ಎಚ್ ಡಿ ಕೋಟೆ ಸರಗೂರು ಅವಳಿ ತಾಲೂಕುಗಳಲ್ಲಿ ನಿಖಿಲ್ ಕುಮಾರಸ್ವಾಮಿ ರೋಡ್ ಶೋ.. ಕಾರ್ಯಕರ್ತರಲ್ಲಿ ಹುರುಪು

ಹೆಚ್.ಡಿ.ಕೋಟೆ(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ರಾಜ್ಯದಲ್ಲಿ ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಮುಂದಾಗಿದ್ದು, ಸ್ವತಃ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ತಮ್ಮ ಕೈಬಿಟ್ಟು ಹೋಗಿರುವ ಸ್ಥಾನಗಳನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅದರಂತೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕಿಗೆ ಪ್ರಥಮವಾಗಿ ಭೇಟಿ ನೀಡಿರುವ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.
ಮೈಸೂರು-ಮಾನಂದವಾಡಿ ರಸ್ತೆಯ ತಾಲೂಕಿನ ಪ್ರವೇಶ ದ್ವಾರ ಕಂಚಮಹಳ್ಳಿ ಗ್ರಾಮದ ಬಳಿ ನಿಖಿಲ್ ಕುಮಾರಸ್ವಾಮಿ ಬರುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಾವಿರಾರು ಕಾರ್ಯಕರ್ತರು ಸ್ವಾಗತ ಕೋರಿದರು. ಪುರ, ಹಂಪಾಪುರ, ಹೊಮ್ಮರಗಳ್ಳಿ, ಮಾದಾಪುರ ಗ್ರಾಮಗಳಲ್ಲಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹೂವಿನ ಹಾರ, ಶಾಲು ಹೊದಿಸಿ ಪುಷ್ಪವೃಷ್ಠಿಯೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು.

ಹ್ಯಾಂಡ್ ಪೋಸ್ಟ್- ಸರಗೂರಿನಲ್ಲಿ ಅದ್ಧೂರಿ ಸ್ವಾಗತ ದೊರೆತಿದ್ದು, ಮಂಗಳ ವಾದ್ಯಗಳೊಂದಿಗೆ, ಪಟಾಕಿ ಸಿಡಿಸಿ ಕಾರ್ಯಕರ್ತರು ಸ್ವಾಗತಿಸಿದರು. ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ. ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಜೈಕಾರ ಕೂಗಿದರು. ವೃತ್ತದ ಬಳಿ ಬೃಹತ್ ಗಾತ್ರದ ಹಣ್ಣಿನ ಹಾರ ಹಾಕಿ ಸ್ವಾಗತಿಸಿದ್ದಾರೆ.
ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ, ಬಾಬು ಜಗಜೀವನ್ ರಾಮ್ ಅವರ ಪುತ್ಥಳಿ, ತುಂಬಸೋಗೆ ಗ್ರಾಮದಲ್ಲಿರುವ ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದ ನಿಖಿಲ್ ಕುಮಾರಸ್ವಾಮಿ ಹಾಗೂ ಕೆ.ಎಂ.ಕೃಷ್ಣನಾಯಕ ಪುಷ್ಪಾರ್ಚನೆ ಮಾಡಿ ಮಹನೀಯರಿಗೆ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕುಗಳು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿವೆ. ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿವೆ. ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಕಾರ್ಯಪ್ರವೃತ್ತರಾಗಿಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ, ಉಸ್ತುವಾರಿ ಸಚಿವ, ಸಂಸದರು, ಶಾಸಕರು ಜಿಲ್ಲೆಯವರೇ ಆಗಿದ್ದರೂ ಹಿಂದುಳಿದ ತಾಲೂಕು ಎಚ್.ಡಿ.ಕೋಟೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಚಿಂತನೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವ್ಯಾಘ್ರನ ಉಪಟಳಕ್ಕೆ ಉಸಿರು ಚೆಲ್ಲಿದ ರೈತರಾದ ಕೂಡಗಿ ಗ್ರಾಮದ ದೊಡ್ಡಲಿಂಗಯ್ಯ, ಮುಳ್ಳೂರು ಸಮೀಪದ ಬೆಣ್ಣೆಗೆರೆ ರೈತ ರಾಜಶೇಖರ ಮೂರ್ತಿ, ಹಳೆ ಹೆಗ್ಗುಡಿಲು ಗ್ರಾಮದ ಚೌಡನಾಯಕರ ಹಾಗೂ ದಾಳಿಯಿಂದ ಶಾಶ್ವತ ಅಂಧತ್ವಕ್ಕೆ ಗುರಿಯಾದ ಮಾದೇಗೌಡ ಕುಟುಂಬಗಳಿಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿದರು.
ರಾಜಕೀಯ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ… ಓದಿ







