ಇವತ್ತು ಅಪ್ಪ ಅಮ್ಮ ಕಷ್ಟ ಪಟ್ಟು ಓದಿಸಿದರೂ ಓದದ ಮಕ್ಕಳಿದ್ದಾರೆ. ಆದರೆ ಓದುವ ವಯಸ್ಸಿನಲ್ಲಿ ಸಂಸಾರದ ಜವಬ್ದಾರಿ ಹೊತ್ತು ಹೆತ್ತ ಅಮ್ಮ ಮತ್ತು ಸಹೋದರಿಯನ್ನು ನೋಡಿಕೊಳ್ಳುವುದರ ಜತೆಗೆ ತಾನು ಓದುತ್ತಿರುವ ವಿದ್ಯಾರ್ಥಿಯೊಬ್ಬನ ಕಥೆ ಇದಾಗಿದೆ. ಇಲ್ಲಿ ಈ ವಿದ್ಯಾರ್ಥಿ ಉನ್ನತ ವ್ಯಾಸಂಗ ಮಾಡಬೇಕಾದರೆ ಹಣದ ಅವಶ್ಯಕತೆಯಿದೆ.. ಹಣವಿಲ್ಲದ ಕಾರಣದಿಂದಾಗಿ ಓದು ಮೊಟಕುಗೊಳ್ಳುವ ಪರಿಸ್ಥಿತಿಗೆ ಬಂದಿದೆ.. ಯಾರಾದರೂ ದಾನಿಗಳು ಸಹಾಯ ಹಸ್ತ ನೀಡಿದರೆ ಬಡ ವಿದ್ಯಾರ್ಥಿಯ ಬದುಕು ಹಸನಾಗಬಹುದೇನೋ? ವಿದ್ಯಾರ್ಥಿಯ ಓದು ಮತ್ತು ಬದುಕು ಇದೆರಡರ ಬಗ್ಗೆ ಕೂಡಂಡ ರವಿ ಹೊದ್ದೂರು ಅವರು ಇಲ್ಲಿ ತೆರೆದಿಟ್ಟಿದ್ದಾರೆ.
ಆತ ವೀರಾಜಪೇಟೆ ಪಟ್ಟಣದಲ್ಲಿ ವಾಸಿಸುತ್ತಾ ಕೂಲಿ ಕಾರ್ಮಿಕನಾಗಿ ದುಡಿಯುವ ಚಿಗುರು ಮೀಸೆಯ ಯುವಕ. ತನ್ನ ದುಡಿಮೆಯಿಂದಲೇ ಕುಟುಂಬವನ್ನು ಮುನ್ನಡೆಸುವಾತ, ಸಿಮೆಂಟ್, ಅಕ್ಕಿ, ಕಲ್ಲು, ಟೈಲ್ಸ್ ಮರಮುಟ್ಟುಗಳನ್ನು ಲೋಡಿಂಗ್, ಅನ್ಲೋಡ್ ಸೇರಿದಂತೆ ಇನ್ನಿತರ ಬಲು ಕಠಿಣ ಕೆಲಸಗಳಲ್ಲಿ ಸದಾ ನಿರತ. ಪಿಯುಸಿ ಮುಗಿಸಿದ ಪ್ರತಿಭಾನ್ವಿತ ಗೋಣಿಕೊಪ್ಪ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತ್ಯುತ್ತಮ ದರ್ಜೆಯೊಂದಿಗೆ ತರಗತಿಗೆ ಮೊದಲಿಗನಾಗಿ ಉತೀರ್ಣನಾದ. ಉನ್ನತ ವಿದ್ಯಾಭ್ಯಾಸದ ಕನಸು ಹೊತ್ತ ಯುವಕ ಡಿಪೋಮಾ ಶಿಕ್ಷಣಕ್ಕೆ ರಾಷ್ಟ್ರೀಕೃತ ಬ್ಯಾಂಕ್ ನಿಂದ ಅದಾಗಲೇ ಒಂದು ಲಕ್ಷ ಸಾಲ ಪಡೆದಿದ್ದ.
