ನಾಗರಹೊಳೆಯಲ್ಲಿ ಮುಂಗಾರು ಮಳೆಗೆ ತಲೆದೂಗುತ್ತಿದೆ ನಿಸರ್ಗ… ವನ್ಯಪ್ರಾಣಿಗಳಿಗೆ ಸಂಭ್ರಮವೋ… ಸಂಭ್ರಮ..!

ಮುಂಗಾರು ಮಳೆಗೆ ನಿಸರ್ಗ ಮಿಂದೇಳುತ್ತಿದೆ… ಅದರಲ್ಲೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಿಸರ್ಗದ ಸುಂದರತೆ ಲಾಸ್ಯವಾಡುತ್ತಿದೆ.. ಮಳೆಗೆ ವನ್ಯಪ್ರಾಣಿಗಳು ಎಲ್ಲೆಂದರಲ್ಲಿ ಅಲೆದಾಡುತ್ತಾ ಖುಷಿ ಪಡುತ್ತಿವೆ. ಧೋ ಎಂದು ಸುರಿದ ಮಳೆಗೆ ಅರಣ್ಯದಲ್ಲಿ ಹರಿಯುವ ನದಿ ತೊರೆಗಳು, ಕೆರೆಗಳು ತುಂಬಿದ್ದು, ಇಡೀ ಅರಣ್ಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ನಿಸರ್ಗ ಪ್ರೇಮಿಗಳ ಮೈಮನ ಸೆಳೆಯುತ್ತಿದೆ.
ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲೀಗ ಹಿಮಮಳೆ… ನೀವೇಕೆ ಒಮ್ಮೆ ಹಿಮದ ಮಳೆಯಲ್ಲಿ ಮಿಂದೇಳಬಾರದು?
ನಾಗರಹೊಳೆ ಎಂದಾಕ್ಷಣ ನಮ್ಮ ಮುಂದೆ ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆಗಳು, ಕಾಡಾನೆಗಳು ಸೇರಿದಂತೆ ಹಲವು ಬಗೆಯ ವನ್ಯಪ್ರಾಣಿಗಳು ನಮ್ಮ ಕಣ್ಣಮುಂದೆ ಹಾದು ಹೋಗುತ್ತವೆ. ಇಲ್ಲಿರುವ ಕಾಡು ಪ್ರಾಣಿಗಳನ್ನು ವೀಕ್ಷಿಸುವ ಸಲುವಾಗಿಯೇ ಪ್ರವಾಸಿಗರು ಇತ್ತ ಬರುತ್ತಿದ್ದು, ಸಫಾರಿಯಲ್ಲಿ ಪಾಲ್ಗೊಂಡು ಸಂತಸ ಪಡುತ್ತಾರೆ. ಇದರಾಚೆಗೆ ನಾಗರಹೊಳೆ ಸುತ್ತಮುತ್ತ ಇರುವ ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡಿ ಒಂದಷ್ಟು ಸಮಯವನ್ನು ಕಳೆದು ಹೋಗುತ್ತಾರೆ.
ಸಾಮಾನ್ಯವಾಗಿ ನಾಗರಹೊಳೆ ಅರಣ್ಯದಲ್ಲಿ ಹಾದು ಹೋಗುವಾಗ ಅರಣ್ಯದ ಸುಂದರತೆ ಮತ್ತು ಅದರೊಳಗಿನ ವನ್ಯಪ್ರಾಣಿಗಳ ನಲಿದಾಟ ಗಮನಸೆಳೆಯುತ್ತದೆ. ಪ್ರತಿ ಮುಂಗಾರು ಕೂಡ ಸಸ್ಯ ಸಂಕುಲಕ್ಕೆ ಮರುಹುಟ್ಟು ಎಂದರೆ ತಪ್ಪಾಗಲಾರದು. ಹೀಗಾಗಿ ಮಳೆಗೆ ಇಡೀ ಅರಣ್ಯ ತೆರೆದುಕೊಳ್ಳುತ್ತದೆ. ಮಳೆಯ ನೀರನ್ನೆಲ್ಲ ತನ್ನೊಡಲಲ್ಲಿ ಕಾಪಿಟ್ಟುಕೊಂಡು ಗಿಡಮರಗಳಿಗೆ ಉಣಬಡಿಸುತ್ತದೆ.
ಇದನ್ನೂ ಓದಿ: ಬಿಳಿಗಿರಿ ಬೆಟ್ಟದ ಮೇಲೆ ವೀರಾಜಮಾನನಾದ ರಂಗನಾಥ…
ಇನ್ನು ಕೊಡಗು ಮತ್ತು ಮೈಸೂರಿಗೆ ಹೊಂದಿಕೊಂಡಂತಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ 643 ಚ.ಕಿ.ಮೀ ವ್ಯಾಪ್ತಿ ಹೊಂದಿದೆ. ಈ ಅರಣ್ಯವನ್ನು ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ. ಇದೀಗ ಈ ಅರಣ್ಯದಲ್ಲಿ ಮುಂಗಾರು ಮಳೆಯ ಲೀಲೆಗೆ ಹತ್ತಾರು ಸುಂದರ ದೃಶ್ಯಗಳು ಸೃಷ್ಠಿಯಾಗಿದ್ದು ನಿಸರ್ಗ ಪ್ರೇಮಿಗಳಿಗೆ ರಸದೂಟ ಉಣಬಡಿಸುತ್ತಿದೆ.
ಹಾಗೆನೋಡಿದರೆ ನಾಗರಹೊಳೆ ಕೋಟ್ಯಂತರ ಜೀವಸಂಕುಲಗಳಿಗೆ ಆಶ್ರಯತಾಣಗಳಾಗಿದೆ. ಹೀಗಾಗಿ ಇಲ್ಲಿಗೊಂದು ಸುತ್ತು ಹೊಡೆದರೆ ಹಸಿರ ವನಸಿರಿ ಕಣ್ಮನ ತಣಿಸುತ್ತಿದ್ದರೆ, ಅದರ ನಡುವೆ ಹಿಂಡು ಹಿಂಡಾಗಿ ಕಾಣುವ ಅಚ್ಚರಿಯ ನೋಟ ಬೀರುವ ಜಿಂಕೆಗಳ ದಂಡು, ಕಾಡುಕೋಣ, ಕಾಡಾನೆ, ನಿರ್ಭಯವಾಗಿ ಹೆಜ್ಜೆಹಾಕುವ ಹುಲಿ… ಇದಲ್ಲದೆ ಹತ್ತಾರು ಸಣ್ಣಪುಟ್ಟ ಪ್ರಾಣಿಗಳು ಎಲ್ಲೆಂದರಲ್ಲಿ ಅರಣ್ಯದಲ್ಲಿ ಅಡ್ಡಾಡುತ್ತಾ ಹುರುಪಿನಿಂದ ಓಡಾಡುವ ದೃಶ್ಯಗಳು ನಮ್ಮ ಕಣ್ಮುಂದೆ ಬರುತ್ತವೆ…
ಇದನ್ನೂ ಓದಿ: ಕೊಳ್ಳೇಗಾಲ ಅರಣ್ಯ ಕಚೇರಿಯಲ್ಲಿ ಪಿ.ಶ್ರೀನಿವಾಸ್ ನೆನಪು ಜೀವಂತ…
ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಉತ್ತಮವಾಗಿ ಮಳೆಯಾಗಿದೆ. ಅದರಲ್ಲೂ ನಡು ಬೇಸಿಗೆಯಲ್ಲಿ ಸುರಿದ ಮಳೆಗೆ ಸಸ್ಯ ಸಂಕುಲ ಒಣಗಿ ಕಾಡ್ಗಿಚ್ಚಿಗೆ ಬಲಿಯಾಗದಿರುವುದೇ ಈ ಬಾರಿ ಎಲ್ಲ ಅರಣ್ಯಗಳು ಹಸಿರಿನಿಂದ ನಳನಳಿಸಲು ಕಾರಣವಾಗಿದೆ. ಜತೆಗೆ ಬೇಸಿಗೆಯಲ್ಲಿ ಅರಣ್ಯ ಇಲಾಖೆ ಇಡೀ ಅರಣ್ಯವನ್ನು ಕಣ್ಣಿಟ್ಟು ಕಾದಿಯುವುದರೊಂದಿಗೆ, ಕಾಡ್ಗಿಚ್ಚಿಗೆ ಅವಕಾಶವಾಗದಂತೆ ನೋಡಿಕೊಂಡಿತ್ತು. ಇದೆಲ್ಲದರ ಕಾರಣದಿಂದಾಗಿ ನಾಗರಹೊಳೆ ಅರಣ್ಯ ನಳನಳಿಸುತ್ತಿದೆ… ಪ್ರಾಣಿ, ಪಕ್ಷಿಗಳು ಖುಷಿ, ಖುಷಿಯಾಗಿ ಓಡಾಡುತ್ತಿವೆ.
