ಕೊಡಗಿನಲ್ಲಿ ಗಮನಸೆಳೆಯುತ್ತಿರುವ ವಿಶ್ವಶಾಂತಿಗಾಗಿ ಲೇಖನಿ ಅಭಿಯಾನ… ಇದು ಆರಂಭವಾಗಿದ್ದು ಹೇಗೆ? ಇದರ ರೂವಾರಿ ಯಾರು?

ನಾವು ಯುದ್ಧವಿಲ್ಲದ ಶಾಂತಿ, ನೆಮ್ಮದಿಯ ಜಗತ್ತನ್ನು ಸೃಷ್ಟಿಸಬೇಕಿದೆ.. ಸಾವು, ನೋವು, ನಾಶದ ನಂತರದ ಗೆಲುವಿನಿಂದ ನಾವು ಸಾಧಿಸುವುದಾದರೂ ಏನು? ಯುದ್ಧವೆನ್ನುವುದು ಪುರಾಣದ ಕಾಲದಿಂದಲೂ ನಡೆದು ಬಂದಿದೆ.. ಈಗಲೂ ನಡೆಯುತ್ತಿದೆ.. ಆದರೆ ಈಗ ನಡೆಯುವ ಯುದ್ಧ ಜಗತ್ತಿಗೆ ಸರ್ವ ನಾಶದ ಸಂದೇಶವನ್ನು ರವಾನಿಸುತ್ತಿದೆ.. ಯುದ್ಧ ಯಾರಿಗೆ ಬೇಕಾಗಿದೆ? ಎಂಬ ಪ್ರಶ್ನೆಗೆ ಯಾರಿಗೂ ಬೇಡ ಎಂಬ ಉತ್ತರ ಬಂದರೂ.. ಯುದ್ಧದ ಮೂಲಕವೇ ಗೆದ್ದೇ ಗೆಲ್ಲುತ್ತೇವೆ ಎಂದು ಹೊರಟವರಿಗೆ ಯುದ್ಧಗಳು ಗೆಲುವಲ್ಲ ಮನುಷ್ಯನ ಸರ್ವ ನಾಶಕ್ಕೆ ಬರೆಯುತ್ತಿರುವ ಮುನ್ನುಡಿ
ಜಗತ್ತು ಯುದ್ದೋನ್ಮಾದದಲ್ಲಿ ಹೊರಳಾಡುತ್ತಿರುವಾಗ ಶಾಂತಿಯ ಮಂತ್ರಗಳು ಅದ್ಯಾರ ಕಿವಿಗೂ ಬೀಳದಂತಾಗಿದೆ. ಆದರೂ ನಾವು ನೀವು ಶಾಂತಿಯ ಮಂತ್ರವನ್ನು ಪಠಿಸುತ್ತಾ ಹೋದರೆ ಅದರ ಪ್ರತಿಧ್ವನಿಗಳು ಒಂದಷ್ಟು ಕಿವಿಗಳಿಗೆ ಅಪ್ಪಳಿಸಿ ಅವು ಶಾಂತಿಯ ಕಡೆಗೆ ತಿರುಗಿದರೆ ಅದಕ್ಕಿಂತ ಸಂತೋಷ ಮತ್ತೇನಿದೆ. ಅದೇನೇ ಇರಲಿ ಯುದ್ಧದ ಕಾರ್ಮೋಡಗಳು ದೇಶ ಮತ್ತು ದೇಶದಾಚೆಗೆ ಕವಿದಿರುವಾಗ ಆ ಕಾರ್ಮೋಡಗಳನ್ನು ತಿಳಿಗೊಳಿಸುವ ಪ್ರಯತ್ನ ಅಲ್ಲದಿದ್ದರೂ ನಮ್ಮೊಳಗಿನ ಶಾಂತಿಯ ಮಂತ್ರಗಳು ಅಶಾಂತಿಯಿಂದ ಕೂಡಿದ ಜಗಕ್ಕೆ ಒಂದು ಔನ್ಸ್ ನಷ್ಟಾದರೂ ನೆಮ್ಮದಿ ನೀಡಬಹುದೇನೋ ಎಂಬ ಆಶಾಭಾವನೆಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಕೊಡಗಿನಲ್ಲಿ ತಮ್ಮ ವಿಭಿನ್ನ ಅಭಿಯಾನದ ಮೂಲಕ ಕೆ.ಟಿ.ವಾತ್ಸಲ್ಯ ಎಂಬುವರು ಶ್ರಮಪಡುತ್ತಿದ್ದಾರೆ.
