LatestMysore

ಮೊದಲ ವರ್ಷಧಾರೆಗೆ ತಂಪಾದ ಮೈಸೂರು.. ನೆಮ್ಮದಿಯುಸಿರು ಬಿಟ್ಟ ಜನ..

ಮೈಸೂರು: ವರ್ಷದ ಮೊದಲ ಮಳೆ  ಸಾಂಸ್ಕೃತಿಕ ನಗರಿ ಮೈಸೂರನ್ನು ತಂಪಾಗಿಸಿದೆ. ಆ ಮೂಲಕ ಆರಂಭದ ಬೇಸಿಗೆಯ ಝಳಕ್ಕೆ ಬಸವಳಿದಿದ್ದವರು ತುಸು ನೆಮ್ಮದಿಯುಸಿರುವ ಬಿಡುವಂತಾಗಿದೆ. ಮಂಗಳವಾರ ರಾತ್ರಿ ಸಮಾರು 12 ಗಂಟೆ ವೇಳೆಗೆ ಆರಂಭವಾದ ಮಳೆ ಆರಂಭದಲ್ಲಿ ತುಸು ರಭಸದಿಂದ ಸುರಿದು ಬಳಿಕ ನಿಧಾನಗತಿಯಲ್ಲಿ ಮುಂದುವರೆಯಿತು.

ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಮಿಂಚು ಗುಡುಗು ಸಹಿತ ಮಳೆ ಸುರಿದಿದೆ. ಮಳೆ ಬರುವ ಮುನ್ಸೂಚನೆಯೇ ನೀಡದೆ ಒಮ್ಮೆಲೆ  ಮೋಡ ಕವಿದು ಮಳೆ ಸುರಿಯಿತು. ಮಧ್ಯೆ ರಾತ್ರಿಯಾದುದರಿಂದ ಜನರೆಲ್ಲ ಮನೆ ಸೇರಿ ಕೊಂಡಿದ್ದರು ಹೀಗಾಗಿ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲ. ಮಳೆ ಸುರಿದ ಕಾರಣ ನೀರು ರಸ್ತೆ ಚರಂಡಿಗಳಲ್ಲಿ ಹರಿದಿದ್ದು, ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಬಂದ ಕಸಗಳು ರಸ್ತೆಯಲ್ಲಿ ಹರಡಿದೆ.

ಮಳೆ ಜತೆಗೆ ಗಾಳಿ ಬೀಸದ ಕಾರಣದಿಂದ ಯಾವುದೇ ಅನಾಹುತಗಳಿಗೆ ಆಸ್ಪದವಾಗಲಿಲ್ಲ. ಮೊದಲ ಗಾಳಿ ಮಳೆ ಸುರಿದಾಗ ಸಾಮಾನ್ಯವಾಗಿ ಅಲ್ಲಲ್ಲಿ ಶಿಥಿಲಗೊಂಡ ಮರಗಳ ಕೊಂಬೆಗಳು ಮುರಿದು ಹೋಗುವುದು, ಮನೆಗಳ ಶೀಟ್ ಹಾರುವುದು ಮಾಮೂಲಿಯಾಗಿರುತ್ತದೆ. ಆದರೆ ಅಂತಹ ಅನಾಹುತಕ್ಕೆ ಅವಕಾಶವಾಗದಂತೆ ಮಳೆ ಸುರಿದಿದೆ. ಬೇಸಿಗೆಯ ಆರಂಭದಲ್ಲಿಯೇ ಮಳೆ ಸುರಿದಿರುವುದು ಜನರಲ್ಲಿ ನೆಮ್ಮದಿ ತಂದಿದೆ.

ಕಳೆದ ಕೆಲವು ದಿನಗಳಿಂದ ನೆತ್ತಿ ಸುಡುವ ಬಿಸಿಲು ಕಾಡುತ್ತಿತ್ತು. ಇಡೀ ವಾತಾವರಣ ಉಷ್ಣಾಂಶದಿಂದ ಕೂಡಿತ್ತು. ಹೀಗಾಗಿ ಜನ ಯಾವಾಗ ಮಳೆ ಬರುತ್ತೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ  ಮಂಗಳವಾರ ರಾತ್ರಿ ಸುರಿದ ಮಳೆ ವಾತಾವರಣವನ್ನು ತಂಪಾಗಿಸಿದೆ. ಒಮ್ಮೆ ಮಳೆ ಸುರಿದಿದ್ದರಿಂದ ಇನ್ನಷ್ಟು ವಾತಾವರಣ ಕಾವೇರಲಿದ್ದು, ಶೀಘ್ರದಲ್ಲಿಯೇ ಮತ್ತೊಮ್ಮೆ ಮಳೆ ಸುರಿದರೆ ಸೂಕ್ತ ಇಲ್ಲದೆ ಹೋದರೆ ಇನ್ನಷ್ಟು ಬಿಸಿಲ ಝಳ ಹೆಚ್ಚುವ ಸಾಧ್ಯತೆಯಿದೆ.

ಅದು ಏನೇ ಇರಲಿ ಫೆಬ್ರವರಿ ಕೊನೆಯ ವಾರದಲ್ಲಿ ಮಳೆ ಸುರಿದಿರುವುದು ಖುಷಿ ತಂದಿದೆ. ಅದರಲ್ಲೂ ಮೈಸೂರಿನ ಚಾಮುಂಡಿಬೆಟ್ಟದ ಅರಣ್ಯಕ್ಕೆ ಜೀವ ಬಂದಂತಾಗಿದೆ. ಇದೀಗ ಮರಗಿಡಗಳು ಎಲೆಯುದುರಿಸುತ್ತಿದ್ದು, ಅರಣ್ಯದಲ್ಲಿದ್ದ ಸಸ್ಯಗಳು ಬಿಸಿಲಿಗೆ ಒಣಗಿ ಹೋಗಿದ್ದವು ಮಳೆ ಸುರಿದಿದ್ದರಿಂದ ಮರು ಜೀವ ಬಂದಂತಾಗಲಿದೆ. ಇದರಿಂದ ಅರಣ್ಯದಲ್ಲಿರುವ ಜೀವ ಜಂತುಗಳು ನೆಮ್ಮದಿಯುಸಿರು ಬಿಡಲಿವೆ. ಮತ್ತೆ ಮಳೆ ಸುರಿದರೆ ಇನ್ನಷ್ಟು ಒಳ್ಳೆಯದಾಗಲಿದೆ.

admin
the authoradmin

Leave a Reply

Translate to any language you want