ArticlesLatest

ಭಕ್ತರ ಇಷ್ಟಾರ್ಥ ನೆರವೇರಿಸುವ ನಾಡದೇವತೆಯ ನೆಲೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬನ್ನಿ.. ತಾಯಿಗೆ ನಮೋ ಎನ್ನಿ…

ಮೈಸೂರು: ಮೈಸೂರು ಅರಸರ ಕುಲದೇವಿ, ಮೈಸೂರಿನ ನಾಡದೇವತೆಯಾಗಿರುವ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಹಾತೊರೆಯುವ ಭಕ್ತರ ದೊಡ್ಡ ಸಮೂಹವೇ ಇದೆ. ಸಮಯ ಸಿಕ್ಕಾಗಲೆಲ್ಲ ಇಲ್ಲಿಗೆ ಬಂದು ತಾಯಿಯ ದರ್ಶನ ಮಾಡಿಕೊಂಡು ಹೋಗುತ್ತಾರೆ. ಹೀಗಾಗಿ ವರ್ಷದ ಎಲ್ಲ ದಿನವೂ ದೇವಾಲಯ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಇನ್ನು ಭಕ್ತರು ಮಾತ್ರವಲ್ಲದೆ, ಪ್ರವಾಸಿಗರು ಕೂಡ ಆಗಮಿಸಿ ದೇವಾಲಯವನ್ನು ನೋಡಿಕೊಂಡು ಇಲ್ಲಿನ ಸುಂದರ ಪರಿಸರದಲ್ಲಿ ಒಂದಷ್ಟು ಸಮಯವನ್ನು ಕಳೆದು ಹೋಗುತ್ತಾರೆ.

ಹಾಗೆನೋಡಿದರೆ ಸಮುದ್ರಮಟ್ಟದಿಂದ ಸುಮಾರು 3,489 ಅಡಿಯಷ್ಟು ಎತ್ತರದಲ್ಲಿರುವ ಚಾಮುಂಡಿಬೆಟ್ಟವು ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರನ್ನು ತನ್ನತ್ತ ಸೆಳೆಯುವ ತಾಣವಾಗಿದೆ. ಇದೊಂದು ಪ್ರವಾಸಿ ತಾಣವೂ ಆಗಿರುವ ಕಾರಣದಿಂದಾಗಿ ಜನಜಂಗುಳಿ ಸದಾ ನೆರೆದಿರುತ್ತದೆ. ಬೆಟ್ಟದ ಮೇಲಿಂದ ಕಾಣುವ ಸುಂದರ ದೃಶ್ಯಗಳನ್ನು ಸವಿಯಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಇಲ್ಲಿನ ಸುಂದರ ಪರಿಸರದಲ್ಲಿ ಅಡ್ಡಾಡಿ ಬಂದರೆ ಮೈನ ಹಗುರವಾಗುವುದರಲ್ಲಿ ಎರಡು ಮಾತಿಲ್ಲ.

ಇನ್ನು ಚಾಮುಂಡಿಬೆಟ್ಟದ ಪೌರಾಣಿಕ ಇತಿಹಾಸವನ್ನು ನೋಡಿದ್ದೇ ಆದರೆ ಈ ಬೆಟ್ಟದಲ್ಲಿ ಚಾಮುಂಡೇಶ್ವರಿ ನೆಲೆ ನಿಂತ ಬಗ್ಗೆ ಪೌರಾಣಿಕ ಕಥೆಗಳು ತೆರೆದುಕೊಳ್ಳುತ್ತವೆ. ಅಷ್ಟೇ ಅಲ್ಲದೆ ಚಾಮುಂಡೇಶ್ವರಿ ದುಷ್ಟರ ಸಂಹಾರ ಮತ್ತು ಶಿಷ್ಟರ ರಕ್ಷಣೆಗಾಗಿ ಇಲ್ಲಿ ನೆಲೆ ನಿಂತಿರುವುದು ಗೋಚರಿಸುತ್ತದೆ. ಚಾಮುಂಡೇಶ್ವರಿ ಇಲ್ಲಿ ನೆಲೆಸುವ ಮುನ್ನ ಈ ಬೆಟ್ಟವನ್ನು ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತಂತೆ. ಇವತ್ತಿಗೂ ಪ್ರಾಚೀನ ಮಹಾಬಲೇಶ್ವರ ದೇವಸ್ಥಾನ ಇಲ್ಲಿರುವುದನ್ನು ನಾವು ಕಾಣಬಹುದು.

ಮೊದಲಿದ್ದ ಮಹಾಬಲಾದ್ರಿ ಬೆಟ್ಟ ಚಾಮುಂಡೇಶ್ವರಿ ನೆಲೆ ನಿಂತ ಬಳಿಕ ಚಾಮುಂಡಿಬೆಟ್ಟವಾಗಿದೆ. ದೇವಿ ಮಹಾತ್ಮೆ ಕಥೆಯ ಪ್ರಕಾರ ಬ್ರಹ್ಮ-ವಿಷ್ಣು-ಮಹೇಶ್ವರರ ಶಕ್ತಿದೇವತೆಯಾಗಿ, ಅಷ್ಟದಳ ಪರ್ವತಗಳಲ್ಲಿ ಪಶ್ಚಿಮದಳದ ಮಧ್ಯಭಾಗದ ಶೃಂಗದಲ್ಲಿಯೇ ಆದಿಶಕ್ತಿ ಸ್ವರೂಪಿಣಿಯಾಗಿ ಮಹಿಷಾಸುರನೆಂಬ ದುಷ್ಟ ರಕ್ಕಸವನ್ನು ಸಂಹರಿಸಿ ಚಾಮುಂಡಾ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದು  ಚಾಮುಂಡೇಶ್ವರಿ ನೆಲೆ ನಿಂತಳು ಎಂಬುದು ತಿಳಿದು ಬರುತ್ತದೆ.

ಇನ್ನು ಇತಿಹಾಸದ ಪುಟಗಳನ್ನು ತಿರುವಿದರೆ ಚಾಮುಂಡಿಬೆಟ್ಟಕ್ಕೆ 11ನೇ ಶತಮಾನದ ಇತಿಹಾಸವಿದೆ. 11ನೇ ಶತಮಾನದಲ್ಲಿ ಈ ಕ್ಷೇತ್ರವನ್ನು ಮೊರ್ಬಲದ ತೀರ್ಥ, ಮೊಬೈಲದ ತೀರ್ಥ, ಮೊಬೈಲದ ತೀರ್ಥ ಕರೆಯಲಾಗುತ್ತಿತ್ತು ಎನ್ನಲಾಗಿದೆ. ಪೌರಾಣಿಕ ಕಥೆಯ ಪ್ರಕಾರ ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದನು. ಈತ ಜನರಿಗೆ ಹಾಗೂ ಋಷಿ ಮುನಿಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದನಲ್ಲದೆ ಯಜ್ಞಯಾಗಾದಿಗಳಿಗೆ  ಅಡ್ಡಿಪಡಿಸುತ್ತಿದ್ದನು.

ಹೀಗಿರಲು ಮಹಿಷಾಸುರನ ಉಪಟಳದಿಂದ ಬೇಸತ್ತ ಋಷಿ ಮುನಿಗಳು ತಮ್ಮನ್ನು ದುಷ್ಟ ರಾಕ್ಷಸನಿಂದ ಪಾರು ಮಾಡುವಂತೆ ಶಿವನ ಮೂಲಕ ಪಾರ್ವತಿ ಮೊರೆಹೋದರು.  ಪಾರ್ವತಿ ದೇವಿಗೆ ಎಲ್ಲ ದೇವತೆಗಳು  ಶಕ್ತಿ ತುಂಬಿದಾಗ ಚಾಮುಂಡೇಶ್ವರಿಯಾಗಿ ಸಿಂಹಾರೂಢಳಾಗಿ ಆಯುಧಗಳೊಂದಿಗೆ ತೆರಳಿ ದುಷ್ಟ ಮಹಿಷಾಸುರನನ್ನು ಕೊಂದಳೆಂದು ಪುರಾಣದಲ್ಲಿ ಹೇಳಲಾಗಿದೆ.

ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವು ಎಂಟು ಬೆಟ್ಟಗಳ ಪೈಕಿ ಒಂದಾಗಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಹಿಂದಿನ ಕಾಲದಲ್ಲಿ ಚಿಕ್ಕದಾಗಿದ್ದ ದೇಗುಲ ಕಾಲಾಂತರದಲ್ಲಿ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನವೆಂಬ ಖ್ಯಾತಿಪಡೆದಿದೆ. ಇನ್ನು ಮೈಸೂರು ಅರಸರ ಕಾಲದಲ್ಲಿ ದೇಗುಲ ಸರ್ವ ರೀತಿಯಲ್ಲಿ ಅಭಿವೃದ್ಧಿ ಕಂಡಿದೆ.

ಚಾರಿತ್ರಿಕ ಇತಿಹಾಸ ಗಮನಿಸಿದರೆ, ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆ ಈ ದೇವಾಲಯಕ್ಕಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರು ಚಾಮುಂಡೇಶ್ವರಿಯನ್ನು ಆರಾಧಿಸುತ್ತಿದ್ದರೆನ್ನಲಾಗಿದೆ. ಇವರ ಕಾಲದಲ್ಲಿ ದೇಗುಲ ಒಂದಷ್ಟು ಅಭಿವೃದ್ಧಿ ಕಂಡಿತು. ಮೈಸೂರು ಅರಸರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿದ್ದನ್ನು ಕಾಣಬಹುದಾಗಿದೆ.

ದೇವಸ್ಥಾನದ ಬಗ್ಗೆ ಹೇಳುವುದಾದರೆ ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ‘ಗೋಪುರ’ ಮತ್ತು ಗರ್ಭಗುಡಿಯ ಮೇಲೆ ‘ವಿಮಾನ’ ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನ  ಲೇಪಿತ ಕಲಶಗಳನ್ನಿಡಲಾಗಿದೆ.

ದೇಗುಲದ ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದುದ್ದಾಗಿದೆ. ಈ ವಿಗ್ರಹವನ್ನು ಮಾರ್ಕಂಡೇಯ ಋಷಿಗಳು ಸ್ಥಾಪಿಸಿದರೆಂದು ಪುರಾಣದ ಕಥೆ ಹೇಳುತ್ತದೆ. 1827ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದಲ್ಲದೆ, ‘ಸಿಂಹವಾಹನ’ ವನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು.

ಈ ‘ಸಿಂಹವಾಹನ’ ವನ್ನು ರಥೋತ್ಸವ ಸಂಧರ್ಭದಲ್ಲಿ ಬಳಸಲಾಗುತ್ತಿದ್ದು ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ದ್ವಾರದ ಮೇಲ್ಭಾಗದಲ್ಲಿ ಸಣ್ಣದೊಂದು ಗಣಪತಿಯ ವಿಗ್ರಹವನ್ನು ನೋಡಬಹುದು. ದ್ವಾರದ ಬೃಹತ್ ಮರದ ಬಾಗಿಲನ್ನು ಬೆಳ್ಳಿಯ ತಗಡಿನಿಂದ ಹೊದಿಸಲಾಗಿದ್ದು, ಬೆಳ್ಳಿಯ ಬಾಗಿಲಿನ ಮೇಲೆ ದೇವಿಯ ಹಲವು ಸ್ವರೂಪಗಳನ್ನು ತೋರಿಸಲಾಗಿದೆ. ಮಹಾದ್ವಾರದ ಕೆಳ ಪಾರ್ಶ್ವದಲ್ಲಿ ಇಂದ್ರಾದಿ ಅಷ್ಠದಿಕ್ಪಾಲಕರ ವಿಗ್ರಹಗಳು ಗಮನಸೆಳೆಯುತ್ತವೆ.