ಮುಂಗಾರು ಮಳೆ ಅಬ್ಬರಿಸುತ್ತಿರುವ ಪರಿಣಾಮ ಅರಣ್ಯದ ನಡುವಿನ ಲಕ್ಷ್ಮಣತೀರ್ಥ ನದಿ ಭೋರ್ಗರೆದು ಹರಿಯುತ್ತಿದ್ದರೆ, ಕೆರೆಗಳು ಭರ್ತಿಯಾಗಿವೆ. ಜತೆಗೆ ಅರಣ್ಯದ ನಡುವಿನಿಂದ ರಸ್ತೆ ಬದಿಗೆ ಬರುವ ಹುಲಿ, ಕಾಡುಕೋಣ, ಕಾಡಾನೆಗಳು ಆಗೊಮ್ಮೆ ಈಗೊಮ್ಮೆ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರಿಗೆ ಕಾಣಿಸಿಕೊಂಡು ವೈರಲ್ ಆಗುತ್ತಿವೆ. ದಶಕಗಳ ಹಿಂದೆ ಹೂ ಬಿಟ್ಟು ಅಳಿದು ಹೋಗಿ ಬೋಳಾಗಿದ್ದ ಅರಣ್ಯಕ್ಕೆ ಬಿದಿರು ಮೆಳೆಗಳು ಮತ್ತೆ ಜೀವ ತುಂಬಿವೆ.
ಇದನ್ನೂ ಓದಿ: ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನ ನೋಡುವುದೇ ಕಣ್ಣಿಗೊಂದು ಹಬ್ಬ…
ಕೆಲವೆಡೆ ಈ ಹಿಂದೆ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ ಕಾಡು ಮರಗಳಿಲ್ಲದೆ ಬೋಳಾಗಿದ್ದರೂ ಬಿದಿರುಮೆಳೆ ಕುರುಚಲು ಕಾಡುಗಳಿಂದ ಮತ್ತೆ ಹಸಿರು ಕಾಣಿಸಿಕೊಳ್ಳುತ್ತಿದೆ. ಅರಣ್ಯದಲ್ಲಿರುವ ಚನ್ನಮ್ಮನಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರುಕೆರೆ, ಬಿಲ್ಲೆನಹೊಸಹಳ್ಳಿಕೆರೆ, ಭೀಮನಕಟ್ಟಿ, ಬಾಣೇರಿಕೆರೆ ಸೇರಿದಂತೆ ಹಲವು ಕೆರೆ-ಕಟ್ಟೆಗಳಲ್ಲಿ ನೀರು ಅಲೆಯಾಡುತ್ತಿದೆ. ಒಟ್ಟಾರೆಯಾಗಿ ಈ ಬಾರಿಯ ಮುಂಗಾರು ಮಳೆ ಒಂದಷ್ಟು ನೆಮ್ಮದಿಯನ್ನು ತಂದಿದ್ದು, ಇದರಿಂದ ಅರಣ್ಯದಲ್ಲಿಯೇ ವನ್ಯಪ್ರಾಣಿಗಳಿಗೆ ಸಾಕಷ್ಟು ಹಸಿರು ಮೇವು ಸಿಗಲಿದ್ದು ವನ್ಯಪ್ರಾಣಿಗಳು ಖುಷಿಯಾಗಿರಲಿವೆ ಎಂಬುದಂತು ಸತ್ಯ.
B M Lavakumar