CinemaLatest

ಸಂಗೀತ, ನೃತ್ಯ, ನಟನೆಯಲ್ಲಿ ನಿಪುಣತೆ ಮೆರೆದು ದಕ್ಷಿಣಭಾರತದ ಅಭಿನೇತ್ರಿಯಾಗಿ ಮಿಂಚಿದ ರಾಜಸುಲೋಚನ..!

ಸಿನಿಮಾ ರಂಗದ ಒಳಹೊಕ್ಕು ನಟ, ನಟಿಯರ ಬಗ್ಗೆ ತಿಳಿಯುತ್ತಾ ಹೋದರೆ ಅವರ ನಟನೆಯಷ್ಟೆ ಅಲ್ಲದೆ, ಸಾಧನೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಬಹುತೇಕ ಕಲಾವಿದರನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ ಮತ್ತು ಅವರನ್ನು ಮೆಚ್ಚಿಕೊಂಡಿರುತ್ತೇವೆ. ಆದರೆ ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಕ್ಕೆ ಯಾರೂ ಮುಂದಾಗಿರುವುದಿಲ್ಲ. ಅದರಲ್ಲೂ ಮಿಂಚಿ ಮರೆಯಾಗಿ ಹೋದ ನಟ, ನಟಿಯರ ಬಗ್ಗೆ ಅರಿಯುವ ಆಸಕ್ತಿಯೂ ಹೆಚ್ಚಿನವರಿಗೆ ಇಲ್ಲದಾಗಿದೆ.  ನಟ, ನಟಿಯರ ಬಗ್ಗೆ ಆಸಕ್ತಿ ಹೊಂದಿದವರಿಗೆ ಒಂದಷ್ಟು ಮಾಹಿತಿಯನ್ನು  ನೀಡುವ ಪ್ರಯತ್ನ ‘ಜನಮನಕನ್ನಡ ದಾಗಿದೆ… ಇದು ಜನಪ್ರಿಯವಾಗಿದೆ ಎನ್ನುವುದಕ್ಕೆ ಪ್ರತಿ ಲೇಖನದ ಕೆಳಗಿರುವ ಕಾಮೆಂಟ್ ಗಳೇ ಸಾಕ್ಷಿಯಾಗಿವೆ.. ಲೇಖನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವ ಬರಹಗಾರರಾದ ಕುಮಾರಕವಿ ನಟರಾಜ್ ಅವರಿಗೊಂದು ಸೆಲ್ಯೂಟ್ ….

ಈ ಬಾರಿ ಮಿಂಚಿ ಮರೆಯಾದ ಹಿರಿಯ ನಟಿ ರಾಜಸುಲೋಚನ ಬಗ್ಗೆ ಇಲ್ಲಿ ಮೆಲುಕು ಹಾಕಲಾಗಿದೆ… ರಾಜಸುಲೋಚನ ಎಂಬ ಹೆಸರಿನಲ್ಲೇ ಒಂದು ಕುತೂಹಲಕಾರಿ ಘಟನೆ ಅಡಗಿದೆ. ಇವರ ನಿಜವಾದ ಹುಟ್ಟುಹೆಸರು *ಚಿತ್ತಜಲ್ಲು ರಾಜೀವಲೋಚನಾ* . ಅತಿ ಉದ್ದನೆಯ ಈ ಹೆಸರನ್ನು ಮದ್ರಾಸಿನ ಶಾಲೆಗೆ ಸೇರಿಸುವಾಗ ತುಂಡಾಕಿ ಸದರಿ ಸ್ಕೂಲ್ ಮೇಷ್ಟ್ರು ಅಡ್ಮಿಶನ್ ರಿಜಿಸ್ಟರಲ್ಲಿ ಬರೆದುಕೊಂಡ ಹೆಸರೇ ರಾಜಸುಲೋಚನಾ. 15ನೇ ಆಗಸ್ಟ್ 1935ರಂದು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಆಂಧ್ರಪ್ರದೇಶ ಬೆಜವಾಡ (ವಿಜಯವಾಡ) ನಗರದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹೆಸರು ಪಿಳ್ಳೆಯಾರಚೆಟ್ಟಿ ಭಕ್ತವತ್ಸಲನಾಯ್ಡು ಈತ ಇಂಡಿಯನ್ ರೈಲ್ವೆಯ ಉನ್ನತಾಧಿಕಾರಿ, ಇವರ ತಾಯಿ ಹೆಸರು ರುಕ್ಮಿಣಿ, ಗೃಹಿಣಿ.

