ಮೈಸೂರು: ಮನುಷ್ಯರು ಸೇರಿದಂತೆ ಸರ್ವ ಜೀವರಾಶಿಗೂ ಒಳಿತು ಮಾಡುವುದೇ ಧರ್ಮವಾಗಿದೆ ಎಂದು ಶಿವರಾತ್ರಿ ರಾಜೇಂದ್ರ ಕಲಾ ಬಳಗದ ಸಂಸ್ಥಾಪಕ ಅಧ್ಯಕ್ಷ ಕಲ್ಮಳ್ಳಿ ನಟರಾಜು ಹೇಳಿದರು.
ಹೊರೆಯಾಲ ಗ್ರಾಮದಲ್ಲಿ ನಡೆದ ಶನಿಮಹಾತ್ಮೆ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮೈಸೂರಿನ ಶಿವರಾತ್ರಿ ರಾಜೇಂದ್ರ ಕಲಾ ಬಳಗದ ಕಲಾವಿದರನ್ನು ಗ್ರಾಮದ ಪರವಾಗಿ ಗೌರವಿಸಿ ಮಾತನಾಡಿ, ರಂಗಭೂಮಿ ಕಲೆಯನ್ನು ಯಾವ ಮಾಧ್ಯಮಕ್ಕೂ ಸರಿಗಟ್ಟಲು ಸಾಧ್ಯವಿಲ್ಲ. ಅದು ಈ ನೆಲದ ಜೀವ ಕಲೆಯಾಗಿದೆ. ನಾವು ಪ್ರದರ್ಶಿಸುತ್ತಿರುವ ಶರಣರ ಜೀವನಾಧಾರಿತ ಕಥಾ ಹಂದರ ಹೊಂದಿರುವ ಪ್ರಭು ಲಿಂಗ ಲೀಲೆ ನಾಟಕಕ್ಕೆ ಎಲ್ಲೆಡೆ ಸಿಗುತ್ತಿರುವ ಪ್ರೋತ್ಸಾಹವೇ ಇದಕ್ಕೆ ಸಾಕ್ಷಿಯಾಗಿದೆ. ಪ್ರಸ್ತುತ ವೀಕ್ಷಿಸುತ್ತಿರುವ ನಾಟಕ ಪ್ರೇಕ್ಷಕರ ಜನಮನ ಸೆಳೆದಿದೆ ಎಂದು ಹೇಳಿದರು.

ಈ ನೆಲದಲ್ಲಿ 12ನೇ ಶತಮಾನದ ಕಾಲಘಟ್ಟದಲ್ಲಿ ಜನಿಸಿದ ಬಸವಾದಿ ಶರಣ,ಶರಣೆಯರು ವಚನ ರೂಪದಲ್ಲಿ ನೀಡಿದ ಅನುಭಾವಕ ಮಾನವತೆಯ ಪ್ರೀತಿ ಕರುಣೆಗಳಿಗಿಂತ ಮೇಲಾದ ಧರ್ಮ ಜಗತ್ತಿನಲ್ಲಿ ಯಾವುದೂ ಇಲ್ಲ. ಶರಣ ಧರ್ಮ ಪ್ರಪಂಚದ ಎಲ್ಲ ಧರ್ಮಗಳ ಸಾರವನ್ನೊಳಗೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜೇಂದ್ರ ಕಲಾ ಬಳಗದ ಸುಗಮ ಸಂಗೀತ ಗಾಯಕ ಶಿವಕುಮಾರ್ ಬಾಗಳಿ, ಮಹೇಶ್ ಬಾನಹಳ್ಳಿ, ಸಂತೋಷ್, ಸಿದ್ದರಾಮೇಶ್, ಮಹೇಶ್ ಕೊಡಗಾಪುರ, ಗುರುಪ್ರಸಾದ್ ಹೊರೆಯಾಲ, ರಾಜೇಶ್, ಮಹೇಶ್, ತಾಪಂ ಮಾಜಿ ಸದಸ್ಯ ನೀಲಪ್ಪ, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಹೇಶ್, ರಂಗ ನಿರ್ದೇಶಕ ಸುತ್ತೂರು ಗುರುಶಾಂತಪ್ಪ, ಬಿಳಿಗೆರೆ ಶಿವಶಂಕರ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.








