ಪಿರಿಯಾಪಟ್ಟಣ: ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಹಾಗಾಗಿ ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ತಳ ಹಂತದಿಂದ ಸಂಘಟಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ಸಾಯಿ ಸಮುದಾಯ ಭವನದ ಆವರಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯಾದ್ಯಂತ ಜೆಡಿಎಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅಧಿಕಾರ ಸಿಗುವ ಮೂಲಕ ರಾಜ್ಯದ ಜನರ ವಿಶ್ವಾಸ ಮತ್ತು ಪ್ರಬಲ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸವಿದೆ. ಪಕ್ಷವನ್ನು ಮತ್ತಷ್ಟು ಸಂಘಟಿಸಿ ಬಲಪಡಿಸಲಾಗುತ್ತಿದೆ. ಕೇವಲ ಭಾಷಣ ಮಾಡಿದರಷ್ಟೇ ಪಕ್ಷ ಸಂಘಟನೆ ಯಾಗುವುದಿಲ್ಲ ಹಾಗಾಗಿ ಕಾರ್ಯಕರ್ತರನ್ನು ಸಂಘಟಿಸಿ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು.
ಮುಂದಿನ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ ಚುನಾವಣೆಗಳು ಬರುತ್ತಿವೆ ಹಾಗಾಗಿ ನಾವು ಈ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸುವ ಕೆಲಸ ಮಾಡಬೇಕು, 2028ರ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರು ಶ್ರಮಸಬೇಕು. ಇನ್ನೂ ಚುನಾವಣೆಗೆ ಮೂರು ವರ್ಷವಿದೆ ಎಂದು ಕಾರ್ಯಕರ್ತರು ಕೈ ಕಟ್ಟಿ ಕೊರದೆ ಅತ್ಯಂತ ಎಚ್ಚರಿಕೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಹಾಗಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಕಟ್ಟಬೇಕು.

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ ಹಾಗಾಗಿ ಮಾಜಿ ಶಾಸಕ ಕೆ.ಮಹದೇವ್ ಹಾಗೂ ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ರವರು ಕಾರ್ಯಕರ್ತರನ್ನು ಒಗ್ಗಟ್ಟಿನಲ್ಲಿ ಕರೆದೊಯ್ಯಬೇಕು. ಪಕ್ಷದ ಚುಕ್ಕಾಣಿಯನ್ನು ಮುಂದಿನ ದಿನಗಳಲ್ಲಿ ಯಾರ ನೇತೃತ್ವದಲ್ಲಿ ಎದುರಿಸಬೇಕೆನ್ನುವುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಹೀಗಾಗಿ ವರಿಷ್ಠರು ನಿರಂತರವಾಗಿ ಕ್ಷೇತ್ರದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಕೇಂದ್ರ ಸಚಿವ ಕುಮಾರಣ್ಣ ಅವರ ಆದೇಶದಂತೆ ತಾಲ್ಲೂಕಿನ 34 ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ ಬೂತ್ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸಿದ್ದೇನೆ. ರಾಜ್ಯದಾದ್ಯಂತ ಪಕ್ಷ ಸಂಘಟನೆಗಾಗಿ ಮುಂದಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ 9 ಸಾವಿರ ಕಿಮೀ ಓಡಾಡಿ, 55 ಕ್ಷೇತ್ರದಲ್ಲಿ ಸಂಚಾರ ನಡೆಸಿ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯಕೆಲಸವಾಗಿದೆ ಎಂದರು.
ಮಾಜಿ ಸಚಿವ ಸಾ.ರ.ಮಹೇಶ್ ಮಾತನಾಡಿ ರಾಜ್ಯದಲ್ಲಿ ಕುಮಾರಣ್ಣ ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಮಾತ್ರ ರೈತರ ಬವಣೆ ನೀಗಲು ಸಾಧ್ಯ, ಈ ಭಾಗದ ತಂಬಾಕು ಬೆಳೆಗಾರರ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬ ನಿರಂತರವಾಗಿ ಹೋರಾಟ ಮಾಡುವ ಮೂಲಕ ರೈತರ ಹಿತ ಕಾಯುವ ಕೆಲಸ ಮಾಡುತ್ತಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ 7 ಕೋಟಿ ಕನ್ನಡಿಗರು ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹುಣಸೂರು ಶಾಸಕ ಹರೀಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷರ ಅಶ್ವಿನ್ ಕುಮಾರ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ವಿವೇಕಾನಂದ, ಮೈಸೂರು ನಗರ ಘಟಕದ ಅಧ್ಯಕ್ಷ ಎಸ್. ಬಿ. ಎಂ.ಮಂಜು, ಜೆಡಿಎಸ್ ಮುಖಂಡರಾದ ಗಗನ್, ಐಲಾಪುರ ರಾಮು, ಸಿ. ಎನ್.ರವಿ,ರಾಜು ಮಾಸ್ಟರ್ , ಕೆ.ಕೆ.ಕುಮಾರ್, ಸತೀಶ್ ಬೆಕ್ಕೆ, ಅತ್ತರ ಮತ್ತಿನ್, ಕೆ.ರಮೇಶ್, ಕೆ.ಸುರೇಶ್, ಕೆ.ಮಹೇಶ್, ನಿರಂಜನ್, ಮಂಜುನಾಥ್ ಸಿಂಗ್, ಆವರ್ತಿ ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು








