CrimeLatest

ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಹೆಣವಾದ ಲಾರಿಡ್ರೈವರ್… ಹತ್ಯೆ ಮಾಡಿದವರು ಅರೆಸ್ಟ್

ಮಡಿಕೇರಿ: ಹೊಸ ವರ್ಷದ ಮೋಜು ಮಸ್ತಿಗೆ  ತನ್ನಿಂದ ದೂರವಿದ್ದ ಹಳೆಯ ಪ್ರೇಯಸಿ ಮನೆಗೆ ಹೋಗಿ ಆಕೆಯನ್ನು ಕರೆದು ಗಲಾಟೆ ಮಾಡಿ ಹತ್ಯೆಗೀಡಾದ ಲಾರಿ ಡ್ರೈವರ್ ನವಾಜ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಕೊಡಗಿನ ಗೋಣಿಕೊಪ್ಪದ ಹರಿಶ್ಚಂದ್ರಪುರದ ನಿವಾಸಿಯಾಗಿರುವ ನವಾಜ್(39) ಬದುಕಿಗೆ ಲಾರಿಡ್ರೈವರ್ ವೃತ್ತಿ ಮಾಡಿಕೊಂಡಿದ್ದನು. ಮದುವೆಯಾಗಿ ಹೆಂಡತಿ ಮಗಳಿದ್ದರೂ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿ  ಹೊಸವರ್ಷದಂದು ಆಕೆಯೊಂದಿಗೆ ಗಲಾಟೆ ಮಾಡಿಕೊಂಡು ಸಾವಿಗೀಡಾಗಿದ್ದನು.  ಇದೀಗ ಹತ್ಯೆಗೆ ಸಂಬಂಧಿಸಿದಂತೆ ಮಹಿಳೆ ಕಾವ್ಯ, ಆಕೆಯ ಪತಿ ಪೂರ್ಣಚಂದ್ರ ಹಾಗೂ ಸಹಚರರಾದ ಅಶೋಕ, ಮಹೇಂದ್ರ, ಕುಮಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನೋಡುವುದಾದರೆ ನವಾಜ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಹಾತೂರು ಕುಂದ ರಸ್ತೆಯ ಖಾಸಗಿ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪೂರ್ಣಚಂದ್ರನ ಪತ್ನಿ ಕಾವ್ಯಳ  ಪರಿಚಯವಾಗಿತ್ತು. ಪರಿಚಯ ದಿನಕಳೆದಂತೆ  ಬೇರೆಹಾದಿಯತ್ತ ತಿರುಗಿತ್ತು. ಪರಿಚಯ ಕ್ರಮೇಣ ಪ್ರೇಮಕ್ಕೆ ತಿರುಗಿ ಸದ್ದಿಲ್ಲದೆ ಅನೈತಿಕ ಸಂಬಂಧ ಬೆಳೆದಿತ್ತು. ಹೀಗಾಗಿ ನವಾಜ್ ಕಾವ್ಯಳನ್ನು ವಿರಾಜಪೇಟೆ ಬಾಡಿಗೆ ಮನೆಯಲ್ಲಿರಿಸಿ ಅಲ್ಲಿಗೆ ಹೋಗಿ ಬರುತ್ತಿದ್ದನು. ಒಂದಷ್ಟು ಸಮಯ ಇದು ಮುಂದುವರೆದಿತ್ತು.

ಆದರೆ ಗಂಡನ ಬಿಟ್ಟು ಬಂದಿದ್ದ ಕಾವ್ಯ ಮತ್ತೆ ಹಳೆಗಂಡನ ಪಾದವೇ ಗತಿ ಎಂದು ಹಾತೂರು ಕುಂದ ರಸ್ತೆಯಲ್ಲಿದ್ದ ಗಂಡ ಪೂರ್ಣಚಂದ್ರನನ್ನು ಸೇರಿಕೊಂಡಿದ್ದಳು. ಇನ್ನು ನವಾಜ್ ನ ಅನೈತಿಕ ಸಂಬಂಧದ ವಿಚಾರ ಬಯಲಾಗುತ್ತಿದ್ದಂತೆಯೇ ನವಾಜ್ ಕುಟುಂಬದವರಿಗೂ ಆ ಕಾವ್ಯಳಿಗೂ ದೊಡ್ಡ ಮಟ್ಟದಲ್ಲಿ ಗಲಾಟೆಗಳಾಗಿದ್ದವು. ಅದು ಪೊಲೀಸ್ ಠಾಣೆವರೆಗೂ ಹೋಗಿತ್ತು. ಈ ವೇಳೆ ಪೊಲೀಸರು ಎರಡು ಕಡೆಯವರನ್ನು ಠಾಣೆಗೆ ನವಾಜ್ ನಿಂದ ಇನ್ನು ಮುಂದೆ ಆಕೆಯ ತಂಟೆಗೆ ಹೋಗದೆ, ಅನೈತಿಕ ಸಂಬಂಧ ಮುಂದುವರೆಸದಂತೆ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿತ್ತು.

