ಮದ್ದೂರು: ಆರೋಗ್ಯಪೂರ್ಣ ಸಮಾಜದ ಉನ್ನತಿಗೆ, ಪ್ರಜಾಪ್ರಭುತ್ವದ ಯಶಸ್ಸಿಗೆ, ಜನ ಸಮುದಾಯದಲ್ಲಿ ಜ್ಞಾನದ ಜೊತೆಗೆ ನಾಗರಿಕ, ವೈಚಾರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಜಾಗೃತವಾಗಲು ಗುಣಮಟ್ಟದ ಶಿಕ್ಷಣ ಸಹಕಾರಿಯಾಗಿದೆ ಎಂದು ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೆ.ಎಂ. ದೊಡ್ಡಿಯ ಭಾರತೀ ಎಜುಕೇಶನ್ ಟ್ರಸ್ಟಿನ ಆವರಣದಲ್ಲಿರುವ ಭಾರತೀ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ನಡೆದ ಬಿ.ಇಡಿ. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ವಿತರಣೆಯ ‘ನವಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿ ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕಾದರೆ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ತುಂಬಾ ಮುಖ್ಯ. ಈ ಎರಡೂ ಸ್ವಾಸ್ಥ್ಯ ಲಭಿಸುವುದು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ಮಾತ್ರ. ಆದ್ದರಿಂದಲೇ ಸರ್ಕಾರ ಹಾಗೂ ಜನರು ತಮ್ಮ ಸಂಪಾದನೆಯ ಸಿಂಹಪಾಲನ್ನು ಶಿಕ್ಷಣ ಮತ್ತು ಆರೋಗ್ಯದ ಮೇಲೆ ವೆಚ್ಚ ಮಾಡುತ್ತಿರುವುದನ್ನು ಪ್ರಸಕ್ತ ಸಂದರ್ಭದಲ್ಲಿ ಕಾಣಬಹುದಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೈಗೂಡಿದಾಗ ಸಾಧಿಸುವ ಛಲ ಬಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಹತ್ತರ ಸಾಧನೆಗೆ ಆಳವಾದ ಅಧ್ಯಯನವು ನೆರವಾಗಬಲ್ಲದು. ವಿದ್ಯಾರ್ಥಿಗಳು ಜಾಗತಿಕ ಜ್ಞಾನದ ಶಾಖೆಗಳನ್ನು ತಮ್ಮದಾಗಿಸಿಕೊಳಲು ತರಗತಿಯ ಪಠ್ಯಪುಸ್ತಕಗಳ ಜೊತೆಗೆ, ಸಾಹಿತ್ಯದ ಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ಅತ್ಯಾಸಕ್ತಿಯಿಂದ ವಿಸ್ತೃತವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ಎಲ್ಲಾ ಇಲಾಖೆಗಳ ನೌಕರರು ನಿರ್ಜೀವ ಕಡತಗಳ ಜೊತೆ ವ್ಯವಹರಿಸಿದರೆ, ಶಿಕ್ಷಣ ಇಲಾಖೆಯ ನೌಕರರಾಗಿರುವ ಶಿಕ್ಷಕರು ಮಾತ್ರ ಸದಾ ಹೂ ಮನಸ್ಸಿನ ಮಕ್ಕಳ ಜೊತೆಗೆ ಸಂವಹನ ಮಾಡುತ್ತಾರೆ. ಆದ್ದರಿಂದಲೇ, ಮಕ್ಕಳಿಗೆ ಅಕ್ಷರ ಜ್ಞಾನದೊಂದಿಗೆ ಸಂಸ್ಕಾರವನ್ನೂ ಕೊಟ್ಟು, ಜೀವನ ಮೌಲ್ಯಗಳನ್ನು ಬೆಳೆಸುವ ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತ ಪರಮ ಶ್ರೇಷ್ಠ ಎಂದು ಸಜಗೌ ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಭಾರತೀ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಲ್. ಸುರೇಶ್ ಮಾತನಾಡಿ, ಶಿಕ್ಷಕರು ಸದಾಕಾಲವೂ ಹಸನ್ಮುಖಿಗಳಾಗಿರಬೇಕು. ಬೋಧನಾ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ತೊಡಗುವ ಮೂಲಕ ಅತ್ಯುತ್ತಮವಾಗಿ ಕಲಿಸಬೇಕು. ನಗುನಗುತ್ತಾ ಉಲ್ಲಾಸದಿಂದ ವೃತ್ತಿಯನ್ನು ನಿರ್ವಹಿಸಿದರೆ ಜೀವನ ಸಾರ್ಥಕತೆ ಉಂಟಾಗುತ್ತದೆ. ಅಂತಹ ಶಿಕ್ಷಕರು ವಿದ್ಯಾರ್ಥಿಗಳ ಮನದಲ್ಲಿ ಉನ್ನತ ಸ್ಥಾನವನ್ನೂ ಪಡೆಯುತ್ತಾರೆ ಎಂದರು.
ವೇದಿಕೆಯಲ್ಲಿ ಬೋಧಕರಾದ ಈ. ಗಂಗೇಗೌಡ, ಹೆಚ್.ಡಿ. ಜ್ಯೋತಿ, ಬಿ.ಎನ್. ಕಿರಣ್, ಹೆಚ್.ಸಿ. ಪೂಜಾ, ಡಿ.ಎಂ. ಶ್ವೇತ ಹಾಗೂ ಬೋಧಕೇತರ ಸಿಬ್ಬಂದಿ ಆರ್. ರಮ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಬಿ.ಇಡಿ. ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಹಿರಿಯ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.








