LatestMysore

‘ಅಕ್ಷರ ಜ್ಯೋತಿ’ ಇದು ಪರಮೇಶ ಕೆ ಉತ್ತನಹಳ್ಳಿರವರ ಜಗದ ಕಣ್ಣ ಕಾಣಿಸುವ ಕೃತಿ… ಡಾ ವಿ ರಂಗನಾಥ್

ಪರಮೇಶ ಕೆ ಉತ್ತನಹಳ್ಳಿ ಅವರೊಮ್ಮೆ ದೂರವಾಣಿ ಕರೆ ಮಾಡಿ, ನಿಮ್ಮ ಮನೆಗೆ ಬರಬೇಕು, ನನ್ನ ಪುಸ್ತಕಕ್ಕೆ ನೀವೊಂದು ಮುನ್ನುಡಿ ಬರೆದುಕೊಡಬೇಕು ಎಂದು ಕೇಳಿದಾಗ, ಧಾರಾಳವಾಗಿ ಬನ್ನಿ ಎಂದೆ. ಬಂದರು. ಅವರ ಹಲವು ಪ್ರಕಟಿತ ಲೇಖನಗಳ ಸಂಗ್ರಹ ‘ಅಕ್ಷರ ಜ್ಯೋತಿ’ ಎಂಬ ಕೃತಿಯ ಕರಡನ್ನು ನೀಡಿದರು. ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ಅವರ ಚೊಚ್ಚಲ ಕವನ ಸಂಕಲನ ‘ಸಾಕವ್ವನ ಸಾಂಗತ್ಯ’ ಎಂಬ ಮುದ್ರಿತ ಕೃತಿಯನ್ನೂ ನೀಡಿದರು. ಅವರ ಪ್ರಾಮಾಣಕತೆ, ವಿಧೇಯತೆ ನನಗೆ ಬಹಳ ಇಷ್ಟವಾದ್ದರಿಂದ ಈ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಲು ಒಪ್ಪಿದೆ.

ಈ ಕೃತಿಯ ಲೇಖನಗಳು ಯಾವುದರನ್ನು ಕುರಿತು ಇರಬಹುದು? ಎಂಬ ಕುತೂಹಲ ಅವರು ದೂರವಾಣಿ ಕರೆ ಮಾಡಿದ ಸಮಯದಿಂದಲೂ ಇತ್ತು. ಅವರು ತಮ್ಮ ಕೃತಿಗೆ ‘ಅಕ್ಷರ ಜ್ಯೋತಿ’ ಎಂಬ ಹೆಸರು ನೀಡಿದ್ದಾರೆ. ಈ ಪುಸ್ತಕ ಅದಕ್ಕೆ ಪೂರಕವೇ? ಎಂಬ ಕುತೂಹಲದಿಂದ ಮೊದಲ ಗಮನ ಪುಸ್ತಕದ ವಿಷಯಗಳತ್ತ ಹೋಯಿತು. ಬೆಳಕು ನಮಗೆ ಕತ್ತಲೆಯಲ್ಲಿ ದಾರಿ ತೋರಿಸುತ್ತದೆ ನಿಜ. ಅಂತೆಯೇ ಅಕ್ಷರವೂ ಜೀವನದ ದಾರಿಯನ್ನು ತೋರಿಸುವಂತಹುದೇ. ಇದರಲ್ಲಿನ ಲೇಖನಗಳನ್ನು ಓದಿದ ನಂತರ ಅವರು ಈ ಪುಸ್ತಕಕ್ಕೆ ಸೂಕ್ತವಾದ ಶೀರ್ಷಿಕೆಯನ್ನೇ ನೀಡಿದ್ದಾರೆ ಎಂದೆನಿಸಿತು.