ವಾತ್ಸಲ್ಯ ಅವರು ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗಿನಲ್ಲಿದ್ದು ಕೊಂಡು ತಮ್ಮದೇ ಆದ ಅಭಿಯಾನದ ಮೂಲಕ ಶಾಂತಿಯನ್ನು ಜಪಿಸುತ್ತಿದ್ದಾರೆ. ಶಾಲಾ ಮಕ್ಕಳ ಮನಸ್ಸಿನಲ್ಲಿ ದ್ವೇಷದ ಭಾವ ತೊಡೆದು ಅಲ್ಲಿ ಶಾಂತಿಯನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಇವತ್ತಿನಿಂದಲೇ ಮಕ್ಕಳ ಮನಸ್ಸನ್ನು ಶುದ್ಧಗೊಳಿಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಿದರೆ ಮುಂದಿನ ತಲೆಮಾರಿಗೆ ಅದರ ಪ್ರಯೋಜನಗಳು ದೊರೆಯಬಹುದು ಎನ್ನುವುದು ಅವರ ಆಶಾಭಾವನೆಯಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಹುಟ್ಟು ಹಾಕಿದ ವಿಶ್ವಶಾಂತಿಗಾಗಿ ಲೇಖನಿ ಅಭಿಯಾನ ಇವತ್ತು ಜಿಲ್ಲೆಯಾದ್ಯಂತ ಮುಂದುವರೆಯುತ್ತಿದೆ. ಈ ಅಭಿಯಾನದ ರೂವಾರಿಯಾಗಿರುವ ದಕ್ಷಿಣಕೊಡಗಿನ ಗೋಣಿಕೊಪ್ಪ ಬಳಿಯ ಅರುವತ್ತೊಕ್ಲು ನಿವಾಸಿ ಕೆ.ಟಿ.ವಾತ್ಸಲ್ಯ ಅವರ ಬಗ್ಗೆ ಒಂದಿಷ್ಟು ಹೇಳಲೇ ಬೇಕಾಗುತ್ತದೆ. ಶಿಕ್ಷಕ ದಿ. ತಂಗವೇಲು ಮತ್ತು ದಿ.ಗೌರಮ್ಯ ದಂಪತಿಯ ಪ್ರಥಮ ಪುತ್ರಿಯಾಗಿರುವ ಇವರು ಶಾಲಾ ದಿನಗಳಿಂದಲೇ ಬರವಣಿಗೆಯತ್ತ ಆಸಕ್ತಿ ಹೊಂದಿದವರು. ಇದಕ್ಕೆ ಅವರ ತಂದೆ ತಂಗವೇಲುರವರು ಕಾರಣರಾಗಿದ್ದರು. ಸ್ನಾತಕೋತ್ತರ ಪದವಿ ಬಳಿಕ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವಾತ್ಸಲ್ಯರವರು ಏನಾದರೊಂದು ಸಮಾಜಮುಖಿ ಕಾರ್ಯವನ್ನು ಮಾಡುವ ಚಿಂತನೆ ಮಾಡಿದ್ದು ಅದರ ಫಲವೇ ಲೇಖನಿ ಅಭಿಯಾನ.
ಅದು ಕೊರೊನಾ ಕಾಡುತ್ತಿದ್ದ ದಿನಗಳು ಅಂದರೆ 2021ನೇ ಇಸವಿ. ಈ ಸಮಯದಲ್ಲಿ ವಾತ್ಸಲ್ಯರವರು ಹತ್ತು ಹಲವು ಗುರಿಯನ್ನು ಹೊಂದಿದ ಲೇಖನಿ ಅಭಿಯಾನವನ್ನು ಕೊಡಗಿನಲ್ಲಿ ಶುರುಮಾಡಿದ್ದರು. 2021ರ ಏಪ್ರಿಲ್ 21ರಂದು ತಮ್ಮ ತಾಯಿ ಗೌರಮ್ಯ ಅವರ ಉದ್ಘಾಟನೆಯೊಂದಿಗೆ ಲೇಖನಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯಾದ್ಯಂತ ಸಂಘ ಸಂಸ್ಥೆ ಮತ್ತು ಶಾಲೆಗಳಿಗೆ ತೆರಳಿ ಲೇಖನಿ ಅಭಿಯಾನದ ಉದ್ದೇಶಗಳನ್ನು ತಿಳಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಓದು ಬರಹವನ್ನು ಉತ್ತೇಜಿಸುವುದು, ಸಾಮಾನ್ಯ ಜ್ಞಾನವನ್ನು ವೃದ್ಧಿಸುವುದು ಬಹುಮುಖ್ಯವಾಗಿತ್ತು. ಅದರ ಜತೆಗೆ ಒಂದೊಳ್ಳೆಯ ಸದುದ್ದೇಶಗಳನ್ನಿಟ್ಟುಕೊಂಡು ಮುನ್ನಡೆಯುವುದು ಅವರ ಅವತ್ತಿನ ಉದ್ದೇಶವಾಗಿತ್ತು.