ರಾಜಸುಲೋಚನಾ ಬಾಲ್ಯದಿಂದಲೇ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸ್ ಜತೆಗೆ ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದರು. ದಕ್ಷಿಣ ಭಾರತದ ಐದು ಭಾಷೆಯ 300ಕ್ಕೂ ಮಿಕ್ಕು ಚಿತ್ರಗಳಲ್ಲಿ ನಟಿಸಿದ್ದು ಈ ಪೈಕಿ ಹತ್ತು ಕನ್ನಡ ಫಿಲಂಸ್ ಇವೆ. ಇವರ ಬಗ್ಗೆ *ದಿ ಹಿಂದೂ* ಪತ್ರಿಕೆಯಲ್ಲಿ *ದಿ ಕ್ವೀನ್ ಆಫ್ ದಿ ಸ್ಕ್ರೀನ್* ಲೇಖನವೂ ಪ್ರಕಟವಾಗಿದ್ದು ಇತಿಹಾಸ… 1961ರಲ್ಲಿ ಮದುವೆಯಾದ ಇವರು ತಮ್ಮ ಮೊದಲ ಪತಿಯಿಂದ ಓರ್ವ ಪುತ್ರನಿಗೆ ತಾಯಿ ಆದನಂತರ ವಿವಾಹ ವಿಚ್ಛೇದನ ಪಡೆದರು. ಒಂಟಿಯಾಗೇ ಬಹಳ ವರ್ಷಕಾಲ ಬದುಕು ಸಾಗಿಸುತ್ತಿರುವಾಗ ಅದೃಷ್ಟವಶಾತ್ ನಟ, ನಿರ್ದೇಶಕ ಸಿ.ಎಸ್.ರಾವ್ ಜತೆಗೆ ಪುನರ್ ವಿವಾಹವಾದರು.

ಕಾಲಕ್ರಮೇಣ ರಾಜಾ ಸುಲೋಚನಾ ಎರಡು ಹೆಣ್ಣುಮಕ್ಕಳ ತಾಯಿ ಆದರು. ಓರ್ವ ಮಗಳು ಚೆನ್ನೈ ನಗರದಲ್ಲಿದ್ದು ಮತ್ತೋರ್ವ ಮಗಳು ಅಮೆರಿಕದ ಶಿಕಾಗೊ ಪಟ್ಟಣದಲ್ಲಿ ನೆಲೆಸಿದ್ದಾರೆ. 1962ನೇ ಇಸವಿಯಲ್ಲಿ ರಾಜ ಸುಲೋಚನಾ ಮದ್ರಾಸಿನಲ್ಲಿ *ಪುಷ್ಪಾಂಜಲಿ ನೃತ್ಯಕಲಾ* *ಕೇಂದ್ರಂ* ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಸ್ಥಾಪಿಸಿದರು. ಇಲ್ಲಿ ಅಂತಾರಾಷ್ಟ್ರ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ನೃತ್ಯ ಕಾರ್ಯಕ್ರಮಗಳನ್ನು ಸ್ವಯಂ ತಾವೇ ನೀಡುವುದಲ್ಲದೆ ತಮ್ಮ ಶಿಷ್ಯವೃಂದ ದವರಿಂದಲೂ ನೂರಾರು ನೃತ್ಯ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ವಿಖ್ಯಾತ ಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ತನುಮನ ಧನಕನಕ ಪರಿಶ್ರಮ ಎಲ್ಲವನ್ನು ಧಾರೆ ಎರೆದಿದ್ದಾರೆ.

ತತ್ಪರಿಣಾಮ ಪ್ರಪಂಚದಾದ್ಯಂತ ಇವರ ನೃತ್ಯಕಲಾ ಕೇಂದ್ರಂ ವಿದ್ಯಾರ್ಥಿಗಳು ವಿವಿಧ ಹುದ್ದೆ ಉನ್ನತ ಸ್ಥಾನ ಪಡೆದಿದ್ದಾರಲ್ಲದೇ ಇವತ್ತಿಗೂ ಈ ಹಿರಿಯನಟಿ ಹಾಗೂ ನೃತ್ಯ ಕಲಾವಿದೆ ರಾಜಾಸುಲೋಚನರ ಕೀರ್ತಿಯನ್ನು ಅಜರಾಮರ ಗೊಳಿಸುತ್ತಿದ್ದಾರೆಂಬುದು ಪ್ರಶಂಸನೀಯ!  ಒಂದು ಕಾಲದಲ್ಲಿ ರಾಜಸುಲೋಚನಾ ಟಾಪ್ ಹೀರೋಯಿನ್- ಕಂ- ಡ್ಯಾನ್ಸರ್ ಪಾತ್ರದಲ್ಲಿ ದಕ್ಷಿಣ ಭಾರತದ ಪಂಚಭಾಷಾ ಚಿತ್ರಗಳಲ್ಲಿ ಮೆರೆದರು. ಮೇರು ನಟರಾದ (MGR), ಎಂ.ಜಿ.ರಾಮಚಂದ್ರನ್, ಶಿವಾಜಿಗಣೇಶನ್, ಎನ್.ಟಿ.ರಾಮರಾವ್ (NTR) ಅಕ್ಕಿನೇನಿ ನಾಗೇಶ್ವರರಾವ್, ಕೃಷ್ಣ, ಪ್ರೇಮ್‍ನಜೀರ್, ಡಾ.ರಾಜಕುಮಾರ್ ಮುಂತಾದ ಮೇರುನಟರ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತರಾದರು.

