ArticlesLatest

ಉತ್ತರಾಯಣ.. ಪ್ರಶ್ನೆ-ಉತ್ತರಗಳಿಗೊಂದು ವೇದಿಕೆ… ಆ ಸುಂದರ ದಿನಗಳ ಮೆಲುಕು ಹಾಕೋಣ ಬನ್ನಿ

ಒಂದೆರಡು ದಶಕಗಳ ಹಿಂದೆ ಓದುಗರಿಗೆ ಪತ್ರಿಕೆಗಳೇ ಜೀವಾಳವಾಗಿದ್ದವು.. ಅವತ್ತಿನ ದಿನಗಳಲ್ಲಿ ಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹೀಗೆ ಎಲ್ಲ ಪತ್ರಿಕೆಗಳಲ್ಲಿಯೋ ಒಂದೊಂದು ರೀತಿಯ ತಲೆಬರಹಗಳಲ್ಲಿ ಪ್ರಶ್ನೋತ್ತರಗಳು ಪ್ರಕಟವಾಗುತ್ತಿದ್ದವು. ಈ ಅಂಕಣಕ್ಕೆ ಪ್ರಶ್ನೆಗಳನ್ನು ಕಳುಹಿಸಿ ಅದರ ಪ್ರಕಟಣೆಗಾಗಿ ಕಾಯುವುದೇ ಒಂಥರಾ ಮಜಾ ಕೊಡುತ್ತಿತ್ತು… ಅದೆಲ್ಲವೂ ನೇಪಥ್ಯಕ್ಕೆ ಸರಿಯುತ್ತಿರುವ ಕಾಲಘಟ್ಟದಲ್ಲಿ ಪ್ರಶ್ನೋತ್ತರಗಳ ಆ ಅಂಕಣದ ಬಗ್ಗೆ ಬರಹಗಾರರಾದ ಕಾಳಿಹುಂಡಿ ಶಿವಕುಮಾರ್ ಮೆಲುಕು ಹಾಕಿದ್ದಾರೆ…

ಈ ಜೀವನ ಎಂದ ಮೇಲೆ ಪ್ರಶ್ನೆಗಳು, ಉತ್ತರಗಳು ಇವುಗಳನ್ನು ಒಳಗೊಂಡಂತೆ ಸಮಸ್ಯೆಗಳು! ಇರಲೇಬೇಕು!!. ಪ್ರಶ್ನೆ ಮತ್ತು ಉತ್ತರಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ!. ಎಲ್ಲಿ ಪ್ರಶ್ನೆ ಇರುತ್ತದೋ ಅಲ್ಲಿ ಉತ್ತರವಿರುತ್ತದೆ!. ಹಲವು ಬಾರಿ ಎಲ್ಲಿ ಉತ್ತರವಿರುತ್ತದೋ ಅಲ್ಲಿ ಪ್ರಶ್ನೆ ಮೂಡೆ ಮೂಡುತ್ತದೆ!!. ಅದರಿಂದಾಗಿ ಇಲ್ಲಿ ಉತ್ತರ ಮತ್ತು ಪ್ರಶ್ನೆಯ ಕಾರು ಬಾರು ಇದ್ದೇ ಇರುತ್ತದೆ.

ಕೆಲವೊಮ್ಮೆ ನಾವು ನಮ್ಮಷ್ಟಕ್ಕೆ ಕೆಲವೊಂದಿಷ್ಟು ಪ್ರಶ್ನೆಗಳನ್ನ ಹಾಕಿಕೊಳ್ಳುತ್ತೇವೆ. ಜೊತೆಗೆ ಜಾಣ್ಮೆಯಿಂದ ನಮ್ಮ ಅಂತರಂಗದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರವನ್ನು ಕೂಡ ಕಂಡುಕೊಳ್ಳುತ್ತೇವೆ. ಇದು ಸರಿಯಾದ ಮಾರ್ಗ. ಕೆಲವರು ತಾವು ಮಾಡಿದ ಯಾವುದೇ ಕೆಲಸ ಕಾರ್ಯಗಳಲ್ಲೂ ಕೂಡ ಪ್ರಶ್ನೆಗಳೇ ಬರದ ರೀತಿಯಲ್ಲಿ ಕೆಲಸವನ್ನು ಮಾಡಿ ಮುಗಿಸಿರುತ್ತಾರೆ.

ಪ್ರಶ್ನೆ ಎಂದರೆ ಒಂದು ರೀತಿಯಲ್ಲಿ ವಿರೋಧ ಎಂದು ಭಾವಿಸಬಹುದು. ಉತ್ತರ ಎನ್ನುವುದು ಪರ ಎನ್ನಬಹುದು. ಆದುದರಿಂದಾಗಿ ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಕೂಡ ವಿವಿಧ ಹಂತಗಳಲ್ಲಿ ಪ್ರಶ್ನೆಗಳು, ಉತ್ತರಗಳು ಬಂದೇ ಬರುತ್ತವೆ. ಅದರಿಂದಾಗಿ ಪ್ರಶ್ನೆಗಳಿಗೂ ಒಂದು ಕಾಲ, ಉತ್ತರಗಳಿಗೂ ಒಂದು ಕಾಲ ಇದ್ದೇ ಇರುತ್ತದೆ!. ಹಲವು ಕಡೆ, ಹಲವು ಬಾರಿ ಒಂದು ಒಳ್ಳೆಯ ಕೆಲಸ ಮಾಡಿದರೆ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ.