ಕೃತಿಯ ಲೇಖಕರಾದ ಶ್ರೀ ಪರಮೆಶ ಕೆ ಅವರು ವೃತ್ತಿಯಲ್ಲಿ ಶಿಕ್ಷಕರು. ಈಗಾಗಲೇ ಹಲವು ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡಿ ಅನುಭವ ಗಳಿಸಿದ್ದಾರೆ. ಸುಮಾರು ಹತ್ತು ವರ್ಷಕ್ಕೂ ಮೀರಿದ ಬೋಧನಾನುಭವ ಹೊಂದಿದ್ದಾರೆ. ಅಲ್ಲದೆ ಅವರು ನನ್ನ ಮೆಚ್ಚಿನ ಕನ್ನಡ ಭಾಷಾ ಶಿಕ್ಷಕರು. ಅವರಿಗೆ ಮಕ್ಕಳೊಡನೆ ಒಡನಾಟ ಹೆಚ್ಚಾಗಿಯೇ ಇದೆ. ಸೂಕ್ಷ್ಮ ಬುದ್ದಿಯ ಅವರು ಮಕ್ಕಳ ಮನಸನ್ನು ಓದುವ ಕೆಲಸ ಮಾಡುತ್ತಾರೆ. ಮಕ್ಕಳು ಎಂದಾಗ ಅವರೊಡನೆ ಪೋಷಕರು ಹಾಗೂ ಈ ಸಮಾಜ ಒಟ್ಟಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳ ಮನಸ್ಸನ್ನು ಓದುವವರು ಸಮಾಜದ ಮನಸ್ಸನ್ನೂ ಓದಬಲ್ಲವರು. ಶಿಕ್ಷಕರು ಮಕ್ಕಳಿಗೆ ಮಾತ್ರ ಶಿಕ್ಷಕರಾಗದೆ ಸಮಾಜಕ್ಕೂ ಶಿಕ್ಷಕರಾಗಬೇಕು.

ಇಂದು ನಮ್ಮ ಸಮಾಜ ಎಡಬಿಡಂಗಿ ಸ್ಥಿತಿಯಲ್ಲಿದೆ. ಇತ್ತ ಸಂಪೂರ್ಣವಾಗಿ ಆಧುನಿಕತೆಯೂ ಅಲ್ಲದ ಅಥವಾ ಸಾಂಪ್ರದಾಯಿಕ ಸ್ಥಿತಿಯಲ್ಲೂ ಇಲ್ಲದಂತಹ ಪರಿಸ್ಥಿತಿ ಕಂಡುಬರುತ್ತದೆ. ಒಂದು ರೀತಿಯಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು, ಯಾವುದನ್ನು ಅನುಮಾನಿಸಬೇಕು, ಜೀವನ ಹೇಗೆ ಸಾಗಿಸಬೇಕು ಇತ್ಯಾದಿ ಗೊಂದಲಗಳು ನಮ್ಮ ಇಂದಿನ ಸಮಾಜದಲ್ಲಿದೆ. ಇಂತಹ ಸಮಯದಲ್ಲಿ ತಿಳುವಳಿಕೆ ಇರುವವರು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾಗುತ್ತದೆ. ಸರಿತಪ್ಪುಗಳನ್ನು ತಿಳಿಸಬೇಕಾಗುತ್ತದೆ. ಆ ಕೆಲಸವನ್ನು ಶ್ರೀ ಪರಮೇಶ ಅವರು ನಿರ್ವಹಿಸಿದ್ದಾರೆ ಎಂಬುದು ಈ ಪುಸ್ತಕ ಓದಿದ ನಂತರ ಮನದಟ್ಟಾಗುತ್ತದೆ.

ಈ ಪುಸ್ತಕದಲ್ಲಿ ೩೫ ಲೆಖನಗಳಿವೆ. ಇವೆಲ್ಲಾ ಈಗಾಗಲೇ ವಿವಿದೆಡೆ ಪ್ರಕಟವಾಗಿರುವಂತಹುದು. ಅವುಗಳ ಸಂಕಲನ ಇದು. ಇದರ ಒಂದೊಂದು ಬಿಡಿ ಲೇಖನ ಓದಿದಾಗ, ಇಂತಹ ಎಲ್ಲಾ ಲೇಖನಗಳೂ ಪುಸ್ತಕ ರೂಪದಲ್ಲಿದ್ದರೆ ಒಟ್ಟಾಗಿ ಓದಬಹುದಾಗಿತ್ತು ಎನಿಸುತ್ತದೆ. ಈ ಅನಿಸಿಕೆಯೇ ಈಗ ಪುಸ್ತಕ ರೂಪದಲ್ಲಿ ನಮ್ಮ ಕೈಯಲ್ಲಿ ಇದೆ.

