ಮೈಸೂರು: ಇದೇ ಮೊದಲ ಬಾರಿಗೆ, ನಗರದ ನಾಗರಿಕರ ಪರವಾಗಿ, ನಾಗರಿಕ ಸಮಿತಿಯೊಂದು, ಮಹಾನಗರ ಪಾಲಿಕೆಗೆ, 2026-27ನೇ ಸಾಲಿನ ಪಾಲಿಕೆ ಬಜೆಟ್ ಮೇಲಣ ಹಲವು ಸಲಹೆಗಳನ್ನು ಮಂಗಳವಾರ ನೀಡಿತು. ಆಡಳಿತದಲ್ಲಿ ಕೃತಕ ಬುದ್ದಿ ಮತ್ತೆ ಬಳಕೆ ಸೇರಿದಂತೆ, ಹೊಸತನಗಳನ್ನು ಈ ಬಜೆಟ್ ಹೊಂದಿರಬೇಕು ಎಂದು ಭವಿಷ್ಯದರ್ಶಿ ಮಹಾ ಮೈಸೂರು ಸಂಘಟನೆಯ ಮುಖ್ಯ ಪ್ರವರ್ತಕ, ಖ್ಯಾತ ನರರೋಗ ತಜ್ಞ ಹಾಗು ಬಿಜೆಪಿ ಮುಖಂಡ ಡಾ. ಸುಶ್ರುತ ಗೌಡ ನೇತೃತ್ವದ ತಂಡ ಸಲಹೆ ನೀಡಿದೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ತನ್ವೀರ್ ಆಸೀಫ್ ಅವರನ್ನು ಭೇಟಿ ಮಾಡಿದ ತಂಡ, ನಗರ ನಾಗರಿಕರ ಪರವಾಗಿ ಕ್ರೂಢೀಕರಿಸಲಾದ ನಾನಾ ಸಲಹೆಗಳನ್ನು ನೀಡಿದ್ದು, ಆ ಸಲಹೆಗಳೇನು? ಎಂಬುದನ್ನು ನೋಡಿದ್ದೇ ಆದರೆ… ನಗರದ ಅಭಿವೃದ್ಧಿಗೆ ಸುಸ್ಥಿರ ತಂತ್ರಜ್ಞಾನ ಅಭಿವೃದ್ಧಿಗೆ ಚಾಲೆಂಜ್ ಫಂಡ್, ಆಡಳಿತದಲ್ಲಿ ಕ್ರಿಯಾತ್ಮಕ ಕೃತಕ ಬುದ್ದಿಮತ್ತೆ ಬಳಕೆಗೆ ಅನುದಾನ, ಪಾರಂಪರಿಕ ರಕ್ಷಣೆಗೆ ವಿಶೇಷ ಅನುದಾನ, ನಮ್ಮ ಮೈಸೂರು ಪ್ರಶಸ್ತಿ- ಕಾರ್ಯಕ್ರಮ, ಕಸ -ಮಾಲಿನ್ಯ ಮುಕ್ತ ನಗರಿಗೆ ವಿಶೇಷ ಅನುದಾನ, ನಮ್ಮ ವಾರ್ಡ್- ನಮ್ಮ ಪಾರ್ಕ್ ಯೋಜನೆ, ರಸ್ತೆ ನಿರ್ವಹಣೆಗೆ ತಂತ್ರಜ್ಞಾನ ಬಳಕೆ, ಪಾದಚಾರಿ ಮಾರ್ಗ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅವಶ್ಯಕವಾಗಿದೆ.

ಮೈಸೂರು ನಗರ ಪಾರಂಪರಿಕ ನಗರ ಎಂದೇ ಪ್ರಖ್ಯಾತವಾಗಿದೆ. ಮೈಸೂರು ಮಹಾರಾಜರುಗಳು ಕಟ್ಟಿ ಬೆಳೆಸಿದ ಅತ್ಯಂತ ಯೋಜಿತ ನಗರವಾದ ಮೈಸೂರಿನಲ್ಲಿ ಇಂದು ಸಮಸ್ಯೆಗಳ ಸಂಖ್ಯೆ ಕಡಿಮೆ ಇಲ್ಲ. ಈ ಸಮಸ್ಯೆಗಳಿಗೆ-ಸವಾಲುಗಳಿಗೆ ಸುಸ್ಥಿರ ಪರಿಹಾರ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡಬಲ್ಲ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ, ಈ ಪ್ರತಿಭೆಗಳಿಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಲು ಅವಕಾಶ ಅನುದಾನದ ಕೊರತೆ ಇದೆ. ಈ ಹಿನ್ನಲೆಯಲ್ಲಿ ನಗರದ ಜ್ವಲಂತ ಸಮಸ್ಯೆಗಳಾದ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಪೋಲು, ಪ್ರತಿ ಮನೆಗೂ ಕಬಿನಿ-ಕಾವೇರಿ ನೀರು ಪೂರೈಕೆ, ಸಾರಿಗೆ ಅವ್ಯವಸ್ಥೆ, ಮಧ್ಯವರ್ತಿಗಳಿಲ್ಲದ ಆಡಳಿತ, ಸರಕಾರಿ ಕಾಮಗಾರಿಗಳಲ್ಲಿ ಪಾರದರ್ಶಕತೆ, ಹೀಗೆ ಸಾರ್ವಜನಿಕ ಮಹತ್ವದ ವಿಷಯಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ ತಂತ್ರಜ್ಞಾನ ಅಭಿವೃದ್ಧಿಗೆ ಚಾಲೆಂಜ್ ಫಂಡ್ ಅನ್ನು ಈ ಬಜೆಟ್ ನಲ್ಲಿ ಘೋಷಿಸಬೇಕು ಎಂದು ತಿಳಿಸಿದ್ದಾರೆ.