ಒಂದು ರೀತಿಯಲ್ಲಿ “ಅವರವರ ಭಾವಕ್ಕೆ ಅವರವರ ಭಕುತಿಗೆ ಎನ್ನುವಂತೆ” ಪ್ರಶ್ನೆಗಳು ಮಕ್ಕಳಿಗೆ, ಯುವಕರಿಗೆ, ಮಧ್ಯ ವಯಸ್ಕರಿಗೆ, ವಯಸ್ಕರಿಗೆ, ಹೀಗೆ ಪ್ರಶ್ನೆಗಳು ಉತ್ತರಗಳು ಒಂದೇ ಆದರೂ ಅದನ್ನ ಕಂಡುಕೊಳ್ಳುವ ರೀತಿ ಮಾತ್ರ ಬಗೆ ಬಗೆಯದ್ದಾಗಿರುತ್ತದೆ.  ಏನು? ಈ ದಿನ ಬರಿ ಪ್ರಶ್ನೆಗಳ ಮತ್ತು ಉತ್ತರಗಳ ಬಗ್ಗೆ ಹೇಳುತ್ತಿದ್ದಾರೆ……. ಎಂದು ನೀವು ಭಾವಿಸಿರಬಹುದು!. ಜೊತೆಗೆ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಪ್ರಶ್ನೆಯು ಕೂಡ ಮೂಡಿರಬಹುದು. ಯಾವುದಕ್ಕೂ ಒಂದು ಕಾರಣ ಇದ್ದೇ ಇರುತ್ತದೆ!.

ನಾನು ಒಂದು ರೀತಿಯಲ್ಲಿ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುವ ವ್ಯಕ್ತಿ. ನಾವು ಬೆಳಗ್ಗೆ ಎದ್ದ ಕೂಡಲೇ ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ನಮ್ಮ ವ್ಯಕ್ತಿತ್ವದ ಅನಾವರಣ ಆಗುತ್ತದೆ. ಅದೇ ರೀತಿ ನಾವು ಬೇರೆಯವರನ್ನು ನೋಡಿದಾಗಲೂ ಕೂಡ ಏನಾದರೂ ಒಂದು ಪ್ರಶ್ನೆಯನ್ನು ಕೇಳುತ್ತೇವೆ. ಸ್ವಲ್ಪ ಸಪ್ಪೆಯಾಗಿದ್ದೀರಿ? ನಿದ್ದೆ ಸರಿಯಾಗಿ ಮಾಡಿಲ್ಲವೇ? ಮನೆಯಲ್ಲಿ ಏನಾದರೂ ಗಲಾಟೆಯೇ? ಹಣಕಾಸಿನ ಸಮಸ್ಯೆಯೆ?. ಹೀಗೆ ಒಂದರ ಮುಂದೆ ಒಂದು ಪ್ರಶ್ನೆಗಳ ಸುರಿಮಳೆಯಾಗುತ್ತದೆ!. ಕೆಲವೊಮ್ಮೆ ಉತ್ತರಕ್ಕೂ ಕಾಯದೆ. ಇಂತಹ ಸಂದರ್ಭದಲ್ಲಿ ಕೆಲವರು ಮೌನಿ ಆಗಬಹುದು. ಕೆಲವರು ಉತ್ತರಿಸಬಹುದು. ನಾವು ಕೇಳಿದ ಮಾತ್ರಕ್ಕೆ ಅವರಿಂದ ಉತ್ತರ ನಿರೀಕ್ಷಿಸಲು ಸಾಧ್ಯವಿಲ್ಲ.

ಆದುದರಿಂದಾಗಿ ಪ್ರಶ್ನೆ ಮಾಡುವುದು, ಪ್ರಶ್ನೆ ಕೇಳುವುದು ಕೂಡ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಗುಣವನ್ನು ಸಾರುತ್ತದೆ. ಅವನು ಏನೆಲ್ಲ ಯೋಚನೆ ಮಾಡಿ ಆ ವಿಷಯದ ಬಗ್ಗೆ ಸಂಪೂರ್ಣವಾಗಿ ಅರಿತು ತನ್ನಲ್ಲಿ ಮೂಡಿದ ಭಾವನೆಯನ್ನು ವ್ಯಕ್ತಪಡಿಸುತ್ತಾನೆ. ಅದರಿಂದಾಗಿ ಪ್ರಶ್ನೆ ಮಾಡುವವರು, ಪ್ರಶ್ನೆ ಕೇಳುವವರು ನನ್ನ ರೀತಿಯಲ್ಲಿ ಚಾಣಕ್ಷ್ಯ ಎಂದು  ಭಾವಿಸುತ್ತೇನೆ.  ವಿಧಾನಮಂಡಲದಲ್ಲೂ ಕೂಡ “ಪ್ರಶ್ನೋತ್ತರ ವೇಳೆ”- ಎನ್ನುವುದು ಕೂಡ ಇರುತ್ತದೆ. ಚುನಾವಣೆಗಳಲ್ಲಿ ಗೆಲ್ಲಿಸಿದ ಪ್ರತಿನಿಧಿಗಳನ್ನು ಮತದಾರರು ಅಂದರೆ ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಶ್ನೆಗಳನ್ನ ಕೇಳುತ್ತಾರೆ. ಖಾಸಗಿ ಆಗಿರಬಹುದು ಸರ್ಕಾರಿ ಆಗಿರಬಹುದು ಕಚೇರಿಗಳಲ್ಲಿ ಅಧಿಕಾರಿಗಳು ತಮ್ಮ ಸಿಬ್ಬಂದಿ ವರ್ಗದವರನ್ನ ಪ್ರಶ್ನೆ ಮಾಡುತ್ತಾರೆ. ಪ್ರಗತಿಪರಿಶಲನೆ ಮಾಡುತ್ತಾರೆ. ಹೀಗೆ ಕುಟುಂಬದಲ್ಲೂ ಕೂಡ ಹೀಗೆ ಪ್ರಶ್ನೆಗಳಿರದ ಜಾಗವಿಲ್ಲ!.

