಭಾಗವಹಿಸುವುದೇ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮವಾಗಿದೆ. ಸರ್ಕಾರಿ ಅಧೀನದಲ್ಲಿರುವ ಕಾರ್ಖಾನೆ (ಕೆಎಸ್‌ಐಸಿ)ಯಲ್ಲಿ ಪೈಪೋಟಿಗೆ ತಕ್ಕಂತೆ ವಿವಿಧ ಸೀರೆಗಳನ್ನು ತಯಾರಿಸಲಾಗುತ್ತಿದೆ. ಶುದ್ಧ ಚಿನ್ನದ ಜರಿಯೊಂದಿಗೆ ಪರಿಪೂರ್ಣ ಶುದ್ಧ ರೇಷ್ಮೆಯ ಸೀರೆ ತಯಾರಿಸುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ. ಇವತ್ತು ರೇಷ್ಮೆ ನೂಲು ತೆಗೆಯುವುದರಿಂದ ಆರಂಭವಾಗಿ ವಿವಿಧ ಬಣ್ಣಗಳಲ್ಲಿ ಹಾಗೂ ವಿನ್ಯಾಸ ಮಾತ್ರವಲ್ಲದೆ ಗುಣಮಟ್ಟವನ್ನು ಮೊದಲಿನಂತೆಯೇ ಉಳಿಸಿಕೊಂಡು ಬಂದಿರುವುದು ಮೈಸೂರು ಸಿಲ್ಕ್ ನ ಹಿರಿಮೆಗೆ ಸಾಕ್ಷಿಯಾಗಿದೆ.

B.M.Lavakumar

ವೀಡಿಯೋ ಹಿನ್ನಲೆ ಧ್ವನಿ: ಪೃಥ್ವಿ ದೇವರಾಜ್, ವೀಡಿಯೋ ಎಡಿಟಿಂಗ್: ಅರ್ಜುನ್ ಗೌಡ

 

admin
the authoradmin

ನಿಮ್ಮದೊಂದು ಉತ್ತರ

Translate to any language you want