ನಮ್ಮ ದೇಶ ನಮ್ಮ ಹೆಮ್ಮೆ… ಪ್ರಾಣ ಒತ್ತೆಯಿಟ್ಟು ದೇಶ ಕಾಯುವ ಯೋಧರಿಗೊಂದು ಸೆಲ್ಯೂಟ್
2019 ಫೆಬ್ರವರಿ 14ರಂದು ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿದೆ.

2019 ಫೆಬ್ರವರಿ 14ರಂದು ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿದೆ. ಉಗ್ರಗಾಮಿಗಳ ಕುಕೃತ್ಯಕ್ಕೆ ಬಲಿಯಾದ ನಮ್ಮ ಯೋಧರನ್ನು ನೆನೆಯುವ ದಿನವಾಗಿದೆ.. ದೇಶಕ್ಕಾಗಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ.. ದೇಶಕ್ಕಾಗಿ ಹಗಲಿರುಳು ದುಡಿಯುವ ಯೋಧರನ್ನು ನೆನಪಿಸಿಕೊಳ್ಳುತ್ತಾ… ಅಂಥ ಯೋಧರನ್ನು ದೇಶಕ್ಕೆ ನೀಡಿದ ಕುಟುಂಬಕ್ಕೆ ಧನ್ಯವಾದವನ್ನು ಶಿಕ್ಷಕಿ ಕವಿತಾ ಪುಟ್ಟೇಗೌಡ ಅವರು ಬರಹದ ಮೂಲಕ ಸಲ್ಲಿಸಿದ್ದಾರೆ….
ಭಾರತೀಯರಾದ ನಾವೆಲ್ಲರೂ ಭಾರತಾಂಬೆಯ ಮಡಿಲಲ್ಲಿ ಆರಾಮಾಗಿ ಕನಸು ಕಾಣುತ್ತಾ ನಿದ್ರಿಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣೀಭೂತರಾಗಿರುವವರು ನಮ್ಮ ದೇಶದ ಯೋಧರು.. ಅವರಿಗೊಂದು ಸೆಲ್ಯೂಟ್…

ನಾವು ನಮ್ಮ ಸಂಸಾರ, ಕುಟುಂಬ,ತಂದೆ- ತಾಯಿಗಳು, ಬಂಧು- ಬಳಗದವರ ಜೊತೆ ಸಂತೋಷವಾಗಿ ನೆಮ್ಮದಿಯಾಗಿ ಉಸಿರಾಡುತ್ತಿದ್ದೇವೆ ಎಂದರೆ, ತಮ್ಮೆಲ್ಲಾ ವೈಯಕ್ತಿಕ ಆಸೆ- ಕನಸುಗಳು, ನೋವು- ನಲಿವುಗಳನ್ನು ಒಂದು ಚೀಲದೊಳಗೆ ತುಂಬಿ ಮೊಟ್ಟೆ ಕಟ್ಟಿ ತನ್ನ ಮನೆಯ ಒಂದು ಮೂಲೆಯಲ್ಲಿಟ್ಟು ಉಸಿರು ಬಿಗಿಹಿಡಿದುಕೊಂಡು ನರ ನಾಡಿಗಳಲ್ಲಿ ದೇಶಭಕ್ತಿಯನ್ನು ತುಂಬಿಕೊಂಡು ದೇಶದ ಭದ್ರತೆಯನ್ನು ಕಾಪಾಡುತ್ತಿರುವ ನಮ್ಮ ಯೋಧರೇ ಕಾರಣ.

ಆ ದಿನ ಅಂದರೆ 2019 ಫೆಬ್ರವರಿ 14ರಂದು ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿದೆ. ದೇಶ ಸೇವಾ ನಿರತ ಯೋಧರು ಕೆಲವು ದಿನಗಳ ವೈಯಕ್ತಿಕ ರಜೆಯ ಮೇಲೆ ತಮ್ಮ ತಮ್ಮ ಊರುಗಳಿಗೆ ತೆರಳಿ ನೆಮ್ಮದಿಯಿಂದ ರಜೆ ಕಳೆದು ವಾಪಸ್ ಹೊರಡುವ ಸಂದರ್ಭದಲ್ಲಿ ಮುಂದಿನ ಬಾರಿ ರಜೆ ಬರುವುದರೊಳಗಾಗಿ ತನ್ನದೇ ಆದ ಹೊಸ ಮನೆ ಕಟ್ಟುವ ಕನಸು, ತನ್ನ ಹೆಂಡತಿ- ಮಕ್ಕಳ ಆಸೆಗಳನ್ನು ಈಡೇರಿಸುವ ಕನಸು, ತನ್ನ ಹೆಂಡತಿಯ ಗರ್ಭದಲ್ಲಿರುವ ತನ್ನ ಇನ್ನೊಂದು ಜೀವವನ್ನು ನೋಡುವ ಕನಸು..