ಪಾಲಿಕೆಯ ಆಡಳಿತವನ್ನು ಇನ್ನಷ್ಟು ಪಾರದರ್ಶಕ, ಕ್ರಿಯಾಶೀಲಗೊಳಿಸಲು, ಕೃತಕ ಬುದ್ದಿಮತ್ತೆ ಬಳಕೆಗೆ ಮಹಾನಗರ ಪಾಲಿಕೆ ಮುಂದಾಗಬೇಕು. ಆ ಮೂಲಕ ಇಡೀ ದೇಶದಲ್ಲೇ ಹೊಸ ಶಕೆಯೊಂದಕ್ಕೆ ಮೈಸೂರು ಪಾಲಿಕೆ ನಾಂದಿ ಹಾಡಬಹುದು. ಕುಡಿಯುವ ನೀರಿನ ವೈಜ್ಞಾನಿಕ ವಿತರಣೆ, ತೆರಿಗೆ ಸಂಗ್ರಹ, ಪಾಲಿಕೆ ಕಚೇರಿಗಳನ್ನು ಸಂಪೂರ್ಣವಾಗಿ ಕಾಗದ ಮುಕ್ತಗೊಳಿಸಿ, ಮೊಬೈಲ್ ಮೂಲಕ ಬಹುತೇಕ ಸೇವೆ ಒದಗಿಸುವುದು ಮೊದಲಾದುವುಗಳಿಗೆ ಕೃತಕ ಬುದ್ದಿ ಮತ್ತೆ ಬಳಕೆ ಸಾಧ್ಯವಿದೆ. ಇದಕ್ಕೆ ವಿಶೇಷ ಬಜೆಟ್ ಅನುದಾನ ಘೋಷಿಸಿ, ತಕ್ಷಣದಲ್ಲೇ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರಿನ ಶ್ರೇಷ್ಠತೆ ಇಲ್ಲಿನ ಪಾರಂಪರಿಕ ಕಟ್ಟಡಗಳು, ಮರಗಳು, ಜಿಐ ವಸ್ತುಗಳು. ಇತ್ಯಾದಿ. ಇವುಗಳ ರಕ್ಷಣೆಗೆ ಹಾಗು ಪುನರ್ ನಿರ್ಮಾಣಕ್ಕೆ ಈವರೆಗೆ ರಾಜ್ಯ ಸರಕಾರವಾಗಲಿ, ಪಾಲಿಕೆಯಾಗಲಿ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಇದು ಎಲ್ಲಾ ಮೈಸೂರಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ, ಬಜೆಟ್ ನಲ್ಲಿ ವಿಶೇಷ ಅನುದಾನ ಘೋಷಣೆ ಅತ್ಯಗತ್ಯ. ಇದರ ಜೊತೆಗೆ ಸಾಂಸ್ಕೃತಿಕ ನಗರಿ ಎಂದೇ ಖ್ಯಾತವಾದ ಮೈಸೂರಿನಲ್ಲಿ ದಸರಾ ಹೊರತು ಪಡಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಬಹುತೇಕ ಸ್ಥಗಿತವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಒಂದು ನಿಗದಿತ ವಾರದಂದು ನಮ್ಮ ಮೈಸೂರು ಉತ್ಸವ ಆಯೋಜನೆಗೆ ಅವರು ಸಲಹೆ ನೀಡಿದ್ದಾರೆ.

ನಮ್ಮ ನಗರದ ಶ್ವಾಸಕೋಶಗಳಂತಿರುವ ಉದ್ಯಾನವನಗಳ ದುಸ್ಥಿತಿ ಎಲ್ಲರ ಅರಿವಿನಲ್ಲಿದೆ. ಈ ಹಿನ್ನಲೆಯಲ್ಲಿ, ಪಾರ್ಕ್ ಗಳ ಅಭಿವೃದಿ-ನಿರ್ವಹಣೆಗೆ ಆ ವಾರ್ಡ್ ನ ನಿವಾಸಿಗಳನ್ನು ಒಳಗೊಂಡು ಒಂದು ಸಾಮುದಾಯಿಕ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಬೇಕಿದೆ. ಮೈಸೂರಿನ ಬಹುತೇಕ ರಸ್ತೆಗಳು ಇಂದು ಅಧೋಗತಿಗೆ ತಲುಪಿವೆ. ರಸ್ತೆಗಳ ನಿಯಮಿತ ನಿರ್ವಹಣೆಗೆ ಪಾಲಿಕೆ ವಿಶೇಷ ಅನುದಾನ ಘೋಷಿಸಬೇಕು. ಜೊತೆಗೆ ತಂತ್ರಜ್ಞಾನ ಮೂಲಕ ಎಲ್ಲಾ ರಸ್ತೆಗಳ ನಿರ್ವಹಣೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ. ಪಾಲಿಕೆ ಎಷ್ಟರ ಮಟ್ಟಿಗೆ ಅಳವಡಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.








