ಈರುಳ್ಳಿ ಹಚ್ಚುವಾಗ ನೀರು ತರಿಸುವುದು ಮಾಮೂಲಿಯೇ.. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇದು ದರ ಇಳಿಕೆಯಾದಾಗ ರೈತನ ಕಣ್ಣಲ್ಲಿ ನೀರು ತರಿಸಿದರೆ, ಹೆಚ್ಚಾದರೆ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತದೆ. ಅದರಾಚೆಗೆ ಅಡುಗೆಗೆ ಹಚ್ಚುವಾಗಲಂತು ಎಲ್ಲರ ಕಣ್ಣಲ್ಲೂ ನೀರು ತರಿಸುವುದು ಮಾಮೂಲಿಯೇ… ಆದರೆ ಈ ಈರುಳ್ಳಿ ಬರೀ ಕಣ್ಣೀರಷ್ಟೆ ತರಿಸುವುದಿಲ್ಲ. ಇದು ನಮ್ಮ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಿಜ ಹೇಳಬೇಕೆಂದರೆ ನಾವು ಪ್ರತಿನಿತ್ಯ ಉಪಯೋಗಿಸುವ ತರಕಾರಿಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ತರಕಾರಿಯೇ ಈರುಳ್ಳಿಯಾಗಿದೆ. ಇದನ್ನು ಸಸ್ಯಹಾರ ಮತ್ತು ಮಾಂಸಹಾರ ಎರಡರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಬಹುಶಃ ಹಿಂದಿನ ಕಾಲದವರು ಈರುಳ್ಳಿಯಲ್ಲಿರುವ ಔಷಧೀಯ ಗುಣದ ಮಹತ್ವವನ್ನು ನೋಡಿಯೇ ತಮ್ಮ ನಿತ್ಯದ ಆಹಾರ ಪದಾರ್ಥಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲು ಆರಂಭಿಸಿರಬೇಕು. ಇವತ್ತಿನ ದಿನಗಳಲ್ಲಿ ಈರುಳ್ಳಿ ಬಳಸದೆ ಅಡುಗೆ ಮಾಡಲು ಸಾಧ್ಯವೇ ಇಲ್ಲದಂತಾಗಿದೆ.
ಸಿಹಿಮತ್ತು ವಗರಿನಿಂದ ಕೂಡಿರುವ ಈರುಳ್ಳಿ ಹಸಿಯಾಗಿ ತಿಂದಾಗ ಒಂಥರಾ ರುಚಿಯನ್ನು ನೀಡಿದರೆ, ಬೇಯಿಸಿದಾಗ ಅದರ ರುಚಿಯೇ ಬದಲಾಗಿ ಬಿಡುತ್ತದೆ. ಇದನ್ನು ಹಸಿಯಾಗಿಯೂ ಅಥವಾ ಬೇಯಿಸಿಯೂ ತಿನ್ನಬಹುದು. ಇನ್ನು ಬೇರೆ ತರಕಾರಿಗಳಿಗೆ ಹೋಲಿಸಿದರೆ, ತನ್ನದೇ ಆದ ಹಲವು ರೀತಿಯ ವೈಶಿಷ್ಟ್ಯತೆ ಇದರಲ್ಲಿದೆ. ಘಾಟು ವಾಸನೆ ಮತ್ತು ಕಣ್ಣೀರು ತರಿಸುವ ಗುಣಗಳನ್ನು ಇದು ಹೊಂದಿರುವುದರಿಂದ ಕೆಲವರು ತಾಮಸಿಕ ಆಹಾರ ವರ್ಗಕ್ಕೆ ಸೇರಿಸಿ ದೂರವಿಡುವವರು ಇದ್ದಾರೆ. ಆದರೆ ಭಾರತದ ವಾಣಿಜ್ಯ ತರಕಾರಿಗಳಲ್ಲಿ ಅತೀ ಪ್ರಾಮುಖ್ಯತೆ ಪಡೆದಿರುವ ಈರುಳ್ಳಿ ವಿದೇಶಗಳಿಗೂ ರಫ್ತಾಗುತ್ತದೆ. ಇದನ್ನು ಹಸಿಯಾಗಿ ತಿಂದರೆ ಆರೋಗ್ಯದ ದೃಷ್ಠಿಯಲ್ಲಿ ಹತ್ತು ಹಲವು ಪ್ರಯೋಜನಗಳಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಅಡುಗೆಗೆ ತರಕಾರಿಯೊಂದಿಗೆ ಬಳಕೆಯಾಗುವ ಈರುಳ್ಳಿಯನ್ನು ದೋಸೆ, ರೊಟ್ಟಿ, ಪಕೋಡ ಮೊದಲಾದ ತಿಂಡಿಗಳಲ್ಲಿ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಆಗೊಮ್ಮೆ ಈಗೊಮ್ಮೆ ಇದರ ಬೇಡಿಕೆ ಹೆಚ್ಚಾಗಿ ದರ ಗಗನಕ್ಕೇರುತ್ತದೆ. ಇಷ್ಟಕ್ಕೂ ಈರುಳ್ಳಿಯಲ್ಲಿ ಆರೋಗ್ಯಕ್ಕೆ ಸಹಾಯವಾಗುವ ಅಂಶ ಏನಿದೆ ಎಂಬುದನ್ನು ನೋಡುವುದಾದರೆ ಹಲವು ಪೋಷಕ ಶಕ್ತಿ, ಔಷಧೀಯ ಗುಣ ಇದರಲ್ಲಿರುವುದು ಕಂಡು ಬರುತ್ತದೆ. ಅಲ್ಲೈಲ್, ಪ್ರೋಫೈಲ್ ಮತ್ತು ಡೆಸಲ್ಫೈಡ್ ಎಂಬ ಎಣ್ಣೆ ಅಂಶ ಇದರಲ್ಲಿದ್ದು ಇದುವೇ ಈರುಳ್ಳಿಯ ವಿಲಕ್ಷಣ ರುಚಿಗೆ ಕಾರಣವಾಗಿದೆ.
