DasaraLatest

ಮಹಾರಾಜರ ಕಾಲದಲ್ಲಿ ಮೈಸೂರು ದಸರಾ ಜಂಬೂಸವಾರಿ ಹೇಗಿರುತ್ತಿತ್ತು? ಗತ ಇತಿಹಾಸದ ಮೆಲುಕು!

ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಜಂಬೂಸವಾರಿಯಾಗಿದೆ. ಈ ಜಂಬೂ ಸವಾರಿಯನ್ನು ನೋಡಲೆಂದೇ ಜನ ಹಾತೊರೆಯುತ್ತಾರೆ. ದಸರಾದ ಕಾರ್ಯಕ್ರಮಗಳು ಕೂಡ ಜಂಬೂಸವಾರಿ ಮೂಲಕ ಸಂಪನ್ನಗೊಳ್ಳುತ್ತವೆ. ಅವತ್ತಿನಿಂದ ಇವತ್ತಿನ ತನಕ ರಾಜವೈಭವ ಮತ್ತು ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಸಾಂಸ್ಕೃತಿಕ ಮೆರವಣಿಗೆಯಾಗಿ ನಡೆದುಕೊಂಡು ಬರುತ್ತಿರುವ ಈ ಭವ್ಯ ಮೆರವಣಿಗೆ ಹಲವು ಹೊಸತನಗಳೊಂದಿಗೆ ವಿಶ್ವವಿಖ್ಯಾತಿಯಾಗಿ ಮುನ್ನಡೆಯುತ್ತಿದೆ.

ಇದನ್ನೂ ಓದಿ: ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ

ಈ ಜಂಬೂ ಸವಾರಿ ಹೇಗೆ ನಡೆಯುತ್ತಿದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಮೈಸೂರು ದಸರಾ (mysore dasara) ಇವತ್ತು ವಿಶ್ವವಿಖ್ಯಾತಿಯಾಗಿದೆ ಎಂದರೆ ಅದಕ್ಕೆ ದಸರಾ ದಿನದಂದು ನಡೆಯುವ ಜಂಬೂಸವಾರಿ ಕಾರಣ. ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಸಾಗಿದರೆ ಆತನಿಗೆ ಇತರೆ ಗಜಪಡೆ ಸಾಥ್ ನೀಡುತ್ತವೆ. ಅದರಾಚೆಗೆ ಸ್ತಬ್ದ ಚಿತ್ರಗಳು, ಕಲಾತಂಡಗಳು, ಅಶ್ವದಳ, ವಾದ್ಯವೃಂದ ಮೊದಲಾದವು  ಜಂಬೂ ಸವಾರಿಗೆ ಮೆರಗು ತರುತ್ತವೆ. ಸ್ವಾತಂತ್ರ್ಯ ನಂತರದ ದಸರಾದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಜಂಬೂಸವಾರಿಗೂ ಹಲವು ಹೊಸತನ್ನು  ಸೇರ್ಪಡೆ ಮಾಡುವುದರೊಂದಿಗೆ ಮೆರಗು ನೀಡಲಾಗಿದೆ.

ಇದನ್ನೂ ಓದಿ: ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ… ಇಷ್ಟಕ್ಕೂ ಮೈಸೂರು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?

ಇದೆಲ್ಲದರ ನಡುವೆ ರಾಜರ ಕಾಲದಲ್ಲಿ ನಡೆಯುತ್ತಿದ್ದ ದಸರಾ ಹೇಗಿದ್ದಿರ ಬಹುದು? ಜಂಬೂಸವಾರಿ ಹೇಗೆ ಸಾಗುತ್ತಿದ್ದಿರಬಹುದು? ಎಂಬ ಪ್ರಶ್ನೆಗಳು ನಮ್ಮಲ್ಲಿ ಮೂಡದಿರದು. ಇದಕ್ಕೆ ಉತ್ತರ ಸಿಗರಬೇಕಾದರೆ ನಾವು ರಾಜರ ಆಡಳಿತಾವಧಿಯ ದಿನಗಳಿಗೆ ಹೋಗಬೇಕಾಗುತ್ತದೆ.  ಅವತ್ತಿನ ಮೈಸೂರು ಮಹಾರಾಜರ ಕಾಲದಲ್ಲಿ ದಸರಾ ಆಚರಣೆ ಮತ್ತು ಜಂಬೂಸವಾರಿ ಹೇಗಿತ್ತು ಎಂಬುದರ ಬಗ್ಗೆ  ತಿಳಿಯ ಬೇಕಾದರೆ ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಬೇಕಾಗುತ್ತದೆ. ಅಲ್ಲಿ ಲಭ್ಯವಾಗುವ ಮಾಹಿತಿ ಪ್ರಕಾರ ಅವತ್ತಿನ ಕಾಲಮಾನಕ್ಕೆ ತಕ್ಕಂತೆ ದಸರಾ  ಆಚರಣೆ ನಡೆಯುತ್ತಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್ ಸ್ವಾತಂತ್ರ್ಯಪೂರ್ವದಲ್ಲಿ ನಡೆಸುತ್ತಿದ್ದ ದಸರಾ ಆಚರಣೆಗಳ ಬಗ್ಗೆ ಹೇಳುವುದಾದರೆ ಅವರ ಕಾಲದಲ್ಲಿ ದಸರಾಕ್ಕಾಗಿಯೇ ಮಹಾರಾಜರು ಚಿನ್ನದ ಜರಿಯ ಪಳಪಳನೆ ಹೊಳೆಯುವ ಪೋಷಾಕನ್ನು ಧರಿಸಿ ಸಿದ್ಧರಾಗಿ ಆ ನಂತರ ಆನೆ ಮೇಲಿನ ಅಂಬಾರಿಯಲ್ಲಿ ಆಸೀನರಾಗುವ ಮೂಲಕ ಜಂಬೂಸವಾರಿಯಲ್ಲಿ ಭಾಗಿಯಾಗುತ್ತಿದ್ದರು.

