CinemaLatest

ಅಂದು ನನಗೆ ಹೊಸ ವಿಷ್ಣುವರ್ಧನ್ ನೋಡಿದಂತೆ ಭಾಸವಾಗಿತ್ತು…!  ಸಾಹಸಸಿಂಹನ ಆ ದಿನಗಳ ನೆನಪು!

ಅನಿರೀಕ್ಷಿತವಾಗಿ ನಮ್ಮಿಂದ ಕಣ್ಮರೆಯಾದ ಕನ್ನಡದ ಕಣ್ಮಣಿ, ಕನ್ನಡದ ಸಂಪತ್ತು ನಮ್ಮ ವಿಷ್ಣುವರ್ಧನ್.

ವಿಷ್ಣುವರ್ಧನ್ ಅಂದ್ರೆ ವರ್ಷಕ್ಕೊಮ್ಮೆ ನೆನಪು ಮಾಡಿಕೊಳ್ಳುವ ವ್ಯಕ್ತಿಯಲ್ಲ… ಅವರು ಸದಾ ನಮ್ಮೊಂದಿಗೆ ನೆನಪಾಗಿ ಉಳಿದು ಹೋದ ಮತ್ತು  ಹೃದಯದಲ್ಲಿ ನೆಲೆ ನಿಂತ ಜೀವ… ಅವರ ಒಡನಾಟ ಮತ್ತು ಅದರಾಚೆಗಿನ ಒಂದಷ್ಟು ವಿಷಯಗಳನ್ನು ಇಲ್ಲಿ ಹೇಳುತ್ತಾ ಹೋಗಿದ್ದಾರೆ ಪತ್ರಕರ್ತ, ಲೇಖಕ ಎಸ್. ಪ್ರಕಾಶ್ ಬಾಬು... ನೀವೊಮ್ಮೆ ಓದಿ ಬಿಡಿ…

ವಿಷ್ಣುವರ್ಧನ್  ನಮ್ಮನ್ನಗಲಿ 16 ವರ್ಷಗಳಾದವು. ಅನಿರೀಕ್ಷಿತವಾಗಿ ನಮ್ಮಿಂದ ಕಣ್ಮರೆಯಾದ ಕನ್ನಡದ ಕಣ್ಮಣಿ, ಕನ್ನಡದ ಸಂಪತ್ತು ನಮ್ಮ ವಿಷ್ಣುವರ್ಧನ್. ಪತ್ರಕರ್ತನಾಗಿ ಅವರನ್ನು ಮೊದಲು ನಾನು ಸಂದರ್ಶಿಸಿದ್ದು 1998ರಲ್ಲಿ “ಹೆಂಡ್ತಿಗೆ ಹೇಳ್ತೀನಿ” ಶೂಟಿಂಗ್ ನಲ್ಲಿ. ಅವರನ್ನು ಕೊನೆಯದಾಗಿ ಸಂದರ್ಶಿಸಿದ್ದು 2008ರ “ಸ್ಕೂಲ್ ಮಾಸ್ಟರ್” ಶೂಟಿಂಗ್ ನಲ್ಲಿ. ಕೇವಲ ಹತ್ತು ವರ್ಷಗಳ ಅಂತರದಲ್ಲಿ ನನ್ನ ಅವರ ನಂಟು ಹಲವಾರು ವರ್ಷಗಳಷ್ಟು ಗಟ್ಟಿ ಅಂಟಾಗಿತ್ತು. ಅದಕ್ಕೆ ಕಾರಣ ನಾನೂ ಮೈಸೂರಿನವನು ಎಂಬ ಕಾರಣಕ್ಕೊ ಅಥವಾ ಇನ್ನಾವುದೋ ಬಾದರಾಯಣನ ಸಂಬಂಧಕ್ಕೋ ಗೊತ್ತಿಲ್ಲ.

ಇದನ್ನೂ ಓದಿ: ಬಣ್ಣ ಹಚ್ಚೋದು ಕಲಿತೆ, ಬದುಕೋದು ಕಲಿಯಲಿಲ್ಲ… ಇದು ಕಣ್ಮರೆಯಾದ ನಟ ಉಮೇಶ್ ರವರ ಸ್ವಗತ..

ವಿಷ್ಣುವರ್ಧನ್ ನನ್ನ ಕಂಡ ತಕ್ಷಣವೇ ಮೈಸೂರಿನ ಹಿರಿಯ ಪತ್ರಕರ್ತರುಗಳಾದ ಪ್ರಜಾವಾಣಿಯ ಪಟ್ಟಾಭಿ ರಾಮನ್, ಸಂಯುಕ್ತ ಕರ್ನಾಟಕದ ಪದ್ಮನಾಭ್, ಉದಯವಾಣಿಯ ಕೆ. ಜೆ. ಕುಮಾರ್, ಹವ್ಯಾಸಿ ಪತ್ರ ಕರ್ತರಾದ ಪಿ. ಎo. ರಾಜನ್ ಎಲ್ಲಿ? ಹೇಗಿದ್ದಾರೆ?  ಅಂತ ಕೇಳುತ್ತಿದ್ದರು. ಅಂಥ ಬಾಂಧವ್ಯ  ಪತ್ರಕರ್ತರೊಂದಿಗೆ ಎಲ್ಲ ನಟ ನಟಿಯರಲ್ಲೂ ಇರುತ್ತಿತ್ತು.  ಈಗಿನ ಕಲಾವಿದರಲ್ಲಿ ಅಂಥ ಗೌರವಯುತ ನಡೆ ಕಾಣುವುದೇ ಇಲ್ಲಾ.  ಆರಂಭದಲ್ಲಿ ಪತ್ರಕರ್ತರ ಹಿಂದೆ ಸುತ್ತುತ್ತಿದ್ದ ಈಗಿನ ಮಹಾನ್ ನಟರು, ಒಂದಿಷ್ಟು ಚಿಗುರಿ, ಇನ್ನೊಂದಿಷ್ಟು ಪೆದ್ದ ಹುಡುಗರು ಅಭಿಮಾನ ತೋರಿಸಿದ ನಂತರ ಅವರ ವರ್ತನೆ ಸಂಪೂರ್ಣ ಬದಲಾಗಿ ಹೋಗಿದೆ. ಚಿತ್ರ ರಂಗದಲ್ಲಿ ಸೈಕಲ್  ಹೊಡೆಯುತ್ತಿದ್ದ ಆರಂಭದ ದಿನಗಳಲ್ಲಿ ಗಾಂಧಿನಗರದ ಕನಿಷ್ಕ ಹೋಟೆಲ್ ನಲ್ಲಿ ಪತ್ರಕರ್ತರನ್ನು ಕಂಡ್ರೆ ಸಾಕು, ಬೇಡಾ ಎಂದರೂ ಕಾಫಿ, ಬಜ್ಜಿ, ಬೋಂಡಾ ತೊಗೊಂಡು ಬರುತ್ತಿದ್ದ ನಟರು ಈಗ ಫೋನ್ ಮಾಡಿದರೂ ಎತ್ತದಷ್ಟು ಬಿಜಿಯಾಗಿದ್ದಾರೆ.