ನಾವು ಚಲನಚಿತ್ರವನ್ನು ವೀಕ್ಷಣೆ ಮಾಡುವಾಗ, ಕಿರುತೆರೆಯನ್ನ ವೀಕ್ಷಣೆ ಮಾಡುವಾಗ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಒಂದು ಪ್ರಶ್ನೆ ಮೂಡುತ್ತದೆ. ಮುಂದೆ ಏನಾಗಬಹುದು? ಅದು ಹೇಗಿದ್ದರೆ ಚೆನ್ನಾಗಿರುತ್ತಿತ್ತು? ಕಥೆಯ ತಿರುಳು ಚೆನ್ನಾಗಿದೆ, ಅದು ಹೇಗಿದೆ? ಹೀಗಿರಬೇಕಾಗಿತ್ತು! ಆದರೆ ನಿರ್ದೇಶಕರು ಈ ರೀತಿ ಅಂತ್ಯವನ್ನು ಮಾಡಬಹುದಾಗಿತ್ತು.  ಹೀಗೆ ಒಂದೇ ಎರಡೇ?? ಮನದ ಭಾವನೆಗಳನ್ನು ನಾವು ಪ್ರಶ್ನೆಗಳ ಮೂಲಕ ಅಭಿವ್ಯಕ್ತಗೊಳಿಸುತ್ತೇವೆ.

ಸಾಹಿತ್ಯದ ವಿಷಯ ಬಂದಾಗ ಪ್ರಶ್ನೆಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಆ ಕೃತಿಯ ಒಳ- ಹೊರಗೂ ವ್ಯಕ್ತವಾಗ ಬೇಕಾದರೆ ಪ್ರಶ್ನೆಗಳ ಮೂಲಕ ಉತ್ತರ ಸಿಗುತ್ತದೆ. ಅದರಲ್ಲೂ ಕೆಲವು ಪತ್ರಿಕೆಗಳು ಪ್ರಶ್ನೆಗಳ ಅಂಕಣವನ್ನು ಕೂಡ ಇಟ್ಟಿರುತ್ತಾರೆ. ಅಂಕಣಕ್ಕೆ ತಮ್ಮ ಮೊನಚಾದ, ತೀಕ್ಷ್ಣ, ನವಿರಾದ, ಜೊತೆಗೆ ಪ್ರೀತಿ ಪ್ರೇಮ ಇಂಬಿತ್ಯಾದಿ ಬಗೆ ಬಗೆಯ ಶೀರ್ಷಿಕೆಗಳನ್ನು ಕೂಡ ನೀಡಿರುತ್ತಾರೆ. ಈ ಕುರಿತಾಗಿ ಪ್ರಶ್ನೆಗಳನ್ನು ಕೇಳಬಹುದು. ಆ ಪ್ರಶ್ನೆಗಳಿಗೆ ನುರಿತ ತಜ್ಞ ಸಾಹಿತಿ ಅಥವಾ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರವನ್ನ ನೀಡುವುದರ ಮೂಲಕ ವಾರ ವಾರ ಅಥವಾ ತಿಂಗಳು ಒಂದು ರೀತಿಯಲ್ಲಿ ಕಾಯುವಂತೆ ಮಾಡುತ್ತಾರೆ. ಆದುದರಿಂದಾಗಿ ಆ ಪ್ರಶ್ನೆ ಅಂಕಣ ಜನಪ್ರಿಯತೆ ಗಳಿಸುತ್ತದೆ. ಜೊತೆಗೆ ಇಡೀ ಸಂಚಿಕೆಗೆ ಮೆರಗು ನೀಡುತ್ತದೆ.

ಕರ್ನಾಟಕದ ಜನಪ್ರಿಯ ವಾರಪತ್ರಿಕೆಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಪ್ರಜಾವಾಣಿ ದಿನಪತ್ರಿಕೆಯ ಸೋದರಿ  “ಸುಧಾ” ವಾರಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಪ್ರಕಟವಾಗುತ್ತಿರುವ ನೀವು ಕೇಳಿದಿರಿ? ಪ್ರಶ್ನೋತ್ತರ ಅಂಕಣ ಇವತ್ತಿಗೂ ಕೂಡ ಜನಪ್ರೀತಿಯನ್ನು, ಜನಪ್ರಿಯತೆಯನ್ನ ಗಳಿಸಿದೆ.  ಇದಕ್ಕಾಗಿ ಒಂದು ಪುಟವನ್ನೇ ಮೀಸಲಿಟ್ಟಿದ್ದಾರೆ. ಈ ಅಂಕಣಕ್ಕೆ  ರಾಜ್ಯದ ಹಳ್ಳಿ, ತಾಲೂಕು, ಜಿಲ್ಲೆಗಳಿಂದ ಅನೇಕ ಓದುಗರು ಪ್ರಶ್ನೆಗಳನ್ನು ಕೇಳುತ್ತಾರೆ.

ಪೋಸ್ಟ್ ಕಾರ್ಡಿನಲ್ಲಿ ಕೂಡ ಪ್ರಶ್ನೆ ಕೇಳಬಹುದು. ಈಗ ತಂತ್ರಜ್ಞಾನ ಬೆಳೆದಂತೆ ಮೇಲ್ ಮೂಲಕ ಪ್ರಶ್ನೆಗಳನ್ನು ಕೇಳಬಹುದಾಗಿದೆ. ನನ್ನ ಸಂಗ್ರಹಾಲಯದಲ್ಲಿ ಕಳೆದ 30 ವರ್ಷಗಳ ಸುಧಾ ಸಂಚಿಕೆ ಗಳು ಇವೆ. ಸಮಯ ಸಿಕ್ಕಾಗಲೆಲ್ಲ ನೀವು ಕೇಳಿದಿರಿ ಅಂಕಣವನ್ನ ನಾನು ಓದುತ್ತೇನೆ.  ನನ್ನ ಮನಸ್ಸಿಗೆ ಹೇಳಿಕೊಳ್ಳಲಾಗದ ರೀತಿಯಲ್ಲಿ ಮುದ ಸಿಗುತ್ತದೆ!. ಅಲ್ಲಿ ಪ್ರಕಟವಾಗುವ ಒಂದು ಪ್ರಶ್ನೆ ಅಥವಾ ಒಂದು ಉತ್ತರ ಒಂದು ಪುಟವನ್ನ ಬರೆಯಲು ಶಕ್ತಿ ನೀಡುತ್ತದೆ!. ಒಂದು ರೀತಿಯಲ್ಲಿ ಟಾನಿಕ್ ಸಿಗುವಂತೆ ಮಾಡುತ್ತದೆ!.

ಪ್ರಾರಂಭದಿಂದಲೂ ಕೂಡ ವಾರಕ್ಕೆ ಒಂದು ಬಹುಮಾನದ ಪ್ರಶ್ನೆಯನ್ನು ಆಯ್ಕೆ ಮಾಡುತ್ತಾರೆ. ಬಹುಮಾನದ ಪ್ರಶ್ನೆಗೆ ನಗದು ರೂಪದ ಉಡುಗೊರೆ ಸಿಗುತ್ತದೆ. ಜೊತೆಗೆ ಮೂರ್ನಾಲ್ಕು ಪ್ರಶ್ನೆಗಳಿಗೆ ಆಕರ್ಷಕ ಚಿತ್ರಗಳನ್ನು ನೀಡುತ್ತಾರೆ. ನಾನು ಕೂಡ ಸುಧಾ ವಾರಪತ್ರಿಕೆಯಲ್ಲಿ ಹತ್ತಕ್ಕೂ ಹೆಚ್ಚು ಬಹುಮಾನ ಪಡೆದಿದ್ದೇನೆ. ನಾನು ಸಂಚಿಕೆ ಬಂದೊಡನೆ ಬೇಗ ಓದುತ್ತೇನೆ. ಏನೋ ಒಂದು ರೀತಿಯಲ್ಲಿ ಹಾಸ್ಯ, ಗಂಭೀರ ಚಿಂತನೆ, ಲವಲವಿಕತೆ ಮನದಲ್ಲಿ ಮೂಡುತ್ತದೆ.

ನನಗೆ ಆ ಕ್ಷಣದಲ್ಲಿ ಏಳೆಂಟು ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ!. ಅದನ್ನು ನಾನು ಮತ್ತೆ ಕೇಳುತ್ತೇನೆ. ಇದೇ ರೀತಿ “ಲಂಕೇಶ್ ಪತ್ರಿಕೆ”ಯಲ್ಲಿಯೂ ಕೂಡ  “ಕಾಡೆಗೂಡೆ”- ಎಂಬ ಶೀರ್ಷಿಕೆಯ ಪ್ರಶ್ನೋತ್ತರ ಅಂಕಣವನ್ನು ಪ್ರತಿವಾರ ತಪ್ಪದೆ ಪ್ರಕಟ ಮಾಡುತ್ತಾ ಬಂದಿದ್ದರು. ಇಲ್ಲಿಯೂ ಕೂಡ ಅತ್ಯುತ್ತಮ ಪ್ರಶ್ನೆ ಕೇಳಿದವರಿಗೆ ನೂರು ನಗದು ಬಹುಮಾನ ನೀಡುತ್ತಿದ್ದರು. ಲಂಕೇಶರ ನಿಧನದ ನಂತರವೂ ಕೂಡ ಅವರ ಮಕ್ಕಳು ಗೌರಿ ಲಂಕೇಶ್, ಮತ್ತು ಇಂದ್ರಜಿತ್ ಲಂಕೇಶ್ ಎರಡು ಪತ್ರಿಕೆಗಳನ್ನೂ ಮತ್ತೆ ಹೊರ ತಂದಾಗಲು ಕೂಡ ಅಂಕಣಗಳು ಮುಂದುವರೆದವು. ಈಗ ಪ್ರಶ್ನೆಗಳ ಅಂಕಣ ಬರುತ್ತಿಲ್ಲ.

