LatestNews

ಕರ್ನಾಟಕ ಸೇರಿದಂತೆ ದೇಶಾದ್ಯಂತ ‘ಬಹುಪತ್ನಿತ್ವ’ ನಿಷೇಧ ಮಸೂದೆ ಅಂಗೀಕರಿಸಿ: ಮೋಹನ್ ಗೌಡ

ಬೆಂಗಳೂರು: ಅಸ್ಸಾಂ ರಾಜ್ಯವು ‘ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ 2025’ ಅನ್ನು ಅಂಗೀಕರಿಸುವ ಮೂಲಕ ಮಹಿಳೆಯರ ಹಕ್ಕುಗಳು ಮತ್ತು ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ  ಇಟ್ಟಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ  ಮೋಹನ್ ಗೌಡ ಶ್ಲಾಘಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೊದಲ ವಿವಾಹದ ಮಾಹಿತಿಯನ್ನು ಮುಚ್ಚಿಟ್ಟು ಎರಡನೇ ಮದುವೆಯಾಗುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ, ಹಾಗೆಯೇ ಇದರಲ್ಲಿ ಭಾಗಿಯಾಗುವ ಗ್ರಾಮದ ಮುಖ್ಯಸ್ಥರು, ಖಾಜಿ, ಪೂಜಾರಿ ಹಾಗೂ ಪೋಷಕರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ರಿಂದ 1.5 ಲಕ್ಷ ರೂಪಾಯಿಗಳ ದಂಡದಂತಹ ಕಠಿಣ ಕ್ರಮಗಳಿಂದ ಮಹಿಳೆಯರ ಮೇಲಾಗುವ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗೆ ಕಡಿವಾಣ ಬೀಳಲಿದೆ ಎಂದು ಹೇಳಿದ್ದಾರೆ.

ದೋಷಿಗಳಿಗೆ ಸರ್ಕಾರಿ ಉದ್ಯೋಗಗಳು, ಯೋಜನೆಗಳ ಲಾಭ ಮತ್ತು ಚುನಾವಣೆಗಳಿಂದ ವಂಚಿತರನ್ನಾಗಿಸುವ ಕಲಂಗಳಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಲಿದೆ, ಹಾಗೂ ಸಂತ್ರಸ್ತ ಮಹಿಳೆಯರಿಗೆ ಪರಿಹಾರ, ಕಾನೂನು ಮತ್ತು ಆರ್ಥಿಕ ನೆರವು ಸಿಗಲಿದೆ. ಈ ಐತಿಹಾಸಿಕ ಕಾನೂನನ್ನು ಜಾರಿಗೆ ತಂದಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರನ್ನು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಭಿನಂದಿಸುತ್ತೇವೆ ಮತ್ತು ಈ ಕಾನೂನನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಟರ್ಕಿ, ಫ್ರಾನ್ಸ್, ಅಮೆರಿಕ, ಜರ್ಮನಿ, ಸ್ವೀಡನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಜಪಾನ್, ಸ್ಪೇನ್, ಇಟಲಿಯಿಂದ ಹಿಡಿದು ಜಾಗತಿಕ ಮಟ್ಟದಲ್ಲಿ ಸುಮಾರು 130 ರಿಂದ 140 ದೇಶಗಳಲ್ಲಿ ಬಹುಪತ್ನಿತ್ವ (ಪಾಲಿಗೆಮಿ) ವಿವಾಹದ ಮೇಲೆ ಕಠಿಣ ಕಾನೂನು ಅಥವಾ ಸಂಪೂರ್ಣ ನಿಷೇಧವಿದೆ. ಭಾರತದಲ್ಲಿ ಈ ಕಾನೂನು ಇದ್ದರೂ, ಎಲ್ಲಾ ಧರ್ಮಗಳಿಗೆ ಅನ್ವಯಿಸುವುದಿಲ್ಲ. ಆದರೂ ಬಹುಪತ್ನಿತ್ವವು ಮಹಿಳೆಯರ ಸ್ವಾತಂತ್ರ್ಯ ಮತ್ತು ಕುಟುಂಬ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ಇದು ಕೇವಲ ಅಸ್ಸಾಂಗೆ ಸೀಮಿತವಾಗದೆ ಕರ್ನಾಟಕ ಸೇರಿದಂತೆ ಸಂಪೂರ್ಣ ದೇಶಾದ್ಯಂತ ಈ ಕಾನೂನಿನ ಅವಶ್ಯಕತೆಯಿದೆ. ಅಸ್ಸಾಂನಂತಹ ಕಠಿಣ ಕಾನೂನು ದೇಶವ್ಯಾಪಿ ಜಾರಿಯಾದರೆ ಸ್ತ್ರೀ ಸುರಕ್ಷತೆ ಬಲಗೊಳ್ಳುತ್ತದೆ, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want