District

ಮೈಸೂರಿನ ಸ್ವಚ್ಛತೆ ಕುರಿತ ಪರಿಸರ ರೀಲ್ಸ್ ಕಳಿಸಿ… ಮೈಸೂರು ನಗರ ಪಾಲಿಕೆಯಿಂದ ಬಹುಮಾನ ಗೆಲ್ಲಿ…

ಮೈಸೂರು: ಮೈಸೂರು ಮಹಾನಗರಪಾಲಿಕೆಯು  ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಪರಿಸರ ರೀಲ್ಸ್ ನ್ನು ಆಹ್ವಾನಿಸಿದೆ. ಮೈಸೂರಿನ ಸ್ವಚ್ಛತೆಗೆ ಕನ್ನಡಿ ಹಿಡಿಯುವಂತಹ ರೀಲ್ಸ್ ಗಳನ್ನು ಕಳುಹಿಸಿ ಬಹುಮಾನವನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ… ಹಾಗಾದರೆ ಏನಿದು ಪರಿಸರ ರೀಲ್ಸ್? ಇಲ್ಲಿದೆ ಆ ಕುರಿತ ಮಾಹಿತಿ…

ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮೈಸೂರು ಮಹಾನಗರಪಾಲಿಕೆ ಶ್ರಮಿಸುತ್ತಿದ್ದು, ಸ್ವಚ್ಛ ಭಾರತ್ ಮಿಷನ್ 2.0 ನಡಿ ಸ್ವಚ್ಛ ಸರ್ವೇಕ್ಷಣ್ 2025 -26ರಲ್ಲಿ ಮೈಸೂರು ನಗರ ಗರಿಷ್ಠ ಅಂಕ ಪಡೆದು ದೇಶದಲ್ಲಿ ನಂ.1 ಸ್ವಚ್ಛನಗರವಾಗಿಸುವ ನಿಟ್ಟಿನಲ್ಲಿ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಪಾಲಿಕೆಯೊಂದಿಗೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಈಗಾಗಲೇ ಪ್ರತಿಯೊಂದು ಕಸದ ಗಾಡಿಯಲ್ಲಿಯೂ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸವನ್ನು ನಿತ್ಯವೂ ಮಾಡಲಾಗುತ್ತಿದೆ. ಆದರೂ ಜನರಿಗೆ ಇನ್ನಷ್ಟು ಹತ್ತಿರವಾಗಲು ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಯುವ ಜನತೆ ಸೇರಿದಂತೆ ಎಲ್ಲರನ್ನು ತಲುಪಬೇಕಾದರೆ ಸಾಮಾಜಿಕ ಮಾಧ್ಯಮ ಅನಿವಾರ್ಯವಾಗಿದೆ. ಹೀಗಾಗಿಯೇ  ಪರಿಸರ ರೀಲ್ಸ್ ಮಾಡಿ ಬಹುಮಾನ ಗೆಲ್ಲುವ ಅವಕಾಶವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಿದ್ದು, ಕಾಲೇಜು ವಿದ್ಯಾರ್ಥಿಗಳ ಸೃಜನಶೀಲತೆಗೊಂದು ವೇದಿಕೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಿದೆ.

ಆಸಕ್ತ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೈಸೂರಿನ ಸುಂದರ ಪರಿಸರ ಕಾಪಾಡುವ ನಾಲ್ಕು ವಿಷಯಗಳ ಬಗ್ಗೆ ಅಂದರೆ 1 ಕಸವನ್ನು ಮೂಲದಲ್ಲಿಯೇ ವರ್ಗೀಕರಿಸುವ, 2 ಎಲ್ಲೆಂದರಲ್ಲಿ ಕಸವನ್ನು ಬಿಸಾಕಿ ಹೋಗುವ ಜನರಿಗೆ ಮನವರಿಕೆ ಮಾಡುವ, 3 ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಕುರಿತ, 4 ನೀರಿನ ಮರುಬಳಕೆ ಬಗ್ಗೆ  ರೀಲ್ಸ್ ಗಳನ್ನು ಮಾಡಿ ಕಳುಹಿಸಬಹುದಾಗಿದೆ.

ರೀಲ್ಸ್ ಮಾಡಿ ಕಳಿಸುವ ಮುನ್ನ  ಕೆಲವು ನಿಯಮ ಮತ್ತು ಸೂಚನೆಗಳಿದ್ದು ಅದನ್ನು ಪಾಲಿಸಬೇಕಾಗುತ್ತದೆ. ಅದೇನೆಂದರೆ  ರೀಲ್ಸ್ ಒಂದು ನಿಮಿಷದ ಅವಧಿ ಮೀರಬಾರದು, ಯಾವುದೇ ವ್ಯಕ್ತಿ ಸಂಸ್ಥೆ ರಾಜಕೀಯಪಕ್ಷ ಜಾತಿ ಧರ್ಮ ಮುಂತಾದವುಗಳಿಗೆ ಧಕ್ಕೆ ತರುವಂತಿರಬಾರದು ಹಾಗೂ ಪ್ರಮೋಟ್ ಮಾಡುವಂತಿರಬಾರದು, ಆಯೋಜಕರ ತೀರ್ಮಾನವೇ ಅಂತಿಮವಾಗಲಿದೆ.

ರೀಲ್ಸ್ ಗಳನ್ನು ಡಿಸೆಂಬರ್ 30, 2025ರೊಳಗೆ 9972391577ಗೆ ವಾಟ್ಸಪ್ ಮಾಡಬೇಕು. ವಿಜೇತರಿಗೆ ಪ್ರಥಮ 5ಸಾವಿರ, ದ್ವಿತೀಯ 3ಸಾವಿರ, ತೃತೀಯ 2ಸಾವಿರ ರೂಪಾಯಿಗಳನ್ನು ನೀಡಲಾಗುವುದು. ವಿಶೇಷ ಗೌರವವಾಗಿ ಅತ್ಯುತ್ತಮ ಹತ್ತು ರೀಲ್ಸ್ ಗಳನ್ನು ಪಾಲಿಕೆ ಆಯೋಜನೆಯ ಎಕ್ಸ್ ಪೋ ನಲ್ಲಿ ಪ್ರದರ್ಶಿಸಲಾಗುವುದು, ಭಾಗವಹಿಸಿದವರಿಗೆ ಮಹಾನಗರ ಪಾಲಿಕೆಯಿಂದ ಪ್ರಮಾಣ ಪತ್ರಗಳನ್ನು ನೀಡಲಾಗುವುದು… ಇನ್ನೇಕೆ ತಡ ಈಗಲೇ ನಿಮ್ಮ ಮೊಬೈಲ್ ಫೋನ್ ಕೈಗೆತ್ತಿಕೊಂಡು ನಿಮ್ಮ ಸೃಜನಶೀಲತೆಯನ್ನು ಜಗತ್ತಿಗೆ ತೋರಿಸಿ…

admin
the authoradmin

Leave a Reply