ದೇವಸ್ಥಾನದ ಮಹಾದ್ವಾರದಿಂದ ಒಳಗೆ ಹೋದರೆ ಬಲಭಾಗದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಸಣ್ಣ ವಿಗ್ರಹವು ಸ್ಥಾಪಿಸಲ್ಪಟ್ಟಿದೆ. ಈ ಗಣಪತಿಗೆ ನಮಿಸಿ ದೇಗುಲದ ಒಳಗಿರುವ ಕೆಲವು ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ಮುನ್ನಡೆದರೆ ಹೊಸ ಅನುಭವವಾಗುತ್ತದೆ. ಸುಡು ಬೇಸಿಗೆಯಲ್ಲಿಯೂ ತಣ್ಣನೆ ಅನುಭವ ನೀಡುತ್ತದೆ. ಹಾಗೆಯೇ ಮುನ್ನಡೆದರೆ ದೇವಸ್ಥಾನದ ಬಲಿಪೀಠ ಮತ್ತು ಧ್ವಜ ಸ್ಥಂಭ ಕಂಡುಬರುತ್ತದೆ. ಬಲಿಪೀಠದ ಮೇಲೆ ದೇವಿಯ ಪಾದಗಳನ್ನು ರೂಪಿಸಲಾಗಿದೆ.

ಇದೆರಡರ ಎದುರಿನ ಭಾಗದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಸಣ್ಣದೊಂದು ನಂದಿ ವಿಗ್ರಹವಿದೆ. ಅದು ತಾಯಿ ಚಾಮುಂಡಿಯನ್ನು ವೀಕ್ಷಿಸುತ್ತಿರುವುಂತೆ ಗೋಚರಿಸುತ್ತದೆ. ಧ್ವಜ ಸ್ಥಂಭಕ್ಕೆ ಈಶಾನ್ಯದಲ್ಲಿ ಗೋಡೆಯ ಮೇಲೆ ಆಂಜನೇಯನ ವಿಗ್ರಹವಿದ್ದು ಅದಕ್ಕೂ ನಿತ್ಯ ಪೂಜೆ ಜರುಗುತ್ತದೆ. ಇಲ್ಲಿನ ಪ್ರವೇಶ ದ್ವಾರದಲ್ಲಿ ನಂದಿನಿ ಮತ್ತು ಕಮಲಿನಿ ಎಂಬ ದ್ವಾರಪಾಲಿಕೆಯರ ವಿಗ್ರಹಗಳು ದ್ವಾರದ ಎಡ ಮತ್ತು ಬಲ ಭಾಗದಲ್ಲಿ ಕಾಣಿಸುತ್ತದೆ.

ಗರ್ಭಗುಡಿಗೆ ಮುನ್ನ ಇರುವ ಅತರಾಳದ ಎಡಭಾಗದಲ್ಲಿ ಮುದ್ದಾದ ಗಣಪತಿ ವಿಗ್ರಹ ಮತ್ತು ಬಲಭಾಗದಲ್ಲಿ ಭೈರವ ದೇವರ ವಿಗ್ರಹಗಳಿವೆ. ಭೈರವ ದೇವರ ಎಡಭಾಗದಲ್ಲಿ ಚಾಮುಂಡಿಯ ಪಂಚಲೋಹದ ಸುಂದರ ಉತ್ಸವ ಮೂರ್ತಿಯಿದೆ. ಗಣಪತಿಯ ಬಲಭಾಗದಲ್ಲಿ ಭಕ್ತನ ದಿರಿಸು ತೊಟ್ಟಿರುವ ಮುಮ್ಮಡಿ ಕೃಷ್ಣರಾಜ ಒಡೆಯರ ಆರು ಅಡಿ ಎತ್ತರದ ಸುಂದರ ಭಕ್ತ ವಿಗ್ರಹ ಕಾಣಬರುತ್ತದೆ. ಮಹಾರಾಜರು ತಮ್ಮ ಮೂವರು ಪತ್ನಿಯರೊಂದಿಗೆ ದೇವಿಗೆ ಕೈಮುಗಿದು ನಿಂತಿದ್ದಾರೆ.