ಇದೇನೇ ಇರಲಿ, ವಿಷ್ಣುವರ್ಧನ್ ರಂಥ ಹಿರಿಯ ಕಲಾವಿದರಲ್ಲಿ ಇಂತಹ ಅಹಂ ಇರಲಿಲ್ಲ. ಚಿತ್ರ ರಂಗಕ್ಕೆ ಕಾಲಿಡುವಾಗ ಅವರ ಗುಣ ಹೇಗಿತ್ತೋ, ಕೊನೆವರೆಗೂ ಅದೇ ವಿನಯತೆ ಪ್ರೀತಿ ಇಟ್ಟುಕೊಂಡಿರುತ್ತಿದ್ದರು. ಇದಕ್ಕೆ ಡಾ. ರಾಜ್ ಸ್ವಭಾವ ಸಹ ಭಿನ್ನವಾಗಿರಲಿಲ್ಲವಂತೆ. ಆದರೇ ಅವರನ್ನುಸಂದರ್ಶಸುವ ಅವಕಾಶ ನನಗೇ ಸಿಗಲಿಲ್ಲ.  ವಿಷ್ಣುವರ್ಧನ್ ರನ್ನು ನಾನು ಮೊದಲು ಭೇಟಿಯಾಗಿದ್ದು 1998ರಲ್ಲಿ. ದಿನೇಶ್ ಬಾಬು ನಿರ್ದೇಶನದ ಸುಹಾಸಿನಿ ಯೊಂದಿಗಿನ ಹೆಂಡ್ತಿ ಗೇಳ್ತೀನಿ ಚಿತ್ರದ ಶೂಟಿಂಗ್  ಸಂದರ್ಭದಲ್ಲಿ. 40ವರ್ಷಗಳ ಹಿಂದಿನವರೆಗೂ ಭಾರತದ ನಂಬರ್ ಒನ್ ಬೈಕ್ ಆಗಿದ್ದ ಜಾವಾ ಬೈಕ್ ಮಾಲೀಕ F. K. ಇರಾನಿ ಮನೆಯಾಗಿದ್ದ ಮೈಸೂರಿನ ಪೊಲೀಸ್ ಕಮಿಷನರ್ ಕಚೇರಿ ಹಿಂಭಾಗದ ಬಂಗಲೆಯಲ್ಲಿ.  ಕೊನೆಯದಾಗಿ ವಿಷ್ಣುವರ್ಧನ್ ಅವರನ್ನು ನಾನು ನೋಡಿದ್ದು 2008ರಲ್ಲಿ ಅದೇ ದಿನೇಶ್ ಬಾಬು ನಿರ್ದೇಶನದ, ಸುಹಾಸಿನಿ ಅಭಿನಯದ “ಸ್ಕೂಲ್ ಮಾಸ್ಟರ್ “ಶೂಟಿಂಗ್ ನಲ್ಲಿ. ಅದೂ ಸಹ ಮೈಸೂರಿನ ಲಕ್ಸ್ಮಿ ಪುರಂ ನಲ್ಲಿದ್ದ “ರಾಗೋಟೈನ್” ಪುಷ್ಟಿ ಪುಡಿಯ ಮಾಲೀಕರ ಬಂಗಲೆ ಯಲ್ಲಿ.

50-60 ವರ್ಷಗಳ ಹಿಂದೆ ರಾಗೋಟೈನ್ ಎಂಬ ಪುಷ್ಟಿ ಪುಡಿ ದೇಶಾದ್ಯಂತ ಈಗಿನ ಹಾರ್ಲಿಕ್ಸ್ ಬೂಸ್ಟ್ ಗಿಂತ ಬಹಳ ಪ್ರಸಿದ್ದವಾಗಿದ್ದ ಮೈಸೂರಿನ ಉತ್ಪನ್ನ. ಕಾಲ ಕ್ರಮೇಣ ಇವೆರಡು ಜನಪ್ರಿಯ ಕಾರ್ಖಾನೆಗಳು ಮುಚ್ಚಿ ಹೋಗಿ, ಅದರ ಮಾಲೀಕರು ದೈವಾಧೀನರಾದ ನಂತರ ಆ ಬಂಗಲೆ ಪಾಳು ಬಿದ್ದಿತ್ತು. ಹೀಗಾಗಿ ನಿರ್ದೇಶಕ ದಿನೇಶ್ ಬಾಬು ರಾಗೋಟೈನ್ ಬಂಗಲೆಯಲ್ಲಿ ಫೈಟಿಂಗ್ ಶೂಟ್ ಮಾಡ್ತಿದ್ದರು. ವಿಷ್ಣುವರ್ಧನ್ ಆಗಾಗ್ಗೆ ನಾಲ್ಕಾರು ವಿಲನ್ ಗಳ ಮೇಲೇ ಫೈಟ್ ಮಾಡಿದ ನಂತರ ನಮ್ಮೊಂದಿಗೆ ಮಾತಿಗೆ ಕುಳಿತುಕೊಳ್ಳುತ್ತಿದ್ದರು. ಅಂದು ನಾನೂ ಹೊಸ ವಿಷ್ಣುವರ್ಧನ್ ನೋಡಿದಂತೆ ಭಾಸವಾಗುತ್ತಿತ್ತು. ಒಂದು ಅವರ ದೇಹ ಬಹಳ ಕುಗ್ಗಿತ್ತು, ಜೊತೆಗೆ ಅವರ ಎಂದಿನ ಸಿಂಹ ಗಾಂಭೀರ್ಯ ಇರಲಿಲ್ಲ. ಸೆಟ್ ನಲ್ಲಿ ಎಲ್ಲರೊಂದಿಗೆ ಖುಷಿಯಾಗಿ, ತಮಾಷೆ ಮಾತತಾಡುತ್ತಿದ್ದರು.  ಸೆಟ್ ನಲ್ಲಿ ಜನ ಕೆಲಸಗಾರರು ಕಡಿಮೆ ಇರುವುದನ್ನು ನೋಡಿ, ನಿರ್ದೇಶಕ ದಿನೇಶ್ ಬಾಬು ಸಹಿತ ಎಲ್ಲರಿಗೂ “ಪ್ರೀಮಿಯರ್  ಸ್ಟುಡಿಯೋದಲ್ಲಿ ಕ್ಯಾಬರೇ ಡ್ಯಾನ್ಸ್ ಇದೆ ಅಂತ ಎಲ್ಲ ಅಲ್ಲಿಗೇ ಹೋಗಿದ್ದಾರಾ ” ಅಂತ ತಮಾಷೆ ಮಾಡುತ್ತಿದ್ದರು.  ಅದೂ ನಿಜ ಕೂಡಾ ಆಗಿತ್ತು.

