ArticlesLatest

ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ… ಸುಂದರ ಪರಿಸರದಲ್ಲಿ ನೆಲೆನಿಂತ ತಾಯಿಗೆ ನಮೋ ಎನ್ನೋಣ

ಮೈಸೂರಿನಲ್ಲಿ ಆಷಾಢದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದರೆ, ಅತ್ತ ಚಾಮುಂಡೇಶ್ವರಿಯ ಸಹೋದರಿ ಹೆಚ್.ಡಿ.ಕೋಟೆ ಬಳಿಯ ಪುರದಕಟ್ಟೆಯ ಚಿಕ್ಕದೇವಮ್ಮನಿಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಈಗಾಗಲೇ ಮೊದಲ ಆಷಾಢ ಶುಕ್ರವಾರ ಕಳೆದಿದ್ದು ಭಕ್ತರು ದೇವಿಯ ದರ್ಶನ ಮಾಡಿ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡು ಹೋಗಿದ್ದಾರೆ. ಆಷಾಢ ಮಾನ ಕಳೆಯುವ ತನಕವೂ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳು ನಡೆಯಲಿವೆ.

ತಾಯಿ ಚಾಮುಂಡೇಶ್ವರಿಯ ಸಹೋದರಿ ಚಿಕ್ಕದೇವಮ್ಮನನ್ನು ಆಷಾಢದಲ್ಲಿ  ದರ್ಶನ ಮಾಡಿಕೊಂಡು ಹೋಗಲು ಭಕ್ತ ಸಮೂಹವೇ ಹರಿದು ಬರುತ್ತದೆ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಲು ಸಾಧ್ಯವಾಗದವರು ಚಿಕ್ಕದೇವಮ್ಮನ ದರ್ಶನ ಮಾಡಿಕೊಂಡು ಕಾಪಾಡು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಆಷಾಢದಲ್ಲಿ ಶಕ್ತಿ ದೇವತೆಗಳನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರಿ, ಸಂಕಷ್ಟ ದೂರವಾಗಿ ಜೀವನ ಪಾವನವಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಆಷಾಢದಲ್ಲಿ ತಾಯಿ ಚಾಮುಂಡೇಶ್ವರಿಯ ಅವತಾರದ ಶಕ್ತಿದೇವತೆಗಳನ್ನು ಪೂಜಿಸಿ, ದರ್ಶನ ಮಾಡುವುದು ನಡೆಯುತ್ತಲೇ ಬಂದಿದೆ.

ಮೈಸೂರಿನ ಚಾಮುಂಡೇಶ್ವರಿ ಸೇರಿದಂತೆ ಆಕೆಯ ಏಳು ಸಹೋದರಿಯರನ್ನು ಪೂಜಿಸುವುದು ಈ ಸಮಯದಲ್ಲಿ ಕಂಡು ಬರುತ್ತದೆ. ಪಟ್ಟಣಗಳ ಬಡಾವಣೆ, ಹಳ್ಳಿಗಳು ಸೇರಿದಂತೆ ಎಲ್ಲೆಡೆಯೂ  ಚಾಮುಂಡೇಶ್ವರಿ ದೇವಸ್ಥಾನವಿದ್ದು, ಅಲ್ಲೆಲ್ಲ ಆಷಾಢದ ಪೂಜೆಗಳು ನಡೆಯುತ್ತಿದ್ದು, ವಿಶೇಷ ಪೂಜೆಗಳು ಅನ್ನದಾನಗಳು ನಡೆಯುತ್ತವೆ.  ಇನ್ನು ಮೈಸೂರಿನ ಚಾಮುಂಡೇಶ್ವರಿಯ ಸಹೋದರಿಯರಲ್ಲಿ ಒಬ್ಬಳಾದ ಚಿಕ್ಕದೇವಮ್ಮ ಹೆಚ್.ಡಿ.ಕೋಟೆ ತಾಲೂಕಿನ ಪುರದ ಕಟ್ಟೆ ಬಳಿಯ ನಿಸರ್ಗ ಸುಂದರ ಪರಿಸರದಲ್ಲಿ ನೆಲೆಸಿದ್ದು, ಇಲ್ಲಿಗೆ ಭಕ್ತರು ಮಾತ್ರವಲ್ಲದೆ, ಪ್ರವಾಸಿಗರು ಭೇಟಿ ನೀಡಿ ದೇವರ ದರ್ಶನ ಪಡೆದು, ನಿಸರ್ಗದ ಸುಂದರ ನೋಟವನ್ನು ಸವಿಯುತ್ತಾರೆ.

ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…

ಹೆಚ್.ಡಿ.ಕೋಟೆಗೆ ತೆರಳಿದವರು ಚಿಕ್ಕದೇವಮ್ಮನ ಸನ್ನಿದಾನಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದು ಹಿಂತಿರುಗುವುದು ಮಾಮೂಲಿಯಾಗಿದೆ. ಚಿಕ್ಕದೇವಮ್ಮ ತಾಯಿ  ಬಗ್ಗೆ ಹೇಳಬೇಕೆಂದರೆ ಪೌರಾಣಿಕ ದಿನಗಳಿಗೆ ಹೋಗಬೇಕಾಗುತ್ತದೆ. ಋಷಿ ಮುನಿಗಳು ಸೇರಿದಂತೆ ಮನುಷ್ಯರಿಗೆ ರಾಕ್ಷಸರು ಹಿಂಸೆ ಕೊಡುತ್ತಿದ್ದ ಕಾಲ ಅದಾಗಿತ್ತು. ಇಂತಹ ಸಂದರ್ಭದಲ್ಲಿ ಮಹಾಬಲಬೆಟ್ಟದಲ್ಲಿ ನೆಲೆಸಿದ್ದ ಮಹಿಷಾಸುರ ರಾಕ್ಷಸ ನೀಡುತ್ತಿದ್ದ ತೊಂದರೆಯಿಂದ ನೊಂದ ಋಷಿಗಳು ಮತ್ತು ಜನರು ಶಿವನ ಮೊರೆ ಹೋದರು. ಆಗ ಪಾರ್ವತಿ ಎಲ್ಲ ದೇವರ ಶಕ್ತಿಯನ್ನು ಪಡೆದು ಬಂದು ಮಹಿಷಾಸುರನನ್ನು ಸಂಹರಿಸಿದಳು ಎನ್ನುವುದು ಪೌರಾಣಿಕ ಕಥೆಯಾಗಿದೆ.

ಈ ಕಥೆಯ ಬಗ್ಗೆ ಹೇಳುವುದಾದರೆ ಇಂದಿನ  ಚಾಮುಂಡಿಬೆಟ್ಟವು ಅಂದು ಮಹಾಬಲಬೆಟ್ಟವಾಗಿತ್ತು. ಇಲ್ಲಿ ಮಹಿಷಾಸುರ ಎಂಬ ರಾಕ್ಷಸ ರಾಜ್ಯಭಾರ ಮಾಡುತ್ತಿದ್ದನು. ಈತ ಯಾವ ಗಂಡಸಿಂದಾಗಲೀ, ಯಾವ ಪ್ರಾಣಿಯಿಂದಾಗಲೀ ತನಗೆ ಮರಣ ಬಾರದಂತೆ ಸಾಕ್ಷಾತ್ ಪರಶಿವನಿಂದಲೇ ವರಪಡೆದಿದ್ದನು. ಈ ವರ ಪಡೆದ ಮೇಲೆ ತನಗೆ ಯಾವುದೇ ಸಾವು ಬರಲ್ಲ ಎಂದು ನಂಬಿದ್ದ ಆತ ಅಹಂಕಾರದಿಂದ ಮೆರೆಯುತ್ತಿದ್ದನಲ್ಲದೆ, ಅದೇ ಮದದಲ್ಲಿ ಜನ ಹಾಗೂ ಋಷಿ ಮುನಿಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಾ  ಯಜ್ಞಯಾಗಾದಿಗಳಿಗೆ  ಅಡ್ಡಿಪಡಿಸುತ್ತಿದ್ದನು. ಈ ವೇಳೆ ಅವರೆಲ್ಲರೂ ದುಷ್ಟ ರಾಕ್ಷಸ ಮಹಿಷಾಸುರನಿಂದ ತಮ್ಮನ್ನು ಪಾರು ಮಾಡುವಂತೆ ಶಿವನ ಮೂಲಕ ಪಾರ್ವತಿಗೆ ಮೊರೆಹೋದರು.