ಮೈಸೂರಿನ ಜನಪ್ರಿಯ ಪತ್ರಿಕೆಗಳಲ್ಲಿ ಒಂದಾದ “ಮೈಸೂರು ಮಿತ್ರ” ದಿನಪತ್ರಿಕೆಯಲ್ಲೂ ಕೂಡ “ನೀವು ಕೇಳುವಿರಾ?” ಅಂಕಣ ಭಾನುವಾರದ ವಾರದ ಮಿತ್ರದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿತ್ತು. ಈಗ ನಿಂತಿದೆ. ಜೊತೆಗೆ “ಮಹಾನಂದಿ” ದಿನಪತ್ರಿಕೆಯೂ ಕೂಡ “ವಸಂತಾಯಣ” ಶೀರ್ಷಿಕೆಯ ಪ್ರಶ್ನೋತ್ತರ ಅಂಕಣವನ್ನು ಕೂಡ ಪ್ರಾರಂಭಿಸಿತ್ತು. ಈಗ ಆ ಪತ್ರಿಕೆ ಪ್ರಕಟವಾಗುತ್ತಿಲ್ಲ. ಇನ್ನು “ಹಾಯ್ ಬೆಂಗಳೂರ್”  ರವಿ ಬೆಳಗೆರೆಯವರ ಸಾರಥ್ಯದ ವಾರಪತ್ರಿಕೆಯಲ್ಲೂ ಕೂಡ “ಕೇಳಿ” ಎಂಬ ಹೆಸರಿನ ಅಂಕಣವು ಕೂಡ ಬಹಳಷ್ಟು ವರ್ಷಗಳಿಂದ ಬಂದಿತು. ಈಗ ಅವರ ನಿಧನದ ನಂತರ ಅವರ ಮಗಳು ಭಾವನಾ ಬೆಳಗೆರೆ ಮತ್ತೆ ಪತ್ರಿಕೆಯನ್ನು ಹೊರಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಆ ಸಂಚಿಕೆಗಳಲ್ಲೂ ಕೂಡ ಕೇಳಿ ಅಂಕಣ ಮುಂದುವರೆಯುತ್ತಿದೆ.

ಜೊತೆಗೆ “ಕನ್ನಡಪ್ರಭ” ದಿನಪತ್ರಿಕೆಯ “ಸಾಪ್ತಾಹಿಕ ಪ್ರಭಾ”ದಲ್ಲಿ ಪ್ರಕಟವಾಗುತ್ತಿದ್ದ “ಘ್ನಾನಪೀಠ” ಚುರುಕಾದ ಪ್ರಶ್ನೆ ಉತ್ತರಗಳಿಂದ ಗಮನಸೆಳೆಯುತ್ತಿತ್ತು. ತುಷಾರ ಮಾಸಪತ್ರಿಕೆಯಲ್ಲಿಯೂ ಕೂಡ ಪ್ರಶ್ನೆಗಳ ಅಂಕಣವಿತ್ತು. ಈಗ ವಿಜಯವಾಣಿ, ವಿಶ್ವವಾಣಿ ದಿನಪತ್ರಿಕೆಯಲ್ಲಿ ಕೂಡ ದಿನಾಲೂ  ಪ್ರಶ್ನೆಗಳ ಉತ್ತರ ಬರುತ್ತವೆ. ಆಕಾಶವಾಣಿ ದೂರದರ್ಶನ ಮುಂತಾದ ಪ್ರಭಾವಿ ಸಂಪರ್ಕ ಮಾಧ್ಯಮಗಳಲ್ಲೂ ಕೂಡ ಕೇಳುಗರು ವೀಕ್ಷಕರು ತಮ್ಮ ಪ್ರಶ್ನೆಗಳನ್ನ ಕೇಳಿ ಸಂಬಂಧ ಪಟ್ಟ ತಜ್ಞರಿಂದ ಉತ್ತರ ಪಡೆಯುವ ಸವಲತ್ತುಗಳನ್ನು ಕೂಡ ಮಾಡುತ್ತಾ ಬರುತ್ತಿದ್ದಾರೆ. ಒಬ್ಬರು ಕೇಳಿದ ಪ್ರಶ್ನೆ ಮತ್ತಷ್ಟು ಜನರ ಪ್ರಶ್ನೆಯೂ ಕೂಡ ಆಗಿರುತ್ತದೆ. ಆದುದರಿಂದಾಗಿ ಅವರಿಗೆ ಉತ್ತರ ದೊರೆಯುತ್ತದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ರಾಜ್ಯದ ಅನೇಕ ಬಗೆ ಬಗೆಯ ಓದುಗರು ತಮ್ಮದೇ ಆದ ಧಾಟಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಇದರಿಂದ ಅವರ ಹೆಸರು ಕೂಡ ಚಿರಪರಿಚಿತವಾಗಿರುತ್ತದೆ. ಹಲವರು ಆರಂಭದಲ್ಲಿ ಸಣ್ಣಪುಟ್ಟ ಪ್ರಶ್ನೆಗಳನ್ನ ಕೇಳುವುದರ ಮೂಲಕ ದೊಡ್ಡ ಲೇಖಕರಾಗಿಯೂ ಕೂಡ ಕನ್ನಡ ಸಾಹಿತ್ಯ ಲೋಕದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.     ಈ ಕ್ಷಣದಲ್ಲಿ ನನಗೆ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ!. ಇದಕ್ಕೂ ನಮ್ಮ ಮನದಲ್ಲಿ ಅಜ್ಞಾತವಾಗಿ ಅನೇಕ ಪ್ರಶ್ನೆಗಳು ಮೂಡುತ್ತಿದ್ದವು. ಏನೋ ಒಂದು ರೀತಿಯಲ್ಲಿ ಕುತೂಹಲ.