ಈ ಪುಸ್ತಕವನ್ನು ಒಮ್ಮೆ ಅವಲೋಕಿಸಿದಾಗ ಇದರಲ್ಲಿ ಅಪ್ಪನ ಬಗ್ಗೆ, ಅವ್ವನ ಬಗ್ಗೆ, ಉತ್ಸವಗಳ ಬಗ್ಗೆ, ಹಬ್ಬಗಳ ವೈವಿಧ್ಯತೆಗಳ ಬಗ್ಗೆ ಹಲವು ಲೇಖನಗಳನ್ನು ಕಾಣಬಹುದು. ಅದರ ಜೊತೆಗೆ ಜೀವನಕ್ಕೆ ಬೆಳಕು ನೀಡಬಲ್ಲ ಅಂಶಗಳ ಲೇಖನಗಳೂ ಇವೆ. ತಾವು ಹೇಳಹೊರಟಿರುವುದು ಓದುಗನ ಮನಸ್ಸಿನಲ್ಲಿ ದೃಢವಾಗಿ ನಿಲ್ಲುವಂತಾಗಬೇಕು ಎಂಬ ಕಾರಣದಿಂದ ಹಲವು ಕವಿತೆಗಳು, ಮಂಕುತಿಮ್ಮನ ಕಗ್ಗ, ಬಸವಣ್ಣನವರ ವಚನಗಳೂ ಸೇರಿದಂತೆ, ತಮ್ಮ ಸ್ವಂತ ಕವನಗಳನ್ನೂ ಸೇರಿಸಿ ಅವುಗಳಿಗೆ ಪೂರಕವಾಗಿ ನೀಡಿದ್ದಾರೆ. ಇದು ಒಂದು ನವೀನ ತಂತ್ರ. ತಮ್ಮ ಮಾತನ್ನು ಸಮರ್ಥಿಸುವ ಕವನಗಳ ಅಳವಡಿಕೆ ಓದಿಗೆ ಲವಲವಿಕೆ ನೀಡುತ್ತದೆ.

ಈ ಪುಸ್ತಕದ ಹಲವು ಲೇಖನಗಳು ನಮ್ಮ ಜೀವನ ಹೇಗಿರಬೇಕು? ಹೇಗಿದ್ದರೆ ಚೆನ್ನ ಅಂಬ ಬಗ್ಗೆ ಮಾರ್ಗದರ್ಶನ ಮಾಡುತ್ತವೆ. ಇಂದಿನ ಮಕ್ಕಳಲ್ಲಿ ಮುಖ್ಯವಾಗಿ ಸಂಸ್ಕಾರ ಬೇಕು. ಈ ಸಂಸ್ಕಾರ ಅದಾಗೇ ಬರುವುದಿಲ್ಲ. ತಂದೆತಾಯಿಯರು ಸಂಸ್ಕಾರವಂತರಾಗಿದ್ದರೆ ಮಕ್ಕಳೂ ಸಂಸ್ಕಾರ ವಂತರಾಗುತ್ತಾರೆ. ಆದ್ದರಿಂದ ತಂದೆತಾಯಿಯರ ನಡವಳಿಕೆ ಮಹತ್ವದ್ದು ಎಂದು ಒಂದು ಲೇಖನದಲ್ಲಿ ಅವರು ತಿಳಿಸುತ್ತಾರೆ.

ಮಕ್ಕಳು ನಾವು ಹೇಳಿದಂತೆ ಕೇಳಬೇಕು, ಆದರೆ ನಾವು ಮಾಡಿದಂತೆ ಮಾಡಬಾರದು ಎಂಬ ಧೋರಣೆ ಹಲವು ಪೋಷಕರಲ್ಲಿರುತ್ತದೆ. ಆದರೆ ಮಕ್ಕಳು ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದನ್ನು ಗಮನಿಸುತ್ತಾರೆ. ಆದ್ದರಿಂದ ಪೋಷಕರ ಪಾತ್ರ ಬಹಳ ಮಹತ್ವದ್ದು. ಅವರು ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕಾದರೆ ಮೊದಲು ಪೋಷಕರು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಒಂದು ಲೇಖನದಲ್ಲಿ ತಿಳಿಸಿದ್ದಾರೆ.