ಹೀಗೆ ಒಬ್ಬೊಬ್ಬರು ಒಂದೊಂದು ಕನಸುಗಳನ್ನು ಕಾಣುತ್ತಾ ತಮ್ಮ, ತಮ್ಮ ಮನೆಯವರ ಮನದಲ್ಲಿ ಆಸೆಗಳನ್ನು ತುಂಬಿ ತಮ್ಮವರಿಂದ ಹಾಗೂ ತಮ್ಮೂರಿನವರಿಂದ ಬೀಳ್ಕೊಂಡು ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲು ಹೊರಟಾಗ 14 ಫೆಬ್ರವರಿ 2019 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರದಲ್ಲಿ ನಮ್ಮ ಸಿಆರ್ ಪಿ ಎಫ್ ಬೆಂಗಾವಲು ಪಡೆಯನ್ನು ಹೊತ್ತೊಯ್ಯುತ್ತಿದ್ದ ಸಿ ಆರ್ ಪಿ ಎಸ್ ಸೇನಾ ವಾಹನಕ್ಕೆ 350 ಕೆ.ಜಿ ಗಿಂತಲೂ ಹೆಚ್ಚು ಆರ್ ಡಿ ಎಕ್ಸ್ ಸ್ಪೋಟಕಗಳನ್ನು ತುಂಬಿದ್ದ ಸ್ಕಾರ್ಪಿಯೊ ಕಾರಿನಲ್ಲಿ ಆತ್ಮಾಹುತಿ ದಾಳಿಕೋರರು ಬಂದು ಅಪ್ಪಳಿಸಿದರು.

ಈ ಆತ್ಮಾಹುತಿ ದಾಳಿಗೆ ನಮ್ಮ ಸಿ ಆರ್ ಪಿ ಎಫ್ ನ 40 ಯೋಧರು ವೀರ ಸ್ವರ್ಗವನ್ನು ಸೇರಿ ಹುತಾತ್ಮರಾದರು ಮತ್ತು 35 ಹೆಚ್ಚು ಯೋಧರು ಗಾಯಗೊಂಡರು. ಹುತಾತ್ಮರಾದ ಯೋಧರಿಗಾಗಿ ಕಾಯುತ್ತಿದ್ದ ಮನೆಯವರು, ಊರಿನವರು, ಇಡೀ ದೇಶದವರೇ ದುಃಖ ಸಾಗರದಲ್ಲಿ ಆ ದಿನ ಮುಳುಗಿ ಹೋಗಿತ್ತು. ಇದಕ್ಕೆ ಪ್ರತೀಕಾರವಾಗಿ 26 ಫೆಬ್ರವರಿ 2019 ರಂದು ಭಾರತೀಯ ವಾಯುಪಡೆಯು ಬಾಲಕೋಟ್ ನಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರವನ್ನು ಗುರಿಯನ್ನಾಗಿಸಿಕೊಂಡು ದಾಳಿ ಮಾಡಿತು. ಅದೇನೇ ಆಗಿರಲಿ ಈ ಘಟನೆ ನಡೆದು ಇಂದಿಗೆ ಏಳು ವರ್ಷಗಳೇ ಕಳೆದರೂ ನಮ್ಮೆಲ್ಲರ ಮನಸ್ಸಿನಲ್ಲಿ ಇನ್ನೂ ಹಸಿಯಾಗಿಯೇ ಉಳಿದಿದೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಅರೆಸೇನಾ ಪಡೆಯ ಸಿ ಆರ್ ಪಿ ಎಫ್ ಯೋಧರ ನೆನಪಿಗಾಗಿ ಅವರಿಗೆ ಪ್ರತಿ ವರ್ಷ ಫೆಬ್ರವರಿ 14ರಂದು “ರಾಷ್ಟ್ರೀಯ ಸ್ಮರಣಾರ್ಥ ದಿನ”ವನ್ನಾಗಿ ಆಚರಿಸಿ ವಿಶೇಷ ಗೌರವವನ್ನು ಸಲ್ಲಿಸೋಣ. ನಮ್ಮ ಹುತಾತ್ಮ ಯೋಧರಿಗೆ ಗೌರವಪೂರ್ಣವಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾ ಸೇನಾ ಬಲದ ರಕ್ಷಣಾ ನೆರಳಿನಲ್ಲಿ ಬದುಕುತ್ತಿರುವ ಒಬ್ಬ ಜವಾಬ್ದಾರಿಯತ್ತ ಭಾರತ ದೇಶದ ಪ್ರಜೆಯಾಗಿ ಪ್ರತಿಯೊಬ್ಬ ಭಾರತೀಯ ಯೋಧರು ಹಾಗೂ ಅವರ ಕುಟುಂಬಗಳಿಗೆ ಮತ್ತು ಹುತಾತ್ಮರ ಯೋಧರ ಕುಟುಂಬಗಳಿಗೆ ಹಾಗೂ ದೇಶದ ಭದ್ರತೆಗೆ ಬೆಂಬಲವನ್ನು ನೀಡೋಣ.