ರಾಜ್ಯಮಟ್ಟದಲ್ಲಿ 1345ನೇ ರಾಂಕ್ : ಇದೀಗ ಉನ್ನತ ಶ್ರೇಣಿಯಲ್ಲಿ ಪಾಸಾದ ಆತನಿಗೆ ಬಿ.ಇ ಮಾಡುವ ಮಹದಾಸೆ. ಅದಕ್ಕಾಗಿ ಡಿಸಿಇಟಿ ಪರೀಕ್ಷೆ ಬರೆದ. ಸಾಕಷ್ಟು ಪೂರ್ವಭಾವೀ ತಯಾರಿ ನಡೆಸದ ಆತ ರಾಜ್ಯಮಟ್ಟದಲ್ಲಿ 1345ನೇ ರಾಂಕ್ ಪಡೆದಿದ್ದಾನೆ. ಆತನಿಗೆ ಬೇಕಾದಂತಹ ಬಿ.ಇ ಕೋರ್ಸ್ (ಕಂಪ್ಯೂಟರ್ ಸೈನ್ಸ್-ಸೈಬರ್ ಸೆಕ್ಯುರಿಟಿ) ಕರ್ನಾಟಕದ ಸರಕಾರಿ ಕಾಲೇಜ್ ಲಭ್ಯವಿಲ್ಲದ ಕಾರಣ ಪ್ರತಿಭಾನ್ವಿತ ವಿದ್ಯಾರ್ಥಿಗೆ ತೀವ್ರ ನಿರಾಸೆಯಾಗಿದೆ.
ಉನ್ನತ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಲು ಹಲವಾರು ಬ್ಯಾಂಕ್ ಗಳನ್ನು ಹತ್ತಿ ಇಳಿದಿದ್ದಾನೆ. ಪರಿಣಾಮ ದಿನಗಳು ಉರುಳುತ್ತಿವೆಯೇ ಹೊರತು, ಯಾವ ಬ್ಯಾಂಕ್ ಸಹಾ ಈತನಿಗೆ ಸಾಲ ಕೊಡಲು ಮುಂದಾಗಲೇ ಇಲ್ಲ. ಬಹುತೇಕ ಬ್ಯಾಂಕಿನವರು ಕೊಡುವ ಏಕೈಕ ರೆಡಿಮೇಡ್ ಉತ್ತರ ಹಳೆಯ ಸಾಲ ಮುಗಿಸಿ ಬಾ, ಸಾಲ ಕೊಡುತ್ತೇವೆ ಎಂಬ ಭರವಸೆ ಅಷ್ಟೇ. ದಿನವೂ ಕೂಲಿ ನಾಲಿ ಮಾಡಿ ಡಿಪ್ಲೋಮಾ ಮುಗಿಸಿದ ತರುಣನಿಗೆ ತಕ್ಷಣಕ್ಕೆ 1.20 ಲಕ್ಷ ರೂಪಾಯಿ ಎಲ್ಲಿಂದ ತರಲಿ ? ಎಂಬ ಚಿಂತೆಯಲ್ಲಿ ದಿನ ಕಳೆಯುತ್ತಿರುವನು. ಜೊತೆಗೆ ಸರಕಾರ ಈತನಿಗೆ ಖಾಸಗಿ ಕಾಲೇಜಿನಲ್ಲಿ ಸೀಟು ನೀಡಿದ್ದಲ್ಲಿ ಮೊದಲ ಒಂದೇ ಕಂತಿನಲ್ಲಿ ಕೇವಲ ಮೂರು, ನಾಲ್ಕು ದಿನಗಳಲ್ಲಿ ಸುಮಾರು 1.20ಲಕ್ಷ ರೂಪಾಯಿ ಫೀಸ್ ಅನ್ನು ಕಾಲೇಜಿಗೆ ಪಾವತಿಸಬೇಕಾಗುತ್ತದೆ. ಈ ಸಮಸ್ಯೆಯಿಂದ ಆತ ಆಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದ್ದಾನೆ.
ಕುಟುಂಬದ ಜವಾಬ್ಧಾರಿ: ಕಾಲೇಜು ಮುಗಿಸಿ, ಬೆಳಿಗ್ಗೆ, ಸಂಜೆ, ರಜಾ ದಿನಗಳಲ್ಲಿ ಅವಿರತವಾಗಿ ದುಡಿಯುವ ಈತ, ತಂದೆಯಿಲ್ಲದ ಕಾರಣ ಕುಟುಂಬದ ಜವಾಬ್ಧಾರಿಯ ನೊಗ ಹೊತ್ತಿದ್ದಾನೆ. ಪ್ರತಿಭಾನ್ವಿತೆ ತಂಗಿಯನ್ನು ಕಾಲೇಜಿಗೆ ಕಳುಹಿಸುತ್ತಿದ್ದಾನೆ. ಈತನ ತಾಯಿ ವಸತಿ ನಿಲಯವೊಂದರಲ್ಲಿ ತಾತ್ಕಾಲಿಕ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೋ ಮೂರು, ನಾಲ್ಕು ತಿಂಗಳಿಗೊಮ್ಮೆ ಟೆಂಡರ್ ಬಿಲ್ ಆದಾಗ ಒಂದಿಷ್ಟು ಹಣ ಸಿಗುತ್ತದೆ. ಅನಾರೋಗ್ಯ ಪೀಡಿತೆಯಾದ ಆಕೆಗದು ಆಸ್ಪತ್ರೆಯ ಖರ್ಚಿಗೂ ಸಾಲುತ್ತಿಲ್ಲ !