ನಾವು ಜಮೀನಿಗೆ ಹೊಲಕ್ಕೆ ಹೋದಾಗ ಅಲ್ಲಿ ಕಾಣಸಿಗುವ ಪ್ರಕೃತಿಯ ವಿಸ್ಮಯಗಳು, ಹೂವುಗಳು, ಬಗೆ ಬಗೆಯ ಕೀಟಗಳು, ನಾವು ಬೆಳೆಯುವ ಆಹಾರ ಪದಾರ್ಥಗಳು ಹಣ್ಣುಗಳನ್ನು ಸವಿಯುವಾಗ ಹೀಗೆ ಒಂದು ಎರಡೇ? ನಮ್ಮ ಮನದಲ್ಲಿ ಮೂಡುತಿದ್ದ ಅನೇಕ ಪ್ರಶ್ನೆಗಳನ್ನು ಹೊರ ಹಾಕುವ ಪ್ರಯತ್ನ ಮಾಡುವ ಧೈರ್ಯವು ಇರುತ್ತಿರಲಿಲ್ಲ. ಒಮ್ಮೊಮ್ಮೆ ನಾವು ಕೇಳಿದರೆ ದೊಡ್ಡವರು ನಮ್ಮನ್ನ ಬೈದು ಬಿಡುತ್ತಿದ್ದರು. ನಿನ್ನ ಕೆಲಸ ನೀವು ನೋಡಿಕೊಳ್ಳಿ, ಬರೆದುಕೊಳ್ಳಿ. ಇದೇ ಮಾತು ಬರುತ್ತಿತ್ತು. ಅದು ಮುಂದುವರೆದು ಈಗಿನ ಬಾಲ್ಯದ ದಿನಗಳಲ್ಲೂ ಕೂಡ ನಾವು ಕಂಡುಬರುವ ಸಾಮಾನ್ಯ ಸಮಸ್ಯೆ ಇದಾಗಿದೆ.

ಏಕೆಂದರೆ ಮಕ್ಕಳು ತಮ್ಮ ಯೋಜನಾ ಲಹರಿಯೊಂದಿಗೆ ಇರುತ್ತಾರೆ. ಅದರಿಂದಾಗಿ ಅವರಿಗೆ ಪ್ರತಿಯೊಂದೂ ವಿಷಯದಲ್ಲೂ ಕೂಡ ಪ್ರಶ್ನೆ ಕೇಳುವ ಮನೋಭಾವ ಅತಿ ಹೆಚ್ಚಾಗಿ ಮೂಡಿರುತ್ತದೆ. ನಾವು ಅಂತಹ ಸಂದರ್ಭದಲ್ಲಿ ಮಕ್ಕಳನ್ನ ದೂಷಣೆ ಮಾಡದೆ ಅವರು ಕೇಳುವ ಪ್ರಶ್ನೆಯನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಆ ಕ್ಷಣದಲ್ಲಿ ನಮಗೆ ಉತ್ತರ ದೊರೆಯದಿದ್ದರೂ ಕೂಡ ಮೊದಲು ಪ್ರಶ್ನೆಗಳನ್ನ ಟಿಪ್ಪಣಿ ಮಾಡಿಕೊಳ್ಳಬೇಕು ಅಥವಾ ಆ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು. ಇಲ್ಲದಿದ್ದರೆ ತಕ್ಷಣದ ಉತ್ತರವನ್ನಾದರೂ ನೀಡಿ. ಅದೇ ಪ್ರಶ್ನೆಗಳನ್ನ ನಾವು ಬೇರೆ ಕಡೆ ವಿಚಾರಿಸಿ ನಂತರ ಅವರಿಗೆ ಅರ್ಥವಾಗುವ ರೀತಿಯಲ್ಲಿ ಉತ್ತರ ನೀಡಬೇಕು.

ಅದು ಬಿಟ್ಟು ಮಕ್ಕಳನ್ನು ಒಂದು ರೀತಿಯಲ್ಲಿ ತರಲೆ ಪ್ರಶ್ನೆ ಕೇಳಬೇಡ ನೀನು ಬರೀ ಓದ್ಕೋ ಎನ್ನುವ ಮಾತಿನಿಂದ ನಾವು ದೊಡ್ಡವರು ಹೊರಬರಲೇಬೇಕು. ಯಾಕೆಂದರೆ ಮಕ್ಕಳು ತಮ್ಮ ಬಾಲ್ಯದಲ್ಲಿ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಸಿಗದೇ ಮುಂದೊಂದು ದಿನ ಏನಾದರೂ ಬದಲಾವಣೆ ಆಗಬಹುದು. ಅವರ ಆ ಹಂತದ ಓದಿನ ಸಮಯದಲ್ಲಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗುವಂತೆ ನೋಡಿಕೊಳ್ಳಬೇಕು. ನಾವು ಅವರ ಪ್ರಶ್ನೆಗೆ ಉತ್ತರಿಸುತ್ತಾ ಬಂದರೆ ಅವರು ತರಗತಿಯಲ್ಲಿಯೂ ಕೂಡ ಶಿಕ್ಷಕರು ಪಾಠ ಮಾಡಿದ ನಂತರ ಪ್ರಶ್ನೆಗಳನ್ನು ಕೇಳುತ್ತಾರೆ. ತಮಗೆ ಅರ್ಥವಾಗದಿದ್ದರೆ ಮತ್ತೆ ಮತ್ತೆ ಕೇಳುವುದರ ಮೂಲಕ ಕಬ್ಬಿಣದ ಕಡಲೆಯಂತಹ ವಿಷಯಗಳನ್ನು ಸರಳಿಕರಣ ಗೊಳಿಸಿಕೊಳ್ಳುತ್ತಾರೆ.