ಮಹಾರಾಜರ ಎಡಭಾಗಗಳಲ್ಲಿ ನಿಂತಿರುವವರೆಂದರೆ ರಮಾವಿಲಾಸ, ಲಕ್ಷ್ಮಿವಿಲಾಸ ಮತ್ತು ಕೃಷ್ಣವಿಲಾಸ ಮಹಾರಾಣಿಯರು. ಇವರುಗಳ ಶಿಲಾ ವಿಗ್ರಹಗಳ ಪಾದದ ಬಳಿಯ ಪೀಠದ ಮೇಲೆ ಇವರುಗಳ ಹೆಸರುಗಳನ್ನು ಕೆತ್ತಲಾಗಿದೆ. ದೇವಾಲಯದ ಅರ್ಚಕರು ತಾಯಿ ಸ್ವರೂಪದ ಶಿಲಾ ಪ್ರತಿಮೆಯನ್ನು ಪ್ರತಿ ದಿನ ಅಲಂಕರಿಸಿ ಪೂಜೆ ಮಾಡುತ್ತಾರೆ.

ಗರ್ಭಗುಡಿಯ ಮೇಲ್ಭಾಗದಲ್ಲಿ ಇನ್ನೊಂದು ಸಣ್ಣ ಗೋಪುರ ಕಂಡು ಬರುತ್ತದೆ. ದೇವಾಲಯದ ಹೊರಗಿನಿಂದ ‘ವಿಮಾನ’ವನ್ನು ಕಾಣಬಹುದು. ಒಳ ಪಾರ್ಶ್ವದಲ್ಲಿರುವ ಪ್ರಾಕಾರದಲ್ಲಿ ಹಲವು ಸಣ್ಣ ಮೂರ್ತಿಗಳಿದ್ದು ಅಲ್ಲಿಯೂ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರಾಕಾರದಲ್ಲಿ ಪ್ರದಕ್ಷಿಣೆ ಮುಗಿಸಿ ದೇವಸ್ಥಾನದಿಂದ ಹೊರಹೋಗುವಾಗ ಶ್ರೀ ಆಂಜನೇಯಸ್ವಾಮಿ ದೇವರ ದರ್ಶನವನ್ನು ಮಾಡಬಹುದಾಗಿದೆ.

ಯದುಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿಗೆ ಮೈಸೂರಿನ ಮಹಾರಾಜರು ಹಲವು ಬಗೆಯ ಬೆಲೆಬಾಳುವ ಹಾಗೂ ಅಪರೂಪದ ಕಾಣಿಕೆಗಳನ್ನು ಹರಕೆಯಾಗಿ ಒಪ್ಪಿಸಿರುವುದನ್ನು ಕಾಣಬಹುದಾಗಿದೆ. ಈ ಶಕ್ತಿ ದೇವತೆಗೆ ಮಾನವ ಮತ್ತು ಪ್ರಾಣಿ ಬಲಿಯನ್ನು ಹಿಂದೆ ಕೊಡಲಾಗುತ್ತಿತ್ತು. ಆದರೆ 18ನೇ ಶತಮಾನದಲ್ಲಿ ಅದನ್ನು ನಿಲ್ಲಿಸಿ ಫಲಪುಷ್ಪಗಳ ಅರ್ಚನೆ, ಹಣ್ಣು ಹೂವು ಸಮರ್ಪಣೆ ಸೇರಿದಂತೆ ಇನ್ನಿತರ ಪೂಜಾಕೈಂಕರ್ಯಗಳಿಗೆ ಅವಕಾಶವಿದೆ.

 

 

admin
the authoradmin

Leave a Reply