ಪ್ರಿಯಾಂಕ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು… ಪ್ರೇಮಿಗಳ ದಿನದಂದೇ ‘ಪ್ರೇಮ ನಾಟಕ’ ಬಯಲಾಗಿದ್ದೇಗೆ?

ಹಾಸನ: ಮೈತುಂಬಾ ಚಿನ್ನಾಭರಣ ಧರಿಸಿ ಮದುವೆಗೆ ಹೋಗಿ ಬರುವುದಾಗಿ ಹೇಳಿ ಹೋದ ಇಪ್ಪತ್ತೊಂಬತ್ತು ವರ್ಷದ ಮಹಿಳೆ ಪ್ರಿಯಾಂಕ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಳು… ಆ ನಂತರ ಪ್ರಿಯಾಂಕ ನಾಪತ್ತೆ ಪ್ರಕರಣ ಹಾಸನ ಜಿಲ್ಲೆ ಮಾತ್ರವಲ್ಲದೆ, ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಜನವಲಯದಲ್ಲಿ ತಮ್ಮದೇ ಆದ ಕಟ್ಟು ಕಥೆಗಳು ಹುಟ್ಟಿಕೊಂಡಿದ್ದವು. ಈ ಕಥೆಗಳಿಗೆ ಪುಷ್ಠಿ ನೀಡುವಂತೆ ಆಕೆ ಧರಿಸಿದ್ದ ಬಟ್ಟೆ, ತೆಗೆದುಕೊಂಡು ಹೋಗಿದ್ದ ವ್ಯಾನಿಟಿ ಬ್ಯಾಗ್, ಆಧಾರ್ ಕಾರ್ಡ್ ಎಲ್ಲವೂ ಕೆರೆಯೊಂದರ ಬಳಿ ಸಿಕ್ಕಿತ್ತು.. ಹೀಗಾಗಿ ಪ್ರಿಯಾಂಕ ಸುತ್ತ ಕಥೆಗಳ ಹುತ್ತವೇ ಸೃಷ್ಟಿಯಾಗಿತ್ತು. ಇದೀಗ ದುರಂತ ಕಥೆ ಸುಖಾಂತ್ಯ ಕಂಡಿದ್ದು, ವಿವಾಹಿತೆ ಪ್ರಿಯಾಂಕಳ ಪ್ರೇಮ ನಾಟಕ ಪ್ರೇಮಿಗಳ ದಿನದಂದೇ ಬಯಲಾಗಿದೆ.
ಈ ಪ್ರಕರಣ ಪೊಲೀಸರ ನಿದ್ದೆಗೆಡಿಸಿತ್ತು.. ಜಿಲ್ಲಾಡಳಿತಕ್ಕೆ ತಲೆನೋವಾಗಿತ್ತು. ಅಷ್ಟರಲ್ಲೇ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಶವಕ್ಕಾಗಿ ಶೋಧ ಆರಂಭಿಸಿದ್ದರು. ಕೆರೆಯಲ್ಲಿ ಬೋಟ್ ಗಳ ಮೂಲ ಕಾರ್ಯಾಚರಣೆ ನಡೆಸಿದರೂ ಎಲ್ಲಿಯೂ ಶವ ಸಿಕ್ಕಿರಲಿಲ್ಲ. ಹೀಗಾಗಿ ಪ್ರಿಯಾಂಕ ನಾಪತ್ತೆ ಪ್ರಕರಣ ಸವಾಲ್ ಆಗಿ ಪರಿಣಮಿಸಿತ್ತು. ಅವಳ ಜತೆಗೆ ಗ್ರಾಮದಿಂದ ಮದುವೆಗೆ ಹೋದವರು ಬಂದು ಮನೆ ಸೇರಿದ್ದರೂ ಈಕೆ ಹೇಗೆ ತಪ್ಪಿಸಿಕೊಂಡಳು? ಅವಳ ಕೊಲೆ ನಡೆಯಿತಾ? ಕೊಲೆಗಾರರು ಕೆರೆಗೆ ಎಸೆದು ಹೋದ್ರಾ? ಹೀಗೆ ಹತ್ತು ಹಲವು ಅನುಮಾನಗಳು ಹುಟ್ಟಿಕೊಂಡ ಹಿನ್ನಲೆಯಲ್ಲಿ ಒಂದೆಡೆ ಶೋಧನೆ, ಮತ್ತೊಂದೆಡೆ ತನಿಖೆ ಎಲ್ಲವೂ ಏಕ ಕಾಲದಲ್ಲಿ ನಡೆಯಲಾರಂಭಿಸಿತು.

