Latest

ಕಪಿಲಾ ಆರತಿ, ಲಕ್ಷ ದೀಪೋತ್ಸವಕ್ಕೆ ಸಜ್ಜಾದ ದಕ್ಷಿಣ ಕಾಶಿ ನಂಜನಗೂಡು… ಹೇಗಿದೆ ಸಿದ್ಧತೆ?

ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ  ಬಳಿಯಿರುವ ಕಪಿಲಾ ನದಿಯಲ್ಲಿ ಡಿ. 21 ರಂದು ಕಪಿಲಾ ಆರತಿ ಹಾಗೂ ಲಕ್ಷ ದೀಪೋತ್ಸವ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ  ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಕಂಠೇಶ್ವರನ ಕೃಪೆಗೆ ಪಾತ್ರರಾಗಲು ಭಕ್ತರು ಕಾಯುತ್ತಿದ್ದಾರೆ.

ಕಪಿಲಾ ಆರತಿ ಹಾಗೂ ಲಕ್ಷ ದೀಪೋತ್ಸವ  ಕಾರ್ಯಕ್ರಮದ ಬಗ್ಗೆ ನಂಜನಗೂಡು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಯುವ ಬ್ರಿಗೇಡ್ ಸಂಚಾಲಕ  ನಿತಿನ್ ಅವರು ಕಳೆದ ಹತ್ತು ವರ್ಷಗಳಿಂದ ಕಪಿಲಾ ನದಿ ತೀರದಲ್ಲಿ  ಕಪಿಲಾ ಆರತಿ ಮತ್ತು ಲಕ್ಷ ದೀಪೋತ್ಸವ ಸಂಭ್ರಮ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದೇವೆ. ಕಪಿಲಾ ನದಿಯನ್ನು  ಹತ್ತು ವರ್ಷಗಳಿಂದ  ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ಸ್ವಚ್ಛಗೊಳಿಸುತ್ತೇವೆ. ಸ್ವಚ್ಛಗೊಳಿಸಿದ ಮೇಲೆ ಕಪಿಲಾ ಆರತಿ ಮತ್ತು ಲಕ್ಷ ದೀಪೋತ್ಸವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾಗಿ ಹೇಳಿದರು.

ದೇವಸ್ಥಾನಕ್ಕೆ ಆಗಮಿಸುವ ಲಕ್ಷಾಂತರ ಜನ ಈ ನೀರಿನಲ್ಲಿ ಸ್ನಾನ ಮಾಡಿ ನಂಜುಂಡೇಶ್ವರನ ದರ್ಶನ ಪಡೆಯುತ್ತಿದ್ದಾರೆ. ಕಪಿಲಾ ನದಿಗೆ ತನ್ನದೇ ಆದ ಇತಿಹಾಸವಿದ್ದು, ಈ ನದಿಯನ್ನು ಉಳಿಸಿ ಇದರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಈ ಕಪಿಲಾ ಆರತಿ ಮತ್ತು ಲಕ್ಷ ದೀಪೋತ್ಸವ  ಹಮ್ಮಿಕೊಂಡಿರುವುದಾಗಿ ಹೇಳಿದರಲ್ಲದೆ, ಡಿಸೆಂಬರ್ 21ರಂದು ಭಾನುವಾರ ಸಂಜೆ 6ಗಂಟೆಗೆ  ಆರಂಭವಾಗಲಿರುವ ಕಪಿಲೆಗೆ ದೀಪದ ಆರತಿ   ಆಕರ್ಷಣೀಯವಾಗಿದ್ದು,  ಕಾರ್ಯಕ್ರಮಕ್ಕೆ  ಮೈಸೂರು ರಾಮಕೃಷ್ಣ  ಆಶ್ರಮದ ಧರ್ಮದರ್ಶಿಗಳು, ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ,  ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಸಹಕಾರ್ಯದರ್ಶಿಗಳಾದ ಗೋಪಾಲ್ ಜಿ, ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ,  ಸೇರಿದಂತೆ ಇತರರು ಮುಖ್ಯ ಅತಿಥಿಯಾಗಿ ಆಗಮಿಸುತ್ತಾರೆ. ತಾಲೂಕಿನ ಎಲ್ಲಾ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು  ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಪುರೋಹಿತರಾದ ಕೃಷ್ಣ ಜೋಯಿಸ್ ಮಾತನಾಡಿ ಕಪಿಲಾ ನದಿಯಲ್ಲಿ ಡಿ. 21 ರಂದು ಕಪಿಲಾ ಆರತಿ ಹಾಗೂ  ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೆಳಿಗ್ಗೆ 9 ಗಂಟೆಗೆ  ಹದಿನಾರು ಕಲ್ಲಿನ ಮಂಟಪದಲ್ಲಿ ಶ್ರೀ ಶ್ರೀಕಂಠೇಶ್ವರನಿಗೆ ಭಕ್ತಾದಿಗಳಿಂದಲೇ ಅಷ್ಟ ತೀರ್ಥ ಅಭಿಷೇಕ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಯುವ ಬ್ರಿಗೇಡ್ ಸಂಚಾಲಕರಾದ ಕೃಷ್ಣ ಜೋಯಿಸ್, ಅನಂತ್, ರವಿ, ಅಭಿಷೇಕ್, ಇದ್ದರು.

admin
the authoradmin

Leave a Reply