ಈ ವೇಳೆ ಚಾಮುಂಡೇಶ್ವರಿ ತನ್ನ ಹದಿನೆಂಟು ಕರಗಳಲ್ಲೂ ಎಲ್ಲಾ ದೇವತೆಗಳಿಂದ ಪಡೆದ ಹದಿನೆಂಟು ಆಯುಧಗಳನ್ನು ಹಿಡಿದು ಕಮಲ, ಅಕ್ಷರಮಾಲೆ, ಬಾಣ, ಖಡ್ಗ, ವಜ್ರ, ಗದೆ, ತ್ರಿಶೂಲ, ಚಕ್ರ, ಪರಶು, ಘಂಟೆ, ಪಾಶ, ಶಕ್ತಿ, ದಂಡ, ಚರ್ಮ, ಧನಸ್ಸು, ಪಾನಪಾತ್ರೆ, ಕಮಂಡಲಗಳೊಡನೆ ದಿವ್ಯಾಭರಣಗಳಿಂದ ಅಲಂಕೃತಳಾಗಿ ಹಿಮವಂತ ನೀಡಿದ ಸಿಂಹವನ್ನೇರಿ ಉಗ್ರಸ್ವರೂಪಿಣಿಯಾಗಿ  ಬಂದು ಲೋಕಕಂಟಕನಾಗಿದ್ದ ದುಷ್ಟ ಮಹಿಷಾಸುರವನ್ನು ಸಂಹಾರ ಮಾಡಿದಳು. ಈ ವೇಳೆ ಅವಳಿಗೆ ಯುದ್ಧದಲ್ಲಿ ಅವಳ ಏಳು ಸಹೋದರಿಯರು ಸಹಕಾರ ನೀಡಿದ್ದಲ್ಲದೆ, ಎಲ್ಲರೂ ಒಂದೊಂದು ಬೆಟ್ಟದಲ್ಲಿ ನೆಲೆಸಿದರಂತೆ. ಅದರಂತೆ ಚಾಮುಂಡಿ ಮೈಸೂರಿನ ಮಹಾಬಲಬೆಟ್ಟದಲ್ಲಿ ನೆಲೆನಿಂತರೆ, ಚಿಕ್ಕದೇವಮ್ಮ ಹೆಚ್.ಡಿ.ಕೋಟೆ ತಾಲೂಕಿನ ಪುರದ ಕಟ್ಟೆ ಬಳಿ ನೆಲೆ ನಿಂತಿದ್ದು ವಿಶೇಷವಾಗಿದೆ.

ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ದರ್ಶನ ನೀಡಲು ಸಜ್ಜಾದ ಚಾಮುಂಡೇಶ್ವರಿ!

ಇಂದಿಗೂ ಶಕ್ತಿದೇವತೆಯಾಗಿರುವ ಚಿಕ್ಕದೇವಮ್ಮನ  ದರ್ಶನ ಮಾಡಿ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಜನತೆಯಲ್ಲಿದೆ. ಹೀಗಾಗಿಯೇ ಜನ ಕಷ್ಟ ಬಂದಾಗ  ತಾಯಿಗೆ ಹರಕೆ ಹೊತ್ತು ಬಳಿಕ ಶ್ರೀ ಚಿಕ್ಕದೇವಮ್ಮದೇವಿಯ ಸನ್ನಿಧಿಗೆ ಆಗಮಿಸಿ ತೀರಿಸುತ್ತಾರೆ. ಚಾಮುಂಡೇಶ್ವರಿಯನ್ನು ಹೇಗೆ ಪೂಜಿಸುತ್ತಾರೆಯೋ ಹಾಗೆಯೇ ಹಿಂದೆ ಯದುವಂಶದ ಮಹಾರಾಜರು ಚಿಕ್ಕಮ್ಮದೇವಿಯನ್ನು ಪೂಜಿಸುತ್ತಿದ್ದರಂತೆ. ಪರಿವಾರ ಸಹಿತ ಬಂದು ದೇವಿಗೆ ಪೂಜಾಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಇಲ್ಲಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ದಿನಗಳಲ್ಲದೆ, ವಾರದ ಏಳು ದಿನವೂ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಹಿರಿಯರು ಹೇಳುವ ಪ್ರಕಾರ ಶ್ರೀ ಚಿಕ್ಕದೇವಮ್ಮತಾಯಿ ಬೆಟ್ಟಕ್ಕೂ ಮೈಸೂರಿನ ಚಾಮುಂಡಿಬೆಟ್ಟಕ್ಕೂ ಸುರಂಗ ಮಾರ್ಗವಿದೆಯಂತೆ ಇದಕ್ಕೆ ಸಾಕ್ಷಿ ಎನ್ನುವಂತೆ ಸುರಂಗ ಮಾರ್ಗ ಈಗಲೂ ಕಾಣಿಸುತ್ತಿದ್ದು, ಗಿಡಗಂಟಿಗಳು ಆವರಿಸಿ ಮುಚ್ಚಿ ಹೋಗಿದೆ. ಈ ಸುರಂಗದಲ್ಲಿ ಸರ್ಪ ನೆಲೆನಿಂತಿದೆ ಎಂದು ಹೇಳಲಾಗುತ್ತಿದೆ. ಚಿಕ್ಕದೇವಮ್ಮತಾಯಿ ಕ್ಷೇತ್ರ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು,  ಊರಿನವರಿಗೆ ಆರಾಧ್ಯದೇವತೆ ಪೂಜಿಸಲ್ಪಡುತ್ತಿದ್ದಾಳೆ.

 

https://bitli.in/41uk5RS

B M Lavakumar

 

admin
the authoradmin

Leave a Reply