ವಿಷ್ಣುವರ್ಧನ್ ಕಾಲ್ ಶೀಟ್ ನ್ನೂ ದಿನದ ಲೆಕ್ಕದಲ್ಲಿ ಪಡೆದುಕೊಂಡಿದ್ದ ನಿರ್ದೇಶಕ ದಿನೇಶ್ ಬಾಬು 70 ದಿನ ನಡೆಯೋ ಶೂಟಿಂಗ್ ನ್ನೂ ಮೂವತ್ತೇ ದಿನದಲ್ಲಿ ಮುಗಿಸುವ ಪ್ಲಾನ್ ಹಾಕಿ ಪ್ರತಿದಿನ ಎರಡೂ ಸ್ಥಳಗಳಲ್ಲಿ ಶೂಟಿಂಗ್ ಮಾಡುತ್ತಿದ್ದರು. ರಾಗೋಟೈನ್ ಬಂಗಲೆಯಲ್ಲಿ ವಿಷ್ಣುವರ್ಧನ್ ಫೈಟಿಂಗ್ ಶೂಟ್ ಮಾಡುತ್ತಿದ್ದರೆ, ಅತ್ತ ಪ್ರೀಮಿಯರ್ ಸ್ಟುಡಿಯೋ ಬಾರ್ ಸೆಟ್ ನಲ್ಲಿ ಕ್ಯಾಬರೇ ನೃತ್ಯದ ಶೂಟಿಂಗ್ ಮಾಡಿಸುತ್ತಿದ್ದರು.  ವಿಷ್ಣುವರ್ಧನ್ ಎರಡೂ ಕಡೆ ತಮ್ಮ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಚಿತ್ರದ ಶೂಟ್ ಬಹು ಬೇಗ ಮುಗಿಸಿದ್ದರಿಂದ ವಿಷ್ಣುವರ್ಧನ್ ಸಂಭಾವನೆ ಅರ್ಧದಷ್ಟು ಕಡಿಮೆಯಾಗಿತ್ತು. ಇದರಿಂದ ವಿಷ್ಣುವರ್ಧನ್ ಅಸಮಾಧಾನಿತರಾಗಿದ್ದರಿಂದ 2009ರಲ್ಲಿ ವಿಷ್ಣುವರ್ಧನ್ 1999ನೇ ಚಿತ್ರವಾಗಿ ಬಿಡುಗಡೆಯಾಗಲು ತೊದಕಾಗಿತ್ತು. ಅವರು ನಿಧನದ ನಂತರ 2010ರಲ್ಲಿ ಬಿಡುಗಡೆ ಯಾಯಿತು. ಸಿನಿಮಾವನ್ನು ಬೇಗ ಚಿತ್ರಿಸುವ ಆತುರದಲ್ಲಿ ಚಿತ್ರದ ಕ್ವಾಲಿಟಿ ಪೇಲವವಾಗಿ ಸೋತಿತು. ಇದೇ ರೀತಿಯಲ್ಲಿ ದಿನೇಶ್ ಬಾಬು ನಿರ್ದೇಶಿಸಿದ ವಿಷ್ಣುವರ್ಧನ್ ಅಭಿನಯದ “ಬಳ್ಳಾರಿ ನಾಗ” ಅನ್ನೋ ಚಿತ್ರ ಸಹ ಫ್ಲಾಪ್ ಆಗಿತ್ತು.

ಇದನ್ನೂ ಓದಿ: ಮೈಸೂರಿನ ಸಂಪತ್ ಕುಮಾರ್ ಕನ್ನಡಿಗರ ವಿಷ್ಣುವರ್ಧನ್ ಆಗಿದ್ದೇಗೆ…? ಸಿನಿ ಬದುಕಿನ ಜರ್ನಿ ಇಲ್ಲಿದೆ…!

ಇದೇನೇ ಇರಲಿ, ರಾಗೋಟೈನ್ ಬಂಗಲೆಯಲ್ಲಿ ವಿಷ್ಣುವರ್ಧನ್ ಬಹಳ ಉಲ್ಲಸಿತರಾದಂತೆ ಕಾಣುತ್ತಿದ್ದರು. ಏಕೆಂದರೆ, ವಿಷ್ಣುವರ್ಧನ್ ಸಾಮಾನ್ಯವಾಗಿ ಸಾರ್ವಜನಿಕರೊಂದಿಗೆ ಹೆಚ್ಚು ಬೆರೆಯುವುದಿಲ್ಲ. ಇದಕ್ಕೆ 80-90ರ ದಶಕದ ಗಂಧದಗುಡಿ ಅಪವಾದದ ಕಾಲದಲ್ಲಿ ಅನುಭವಿಸಿದ ಅಪಮಾನ ಹಿಂಸೆ ಕಾರಣವಿರಬೇಕು. ಆ ಕಾಲ ಘಟ್ಟದಲ್ಲಿ ವಿಷ್ಣುವರ್ಧನ್ ತಮ್ಮ ಕಾರಿನಲ್ಲಿ ಓಡಾಡಲು ಸಹ ಭಯ ಪಡುತ್ತಿದ್ದರಂತೆ. ಇನ್ನೂ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಬಂದು ಹಲ್ಲೆ ನಡೆಸುತ್ತಿದ್ದ ಕಿಡಿಗೇಡಿಗಳು ಸಹ ಇದ್ದರಂತೆ. ಹೀಗಾಗಿ ವಿಷ್ಣುವರ್ಧನ್ ಸಾರ್ವಜನಿಕರು ಯಾರೇ ವಿನಂತಿಸಿದರೂ ಹತ್ತಿರ ಹೋಗುತ್ತಿರಲಿಲ್ಲ. ಆದರೆ, ಅಂದು ರಾಗೋಟೈನ್ ಬಂಗಲೆ ಹೊರಗಡೆ ಇದ್ದ ಜನ ಜಡಿ ಮಳೆ ಇದ್ದರೂ ಕಡಲದೇ ಇರುವುದನ್ನು ಕಂಡು, ಅವರನ್ನೆಲ್ಲ ಗೆಟ್ ತೆರೆದು ಒಳ ಬಿಡುವಂತೆ ಸೆಕ್ಯೂರಿಟಿ ಗಾರ್ಡ್ ಗಳಿಗೆ ಹೇಳಿದರು.

