ಬಿರುಗಾಳಿ ಮಳೆಯ ಅಪಾಯಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ಶಿಕ್ಷಕಿಯರು ಕಾಪಾಡಿದ್ದು ಹೇಗೆ ಗೊತ್ತಾ?

ಮೈಸೂರು: ಬಿರುಗಾಳಿ ಸಹಿತ ಸುರಿದ ಮಳೆಗೆ ಶಾಲಾ ಕೊಠಡಿಯ ಛಾವಣಿಯ ಹಂಚು ಹಾರಿದ್ದು, ಶಿಕ್ಷಕರ ಸಮಯ ಪ್ರಜ್ಞೆಯಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಹುಣಸೂರು ತಾಲೂಕಿನ ಕಿರಂಗೂರು ಗ್ರಾ.ಪಂ.ವ್ಯಾಪ್ತಿಯ ದಾಸನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಮಕ್ಕಳು ತರಗತಿಯಲ್ಲಿಯೇ ಬಿರುಗಾಳಿ ಸಹಿತ ಮಳೆ ಸುರಿದಿದೆ. ಈ ವೇಳೆ ಛಾವಣಿಯ ಹಂಚುಗಳು ಗಾಳಿಗೆ ಹಾರಿ ಕೊಠಡಿಯ ಒಳಗೆ ಬಿದ್ದಿದೆ. ಈ ತರಗತಿಯಲ್ಲಿದ್ದ ಶಿಕ್ಷಕಿಯರು ಸಮಯ ಪ್ರಜ್ಞೆ ತೋರಿ ವಿದ್ಯಾರ್ಥಿಗಳನ್ನು ಡೆಸ್ಕ್ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಹೀಗಾಗಿ ಹಂಚುಗಳು ತಲೆಗೆ ಬೀಳದಂತೆ ನೋಡಿಕೊಂಡಿದ್ದು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಕಿರಂಗೂರು ಗ್ರಾ.ಪಂ.ವ್ಯಾಪ್ತಿಯ ದಾಸನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 25 ವಿದ್ಯಾರ್ಥಿಗಳು ತರಗತಿಯಲ್ಲಿದ್ದರು. ಈ ಸಂದರ್ಭದಲ್ಲಿ ಬಿರುಗಾಳಿಯ ಸುಳಿಗೆ ಸಿಲುಕಿದ ಶಾಲಾ ಕೊಠಡಿಯ ಮೇಲ್ಛಾವಣಿಯ ಹಂಚುಗಳು ಹಾರಿ ಶಾಲಾ ಕೊಠಡಿಯೊಳಗೆ ಬಿದ್ದಿವೆ. ತಕ್ಷಣ ಶಾಲಾ ಶಿಕ್ಷಕರಾದ ಸುಮ ಮತ್ತು ಉಷಾರವರು ಎಲ್ಲಾ ಮಕ್ಕಳನ್ನು ಡೆಸ್ಕ್ ಕೆಳಗೆ ಕೂರಿಸಿದ್ದಿರಿಂದ ಯಾವುದೇ ಪ್ರಾಣಪಾಯವಾಗಿಲ್ಲ. ಶಿಕ್ಷಕರ ಸಮಯ ಪ್ರಜ್ಞೆಯಿಂದದ ಯಾವುದೇ ಅವಘಡ ಸಂಭವಿಸಿಲ್ಲ.

ಇನ್ನು ಗ್ರಾಮದ ಸೋಮಣ್ಣ, ಮಾದೇಗೌಡ, ಮಾದಯ್ಯ ಎಂಬುವವರ ಮನೆಗಳು ಬಿರುಗಾಳಿ ಮಳೆಗೆ ಸಿಲುಕಿ ಹಾನಿಯಾಗಿದ್ದು ಮನೆ ಮುಂದೆ ಇದ್ದ ಭಾರಿ ಮರ ಧರೆಗುರುಳಿದ್ದು ಮರದಡಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಜಖಂ ಆಗಿವೆ. ಇದಲ್ಲದೆ ಮಾದೇಗೌಡ ಗಣೇಶ್, ಪ್ರಕಾಶ್ ಶೇಖರ್ ಸೋಮಶೇಖರ್ ಕುಮಾರ್, ಮಧು, ಮರಿಯಯ್ಯ, ರವಿ ಮಾದೇಗೌಡ ಸೇರಿದಂತೆ ಗ್ರಾಮದ ಅನೇಕ ಮನೆಗಳ ಹಂಚುಗಳು ಬಿರುಗಾಳಿಗೆ ಹೊಡೆತಕ್ಕೆ ಸಿಲುಕಿ ಹಾರಿಹೋಗಿವೆ. ಶಾಲಾ ಕಾಂಪೌಂಡ್ ಮೇಲೆ ತೇಗದ ಮರ ಮುರಿದು ಬಿದ್ದು ಕಾಂಪೌಂಡ್ ಹಾನಿಯಾಗಿದೆ.

ಹನಗೋಡು, ದಾಸನಪುರ, ಹಿಂಡಗುಡ್ಲು, ಭರತವಾಡಿ, ಕಿರಂಗೂರು ಸೇರಿದಂತೆ ಇತರೆ ಗ್ರಾಮದಲ್ಲಿ ಸಸಿಮಡಿಗಳ ಮೇಲೆ ಆಲಿಕಲ್ಲು ಮಳೆ ಬಿದ್ದಿದ್ದು ತಂಬಾಕು ಸಸಿಗಳಿಗೆ ಹಾನಿಯುಂಟು ಮಾಡಿದೆ. ಕಚುವಿನಹಳ್ಳಿ ಗ್ರಾಮದಲ್ಲಿ ಬಿರುಗಾಳಿಯಿಂದ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ, 4ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಟ್ರಾನ್ಸ್ ಫಾರಂ, ದಾಸನಪುರದಲ್ಲಿ 3 ವಿದ್ಯುತ್ ಕಂಬಗಳು ಧರೆಗುರುಳಿವೆ, ಹಾನಿಯಾಗಿರುವ ದಾಸನಪುರಕ್ಕೆ ಉಪತಹಸಿಲ್ದಾರ್ ಶರತ್, ಗ್ರಾಮಲೆಕ್ಕಿಗ ಕುಮಾರ್ ಗ್ರಾ. ಪಂ. ಮಾಜಿ ಅದ್ಯಕ್ಷ ದಾ ರಾ ಮಹೇಶ್, ಹರೀಶ್, ಬೀರಪ್ಪ, ಸಿ ಆರ್ ಪಿ ಶ್ರೀನಿವಾಸಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ಹರೀಶ್ ಗೌಡ ಅವರು ಮಾತನಾಡಿ ಮಳೆಹಾನಿ ಗ್ರಾಮಗಳಿಗೆ ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಅಧಿಕಾರಿಗಳಿಗೆ ಭೇಟಿ ನೀಡಲು ಸೂಚನೆ ನೀಡಿದ್ದೇನೆ. ಶಾಲೆ ಹಾನಿಯಾಗಿರುವುದಕ್ಕೆ ಆಪತ್ತು ನಿಧಿಯಲ್ಲಿ ನಾಳೆಯಿಂದಲೇ ಕಾಮಗಾರಿ ಮಾಡುವಂತೆ ಸೂಚಿಸಿದ್ದು ಅಧಿವೇಶನ ಮುಗಿದ ನಂತರ ಹಾನಿಯಾಗಿರುವ ಗ್ರಾಮಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.