ಇಷ್ಟಕ್ಕೂ ಪ್ರಿಯಾಂಕ ಯಾರು? ಎಂಬುದನ್ನು ನೋಡುತ್ತಾ ಹೋದರೆ ಈಕೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು, ಮತ್ತಾವರ ಗ್ರಾಮದ ನಿವಾಸಿ. ಪ್ರಿಯಾಂಕ (29) ಕಳೆದ ಹತ್ತು ವರ್ಷಗಳ ಹಿಂದೆ ಯಲಿಯೂರು ಗ್ರಾಮದ ರುದ್ರೇಶ್ ಎಂಬಾತನನ್ನು ವಿವಾಹವಾಗಿದ್ದು, ಈ ದಂಪತಿಗೆ ಒಬ್ಬ ಮಗನಿದ್ದಾನೆ. ಮದುವೆ ನಂತರ ಇವರ ದಾಂಪತ್ಯ ಚೆನ್ನಾಗಿಯೇ ನಡೆಯುತ್ತಾ ಬಂದಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಬಿಹಾರ ಮೂಲದ ಡೇವಿಡ್ ಎಂಬಾತನ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು.
ಹಾಗಾಗಿ ತನ್ನ ಗಂಡ ಮತ್ತು ಮಗನನ್ನು ಬಿಟ್ಟು ಆತನೊಂದಿಗೆ ಹೋಗಿ ಸಂಸಾರ ನಡೆಸುವ ಮಟ್ಟಕ್ಕೆ ಪ್ರಿಯಾಂಕ ಬಂದು ಬಿಟ್ಟಿದ್ದಳು. ಹೀಗಾಗಿ ಎಲ್ಲವನ್ನು ಮೊದಲೇ ಫ್ಲಾನ್ ಮಾಡಿಕೊಂಡಿದ್ದಳು ಫೆ.12ರಂದು ಚಿಕ್ಕಮಗಳೂರಿನಲ್ಲಿ ಸಂಬಂಧಿಕರ ಮದುವೆಯಿತ್ತು. ಹೀಗಾಗಿ ಈ ಮದುವೆ ನೆಪದಲ್ಲಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಧರಿಸಿಕೊಂಡು ಹೋಗಿ ಅಲ್ಲಿಂದ ಡೇವಿಡ್ ಜತೆಗೆ ಎಸ್ಕೇಪ್ ಆಗುವ ತಂತ್ರ ರೂಪಿಸಿದ್ದಳು. ಇದು ಗಂಡ ರುದ್ರೇಶ್ ನ ಗಮನಕ್ಕೆ ಬಂದಿರಲಿಲ್ಲ.
ಹೀಗಾಗಿ ಪ್ರಿಯಾಂಕ ಚಿಕ್ಕಮಗಳೂರಿನಲ್ಲಿ ಮದುವೆ ಮುಗಿಸಿ ತವರು ಮನೆ ಮತ್ತಾವರ ಗ್ರಾಮಕ್ಕೆ ಬಂದು, ಕೆಲ ಸಮಯ ಕಳೆದು ನಂತರ ತಾಯಿ ಜೊತೆ ಕೈಮರ ಗ್ರಾಮಕ್ಕೆ ಬಂದು ಬೇಲೂರಿಗೆ ಬಸ್ ಹತ್ತಿದ್ದಾರೆ. ಬಳಿಕ ಬೇಲೂರಿನಲ್ಲಿ ಬಸ್ ಇಳಿದು ತನ್ನ ಚಿಕ್ಕಮ್ಮ ಸೌಮ್ಯಾ ಅವರಿಗೆ ಕರೆ ಮಾಡಿ ಪರಿಚಯಸ್ಥರು ಸಿಕ್ಕಿದ್ದಾರೆ. ಅವರ ಜೊತೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಪತಿ ರುದ್ರೇಶ್‌ಗೂ ಕರೆ ಮಾಡಿದ್ದ ಪ್ರಿಯಾಂಕ ಕುಣಿಗಲ್‌ಗೆ ಬಂದು ಕರೆದುಕೊಂಡು ಹೋಗಿ ಎಂದಿದ್ದರಂತೆ. ಆದಾದ ಬಳಿಕ ಸೌಮ್ಯ ರಾತ್ರಿ 8:30ರ ಸಮಯದಲ್ಲಿ ಪ್ರಿಯಾಂಕಳ ಫೋನ್ ಸ್ವಿಚ್ ಆಪ್ ಆಗಿತ್ತು. ಹೀಗಾಗಿ ಆಕೆ ಏನಾದಳು ಎಂಬುದು ಗೊತ್ತಾಗಿರಲಿಲ್ಲ. ಮನೆಗೂ ಬಂದಿರಲಿಲ್ಲ. ಆದ್ದರಿಂದ ನಾಪತ್ತೆ ಪ್ರಕರಣ ದಾಖಲಾಗಿತ್ತು.