ಈ ಅಭಿಯಾನಕ್ಕೆ ಖಡ್ಗಕ್ಕಿಂತ ಹರಿತವಾದದ್ದು ಲೇಖನಿ, ವಿಶ್ವ ಶಾಂತಿ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ, ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಪ್ರತಿಯೊಂದು ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯಬೇಕು, ಶಿಕ್ಷಣ ಪ್ರತಿಯೊಬ್ಬ ಹೆಣ್ಣು ಮಕ್ಕಳ ಹಕ್ಕು, ಲೇಖನಿ ಹಿಡಿದರೆ ಡಾಕ್ಟರ್ ಆಗಬಹುದು, ಶಿಕ್ಷಕರಾಗಬಹುದು, ವಿಜ್ಞಾನಿಯಾಗಬಹುದು, ರೈತರಾಗಬಹುದು, ಸಾಹಿತಿಯಾಗಬಹುದು. ಲೇಖನಿ ಹಿಡಿಯಿರಿ ವಿಶ್ವಮಾನವರಾಗಿ, ಲೇಖನಿ ಹಿಡಿಯಿರಿ ವಿಶ್ವಮಾನವರಾಗಿ ಎಂಬಿತ್ಯಾದಿ ಘೋಷ ವಾಕ್ಯಗಳ ಮೂಲಕ ಅಭಿಯಾನ ಶುರುವಾಗಿತ್ತು.
ಲೇಖನಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಶಾಂತಿ ಮಾರ್ಗದ ಕಡೆಗೆ ನಡೆಸುತ್ತದೆ, ಯುದ್ಧ ಬೇಡ ಶಾಂತಿ ಬೇಕು, ಲೇಖನಿ ಹಿಡಿಯಿರಿ ಮೌಢ್ಯ ಮುಕ್ತ ಸಮಾಜ ನಿರ್ಮಾಣ ಮಾಡೋಣ, ಸಮಾಜದಲ್ಲಿ ಅಕ್ಷರ ಕ್ರಾಂತಿ, ಯುವಜನರಲ್ಲಿ, ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸುವುದು, ಲೇಖನಿ ಹಿಡಿಯುವ ಕೈಗಳು ಅಣ್ವಸ್ತ್ರ ಹಿಯುವುದೇಕೆ?, ಲೇಖನಿ ಅಭಿಯಾನ ದಿಂದ ಮುಂದೆ ಸಮಾಜದಲ್ಲಿ ಭಯೋತ್ಪದನೆಯನ್ನು ತೊಡೆದು ಹಾಕಬಹುದು, ಗನ್ ಬಿಡಿ ಲೇಖನಿ ಹಿಡಿಯಿರಿ ಮುಂತಾದ ಘೋಷಣೆಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಾರಂಭಿಸಿದವು. ಇಂತಹದೊಂದು ಕಾರ್ಯಕ್ರಮಕ್ಕೆ ಅವರಿಗೆ ಪ್ರೇರಣೆಯಾಗಿದ್ದು ಅವರ ತಂದೆ ತಂಗವೇಲುರವರಂತೆ.
ಇನ್ನು 2021ರಲ್ಲಿ ಆರಂಭಿಸಿದ ಅಭಿಯಾನ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು ಇದುವರೆಗೆ ಜಿಲ್ಲೆಯ ಶಾಲೆ ಮತ್ತು ಸಂಘಸಂಸ್ಥೆಗಳಲ್ಲಿ ನಡೆದಿವೆ.. ಅದರಲ್ಲೂ ವಿದ್ಯಾರ್ಥಿಗಳನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಶಾಲೆಗಳಲ್ಲಿಯೇ ನಡೆಸಲಾಗಿದೆ. ಇಲ್ಲಿ ಸುಮಾರು ಆರುವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿರುವುದು ವಿಶೇಷವಾಗಿದೆ. ಲೇಖನಿ ಅಭಿಯಾನದಲ್ಲಿ ಶಾಂತಿ ಮಂತ್ರದ ಜತೆಗೆ ಲೇಖನಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ.
ಇಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಸಾಹಿತ್ಯ, ಕವಿಗೋಷ್ಠಿ, ಪ್ರಬಂಧ, ಭಾಷಣ, ಚುಟುಕು ಸೇರಿದಂತೆ ಲೇಖನಿಗೆ ಸಂಬಂಧ ಪಟ್ಟ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇವರ ಲೇಖನಿ ಅಭಿಯಾನದ ಯಶಸ್ವಿಗೆ ಹಲವು ಸಂಘ ಸಂಸ್ಥೆಗಳು, ಶಾಲಾ ಕಾಲೇಜಿನ ಶಿಕ್ಷಕರು ಮುಖ್ಯೋಪಾಧ್ಯಾಯರು ಬೆಂಬಲ ನೀಡಿರುವುದನ್ನು ಅವರು ಸ್ಮರಿಸುತ್ತಾರೆ. ಇವರ ಲೇಖನಿ ಅಭಿಯಾನ ನಿರಂತರವಾಗಿ ಸಾಗುತ್ತಿರಲಿ ಎನ್ನುವುದು ಜನಮನಕನ್ನಡದ ಆಶಯವಾಗಿದೆ.
B M Lavakumar