ಇದನ್ನೂ ಓದಿ: ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಇತಿಹಾಸ ಹೇಳುವುದೇನು?

ಜಂಬೂಸವಾರಿ ಹೇಗಿರುತ್ತಿತ್ತು ಎಂದರೆ ಅರಮನೆ ಆವರಣದಿಂದ ಮಧ್ಯಾಹ್ನದ ನಂತರ ನಿಗದಿತ ಶುಭ ಮುಹೂರ್ತದಲ್ಲಿ ಜಂಬೂಸವಾರಿ ಆರಂಭವಾಗುತ್ತಿತ್ತು. ಈ ವೇಳೆ ಇಪ್ಪತ್ತೊಂದು ಕುಶಾಲತೋಪು ಹಾರಿಸಲಾಗುತ್ತಿತ್ತು. ತುತ್ತೂರಿ ಮತ್ತು ಕಹಳೆಯ ಶಬ್ದದೊಂದಿಗೆ ಮೆರವಣಿಗೆ ಆರಂಭವಾಗುತ್ತಿತ್ತು. ಇದೇ ವೇಳೆ ದೇಶಗೀತೆಯನ್ನು ಹಾಡಲಾಗುತ್ತಿತ್ತು. ಮಹಾರಾಜರ ಸುತ್ತಲೂ ಅಂಗರಕ್ಷಕರು, ಅಶ್ವದಳ, ಅಧಿಕಾರಿಗಳು ನೆರೆದು ನಿಧಾನವಾಗಿ ಮುನ್ನಡೆಯುತ್ತಿದ್ದರು.

ಮಹಾರಾಜರ ಸಹಿತ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ಗಜಪಡೆಯೂ ಸುಂದರವಾಗಿ ಕಂಗೊಳಿಸುತ್ತಿದ್ದು, ಗಜಪಡೆಗೆ ಚಿನ್ನದಿಂದ ನಕ್ಕಿ ಮಾಡಿದ ಪೋಷಾಕು, ಚಿನ್ನದ ಕಾಲುಕಡಗ, ಬೆಳ್ಳಿಯ ಗಂಟೆ, ಗೊಂಡೆಗಳ ಸಹಿತ ಪೋಣಿಸಿದ  ಹಗ್ಗದ ಸಾಲು, ಅಂಗಾಂಗಗಳಲ್ಲಿ ಆಕರ್ಷಕವಾಗಿ ಬರೆಯಲಾದ ಚಿತ್ರಗಳಿಂದ ಶೋಭಿಸುತ್ತಿದ್ದವು. ಗಜಪಡೆಯ ರಾಜಗಾಂಭೀರ್ಯದ ನಡಿಗೆ ಜಂಬೂಸವಾರಿಗೆ ಕಳೆಕಟ್ಟುತ್ತಿತ್ತು.

ಇದನ್ನೂ ಓದಿ: ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?