ಸಾಲದೂ ಎಂಬಂತೆ ಎಲ್ಲರನ್ನು ಖುಷಿಯಾಗಿ ಮಾತನಾಡಿಸಿ, ಪ್ರತಿಯೊಬ್ಬರೊಂದಿಗೂ ಫೋಟೋ ತೆಗೆಸಿಕೊಂಡು ಸಂತೋಷ ಪಟ್ಟರು. ಪಕ್ಕದಲ್ಲಿ ನಿಲ್ಲಲು ಸಂಕೋಚ ಪಡುತ್ತಿದ್ದ ಜನರ ಹೆಗಲ ಮೇಲೇ ತಾವೇ ಕೈ ಇಟ್ಟುಕೊಂಡು ಫೋಟೋ ಚೆನ್ನಾಗಿ ತೆಗೆಯಪ್ಪ ಅಂತ ಸ್ಟಿಲ್ ಕ್ಯಾಮೆರಾ ಮನ್ ಗೇ ಹೇಳಿ ತೆಗೆಸುತ್ತಿದ್ದರು. ಏನಿವತ್ತು ಇಷ್ಟೊಂದು ಖುಷಿಯಾಗಿದ್ದೀರಾ ಅಂತ ವಿಷ್ಣುವರ್ಧನ್ ರನ್ನು ನಾನೂ ಕೇಳಿದಾಗ ” ಇದು ನಾನು ಚಿಕ್ಕ ವಯಸ್ಸಿನಲ್ಲಿ  ಆಡಿ ಬೆಳೆದ ಪ್ರದೇಶ. ಹೀಗಾಗಿ ಬಾಲ್ಯದ ನೆನಪಾಗುತ್ತಿದೆ. ಇಲ್ಲೇ ಮುರಳಿ ಎಂಬ ನನ್ನ ಚೆಡ್ಡಿ ದೋಸ್ತ್ ಇದ್ದಾನೆ. ಅವನ ಮನೆ ಅಂಗಳದಲ್ಲಿದ್ದ ಮರದಲ್ಲಿ ನಾವೆಲ್ಲರೂ ಮರಕೋತಿ ಆಟ ಆಡುತ್ತಿದ್ದೆವು. ಅವನನ್ನು ಕರೆದುಕೊಂಡು ಬರಲು ಹೇಳಿದ್ದೇನೆ. ನಿಮಗೆಲ್ಲ ಪರಿಚಯ ಮಾಡಿಸುತ್ತೇನೆ” ಎಂದಿದ್ದರು.

ಅಷ್ಟರಲ್ಲಿ ವಿಷ್ಣುವರ್ಧನ್ ಬಹು ಕಾಲದ ನಂಬಿಕಸ್ಥ ಕಾರ್ ಡೈವರ್ ನಿನ್ನೆ ರಾತ್ರಿ ಅಳಿಯ ಅನಿರುದ್ದ್ ಹಾಸನದಿಂದ ಬೆಂಗಳೂರಿಗೇ ರಾತ್ರಿ ಪ್ರಯಾಣ ಮಾಡ ಬಾರದೆoಬ ನಿಮ್ಮ ಆದೇಶ ಪಾಲಿಸಲಿಲ್ಲ. ನಾನೂ ಎಷ್ಟು ಬೇಡಾ ಎಂದರೂ ಬಲವಂತವಾಗಿ ರಾತ್ರಿ ಕಾರ್ ಚಾಲನೆ ಮಾಡಲು ಹೇಳಿ, ಬೆಂಗಳೂರಿಗೇ ರಾತ್ರಿ ಕಾರ್ ಡ್ರೈವ್ ಮಾಡಿಕೊಂಡು ಬರಬೇಕಾಯಿತು ಅಂತ ದೂರು ಹೇಳಿದರು.

ಆಗ ವಿಷ್ಣುವರ್ಧನ್ ಖುಷಿ ಮೂಡ್ ನಿಂದ ಗರಂ ಮೋಡ್ ಗೇ ಬದಲಾದರು. ತಕ್ಷಣವೇ ಅನಿರುದ್ ಗೇ ಫೋನ್ ಮಾಡಿದರು. ಅತ್ತ ಅನಿರುದ್ದ್  ಹೆದರಿಕೊಂಡೇ”ಅಪ್ಪಾ, ಪ್ರೊಡ್ಯೂಸರ್ ಎಸಿ ರೂಮ್ ಮಾಡಿ ಕೊಡಲಿಲ್ಲ. ಅದಕ್ಕೆ ಬೇಸರವಾಗಿ ರಾತ್ರಿಯೇ ಬೆಂಗಳೂರಿಗೇ ಬಂದೆ ” ಅಂತ ಹೇಳಿದರು. ಆಗ ವಿಷ್ಣುವರ್ಧನ್ “ನಿನ್ನತ್ರ  ಡೆಬಿಟ್ ಕಾರ್ಡ್ ಇತ್ತಲ್ಲ, ನೀನೇ AC ರೂಮ್ ಬುಕ್ ಮಾಡಬೇಕಿತ್ತು. ನೈಟ್ ಜರ್ನಿ ಮಾಡಬಾರದು ಅಂತ ನಾನೂ ಎಲ್ಲರಿಗೂ ಹೇಳಿರುತ್ತೇನೆ.

ರಾತ್ರಿ ಯಾರೇ ಡ್ರೈವ್ ಮಾಡಿದ್ರು ಅವರನ್ನೇ ನಾನೂ ಕೇಳೋದು ” ಅಂತ ಫೋನ್ ಇಟ್ಟರು. ಇದಾದ ಒಂದೆರಡು ಕ್ಷಣದಲ್ಲೇ ಪುತ್ರಿ ಕೀರ್ತಿ ಫೋನ್ ಮಾಡಿ ಗಂಡ ಅನಿರುದ್ದ್ ಪರವಾಗಿ ಮಾತಾಡಿ, ವಿಷ್ಣುವರ್ಧನ್ ಕೋಪ ತಣಿಸುವ ಪ್ರಯತ್ನ ಮಾಡಿದರು. ನನ್ನ ಮನೆಯವರು ನನ್ನ ಮಾತು ಪಾಲಿಸಬೇಕು ಅಷ್ಟೇ. ಇದು ಮತ್ತೆ ರಿಪೀಟ್ ಆಗಬಾರದು ಅಂತ ಖಡಕ್ ಆಗಿ ಹೇಳಿ ಫೋನ್ ಕಟ್ ಮಾಡಿದರು.

ವಿಷ್ಣುವರ್ಧನ್ ರಾತ್ರಿ ಪ್ರಯಾಣ ಮಾಡಬಾರದು ಅಂತ ಯಾಕೆ ರಿಸ್ಟ್ರಿಕ್ಷನ್ ಹಾಕಿಕೊಂಡಿದ್ದರೋ ಗೊತ್ತಿಲ್ಲ.  ಇದರ ಹಿಂದೆ ರಾತ್ರಿ ಪ್ರಯಾಣ ಅಪಘಾತವಾಗುತ್ತೆ ಅನ್ಮೋ ಕಾರಣಕ್ಕೆ ಇರಬಹುದು. ಆದರೇ ಈ ನಿಯಮವನ್ನು ವಿಷ್ಣುವರ್ಧನ್ ಯಾವಾಗಿನಿಂದ ಪ್ರಾರಂಭಿಸಿದರು ಅನ್ನೋದು ಸಹ ಗೊತ್ತಿಲ್ಲ. 80-90ರ ದಶಕದ ಅಪವಾದದ ಕಾಲದಲ್ಲಿ ಕಿಡಿಗೇಡಿಗಳಿಂದ ದಾಳಿಯಾಗಬಹುದೆಂದು ಆ ಕಾಲದಿಂದ ರಾತ್ರಿ ಪ್ರಯಾಣ ಮಾಡಬಾರದು ಅಂತ ತೀರ್ಮಾನಿಸಿದ್ದರೋ ಅಥವಾ 1990ರ ವಿಜಯ ದಶಮಿ ರಾತ್ರಿ ಶಂಕರ್ ನಾಗ್ ಅಪಘಾತದ ನಂತರ ನೈಟ್ ಜರ್ನಿ ಬೇಡ ಅಂತ ತೀರ್ಮಾನ ಮಾಡಿದರೋ ಗೊತ್ತಿಲ್ಲ. ಇದನ್ನ ಭಾರತಿ ಅಮ್ಮನೇ ಹೇಳಬೇಕು.