ಇವೆಲ್ಲಾ ಜೀವನದ ಜಂಜಾಟಗಳ ಮದ್ಯೆ ಯುವಕನ ಬಿ.ಇಯು ತಿರುಕನ ಕನಸಿನಂತಾಗುತ್ತಿದೆ. ಆದರೂ, ಛಲಬಿಡದ ತ್ರಿವಿಕ್ರಮನಂತಾದ. ಆತ ತನ್ನ ಶೈಕ್ಷಣಿಕ ದಾಖಲೆಗಳನ್ನು ಹಿಡಿದು ಹಲವಾರು ಸಂಘ-ಸಂಸ್ಥೆಗಳನ್ನು ಮತ್ತು ದಾನಿಗಳನ್ನು ಸಂಪರ್ಕಿಸುತ್ತಿದ್ದಾನೆ. ಕೆಲವರು ಸ್ವಲ್ಪ ದಿನಗಳಲ್ಲಿ ಹಣ ಜೋಡಿಸಿ ಕೊಡುವ ಭರವಸೆ ನೀಡಿದ್ದಾರೆ. ಹಣ ಕೈಗೆ ಬಾರದೇ ಯಾವುದೂ ಖಚಿತ ಎನ್ನುವಂತಿಲ್ಲವಲ್ಲ.
ಬ್ಯಾಂಕಿನಲ್ಲಿರುವ ೧1.20ಲಕ್ಷ ರೂಪಾಯಿಗಳ ಸಾಲ ಮುಗಿಸಿದ್ದಲ್ಲಿ ಬಿ.ಇ ವಿದ್ಯಾಭ್ಯಾಸಕ್ಕೆ ಬೇಕಾಗುವ ಸುಮಾರು 7ರಿಂದ 8 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಸಿ ಕೊಡುವುದಾಗಿ ಹಿತೈಷಿಯೊಬ್ಬರು ಭರವಸೆ ನೀಡಿದ್ದಾರಂತೆ. ಆದರೆ, ತರುಣನಿಗೆ ಅತೀ ಕಡಿಮೆ ಸಮಯದಲ್ಲಿ ಹಳೆಯ ಸಾಲದ ಮೊತ್ತವನ್ನು ಜೋಡಿಸುವುದು, ಅದನ್ನು ಸಕಾಲಿಕವಾಗಿ ಮರುಪಾವತಿಸುವುದು ಕನಸಿನ ಮಾತಾಗಿದೆ. ಆದುದರಿಂದ ಪರಿಚಿತರ ಮತ್ತು ಹಿತೈಷಿಗಳ ಬಳಿ ಸಾಲಕ್ಕಾಗಿ ಅಲೆದಾಡುತ್ತಿದ್ದಾನೆ. ಹಲವರು ನಾಲ್ಕಾರು ಬಾರಿ ಅಲೆದಾಡಿಸಿದರೂ, ಧನ ಸಹಾಯವನ್ನೇ ಮಾಡುತ್ತಿಲ್ಲ. ಈತನ ಭವ್ಯ ಕನಸನ್ನು ಕಂಡು ಗೇಲಿ ಮಾಡುವವರು ಅದೆಷ್ಟೋ ಮಂದಿ!
ಆದುದರಿಂದ ಶಿಕ್ಷಣ ಪ್ರೇಮಿಗಳು, ಸಹೃದಯವಂತ ದಾನಿಗಳಿಂದ ಆತ ತನ್ನ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ಸಹಾಯ ಕೋರಿದ್ದಾನೆ. ಧನ ಸಹಾಯ ಅಥವಾ ಸಾಲ ನೀಡಲು ಇಚ್ಛಿಸುವವರು ವಿದ್ಯಾರ್ಥಿಯನ್ನು ಮೊಬೈಲ್ ಫೋನ್ ಸಂಖ್ಯೆ: 7795290719 (ದಿಲನ್) ಮೂಲಕ ಸಂಪರ್ಕಿಸಬಹುದಾಗಿದೆ. ಹಣವನ್ನು ಫೋನ್ ಪೇ ಮೂಲಕ ಆತನ ಖಾತೆಗೆ ಪಾವತಿಸಬಹುದು. ಧನ ಸಹಾಯ ನೀಡುವವರು ಆದಷ್ಟು ಬೇಗನೇ ಹಣ ನೀಡಿದ್ದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಪ್ರಯೋಜನವಾಗಲಿದೆ.
– ಕೂಡಂಡ ರವಿ, ಹೊದ್ದೂರು.