ದಿಗ್ಗಜ ಹೆಚ್‍.ಎಲ್‍. ಎನ್.ಸಿಂಹ ನಿರ್ದೇಶನದ ಕನ್ನಡ ಚಿತ್ರ *ಗುಣಸಾಗರಿ* ಮೂಲಕ 1953ರಲ್ಲಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ನಂತರ ಬೇಡರಕಣ್ಣಪ್ಪ, ಸೋದರಿ, ವಾಲ್ಮೀಕಿ, ದಶಾವತಾರ, ಭೂಕೈಲಾಸ, ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಹುತೇಕ ಗೌರಮ್ಮನ ಪಾತ್ರಗಳನ್ನೇ ನಿರ್ವಹಿಸಿದ್ದ ಈಕೆ ಆಶ್ಚರ್ಯ ಎಂಬಂತೆ ಡಾ.ರಾಜ್- ಭಾರತಿ ತಾರಾಗಣದ ಜಗಮೆಚ್ಚಿದಮಗ ಚಿತ್ರದಲ್ಲಿ ಏರಿ ಮೇಲೆ ಏರಿ.. ಮೇಲೆ ಕೆಳಗೆ ಹಾರಿ…ಎಂಬ ಜನಪ್ರಿಯ ಗೀತೆಗೆ ತಮ್ಮ 39ನೇ ವಯಸ್ಸಲ್ಲು ಕುಣಿದು ಕುಪ್ಪಳಿಸಿ ಮತ್ತೊಮ್ಮೆ ಖ್ಯಾತಿ ಗಳಿಸಿದರು.

ಮೂಲತಃ ತಮಿಳು ಮತ್ತು ತೆಲುಗು ಭಾಷೆಯ ನಟಿಯಾದ ಇವರು ಕನ್ನಡ ಚಿತ್ರಗಳಲ್ಲಿ ನಟಿಸುವಾಗೆಲ್ಲ ಬೇರೆಯವರ ಕಂಠದಾನ ಪಡೆಯದೆ ಕನ್ನಡ ಸಂಭಾಷಣೆಯನ್ನು ತಮ್ಮ ಮಾತೃಭಾಷೆಯಲ್ಲಿ ಬರೆದುಕೊಂಡು ಸ್ವತಃ ತಾವೇ ರೀ-ರೆಕಾರ್ಡಿಂಗ್ ಕಾರ್ಯದಲ್ಲಿ ಭಾಗವಹಿಸಿ ಕನ್ನಡ ಡೈಲಾಗ್ ಹೇಳುತ್ತಿದ್ದ ಪರಿ ಪ್ರತಿಯೊಬ್ಬರು ಮೆಚ್ಚುವಂತೆ ಇರುತ್ತಿತ್ತು. ಇದಕ್ಕೆ ಕಾರಣ ಕನ್ನಡ ನಾಡು-ನುಡಿ ಇತಿಹಾಸದ ಬಗ್ಗೆ ಇವರಲ್ಲಿದ್ದ ಅನನ್ಯ ಅಭಿಮಾನ. ಹೀಗಾಗಿ ಇವರು ನಿಜಕ್ಕೂ ಶ್ಲಾಘನೀಯರು..

ರಾಜಸುಲೋಚನಾ ನಟಿಸಿದ ಕನ್ನಡ ಫಿಲಂಸ್ ಗಳು ಹೀಗಿವೆ.. ಗುಣಸಾಗರಿ, ಬೇಡರಕಣ್ಣಪ್ಪ, ದಶಾವತಾರ,  ವಾಲ್ಮೀಕಿ, ಭೂಕೈಲಾಸ, ಸೋದರಿ, ಆದರ್ಶಸತಿ, ಗಂಧರ್ವಕನ್ಯೆ, ಜಗಮೆಚ್ಚಿದಮಗ, ವಿಚಿತ್ರ ಪ್ರಪಂಚ, ಮುಂತಾದ ಕನ್ನಡ ಚಿತ್ರಗಳಲ್ಲಿ ಅಮೋಘವಾಗಿ ನಟಿಸಿದ್ದರು. ಇಂಥ ಸುರಾಗಿಣಿ ಸುರಸುಂದರಿ ರಾಜಾಸುಲೋಚನ ತಮ್ಮ 78ನೇ ವಯಸ್ಸಿಗೆ 5.3.2013ರಂದು ಚೆನ್ನೈನಲ್ಲಿ ಸ್ವರ್ಗಸ್ಥರಾದರು. ಇವರ ನಿಧನದಿಂದ ಚಂದನವನ ಹಾಗೂ ದಕ್ಷಿಣ ಭಾರತದ ಶ್ರೇಷ್ಠ ತಾರಾಮಣಿ ಮಾಲೆಯ ಮತ್ತೊಂದು ಮುತ್ತು ದೇವರಪಾದ ಸೇರಿತು!

 

admin
the authoradmin

11 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

Translate to any language you want