ಪಾಂಡವಪುರ : ಸಿನಿಮಾ, ರಂಗಭೂಮಿ, ಸಾಂಸ್ಕೃತಿಕ ಹಾಗೂ ರೈತ ಸಂಘಟನೆಯ ಹೋರಾಟಗಳಲ್ಲಿ ಸದಾ ಸಕ್ರಿಯವಾಗಿದ್ದ ನರಹಳ್ಳಿ ಜ್ಞಾನೇಶ್ ಏನೇ ಮಾಡಿದರೂ ವಿಭಿನ್ನವಾಗಿ ಮಾಡುತ್ತಿದ್ದರು. ನುಡಿದಂತೆ ನಡೆದು ತೋರಿಸಿದ ವ್ಯಕ್ತಿತ್ವ ಅವರದ್ದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಮರಿಸಿದರು.
ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಭವನದಲ್ಲಿ ನರಹಳ್ಳಿ ಜ್ಞಾನೇಶ್ ಹಿತೈಷಿ ಬಳಗ ಆಯೋಜಿಸಿದ್ದ ‘ನರಹಳ್ಳಿ ಜ್ಞಾನೇಶ್ ನುಡಿನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರ್ಥಪೂರ್ಣ ನಾಟಕೋತ್ಸವಗಳ ಮೂಲಕ ಸಮಾಜಕ್ಕೆ ಸಂದೇಶ ಕೊಡುವ ಕೆಲಸ ಮಾಡಿದ್ದನ್ನು ಮರೆಯಲಾಗದು ಎಂದರು.
ಪುಟ್ಟಣ್ಣಯ್ಯ ಅವರ ಜೊತೆಗೆ ಅಪಾರ ಒಡನಾಟ ಇಟ್ಟುಕೊಂಡಿದ್ದರು. ರೈತ ಹೋರಾಟ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮದೇ ಛಾಪು ಮಾಡಿಸಿದ್ದರು. ಅವರ ವಿರಾಮವಿಲ್ಲದ ದುಡಿಮೆಯೇ ಅವರ ಅಕಾಲಿಕ ಮರಣಕ್ಕೆ ಕಾರಣವಾಯಿತು ಅನಿಸುತ್ತದೆ. ಆದ್ದರಿಂದ, ಯುವಜನರು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಬಹುಮುಖ ಪ್ರತಿಭೆಯ ಜೊತೆಗೆ ಅತ್ಯುತ್ಸಾಹಿಯಾಗಿದ್ದ ನರಹಳ್ಳಿ ಜ್ಞಾನೇಶ್ ಅವರಲ್ಲಿ ಅಪಾರವಾದ ಸಾಮಾಜಿಕ ಕಳಕಳಿಯೂ ಇತ್ತು. ಹುಟ್ಟೂರಿನ ಬಗ್ಗೆ ಅಭಿಮಾನವೂ ಇತ್ತು. ಆ ಕಾರಣದಿಂದಲೇ ಪಾಂಡವಪುರದ ನೆಲದಲ್ಲಿ ಕಲೆ, ಸಾಹಿತ್ಯ, ಪರಿಸರ, ರಂಗಭೂಮಿ, ಸಂಸ್ಕೃತಿ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಂಡು, ಸಮಾಜ ಸೇವೆಯಲ್ಲಿ ನಿರತರಾಗುವ ಮೂಲಕ ಸ್ವಸ್ಥ್ಯ ಸಮಾಜದ ಕಟ್ಟುವುದಕ್ಕೆ ಅವಿರತ ಶ್ರಮಿಸಿದ ಯುವ ಚೇತನ ಎಂದು ಶ್ಲಾಘಿಸಿದರು.

ಸಿನಿಮಾ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಜ್ಞಾನೇಶ್, ಕಿರುಚಿತ್ರ, ಸಾಕ್ಷ್ಯಚಿತ್ರ, ಧಾರವಾಹಿ, ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿ ಸೈ ಅನಿಸಿಕೊಂಡವರು. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರ ಜೊತೆಗೆ ಅವರ ಒಡನಾಟ ಗಮನಾರ್ಹವಾಗಿತ್ತು. ಸಜ್ಜನಿಕೆ ಮತ್ತು ವಿನಯಶೀಲ ಗುಣದ ಅವರು ಸದಾ ಸಮಾಜಮುಖಿ ಚಿಂತನೆಗಳ ಚಿಲುಮೆಯಾಗಿದ್ದ ಅಪರೂಪದ ವ್ಯಕ್ತಿತ್ವ ಹೊಂದಿದ್ದರು ಎಂದು ಬಣ್ಣಿಸಿದರು.