ಅರಮನೆ ಆವರಣದಿಂದ ಹೊರಟ ಜಂಬೂಸವಾರಿ ಉತ್ತರ ದ್ವಾರದ ಮೂಲಕ ಚಾಮರಾಜ ವೃತ್ತಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ಕಡೆಗೆ ಸಾಗಿ ಅಲ್ಲಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಬನ್ನಿಮಂಟಪವನ್ನು ತಲುಪುತ್ತಿತ್ತು. ಇದಕ್ಕೂ ಮುನ್ನ ಅರಮನೆಯ ಉತ್ತರ ಬಾಗಿಲು ದಾಟಿ ಬರುತ್ತಿದ್ದಂತೆಯೇ ಕಟ್ಟಲಾಗಿದ್ದ ಹಸಿರು ಮಂಟಪದಲ್ಲಿ ನಿಂತು ಮಹಾರಾಜರಿಗೆ ಹಾರ ತುರಾಯಿ ಹಾಕಿ ಗೌರವ ಸಲ್ಲಿಸಲಾಗುತ್ತಿತ್ತು. ಚಿನ್ನದ ಅಂಬಾರಿಯಲ್ಲಿ ಕುಳಿತು ಆನೆಯ ಮೇಲೆ ಸಾಗುವ ಮಹಾರಾಜರನ್ನು ನೋಡಲು ಇಕ್ಕೆಡೆಗಳಲ್ಲಿ ಜನ ಕಿಕ್ಕಿರಿದು ನೆರೆಯುತ್ತಿದ್ದರು.

ಜಂಬೂಸವಾರಿ ಬನ್ನಿಮಂಟಪವನ್ನು ಸೇರಿದ ಬಳಿಕ ಅಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಆ ನಂತರ ಟಾರ್ಚ್ ಲೈಟ್ ಪೆರೇಡ್‌ನಲ್ಲಿ ಭಾಗವಹಿಸುತ್ತಿದ್ದ ಮಹಾರಾಜರು ಕುದುರೆ ಮೇಲೆ ಕುಳಿತು ಅಶ್ವದಳ, ಪದಾತಿದಳ, ಸೇರಿದಂತೆ ಹಲವು ದಳಗಳಿಂದ ಗೌರವ ವಂದನೆ ಸ್ವೀಕರಿಸುತ್ತಿದ್ದರು. ಈ ವೇಳೆಗೆ ಇಡೀ ಮೈಸೂರು ವಿದ್ಯುದ್ದೀಪದಿಂದ ಬೆಳಗುತ್ತಿತ್ತು. ರಾತ್ರಿ ಒಂಬತ್ತೂವರೆ ಗಂಟೆಗೆಲ್ಲ ಕಾರ್ಯಕ್ರಮಗಳು ಮುಗಿದು ಮಹಾರಾಜರು ಅರಮನೆಗೆ ಹಿಂತಿರುಗುತ್ತಿದ್ದರು.

ಅವತ್ತಿನ ಕಾಲದಲ್ಲಿ ದಸರಾ ಆರಂಭದ ಹತ್ತು ದಿನಗಳ ಕಾಲವೂ ಮೈಸೂರು ನಗರ ಸಂಭ್ರಮದ ಅಲೆಯಲ್ಲಿ ತೇಲುತ್ತಿತ್ತು. ದೇಶ ವಿದೇಶಗಳಿಂದ ಜನ ಬರುತ್ತಿದ್ದರು. ನರ್ತಕರು, ಗಾಯಕರು, ಬಯಲಾಟದವರು, ದೊಂಬೀದಾಸರು, ತೊಗಲು ಬೊಂಬೆಯವರು, ಹಗಲು ವೇಷದವರು, ದೊಂಬರು, ಗೊರವಯ್ಯರು, ಕಣಿ ಹೇಳುವವರು, ಜ್ಯೋತಿಷಿಗಳು, ಸಾಮುದ್ರಿಕಶಾಸ್ತ್ರದವರು, ಕೊಂಬು ಕಹಳೆ ವಾಲಗ ಊದುವವರು, ಕೋಲೆ ಬಸವ ಆಡಿಸುವವರು, ಹಾವಾಡಿಗರು, ದೊಂಬರಾಟದವರು ಹೀಗೆ ಎಲ್ಲರೂ ಮೈಸೂರಿನಲ್ಲಿ ನೆರೆದು ದಸರಾಗೆ ಕಳೆ ಕಟ್ಟುತ್ತಿದ್ದರು.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ತಯಾರಾದ ‘ಸಿಹಿ’ಪಾಕ ‘ಮೈಸೂರು’ ಪಾಕ ಆಗಿದ್ದೇಗೆ? ಇಲ್ಲಿದೆ ಕಥೆ

ಒಟ್ಟಾರೆಯಾಗಿ ಹೇಳಬೇಕೆಂದರೆ  ಅವತ್ತಿನಿಂದ ಇವತ್ತಿನವರೆಗೂ ಮೈಸೂರು ದಸರಾದಲ್ಲಿ ಜಂಬೂಸವಾರಿಯೇ ಪ್ರಮುಖವಾಗಿದ್ದು ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿಯನ್ನು ಇಮ್ಮಡಿಸುತ್ತಾ ಸಾಗುತ್ತಿದೆ…  ಈ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ನೀವು ತಪ್ಪದೆ ಬನ್ನಿ

B M Lavakumar

admin
the authoradmin

1 Comment

Leave a Reply