ಮೈಸೂರು: ಚಾಮುಂಡೇಶ್ವರಿ ಬೆಟ್ಟದ ದರ್ಶನ ಹಾಗೂ ಸೇವೆಗಳ ಶುಲ್ಕಗಳನ್ನು ರಾಜ್ಯ ಸರಕಾರ ಹೆಚ್ಚಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಕರ್ನಾಟಕ ಸೇನಾ ಪಡೆ ಇದನ್ನು ಖಂಡಿಸಿದ್ದಲ್ಲದೆ, ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ತನ್ನ ಆಕ್ರೋಶವನ್ನು ಹೊರ ಹಾಕಿದೆ.
ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಚಾಮುಂಡಿಬೆಟ್ಟದಲ್ಲಿ ದೇವಸ್ಥಾನದಿಂದ ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ದರವನ್ನು 15 ರೂ.ನಿಂದ 25 ರೂಪಾಯಿಗೆ ಏಕಾಏಕಿ ಹೆಚ್ಚಿಸಿರುವುದು ಸರಿಯಲ್ಲ. ಜತೆಗೆ ಲಡ್ಡುವಿನ ಗುಣಮಟ್ಟವಂತೂ ತೀರಾ ಕಳಪೆಯಾಗಿದೆ. ದೇವಿ ದರ್ಶನಕ್ಕೆ ಪ್ರವೇಶ ದರ 30 ರೂ., ನಿಂದ 50 ರೂ.ಗೆ, 100 ರೂ. ನಿಂದ 200 ರೂ.ಗೆ ಹೆಚ್ಚಿಸಲಾಗಿದೆ. ಚಾಮುಂಡಿಬೆಟ್ಟದ ನಾಮಫಲಕದಲ್ಲಿ 20 ರೂ ನಿಂದ 15ಸಾವಿರದ ತನಕ ವಿಶೇಷ ಸೇವೆಗಳಿವೆ. ಅದರಲ್ಲಿ 220 ಹಾಗೂ 300 ರೂಗಳ ಅಭಿಷೇಕ ಸೇವೆಯನ್ನು ಬಹಳ ಭಕ್ತಾದಿಗಳು ಪ್ರತಿದಿನ ಮಾಡಿಸುತ್ತಿದ್ದು, ಅದನ್ನು ಪ್ರಾಧಿಕಾರ ಈಗ ಅನಧಿಕೃತವಾಗಿ ತೆಗೆದುಹಾಕಿ ಕೇವಲ 550 ರೂಗಳನ್ನು ಅಭಿಷೇಕಕ್ಕಾಗಿ ವಸೂಲಿ ಮಾಡುತ್ತಿದ್ದು, ಭಕ್ತಾಧಿಗಳ ಮೇಲೆ ಸರಕಾರ ಹೊರೆ ಹಾಕುತ್ತಿದೆ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿನಿತ್ಯ ಒಂದಲ್ಲ ಒಂದು ಪದಾರ್ಥಗಳು ಹಾಗೂ ಎಲ್ಲದರ ಬೆಲೆಗಳನ್ನು ಏರಿಕೆ ಮಾಡುತ್ತಿದ್ದು, ರಾಜ್ಯದ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಈಗಾಗಲೇ ಕೋಟ್ಯಂತರ ಆದಾಯವಿರುವ ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡದೆ, ಅವರನ್ನೇ ಲೂಟಿ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ ಎಂದು ದೇವಸ್ಥಾನದಲ್ಲಿ ದರಗಳನ್ನು ಏರಿಸುತ್ತಿರುವುದು ಖಂಡನೀಯ. ಚಾಮುಂಡಿ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳೇ ಸರಿಯಾಗಿ ಇಲ್ಲ. ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ ವ್ಯವಸ್ಥೆ ಹಾಗೂ ಆಯಾಸ ತಣಿಸಿಕೊಳ್ಳಲು ಸಮರ್ಪಕ ತಂಗುದಾಣದ ವ್ಯವಸ್ಥೆಗಳನ್ನು ಮೊದಲು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮೊದಲು 100ರೂ.ಗೆ ವಿಶೇಷ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಈಗ ಒಂದು ಸಾವಿರ ರೂ ಟಿಕೆಟ್ ಪಡೆದರೆ 15 ನಿಮಿಷದಲ್ಲೇ ದರ್ಶನ ಮಾಡಿಸುತ್ತೇವೆ ಎಂದು ಹೇಳಿ ಭಕ್ತಾದಿಗಳಿಂದ ಹಣ ವಸೂಲಿ ಮಾಡುತ್ತಿದೆ. ಈ ಕೂಡಲೇ ಮುಖ್ಯಮಂತ್ರಿಗಳು ಶೀಘ್ರ ಸಭೆ ನಡೆಸಿ ಇದಕ್ಕೆಲ್ಲಾ ಕಡಿವಾಣ ಹಾಕಬೇಕು. ಎಲ್ಲಾ ದರ್ಶನ ಸೇವೆಗಳನ್ನು ಯಥಾಸ್ಥಿತಿಗೆ ತರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಸುರೇಶ್ ಗೋಲ್ಡ್, ಪ್ರಭುಶಂಕರ, ಕೃಷ್ಣಪ್ಪ, ಹನುಮಂತೇಗೌಡ, ಗಿರೀಶ್, ಸಿಂಧುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಮಂಜುಳಾ, ಮಧುವನ ಚಂದ್ರು, ಹೊನ್ನೇಗೌಡ, ತಾಯೂರು ಗಣೇಶ್, ಡಾ.ನರಸಿಂಹೇಗೌಡ, ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.