ಈರುಳ್ಳಿಯಲ್ಲಿ ಸಸಾರಜನಕ, ಪಿಷ್ಠ, ಕೊಬ್ಬು, ಸುಣ್ಣ, ರಂಜಕ, ಕಬ್ಬಿಣ, ಗಂಧಕ, ಸೋಡಿಯಂ, ಪೊಟಾಷಿಯಂ, ಎ, ಬಿ1, ಬಿ2 ಮತ್ತು ಸಿ ಜೀವಸತ್ವಗಳ ಹೇರಳವಾಗಿದ್ದು, ದೇಹಕ್ಕೆ ಶಕ್ತಿ ನೀಡುವ ಮೂಲಕ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಔಷಧೀಯ ಗುಣಗಳಿರುವುದರಿಂದಲೇ ಅನಾರೋಗ್ಯಗಳು ಕಾಣಿಸಿಕೊಂಡಾಗ ಮನೆಮದ್ದಾಗಿ ಬಳಸಿಕೊಳ್ಳಲಾಗುತ್ತದೆ. ನೆಗಡಿಯಾದಾಗ ಈರುಳ್ಳಿ ರಸದಲ್ಲಿ ಹತ್ತಿಯನ್ನು ಅದ್ದಿ ತೆಗೆದು ಮೂಗಿನ ಎರಡೂ ಹೊಳ್ಳೆಗಳಲ್ಲಿ ಹದಿನೈದು ನಿಮಿಷಗಳಂತೆ ದಿನದಲ್ಲಿ ಮೂರು ಬಾರಿ ಇಟ್ಟುಕೊಂಡರೆ ನೆಗಡಿ ದೂರವಾಗುತ್ತದೆ. ಪ್ರತಿನಿತ್ಯ ಊಟದಲ್ಲಿ ಒಂದು ಸಣ್ಣ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಕಣ್ಣುನೋವು, ಕಣ್ಣುಚುಚ್ಚುವಿಕೆ, ತಲೆನೋವು ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಈರುಳ್ಳಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಇದರ ಸೇವನೆಯಿಂದ ರಕ್ತಹೀನತೆ ದೂರವಾಗುತ್ತದೆ. ಈರುಳ್ಳಿಯನ್ನು ಚಿಕ್ಕಗಾತ್ರಗಳಾಗಿ ಕತ್ತರಿಸಿ ತಿನ್ನುವ ಬದಲು ಸಿಪ್ಪೆ ಬಿಡಿಸಿ ಕಚ್ಚಿ ತಿನ್ನುವುದರಿಂದ ಹಲ್ಲು, ಬಾಯಿಗೆ ರಕ್ಷಣೆ ದೊರೆಯುತ್ತದೆ. ಜತೆಗೆ ಜೀರ್ಣಶಕ್ತಿಯೂ ವೃದ್ಧಿಸುತ್ತದೆ. ಕಾಡುವ ತಲೆನೋವನ್ನು ದೂರ ಮಾಡಬೇಕಾದರೆ ಈರುಳ್ಳಿ ಜಜ್ಜಿ ರಸ ತೆಗೆದು ಆ ರಸವನ್ನು ಹಣೆಗೆ ಹಚ್ಚುವುದರಿಂದ ನೋವು ಮಾಯವಾಗಿ ಆರಾಮ ಸಿಗುತ್ತದೆ.
ಅರಿಶಿನ ಓಂಕಾಳು ಮತ್ತು ಈರುಳ್ಳಿ ಕಟ್ಟಿದರೆ ತಕ್ಷಣವೇ ಕುರು ಒಡೆದು ಕೀವು, ರಕ್ತವೆಲ್ಲ ಸೋರಿ ಹೋಗಿ ಆರಾಮವೆನಿಸುತ್ತದೆ. ಕೆಮ್ಮು ಕಫ ಸಮಸ್ಯೆಗೆ ಈರುಳ್ಳಿ ರಸದೊಂದಿಗೆ ಜೇನು ಬೆರೆಸಿ ಸೇವಿಸಿದರೆ ಒಂದಷ್ಟು ರಿಲೀಫ್ ಆಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ತರಕಾರಿಯಾಗಿ ಬಾಯಿಗೆ ರುಚಿಸುವುದರೊಂದಿಗೆ, ದೇಹಕ್ಕೂ ಉತ್ತಮ ಪೋಷಕಾಂಶಗಳನ್ನು ಒದಗಿಸುವ ಈರುಳ್ಳಿಯನ್ನು ಹೆಚ್ಚಾಗಿ ಬಳಸುವುದರಿಂದ ಲಾಭವೇ ಹೊರತು ನಷ್ಟವಂತು ಖಂಡಿತಾ ಇಲ್ಲ.
B M Lavakumar