ವ್ಯಕ್ತಿ ಅಳಿದರೂ ವ್ಯಕ್ತಿತ್ವ ಉಳಿಯುವಂತಹ ಜೀವನವನ್ನು ನಾವು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಗಟ್ಟಿಯಾದ ವ್ಯಕ್ತಿತ್ವವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಇನ್ನೊಂದು ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಮಾನವ ಯಂತ್ರದಂತೆ ಆಗಬಾರದು. ಮಾನವ ಮಾನವನಾಗಿಯೇ ಉಳಿದು ಬಾಳಬೇಕು. ಮನುಷ್ಯ ಜನ್ಮ ದೊಡ್ಡದು, ಅಂತಹ ಜನ್ಮ ನಮಗೆ ದೊರಕಿದೆ. ಇದನ್ನು ಹಾಳುಮಾಡಿಕೊಳ್ಳಬಾರದು.

ಬದುಕಿಗೆ ಒಂದು ಸಾರ್ಥಕತೆ ತಂದುಕೊಳ್ಳಬೇಕು. ಬದುಕು ಇರುವುದು ನರಳುವುದಕ್ಕಲ್ಲ, ಅದು ಸದಾ ಅರಳಿದಂತಿರಬೇಕು ಎಂಬಂತಹ ಮಾರ್ಮಿಕ ಮಾತುಗಳು ನಮಗೆ ಕೆಲವು ಲೇಖನಗಳಲ್ಲಿ ಕಂಡುಬರುತ್ತವೆ.

ಹಾಗೆಯೇ  ನಮ್ಮಲ್ಲಿ ಒಂದೊಂದು ದಿನವನ್ನು ಒಂದೊಂದು ಹೆಸರಿನಿಂದ ಆಚರಿಸಲಾಗುತ್ತದೆ. ಈ ಬಗ್ಗೆ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರೆ ಕೊಡಲಾಗುತ್ತದೆ. ಅಂತಹ ಒಂದು ದಿನ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ. ಅದರ ಬಗ್ಗೆ ವಿವರ ನೀಡುವ ಒಂದು ಲೇಖನ ಇದರಲ್ಲಿದೆ.

ಇಂದು ಆಧುನಿಕ ಜಾಲತಾಣಗಳನ್ನು ನಾವು ಹೇಗೆ ಅನುಪಯುಕ್ತವಾಗಿ ಬಳಸುತ್ತಿದ್ದೇವೆ, ನಾವು ಹಾಕುವ ಪ್ರತಿ ಚಿತ್ರಕ್ಕೂ ಹೆಚ್ಚು ಜನರು ಲೈಕ್ ಕೊಡಬೇಕು ಎಂದು ಬಯಸುತ್ತೇವೆ. ಆದರೆ ಇದು ಒಂದು ರೀತಿಯ ಮಾಯೆ. ಇದು ನಮ್ಮ ಸಮಯವನ್ನು ವ್ಯರ್ಥ ಮಾಡುವಂತಹುದು. ನಾವು ಮಾಡಬಹುದಾದ ಹಲವು ಕೆಲಸಗಳು ಇವೆ. ಅದನ್ನು ಮರೆತು ಹೀಗೆ ಲೈಕ್ ಬಯಸುತ್ತಾ ಕೂರುವುದು ಸಮಯದ ದುರ್ಬಳಕೆ. ನಮಗೆ ಈಗ ಬೇಕಾಗಿರುವುದು ತೋರಿಕೆಯ ಜೀವನವಲ್ಲ.