ಖ್ಯಾತ ವಿಚಾರವಾದಿ ಪ್ರೊ. ಕಾಳಚನ್ನೇಗೌಡ ಮಾತನಾಡಿ, ಮೈಸೂರಿನ ಪರಿಸರ ಬಳಗದಲ್ಲಿದ್ದ ಜ್ಞಾನೇಶ್ ಕಲ್ಯಾಣಿ ಸ್ವಚ್ಚತಾ ಕಾರ್ಯದಲ್ಲಿ ಪತ್ನಿಯ ಸಮೇತ ತೊಡಗಿಸಿಕೊಂಡಿದ್ದರು. ನಾಡಿನ ಸಾಹಿತ್ಯ ಲೋಕದಲ್ಲಿ ಜಿಲ್ಲೆಯ ಕವಿಗಳು ಸಾಕಷ್ಟಿದ್ದಾರೆ. ಆದರೆ, ಸಿನಿಮಾ ಕ್ಷೇತ್ರದಲ್ಲಿ ಕಡಿಮೆ. ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಜ್ಞಾನೇಶ್ ಬದುಕಿದ್ದರೆ ಮತ್ತಷ್ಟು ಎತ್ತರಕೆ ಬೆಳೆಯಬಹುದಿತ್ತು. ಮಂಡ್ಯದ ಗ್ರಾಮೀಣ ಸೊಗಡಿನ ಅವರು ಕಲೆ ಮತ್ತು ಸಂಸ್ಕೃತಿ ಮೂಲಕ ಸಮಾಜ ಸೇವೆ ಮಾಡುತ್ತಿದ್ದ ನಿಸ್ವಾರ್ಥಿ ಎಂದು ಸ್ಮರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಯಾರೇ ಆಗಲಿ ಹುಟ್ಟಿದೂರು, ಹೆತ್ತ ತಾಯಿಯ ಮರೆಯಬಾರದು. ಈ ಎರಡನ್ನೂ ಸದಾ ನೆನೆಯಬೇಕು. ಆದರೆ, ಸಮಾಜದಲ್ಲಿನ ತುಂಬ ಜನರು ತಮ್ಮ ಊರಿನ ಹೆಸರನ್ನು ಎಲ್ಲೂ ಹೇಳುವುದಿಲ್ಲ. ಆದರೆ, ಪುಟ್ಟ ಊರಾದ ನರಹಳ್ಳಿಯನ್ನು ಸಾಹಿತಿ ಬಾಲಸುಬ್ರಹ್ಮಣ್ಯ ಅವರ ರೀತಿಯಲ್ಲಿ ಜ್ಞಾನೇಶ್ ಸೇರಿಸಿಕೊಂಡು ತಮ್ಮ ಹುಟ್ಟೂರಿನ ಅಭಿಮಾನ ಮೆರೆದವರು. ಆ ಮೂಲಕಊರನ್ನು ಮುಂದೆ ತಂದವರು. ರೈತ ನಾಯಕ ಪುಟ್ಟಣ್ಣಯ್ಯವ ನೆನಪಿನಲ್ಲಿ ರಂಗನಮನ ಯಶಸ್ವಿಯಾಗಿಸಿದ್ದ ಜ್ಞಾನೇಶ್ ಅಗಲಿಕೆ ತುಂಬಲಾರದ ನಷ್ಟ ಎಂದರು.
ಮೈಸೂರಿನ ಪರಿಸರ ಬಳಗದ ಮುಖಂಡ ಪರುಶರಾಮೇಗೌಡ, ಖ್ಯಾತ ವಿನ್ಯಾಸಕಾರ ಪ್ರಕಾಶ್ ಚಿಕ್ಕಪಾಳ್ಯ, ರಂಗಕರ್ಮಿ ಚಂದ್ರು ಮಂಡ್ಯ, ಸಿನಿಮಾ ನಿರ್ದೇಶಕರಾದ ಜೆ.ಬಿ. ಸಿದ್ದೇಗೌಡ ಮತ್ತು ಶ್ರೀನಿವಾಸ ಶೆಟ್ಟಿ, ಸಿನಿಮಾ ಸಂಭಾಷಣಕಾರ ಸಿದ್ದು ಪ್ರಸನ್ನ, ಕಲಾವಿದ ಅಮಿತ್ ಕೃಷ್ಣ, ನಿವೃತ್ತ ಮುಖ್ಯ ಶಿಕ್ಷಕ ಶಿವರಾಜ್, ಅಧ್ಯಾಪಕ ಮಾಣಿಕ್ಯನಹಳ್ಳಿ ಜಯರಾಮ್, ತಾಲ್ಲೂಕು ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ನರಹಳ್ಳಿ ಜ್ಞಾನೇಶ್ ಅವರ ಒಡನಾಟ, ಸೇವೆ ಮತ್ತು ಸಾಧನೆ ಸ್ಮರಿಸಿದರು.
ಈ ಸಂದರ್ಭದಲ್ಲಿ ನರಹಳ್ಳಿ ಜ್ಞಾನೇಶ್ ಪತ್ನಿ ಕೋಕಿಲಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಟಿ. ಗೋವಿಂದೇಗೌಡ, ಉಪನ್ಯಾಸಕಿ ಉಷಾರಾಣಿ, ಕವಿ ಚಂದ್ರಶೇಖರಯ್ಯ, ಕಲಾವಿದ ಪ. ನಂಜುಂಡಸ್ವಾಮಿ ಮತ್ತಿರರು ಸೇರಿದಂತೆ ರೈತ ಸಂಘದ ಮುಖಂಡರು, ಕಾರ್ಯಕರ್ತರು, ನರಹಳ್ಳಿ ಗ್ರಾಮಸ್ಥರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಗಣ್ಯರು ಉಪಸ್ಥಿತರಿದ್ದರು.