ನಿಗೂಢ ನಾಪತ್ತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆಕೆಯ ಬಟ್ಟೆ, ಬ್ಯಾಗ್, ಚಪ್ಪಲಿ ಹೆದ್ದಾರಿ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಕೊಲೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಕೆರೆಯಲ್ಲಿ ಶೋಧ ನಡೆಸಲಾಗಿತ್ತು. ಇಡೀ ದಿನ ಶೋಧ ನಡೆಸಿದರೂ ಕೆರೆಯಲ್ಲಿ ಮಹಿಳೆಯ ಗುರುತು ಪತ್ತೆಯಾಗಲಿಲ್ಲ. ಕೊಲೆ ಮಾಡಿ ಕೆರೆಯಲ್ಲಿ ಎಸೆಯಲಾಗಿದೆ ಎನ್ನುವ ಅನುಮಾನದಲ್ಲಿ ಶೋಧ ನಡೆಸಲಾಗಿತ್ತು.
ಇದೀಗ ಪ್ರಿಯಾಂಕ ಮಾಡಿದ್ದ ನಾಟಕ ಬಯಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು, ಅಥವಾ ಕಿಡ್ನಾಪ್ ಆಗಿರಬಹುದು ಎಂಬ ಸಂಶಯ ಬರುವಂತೆ ಮಾಡಿ ತಾನು ತನ್ನ ಪ್ರಿಯಕರನ ಜತೆ ಓಡಿ ಹೋಗಿ ಸಂಸಾರ ನಡೆಸಿಕೊಂಡು ಹೋಗುವ ಐಡಿಯಾ ಉಲ್ಟಾ ಹೊಡೆದಿದೆ. ಪೊಲೀಸರು ನಾಪತ್ತೆಯಾಗಿದ್ದ ಪ್ರಿಯಾಂಕಳನ್ನು ಕುಣಿಗಲ್ ನಲ್ಲಿ ಪತ್ತೆ ಮಾಡಿದ್ದಾರೆ. ಆಕೆಯ ವಿಚಾರಣೆ ವೇಳೆ ಎಲ್ಲವೂ ನಾಟಕ ಎಂಬುದು ಗೊತ್ತಾಗಿದೆ. ಇಡೀ ವ್ಯವಸ್ಥೆಯ ದಾರಿ ತಪ್ಪಿಸಿದ್ದ ಪ್ರಿಯಾಂಕ ಪ್ರಿಯಕರನ ಸಹಿತ ಪೊಲೀಸರ ಅತಿಥಿಯಾಗಿದ್ದು, ಮುಂದಿನ ಕ್ರಮವನ್ನು ಪೊಲೀಸರು ಕೈಗೊಳ್ಳಲಿದ್ದಾರೆ.
ಇನ್ನೂ ಹೆಚ್ಚಿನ ಕ್ರೈಂಸ್ಟೋರಿ ಮತ್ತು ಸುದ್ದಿಗಳಿಗೆ ಇದರ ಮೇಲೆ ಕ್ಲಿಕ್ ಮಾಡಿ…