ಬದಲಿಗೆ ಇಂದು ಆತ್ಮಪರಿಶೀಲನೆ ಮಾಡಿಕೊಳ್ಳುವ ಸಮಯ ಎಂದು ಶ್ರೀ ಪರಮೇಶ್ ಒಂದು ಲೇಖನದಲ್ಲಿ ನಮ್ಮನ್ನು ಎಚ್ಚರಿಸುತ್ತಾರೆ. ಇಂತಹ ಹಲವು ಲೇಖನಗಳು ನಿಜಕ್ಕೂ ನಮ್ಮ ಜೀವನಕ್ಕೆ ಮಾರ್ಗದರ್ಶಿಗಳಾಗಿ ಕಂಡುಬರುತ್ತದೆ.

ಪರಮೇಶ ಅವರು ಯುವಕರು. ಇಂದಿನ ಯುವಕರಲ್ಲಿ ಜೀವನ ಎಂಬುದು ಒಂದು ಮೋಜು ಎಂದು ಭಾವಿಸುವಂತಹುದನ್ನು ನಾವು ಕಾಣುತ್ತೇವೆ. ಆದರೆ ಪರಮೇಶ ಅವರು ಈ ದಿಸೆಯಲ್ಲಿ ವಿಭಿನ್ನವಾಗಿ ಕಂಡುಬರುತ್ತಾರೆ. ಅವರು ಕವಿಯಾಗಿ, ಲೇಖಕರಾಗಿ ಗಮನ ಸೆಳೆಯುತ್ತಾರೆ. ಅವರ ಲೇಖನಗಳಿಗೆ ಪೂರಕವಾದ ಕಥೆಗಳು, ಘಟನೆಗಳು, ನುಡಿಗಟ್ಟುಗಳನ್ನು ನೀಡಿದ್ದಾರೆ.

ಇದು ಅವರ ಅಧ್ಯಯನಶೀಲತೆಯನ್ನು ತೋರಿಸುತ್ತದೆ. ಈ ಕಾರಣಗಳಿಂದಾಗಿ ಅವರು ನಮಗೆ ಭರವಸೆಯ ಬೆಳಕಾಗಿ ಕಂಡುಬರುತ್ತಾರೆ. ಹಾಗಾಗಿಯೇ ಈ ಪುಸ್ತಕಕ್ಕೆ ಅವರು ‘ಅಕ್ಷರ ಜ್ಯೋತಿ’ ಎಂಬ ಮಹತ್ತರವಾದ ಶೀರ್ಷಿಕೆ ನೀಡಿದ್ದಾರೆ.

ಈ ಪುಸ್ತಕದಲ್ಲಿರುವ ಲೇಖನಗಳನ್ನು ಒಂದಾದ ನಂತರ ಒಂದರಂತೆ ಓದಲಾಗುವುದಿಲ್ಲ. ಏಕೆಂದರೆ ಅದು ಕಥೆಯ ರೂಪದಲ್ಲಿಲ್ಲ. ಅಲ್ಲೆಲ್ಲಾ ಗಹನವಾದ ವಿಷಯಗಳು ಇವೆ. ಒಂದು ಲೇಖನ ಓದಿದ ನಂತರ ಕಣ್ಣುಮುಚ್ಚಿ ಅವಲೋಕನ ಮಾಡಿಕೊಳ್ಳಬೇಕು ಎನ್ನುವಂತಿದೆ. ಈ ಲೇಖನಗಳನ್ನು ಓದಿ ಒಂದಷ್ಟನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಲೇಖಕರ ಶ್ರಮಕ್ಕೆ ಸಾರ್ಥಕತೆ ದೊರಕುತ್ತದೆ.

ಪರಮೇಶ್ ಅವರು ವಿಚಾರಶೀಲರು. ಅವರಿಂದ ಇಂತಹ ಹತ್ತಾರು ಲೇಖನಗಳು, ಪುಸ್ತಕಗಳು ಹೊರಬರಲಿ. ಅವರ ಆಂತರ್ಯದ ಹೊಳಹು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಹೋಗಲಿ ಎಂದು ಆಶಿಸಿ ಅವರಿಗೆ ಶುಭ ಹಾರೈಸುತ್ತೇನೆ.

-ಡಾ ವಿ ರಂಗನಾಥ್

ನಿವೃತ್ತ ತಹಶೀಲ್ದಾರ್ ಹಾಗೂ ಅಂಕಣಕಾರ

admin
the authoradmin

Leave a Reply

Translate to any language you want