ನಮ್ಮ ಮನದಲ್ಲಿ ಪ್ರಶ್ನೆಗಳನ್ನು ಇಟ್ಟುಕೊಳ್ಳದೆ ಅದನ್ನು ಯಾವುದಾದರೂ ಒಂದು ರೂಪದಲ್ಲಿ ಹೊರ ಹಾಕಲೇಬೇಕು. ಆಗ ನಮ್ಮ ಮನಸ್ಸು ನಿರಂಬಳವಾಗಿ ಇರುತ್ತದೆ. ನಾನು ಮೊದಲೇ ಹೇಳಿದಂತೆ ಈ ಪ್ರಶ್ನೆಗಳ ಸುತ್ತಮುತ್ತ ಉತ್ತರಗಳ ಸುತ್ತಮುತ್ತ ಒಂದು ಚೌಕಟ್ಟನ್ನ ಹಾಕಿಕೊಂಡಿದ್ದೇವೆ. ಅದರಿಂದ ಹೊರ ಬರಬೇಕು. ಪ್ರಖ್ಯಾತ ಹಾಸ್ಯ ಸಾಹಿತಿ ಬೀಚಿ ರವರು, ನಾ ಕಸ್ತೂರಿ ರವರು ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಜೊತೆಗೆ ತಾವೇ ಪ್ರಶ್ನೆ ಮತ್ತು ಉತ್ತರವನ್ನು ಕೂಡ ನೀಡಿ, ಅನೇಕ ಪುಸ್ತಕಗಳನ್ನು ಕೂಡ ಪ್ರಕಟಿಸಿದ್ದಾರೆ. ಇದರಿಂದಾಗಿ ಆ ಪ್ರಶ್ನೆ ಮತ್ತು ಉತ್ತರವಿರುವ ಸಂಚಿಕೆಗಳು ಎಲ್ಲರ ಗಮನ ಸೆಳೆಯುತ್ತವೆ.

ಕೇಳುವುದರ ಮೂಲಕವೇ ಅನೇಕರು ತಮ್ಮ ಬರವಣಿಗೆಯ ಜೀವನವನ್ನು ಆರಂಭಿಸಿದ್ದಾರೆ. ಇಂತಹ ಒಂದು ಸಂದರ್ಭದಲ್ಲಿ ಏಕೆ ಒಂದು ಕಾರ್ಯಕ್ರಮವನ್ನ ಆಯೋಜನೆ ಮಾಡಬಾರದು ಎಂದು ನನ್ನ ಮನದಲ್ಲಿ ಬಹಳಷ್ಟು ವರ್ಷಗಳಿಂದ ಮೂಡಿ ಬರುತ್ತಿತ್ತು. ಪ್ರತಿ ಗುರುವಾರ ಸುಧಾ ವಾರಪತ್ರಿಕೆ ಕಾಂಪ್ಲೆಕ್ಸ್ ನ ಅರಸು, ಶಂಕರ ರವರ ಅಂಗಡಿಯಲ್ಲಿ ಬಂದಾಗ ನಮ್ಮ ನಾಲ್ಕೈದು ಜನ ಸ್ನೇಹಿತರು ಒಟ್ಟಾಗಿ ಸೇರುತ್ತಿದ್ದೆವು. ಈ ವಾರ ಯಾರಿಗೆ ಬಹುಮಾನಿತ ಪ್ರಶ್ನೆ ಬಂದಿದೆ. ಜೊತೆಗೆ ನಮ್ಮ ಪ್ರಶ್ನೆಗಳು ಬಂದಿದ್ದಾವೆ. ಎಂಬಿತ್ಯಾದಿ ಪ್ರಶ್ನೆಗಳನ್ನ ನಮ್ಮ ಮನದಲ್ಲಿ ಮೂಡಿಸುತ್ತ ಆ ದಿನ ನಾವು ಸುಧಾ ಬರುವ ದಾರಿಯನ್ನೇ ಕಾಯುತ್ತಿದ್ದೆವು. ಬರಬರುತ್ತ ಈ ಕುರಿತಾಗಿಯೇ ನೀವು ಕೇಳಿದಿರಿ? ವಾಟ್ಸಾಪ್ ಬಳಗ ಕೂಡ ಪ್ರಾರಂಭವಾಗಿದೆ.

ನಾವು ಅಲ್ಲಿಯೂ ಕೂಡ ನೇರವಾಗಿ ಕೇವಲ ಪ್ರಶ್ನೆಗಳನ್ನು ಕೇಳಬಹುದು. ಆ ಪ್ರಶ್ನೆಯ ಮೂಲಕ ಸಂಪನ್ಮೂಲ ವ್ಯಕ್ತಿಗಳು ಪ್ರಶ್ನೆಗಳಿಗೆ ಉತ್ತರಿಸಿ, ಸುಧಾ ಕಚೇರಿಗೆ ತಲುಪಿಸುತ್ತಾರೆ. ಇದು ಒಂದು ರೀತಿಲಿ ನಿರಂತರ ಪ್ರಕ್ರಿಯೆಯಗಿದೆ. ಯಾಕೆ ಆ ಯೋಜನೆ ಬಂದಿತೋ ಎಂದರೆ ನಮಗೆ ಗೊತ್ತಿಲ್ಲದ ಅಪರಿಚಿತ ಅನೇಕ ಓದುಗರು ಬೇರೆ ಬೇರೆ ಭಾಗಗಳಿಂದ ಪ್ರಶ್ನೆಗಳನ್ನು ಕೇಳುತ್ತಾರೆ ಅವರನ್ನು ಚಿರಪರಿಚಿತರನ್ನಾಗಿ ಮಾಡುವುದೇ ಇದರ ಉದ್ದೇಶ. ಆದುದರಿಂದಾಗಿ ಒಂದು ರೀತಿಯಲ್ಲಿ ಸ್ನೇಹದ ವಾತಾವರಣ ನಿರ್ಮಾಣವಾಗುತ್ತದೆ. ಆದುದರಿಂದಾಗಿ ಸುಧಾದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಅಣಕು ರಾಮನಾಥ ರವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಮೈಸೂರಿಗೆ ಆಗಮಿಸುವ ಸುದ್ದಿ ತಿಳಿಯಿತು.