ಈ ನೈಟ್ ಜರ್ನಿ ಪ್ರಸಂಗ ಮಗಿಯುವಷ್ಟರಲ್ಲಿ ಬಾಲ ಮಿತ್ರ ಮುರಳಿ ಕರೆರಲು ಹೋಗಿದ್ದವರು, ಅವರಿಗೇ ಹುಷಾರಿಲ್ಲ ನೀವೇ ಅವರ ಮನೆಗೆ ಬರಬೇಕಂತೆ ಅಂತ ತಿಳಿಸಿದರು. ಇದರಿಂದ ಕೊಂಚ ನಿರಾಸೆಯಾದಂತೆ ಕಂಡರು ವಿಷ್ಣುವರ್ಧನ್. ಆಗ ನಾವೂ ಪತ್ರಕರ್ತರೆಲ್ಲರೂ ಹೋಗಲು ಎದ್ದಾಗ, ತಡೆದ ವಿಷ್ಣುವರ್ಧನ್ “ನಿಮಗೆಲ್ಲ ಊಟ ತರಿಸಿದ್ದೇನೆ. ನೀವೆಲ್ಲ ಊಟ ಮಾಡಿಕೊಂಡೇ ಹೋಗಬೇಕು. ಮತ್ತೇ ಯಾವತ್ತೂ ಸಿಗುತ್ತೇವೋ” ಎಂದು ಬಲವಂತ ಮಾಡಿ ಊಟ ಮಾಡಿಸಿದರು.  ವಿಷ್ಣುವರ್ಧನ್ ನಾನ್ ವೆಜ್ ತಿಂದರೆ, ನಾನೂ ನಾನ್ ವೆಜ್ ತಿನ್ನೋಲ್ಲ ಅಂತ ಹೇಳಿ ವೆಜ್ ತಿಂದೆ.

ಊಟದ ನಂತರ ಒಂದು ಸಿಗರೇಟ್ ಸೇದಿದ ನಂತರ ಮತ್ತೆ ವಿಷ್ಣುವರ್ಧನ್ ಖುಷಿ ಮೂಡ್ ಗೇ ಬಂದರು. ಇದೇ ಲಕ್ಸ್ಮಿ ಪುರಂ ರಸ್ತೆಯಲ್ಲೆಲ್ಲ ಸೈಕಲ್ ನ ಹಳೆ ಟೈರ್ ಗಳನ್ನು ಬಂಡಿಯಂತೆ ಕಡ್ಡಿಯಿಂದ ಓಡಿಸುತ್ತಿದ್ದುದು, ಬಾಬ್ ಜಾನ್ ಎಂಬ ಟಾಂಗಾ ವಾಲನ ಗಾಡಿ ಹಿಂಬದಿ  ಫುಟ್ ರೆಸ್ಟ್ ಪಟ್ಟಿಯನ್ನು ಹಿಡಿದುಕೊಂಡು ನಂಜು ಮಳಿಗೆ ಸರ್ಕಲ್ ನಿಂದ ಇಟ್ಟಿಗೆಗೂಡಿನಲ್ಲಿರುವ zoo ಗಾರ್ಡನ್ ವರೆಗೆ ಹೋಗಿದ್ದು, ದಾರಿ ತಪ್ಪಿ ಪರಿತಪಿಸಿದ್ದು, ಸಂಜೆಯಾದರೂ ಬಾರದ ಇವರಿಗಾಗಿ ಮನೆಯವರೆಲ್ಲ ಗಾಬರಿಯಾಗಿ ಹುಡುಕಾಡಿದ್ದು, ಕೊನೆಗೆ zoo ಮುಂದೆ ಅಳುತ್ತ ನಿಂತಿದ್ದ ಇವರನ್ನು ಚಿಕ್ಕಪ್ಪ ಹುಡುಕಿ ಮನೆಗೆ ಕರೆ ತಂದಿದ್ದು, ಅಪ್ಪ ನಾರಾಯಣ ರಾವ್ ಕಡ್ಡಿ ಮುರಿಯುವವರೆಗೆ ಹೊಡೆದಿದ್ದು, ಎಲ್ಲವನ್ನು ನಿರ್ಭಿಡೆಯಾಗಿ ಹೇಳುತ್ತಿದ್ದರು.

ಮೈಸೂರಿನ ತರಕಾರಿಗಳು ಆಗ ಎಷ್ಟು ರುಚಿಯಾಗಿತ್ತು ಅಂತ ತಮ್ಮ ತಂದೆ  ಚಾಮುಂಡಿ ಪುರಂನ ಎಲೆ ತೋಟದಿಂದ ತರಕಾರಿ ತರುತ್ತಿದ್ದೂದನ್ನೂ ಹೇಳಿದಾರು. ಆಗಿನ ಮೈಸೂರ್ ವೀಳ್ಯದೆಲೆ, ವೀರನಗೆರೆ ಈರೆಕಾಯಿ, ಬದನೇಕಾಯಿ, ನಂಜನಗೂಡು ರಸಬಾಳೆ ಎಷ್ಟು ಚೆನ್ನಾಗಿತ್ತು ಅಂತ ಮೈಸೂರಿನ ಬಾಲ್ಯದ ನೆನಪುಗಳನ್ನೆಲ್ಲಾ ಮೆಲುಕು ಹಾಕಿದರು. ನಂತರ ತಮ್ಮ ಬಾಲ್ಯದ ನೆನಪಿನಿಂದ ನಮ್ಮ ಊರಿನ ಪರಿಸರ ಹಾಳಾತ್ತಿರುವ ಬಗ್ಗೆ ಮಾತು ಹೊರಳಿಸಿದರು. ನನಗೇ ಬಾಲ್ಯದ ನೆನಪುಗಳು ಮರುಕಳಿಸುವ ಊರೆಂದರೆ ಮೈಸೂರು ಮಾತ್ರ. ಇದಿನ್ನು ಹಳೆಯ ಕುರುಹುಗಳನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ

ಬೆಂಗಳೂರಿನಷ್ಟುಬದಲಾಗು ಇಲ್ಲಾ, ಹಾಳಾಗೂ ಇಲ್ಲ. ಬೆಂಗಳೂರು ಈಗ ಸಂಪೂರ್ಣ ಹಾಳಾಗಿದೆ. ಅದೂ ನಮ್ಮೂರು ಅಂತ ಹೇಳಿಕೊಳ್ಳಲು ಆಗೋಲ್ಲ. ಬೆಂಗಳೂರು ತುಂಬಾ ಕನ್ನಡ ಮಾತಾಡದವರೇ ತುಂಬಿಕೊಂಡಿದೆ. ತಾವು ಮೈಸೂರು ಬಿಟ್ಟು ಬೆಂಗಳೂರಿಗೇ ಬಂದಾಗ ಜಯನಗರದಲ್ಲಿ ಬಾಡಿಗೆಗಿದ್ದ ಮಂಗಳೂರು ಹೆಂಚಿನ ಮನೆ ಈಗಿಲ್ಲ. ಎಲ್ಲ ಕಾಂಕ್ರೀಟ್ ಜಂಗಲ್ ಆಗಿದೆ. ಅಕ್ಕ ಪಕ್ಕ ನಮ್ಮವರು ಅಂತಾ ಇಲ್ಲಾ, ಎಲ್ಲ ಕಡೆ ಪರಭಾಷಿಕರೇ ತುಂಬಿದ್ದಾರೆ. ನಾವು, ನಮ್ಮೂರು, ನಮ್ಮೋರು, ನಮ್ಮದು ಅನ್ನೋ ಅಸ್ಮಿತೆಯೇ ಬೆಂಗಳೂರಿನಲ್ಲಿ ಇಲ್ಲಾ. ಹೀಗಾಗಿ ಮೈಸೂರಿನಲ್ಲೇ ಮನೆ ಮಾಡಿ ವಿಶ್ರಾಂತ ಜೀವನ ಕಳೆಯಬೇಕು ಅನ್ನೋ ಮುಂದಿನ ಪ್ಲಾನ್ ಸಹ ಹೇಳಿದರು. ಇದನ್ನೆಲ್ಲಾ 2008ರ ಅಕ್ಟೊಬರ್ ತಿಂಗಳ ಉದಯವಾಣಿ “ಸುಚಿತ್ರ” ಸಿನಿಮಾ ವಿಭಾಗದಲ್ಲಿ “ಮೈಸೂರೆಂದರೆ ವಿಷ್ಣು ಹೃದಯ ಮಿಡಿಯುತ್ತೆ”ಅನ್ನೋ ಶೀರ್ಷಿಕೆಯಲ್ಲಿ ಬರೆದಿದ್ದೆ.

ಇದಾಗಿ, 2009ರ ಡಿಸೇಂಬರ್. 30ರಂದು ವಿಷ್ಣುವರ್ಧನ್ ನಿಧನರಾದ ಸುದ್ದಿ ಕೇಳಿದಾಗ ಅನಿರೀಕ್ಷಿತ ಆಘಾತವಾಯಿತು. ಅವರಿಗೇ ಮಧುಮೇಹ ನಿಯಂತ್ರಣಕ್ಕೆ ಬಾರದೆ,ಬಹಳ ಬಳಲುತ್ತಿದ್ದಾರೆ ಅನ್ನೋದು  ನನಗೇ ಗೊತ್ತಿತ್ತು. ಆದರೇ ಅವರು ಇಷ್ಟು ಬೇಗ ನಮ್ಮಿಂದ ದೂರ ಹೋಗುತ್ತಾರೆ ಅಂತ ಊಹಿಸಲು ಇರಲಿಲ್ಲ. ನನಗೇ ತಿಳಿದಂತೆ “ಆಪ್ತ ರಕ್ಷಕ” ಚಿತ್ರದ ಶೂಟಿಂಗ್ ಸಂದರ್ಭದಲ್ಲೇ ಮೈಸೂರಿನಲ್ಲಿ ಮನೆ ಮಾಡಲು ನಿರ್ಧರಿಸಿದ್ದರು. ಆಪ್ತ ರಕ್ಷಕ ಚಿತ್ರವೇ ತಮ್ಮ ಕೊನೆ ಚಿತ್ರ ಎಂಬ ನಿರ್ಣಯಕ್ಕೂ ಬಂದಿದ್ದರು. ಹೀಗಾಗಿ, ಯಾವುದೇ ಹೊಸ ಚಿತ್ರಕ್ಕೂ ಒಪ್ಪಿಗೆ ಕೊಟ್ಟಿರಲಿಲ್ಲ. ಮೈಸೂರಿನಲ್ಲಿ ಅವರು ತಂಗುತ್ತಿದ್ದ ಯಾದವಗಿರಿಯಲ್ಲಿರುವ ದಾಸ್ ಪ್ರಕಾಶ್ ಪ್ಯಾರಡೈಸ್ ಹೋಟೆಲ್ ಬಿಟ್ಟು ಅಂಬರೀಷ್ ಆಪ್ತ ಸ್ನೇಹಿತರಾದ ವಿವೇಕ್ ಅವರ ಕಿಂಗ್ಸ್ ಕೋರ್ಟ್ ಹೋಟೆಲ್ ಗೇ ವಾಸ್ತವ್ಯ ಬದಲಿಸಿದ್ದರು. ವಿಷ್ಣುವರ್ಧನ್ ಕಿರಿಯ ಗೆಳೆಯರಾಗಿದ್ದ ವಿಕ್ರಮ್ ಆಸ್ಪತ್ರೆ ಮಾಲೀಕ ಡಾ. ವಿಕ್ರಮ್ ಕೈಗೆ ತಮ್ಮ ಅರೋಗ್ಯ ಒಪ್ಪಿಸಿ, ನಿರಾಳವಾಗಿದ್ದರು. ನನಗೇ ತಿಳಿದು ಬಂದಂತೆ ವಿಷ್ಣುವರ್ಧನ್ ಒಂದು ಕಾಲು ಗ್ಯಾಂಗ್ರಿನ್ ಗೇ ಒಳಗಾಗಿತ್ತು. ನಡೆಯಲು ಕಷ್ಟ ಪಡುತ್ತಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು

ವಿಷ್ಣುವರ್ಧನ್ ವೃತ್ತಿ ಬದುಕು ಕೇವಲ 37ವರ್ಷಗಳಲ್ಲೇ ಮುಗಿದಿದ್ದು ದುರದೃಷ್ಟಕರವಾಗಿದೆ. ಹಾಗೇ, ಅವರು ಮೊದಲು ನಾಯಕರಾದ “ನಾಗರ ಹಾವು ” 1972ರ ಡಿಸೇಂಬರ್. 29ರಂದು ಬಿಡುಗಡೆಯಾದರೆ, 2009ರ ಡಿಸೇಂಬರ್. 30ರಂದು ನಿಧನರಾಗಿದ್ದು  ಕಾಕತಾಳೀಯವಾಗಿದೆ. ಮನುಷ್ಯನ ಜೀವನ ಅದೆಷ್ಟು ಅಲ್ಪ ಎನ್ನುವುದಕ್ಕೆ ಶಂಕರ್ ನಾಗ್ ಬದುಕು ಸಹ ಒಂದು ಬಲವಾದ ಉದಾಹರಣೆಯಾಗುತ್ತೆ. 1979ರಲ್ಲಿ ಸೀತಾರಾಮು ಚಿತ್ರದ ಮೂಲಕ ಪ್ರವರ್ಧಮಾನಕ್ಕೆ ಬಂದ ಶಂಕರ್ ನಾಗ್ 1990ರ ವಿಜಯ ದಶಮಿ ರಾತ್ರಿ ಅಕಾಲಿಕ ಮೃತ್ಯುವಿಗೆ ಶರಣಾದರು. ಕೇವಲ 11 ವರ್ಷಗಳಷ್ಟೇ ಶಂಕರ್ ನಾಗ್ ಮೆರೆದು ಮರೆಯಾದರು.    *ಕೊನೆಯದಾಗಿ:  ವಿಷ್ಣುವರ್ಧನ್ ಮತ್ತು ಕಿರಿಯ ಮಿತ್ರ ಡಾ. ವಿಕ್ರಮ್ ಪರಿಚಿತವಾದ ಒಂದು ಘಟನೆ ಹೇಳಿ ಈ ಸುದೀರ್ಘ ಲೇಖನ ಮುಕ್ತಾಯಗೊಳಿಸುತ್ತೇನೆ.

ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..

ವಿಷ್ಣುವರ್ಧನ್ ಸಾಮಾನ್ಯವಾಗಿ ಮೈಸೂರಿಗೇ ಬಂದಾಗ ತಂಗುತ್ತಿದ್ದ ಹೋಟೆಲ್ ಯಾದವಗಿರಿಯಲ್ಲಿರುವ ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಆರ್. ಕೆ. ನಾರಾಯಣ್ ಮತ್ತು ಖ್ಯಾತ ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್ ಮನೆ ಎದುರಿನ ದಾಸ್ ಪ್ರಕಾಶ್ ಪ್ಯಾರಾಡೈಸ್ ನಲ್ಲಿ. 2001ರಲ್ಲಿ ಅಂದಿನ ಮುಖ್ಯ ಮಂತ್ರಿ ಎಸ್. ಎಂ. ಕೃಷ್ಣ ಯಶಸ್ವಿನಿ ಅರೋಗ್ಯ ಯೋಜನೆ ಜಾರಿಗೆ ತಂದು, ಬಡ ಜನರ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಿಸಿಕೊಡುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸುವುದು ಯೋಜನೆಯಲ್ಲಿ ಸೇರಿದ್ದರಿಂದ ಡಾ. ವಿಕ್ರಮ್ ತಮ್ಮ ಮೈಸೂರಿನ ಯಾದವಗಿರಿಯಲ್ಲಿದ್ದ ವಿಕ್ರಮ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಘಟಕ ಸ್ಥಾಪಿಸಿದ್ದರು. ಪಾಕಿಸ್ತಾನದ ಮಗುವಿಗೆ ಯಶಸ್ವಿ ಹೃದಯ ಚಿಕಿತ್ಸೆ ಮಾಡಿ, ದಿನ ಬೆಳಗಾಗುವುದರಲ್ಲಿ ಪ್ರಸಿದ್ದವಾದ ಡಾ. ದೇವಿ ಶೆಟ್ಟಿ ಅವರ ನಾರಾಯಣ ಹೃದಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಹೃದಯ ಶಸ್ತ್ರ ಚಿಕಿತ್ಸಕರನ್ನೇ ಮೈಸೂರಿನ ವಿಕ್ರಮ್ ಆಸ್ಪತ್ರೆಗೆ ದುಬಾರಿ ವೇತನಕ್ಕೆ ನೇಮಿಸಿಕೊಂಡಿದ್ದರು.

ಹೀಗಿದ್ದರೂ ವಿಕ್ರಮ್ ಆಸ್ಪತ್ರೆಗೆ ಹೃದ್ರೋಗಿಗಳು ಬರುವುದು ಕಡಿಮೆ ಇತ್ತು. ಹೀಗಿರುವಾಗ, ದಾಸ್ ಪ್ರಕಾಶ್ ಹೋಟೆಲ್ ನಲ್ಲಿ ತಂಗಿರುತ್ತಿದ್ದ ವಿಷ್ಣುವರ್ಧನ್ ಮುಂಜಾನೆ ಎದ್ದು ವಿಕ್ರಮ್ ಆಸ್ಪತ್ರೆ ಮುಂದೆಯೇ ರನ್ನಿಂಗ್ ಮಾಡಿಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ್ದ ಆಸ್ಪತ್ರೆ ಗೇಟ್ ಕೀಪರ್ ಎಲ್ಲರಿಗೂ ಹೇಳಿದ್ದ. ಇದು ಡಾ. ವಿಕ್ರಮ್ ಗು ಗೊತ್ತಾಗಿ, ವಿಷ್ಣುವರ್ಧನ್ ಬರುವಾಗ ತಮಗೇ ತಿಳಿಸುವಂತೆ ಸೂಚಿಸಿದ್ದರು. ಮರುದಿನ ವಿಷ್ಣುವರ್ಧನ್ ಆಸ್ಪತ್ರೆ ಮುಂದೆ ಹೋಗುವಾಗ ಗೆಟ್ ಕೀಪರ್ “ಸರ್, ನಮ್ಮ ಡಾಕ್ಟರು ನಿಮ್ಮ ನೋಡಬೇಕಂತೆ ಬನ್ನಿ “ಅಂತ ಒಳಗೆ ಕರೆದೋಯ್ದ. ವಿಷ್ಣುವರ್ಧನ್ ಆಸ್ಪತ್ರೆಗೇ ಬಂದಿರುವ ವಿಷಯ ತಿಳಿದು, ಡಾ. ವಿಕ್ರಮ್ ಹತ್ತಿರದ ತಮ್ಮ ಮನೆಯಿಂದ ಬರುವಷ್ಟರಲ್ಲಿ ವಿಷ್ಣುವರ್ಧನ್ ಆಸ್ಪತ್ರೆ ಸಿಬ್ಬಂದಿಯನ್ನಲ್ಲದೆ ರೋಗಿಗಳನ್ನೂ ಮಾತಾಡಿಸಿ ಬಂದಿದ್ದರು.

ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್

ಈ ಸಂದರ್ಭದಲ್ಲಿ  ಮಂಡಿ ಮೊಹಲ್ಲಾದ ಇನ್ ಲೇ ವರ್ಕ್ ಮರಗೆಲಸ ಮಾಡುವ ನಾಗರಾಜ್ ಎಂಬುವರನ್ನು ಮಾತಾಡಿಸಿದ್ದರು. ಹಾರ್ಟ್ ಆಪರೇಷನ್ ಮಾಡಿಸಿಕೊಂಡು ಮಲಗಿದ್ದ ನಾಗರಾಜ್ ನಟ ವಿಷ್ಣುವರ್ಧನ್ ನೋಡಿ ಉದ್ವೇಗದಿಂದ ತಾನು ನೋಡುತ್ತಿರೋದು ನಿಜಾನಾ ಅಂತ ಆಚ್ಚರಿ ಗೊಳಗೊಳಗಾದರು. ಉದ್ವೇಗದಿಂದ ನಾಗರಾಜ್ ಗೇ ತೊಂದರೆ ಆಗ ಬಹುದೆಂದು, ಆತನ ಹತ್ತಿರ ಹೋಗಿ ಹೇಗಿದ್ದೀರಾ? ಅಂದ್ರು. “ಆಪರೇಷನ್ ಆಗುವುದಕ್ಕೂ ಮೊದಲು ಬದುಕ ಬೇಕು ಅಂತ ಆಸೆ ಇತ್ತು. ಆಸ್ಪತ್ರೆ ಬಿಲ್ ನೋಡಿದ ನಂತರ ಯಾಕಾದರೂ ಇನ್ನೂ ಬದುಕಿದ್ದಿನೋ ಅನ್ನಿಸುತ್ತಿದೆ ” ಅಂತ ನೋವು ಹೇಳಿಕೊಂಡರಂತೆ. ಆಗ ವಿಷ್ಣುವರ್ಧನ್ “ಸರ್ಕಾರ ಚಿಕಿತ್ಸೆ ವೆಚ್ಚ ಕೊಡುತ್ತಲ್ಲ ಎಂದಿದ್ದಾರೆ “. ಇದಕ್ಕೆ ನಾಗರಾಜ್ “ಸರ್ಕಾರ ಆಪರೇಷನ್ ಖರ್ಚು ಕೊಡುತ್ತೆ. ಔಷಧಿ ಮತ್ತಿತರ ಖರ್ಚು ನಾವೇ ಕೊಡಬೇಕು. ಅದೇ 50 ಸಾವಿರದ ಮೇಲೇ ಆಗಿದೆ” ಎಂದು ತಮ್ಮ ಆರ್ಥಿಕ ಕಷ್ಟ ಹೇಳಿ ಕೊಂಡರು.

ಆಗ ವಿಷ್ಣುವರ್ಧನ್ ಸಮಾಧಾನಿಸಿ, “ದೇವರಿದ್ದಾನೆ. ಎಲ್ಲ ಒಳ್ಳೆಯದಾಗುತ್ತೆ. ಯೋಚನೆ ಮಾಡಬೇಡಿ ” ಎಂದಿದ್ದಾರೆ. ಅಷ್ಟರಲ್ಲಿ ಡಾ. ವಿಕ್ರಮ್ ಬಂದಾಗ ಅವರ ಚೇoಬರ್ ನಲ್ಲಿ ಸುಮಾರು ಹೊತ್ತು ಮಾತಾಡಿ, 50ಸಾವಿರ ರೂಪಾಯಿ ಚೆಕ್ ಕಳುಹಿಸುತ್ತೇನೆ. ಆ ನಾಗರಾಜ್ ಎಂಬ ಪೇಶಂಟ್ ಬಿಲ್ ಗೇ ಪೇ ಮಾಡಿಕೊಳ್ಳಿ. ಇದನ್ನು ನಾನೂ ಕೋಟ್ಟೆ ಅಂತ ಮಾತ್ರ ಯಾರಿಗೂ ಹೇಳಬೇಡಿ. ಏಕೆಂದರೆ, ನಾನೂ ಬಲಗೈ ನಲ್ಲಿ ಮಾಡಿದ ಸಹಾಯ ನನ್ನ ಎಡಗೈಗು ಗೊತ್ತಾಗಬಾರದು ಅನ್ನೋ ಪಾಲಿಸಿ ಇಟ್ಟು ಕೊಂಡು ಬಂದಿದ್ದೇನೆ ಎಂದಿದ್ದರಂತೆ. ಈ ಘಟನೆ ವಿವರವನ್ನು ಸ್ವತಃ ಡಾ. ವಿಕ್ರಮ್ ನನಗೇ ಹೇಳಿದ್ದರು.

ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..

ಏಕೆಂದರೆ, ಈ ಘಟನೆ ನಂತರ ವಿಷ್ಣುವರ್ಧನ್ ತಮ್ಮ ಡಯಬಿಟಿಸ್ ಗೇ ಚಿಕಿತ್ಸೆ ಪಡೆಯಲು ಆಗಾಗ್ಗೆ ಬರುತ್ತಿದ್ದೂದನ್ನು ಕಂಡು ಯಾದವಗಿರಿ ಜನ ವಿಕ್ರಮ್ ಆಸ್ಪತ್ರೆಗೇ ವಿಷ್ಣುವರ್ಧನ್ ಪಾಲುದಾರರು ಅನ್ನೋ ಮಟ್ಟಿಗೆ ವದಂತಿ ಹಬ್ಬಿಸಿದ್ದರು. ಇದು ನಿಜವೇ ಅಂತ ನಾನು ಒಮ್ಮೆ ಡಾ. ವಿಕ್ರಮ್ ರನ್ನೇ ಕೇಳಿದಾಗ,  ಡಾ. ವಿಕ್ರಮ್ ತಮ್ಮ ಮತ್ತು ವಿಷ್ಣುವರ್ಧನ್ ನಡುವಣ ನಡೆದ ಮೊದಲ ಮುಖಾಮುಖಿ ಘಟನೆಯನ್ನು ಹೇಳಿ, ಪಾಲುದಾರಿಕೆ ವದಂತಿಗಳನ್ನು ನಿರಾಕರಿಸಿದ್ದರು.

ಅಂದ ಹಾಗೇ, ವಿಕ್ರಮ್ ಆಸ್ಪತ್ರೆಗೆ ಮೊದಲ ಬಾರಿ ಭೇಟಿ ಕೊಟ್ಟಾಗ ವಿಷ್ಣುವರ್ಧನ್ ಆ ಆಸ್ಪತ್ರೆಯ ವಿಸಿಟರ್ಸ್ ಬುಕ್ ನಲ್ಲಿ ಈ ರೀತಿ ತಮ್ಮ ಅಭಿಪ್ರಾಯ ದಾಖಲಿಸಿದ್ದರು.  ” THIS IS NOT A HOSPITAL. THIS IS TEMPLE. THIS HOSPITAL DOCTORS ARE GOD. PATIENTS ARE DEVOTEES ”  ಅಂತ ಬರೆದಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want