ಈ ಮಧ್ಯೆ ಡಿಸೆಂಬರ್ 31ರಂದು ರಾತ್ರಿ ನವಾಜ್ ತನ್ನ ಕಾರಿನಲ್ಲಿ ಗೋಣಿಕೊಪ್ಪ ನಗರದಿಂದ ರಾತ್ರಿ11.45ರ ಸುಮಾರಿಗೆ ಹಾತೂರು ಕುಂದ ರಸ್ತೆಯಲ್ಲಿರುವ ಕಾವ್ಯಳ ಮನೆಗೆ ತೆರಳಿದ್ದು, ಮನೆಯಲ್ಲಿದ್ದ ಕಾವ್ಯಳನ್ನು ಹೊರ ಬರುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಅಲ್ಲಿ ಜಗಳವಾಗಿದ್ದು,  ಕಾವ್ಯಳ ಗಂಡ ಪೂರ್ಣಚಂದ್ರ, ಅಶೋಕ, ಮಹೇಂದ್ರ, ಕುಮಾರ ಮೊದಲಾದವರು ನವಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ  ತೀವ್ರಗಾಯಗೊಂಡಿದ್ದ ನವಾಜ್ ಸಂಪೂರ್ಣ ಅಸ್ವಸ್ಥಗೊಂಡಿದ್ದನು.  ನವಾಜ್ ಬದುಕುವುದಿಲ್ಲ ಎಂಬುದು ಗೊತ್ತಾಯಿತೋ ಪೂರ್ಣಚಂದ್ರ ಅಂಡ್ ಗ್ಯಾಂಗ್ ಪ್ರಕರಣದ ದಿಕ್ಕು ತಪ್ಪಿಸುವ ಸಲುವಾಗಿ ನವಾಜ್ ತಂದಿದ್ದ ಕಾರನ್ನು ಸಮೀಪದ ಚರಂಡಿಗೆ ಮಗುಚಿ ಅಪಘಾತದಿಂದ ನವಾಜ್ ಮೃತಪಟ್ಟಿರುವ ಸನ್ನಿವೇಶವನ್ನು ಸೃಷ್ಠಿಸಿದ್ದರು.

ತಡರಾತ್ರಿ ಕಾರು ಮಗುಚಿ ಬಿದ್ದಿರುವುದನ್ನು ನೋಡಿದ ಸಮೀಪದ ಕಾಫಿಕ್ಯೂರಿಂಗ್ ವರ್ಕ್ಸ್ ಮಾಲೀಕರು 112 ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಆಗಮಿಸಿ ಅಂಗಾತ ಬಿದ್ದಿದ್ದ ನವಾಜ್‌ನನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದಾರೆ. ಮಾರಣಾಂತಿಕ ಹಲ್ಲೆಯಾದ ಹಿನ್ನಲೆಯಲ್ಲಿ ನವಾಜ್ ಅದಾಗಲೇ ಮೃತ ಪಟ್ಟಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಡಿವೈಎಸ್ಪಿ ಮಹೇಶ್‌ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್‌ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್‌ಕುಮಾರ್, ಹಾಗೂ ಸಿಬ್ಬಂದಿ  ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯವಾಗಿ ಲಭಿಸಿರುವ ಸಿಸಿ ಕ್ಯಾಮರ ಪೂಟೇಜ್‌ಗಳನ್ನು ಪರಿಶೀಲನೆ ನಡೆಸಿ,  ಶ್ವಾನದಳ, ಬೆರಳಚ್ಚು ತಜ್ಞರನ್ನು ಬರ ಮಾಡಿಕೊಂಡು ಸೂಕ್ತ ಸಾಕ್ಷ್ಯದಾರಗಳನ್ನು ಸಂಗ್ರಹಿಸಿದ್ದಾರೆ.

ಈ ಸಂಬಂಧ ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ತರುವಾಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಕಾವ್ಯ, ಪೂರ್ಣಚಂದ್ರ, ಅಶೋಕ, ಮಹೇಂದ್ರ, ಕುಮಾರ ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಅಂತು ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದ ನವಾಜ್‌ ತನ್ನ ಪ್ರಾಣವನ್ನು ಕಳೆದುಕೊಂಡ ತನ್ನನ್ನು ನಂಬಿದ ಹೆಂಡತಿ ಮಗಳನ್ನು ಅನಾಥರನ್ನಾಗಿ ಮಾಡಿರುವುದು ಮಾತ್ರ ವಿಷಾದದ ಸಂಗತಿಯಾಗಿದೆ.

ಹೆಚ್ಚಿನ ಕ್ರೈಂ ಸ್ಟೋರಿಗಳಿಗೆ ಇದರ ಮೇಲೆ ಕ್ಲಿಕ್ ಮಾಡಿ….

admin
the authoradmin

ನಿಮ್ಮದೊಂದು ಉತ್ತರ

Translate to any language you want