ಇದರಿಂದಾಗಿ ನಾನು ಪೂರ್ವ ಪೀಠಿಕೆಯಂತೆ ಒಂದು ಕಾರ್ಯಕ್ರಮವನ್ನು ಏಕೆ ಆಯೋಜನೆ ಮಾಡಬಾರದು ಎಂದು ನನ್ನ ಸ್ನೇಹಿತರೊಟ್ಟಿಗೆ ಚರ್ಚಿಸಿದಾಗ ತಕ್ಷಣವೇ ಈ ಕಾರ್ಯಕ್ರಮ ಆಯೋಜನೆ ಗೊಳ್ಳಲು ಸಿದ್ಧವಾಯಿತು. ಆ ಅಂತಿಮ ಕ್ಷಣ ಬಂದೇ ಬಿಟ್ಟಿತು. ಬರುವ ಭಾನುವಾರ ಅಂದರೆ 22.02.2026 ರ ಸಂಜೆ 4:30 ಗಂಟೆಗೆ ಮೈಸೂರಿನ ಕುವೆಂಪು ನಗರದಲ್ಲಿರುವ ಕಲಾಸುರುಚಿ ಮನೆಯಂಗಳದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಅದರ ವಿವರ ಈ ಹೀಗಿದೆ.. ದೀಪ್ತಿ ಸಾಂಸ್ಕೃತಿಕ ವೇದಿಕೆ ರಾಮಕೃಷ್ಣನಗರ ಮೈಸೂರು ಇವರ ವತಿಯಿಂದ “ಉತ್ತರಾಯಣ”- ನವಿರಾದ ಪ್ರಶ್ನೆಗಳಿಗೆ ಸ್ವಾರಸ್ಯಕರವಾದ ಉತ್ತರ!.- ಈ ಕುರಿತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸ್ಥಳ:- ಸುರುಚಿ ರಂಗಮನೆ, ಕುವೆಂಪು ನಗರ, ಮೈಸೂರು. ದಿನಾಂಕ:- 22.02.2026 ರ ಸಂಜೆ 4:30 ಗಂಟೆಗೆ. ಭಾನುವಾರ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅಣಕು ರಾಮನಾಥ್, ಲೇಖಕರು, ವಿಮರ್ಶಕರು ಬೆಂಗಳೂರು ಇವರು ಮಾಡುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ ನರಸಿಂಹಮೂರ್ತಿ, ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ಬ್ಯೂರೋ ಮುಖ್ಯಸ್ಥರು, ಮೈಸೂರು ರವರು ವಹಿಸುವರು.

ವೇದಿಕೆಯಲ್ಲಿ  ಶ್ರೀ  ಕೊ ಸು ನರಸಿಂಹಮೂರ್ತಿ, ಲೇಖಕ, ಹಿರಿಯ ನಾಗರಿಕ, ಚಾಮರಾಜಪುರಂ ಮೈಸೂರು.  ಮತ್ತು ಶ್ರೀ ಕಣ್ಣೂರು ವಿ ಗೋವಿಂದಾಚಾರಿ, ನಿವೃತ್ತ  ಶುಶ್ರೂಷ ಮೇಲ್ವಿಚಾರಕರು, ಆರ್ ಎಂ ಪಿ, ಮೈಸೂರು. ರವರು ಉಪಸ್ಥಿತರಿರುವರು. ವಿಶೇಷ ಸೂಚನೆ ಏನೆಂದರೆ? ಶಾಂತೇಶ್ವರ ಸಾಂಸ್ಕೃತಿಕ ಮತ್ತು ಕಲಾ ವೇದಿಕೆಯ ವೈಭವಿ ಮೆಲೋಡಿಸ್ ರವರಿಂದ ಭಕ್ತಿ ಗೀತೆ, ಭಾವಗೀತೆಗಳ ಸಂಗೀತ ಕಾರ್ಯಕ್ರಮ. 3:30 ರಿಂದ 4:30ರ ವರೆಗೆ ಇರುವುದು. ಈ ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರಿಯರು, ಓದುಗರು, ನಾಗರಿಕರು  ಭಾಗವಹಿಸಲು ಕೋರಿಕೊಳ್ಳುತ್ತೇವೆ. ಸಂಪರ್ಕಕ್ಕಾಗಿ ಕಾಳಿಹುಂಡಿ ಶಿವಕುಮಾರ್,  ರಾಮಕೃಷ್ಣನಗರ, ಮೈಸೂರು 9844883581 ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತಾಗಲಿ ಎಂಬುದೇ ನಮ್ಮೆಲ್ಲರ ಆಶಯ.

 

admin
the authoradmin

Leave a Reply

Translate to any language you want