ಮೈಸೂರು: ಕಬಿನಿ ಜಲಾಶಯದಿಂದ ನಾಲೆ ಮುಖಾಂತರ ಕೆರೆ ಕಟ್ಟೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಬುಧವಾರ ನಗರದ ಕುವೆಂಪು ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದಕ್ಕೆ ಮಣಿದ ನೀರಾವರಿ ಇಲಾಖೆ ಅಧಿಕಾರಿಗಳು ಫೆಬ್ರವರಿ 15ರಿಂದ ನೀರು ಹರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ಕಬಿನಿ ಜಲಾಶಯದಲ್ಲಿ ನೀರಿನ ಲಭ್ಯತೆಯಿದ್ದರೂ ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಬುಧವಾರ ರೈತರು ನಗರದ ಕುವೆಂಪು ಪಾರ್ಕಿನಲ್ಲಿ ಸಮಾವೇಶಗೊಂಡು ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನೀರಾವರಿ ಸಚಿವರ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಕಾಡ ಕಚೇರಿಗೆ ಮುತ್ತಿಗೆ ಹಾಕಲಾಯಿತು

ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ಅವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಕಬಿನಿ ವ್ಯಾಪ್ತಿಯ ನಾಲೆಗಳಿಗೆ ಹಾಗೂ ಹುಲ್ಲಳ್ಳಿ ರಾಂಪುರ. ನಾಲೆಗಳಿಗೆ ನೀರು ಹರಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮುಖ್ಯಮಂತ್ರಿಗಳ ಹಿಂಬಾಲಕರಾಗಿ ತಿರುಗಾಡಲು ಪ್ರಾರಂಭವಾಗಿದ್ದು ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದರೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಕೆರೆಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ವಿಫಲರಾಗಿದ್ದು, ಕೃಷಿ ಪಂಪ್ ಸೆಟ್ ಬಳಕೆದಾರರು ಕಂಗಲಾಗಿದ್ದಾರೆ. ಬಿಸಿಲ ಝಳ ಹೆಚ್ಚುತ್ತಿದ್ದು, ಇದರಿಂದ ಅಂತರ್ಜಲದ ಕುಸಿತವಾಗುತ್ತಿದೆ. ಅಲ್ಲದೆ, ತೆಂಗು ಬಾಳೆ ಕಬ್ಬು ನಾಟಿ ಮಾಡಿದ್ದು ಅಂತರ್ಜಲ ಕುಸಿತದಿಂದ ಈ ಬೆಳೆಗಳಿಗೆ ನೀರು ಕೊಡಲು ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಬಿನಿ ಜಲಾಶಯದಲ್ಲಿ 74ವರೆ ಅಡಿ ನೀರು ಸಂಗ್ರಹವಾಗಿದೆ ಆದರೂ ಕೂಡ ನೀರು ಬಿಡುವಲ್ಲಿ ಜಿಲ್ಲಾಡಳಿತ ಮತ್ತು ಚುನಾಯಿತ ಪ್ರತಿನಿಧಿಗಳು ವಿಫಲರಾಗಿದ್ದಾರೆ. ಕೆರೆ ಕಟ್ಟೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ. ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ನೀರು ಎತ್ತುವ ಯಂತ್ರಗಳ ದುರಸ್ತಿ ಹಾಗೂ ರಿಪೇರಿ ಎಂದು ಹೇಳುತ್ತಾ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ತಕ್ಷಣ ಅಧಿಕಾರಿಗಳು ಹೆಚ್ಚುವರಿ ಮೋಟಾರ್ ಅಳವಡಿಕೆಗೆ ಮತ್ತು ಹೊಸ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು, ಹೊಸ ಕೆರೆಗಳಿಗೆ ಹೆಚ್ಚುವರಿ ಯೋಜನೆಯನ್ನು ಪ್ರಕಟಣೆ ಮಾಡಲು ಈ ಬಜೆಟ್ ನಲ್ಲಿ ಹಣ ನೀಡಬೇಕು ಎಂದು ಒತ್ತಾಯಿಸಿದರು. ಕಬಿನಿ ನಾಲ ದುರಸ್ತಿ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಗುಣಮಟ್ಟವನ್ನು ಅಧಿಕಾರಿಗಳು ಕಾಪಾಡಬೇಕು ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿ ಸಭೆಯನ್ನು ಮಾಡಿ ಕೆರೆಕಟ್ಟೆಗಳಿಗೆ ಮತ್ತು ನಾಲೆಗಳಿಗೆ ನೀರು ಹರಿಸಲು ಮುಂದಿನ ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಬಿನಿ ವ್ಯಾಪ್ತಿಯ ನಾಲೆಯಲ್ಲಿ ಕಾಮಗಾರಿಗಳು ಆರಂಭವಾಗಿದ್ದು ಕಾಮಗಾರಿಗಳ ಗುಣಮಟ್ಟ ಕಾಪಾಡಲು ರೈತ ಮುಖಂಡರು ಮತ್ತು ಅಧಿಕಾರಿಗಳ ಗುಣಮಟ್ಟದ ತಂಡ ರಚಿಸಲು ಒತ್ತಾಯಿಸಿದ ಅವರು ಬೇಡಿಕೆ ಈಡೇರಿಸದಿದ್ದರೆ ನೀರಾವರಿ ಇಲಾಖೆ ಎದುರು ನಿರಂತರ ಹೋರಾಟ, ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್. ಎಚ್ ಗುಂಡ್ಲ ಚಿದಂಬರ, ಗಣೇಶ್, ಮುದ್ದಹಳ್ಳಿ ಮಧು, ಸುಜ್ಜಲೂರು ಜಯಸ್ವಾಮಿ, ಬಿದರಳ್ಳಿ ಮಾದಪ್ಪ, ದೇವಿರಮ್ಮನಹಳ್ಳಿ ಸಿದ್ದಬಸಪ್ಪ, ಶ್ರೀಕಂಠಸ್ವಾಮಿ, ದೇವಿರಮ್ಮನಹಳ್ಳಿಹುಂಡಿ ವೈಟ್ ನವೀನ್, ಶ್ಯಾನಾಡ್ರಹಳ್ಳಿ ಬಸವರಾಜು, ನಾಗರಾಜಪ್ಪ ಅಂಡುವಿನಹಳ್ಳಿ ಮಹೇಶ್, ಕುರಹಟ್ಟಿ ರಾಜೇಶ್ ಪುನೀತ್, ಕಸುವಿನಹಳ್ಳಿ ಗುರು, ಮೊಳಕುಂಡಿ ಸೋಮ, ಮಾದಾಪುರ ಪುನೀತ್ ಮೊದಲಾದವರು ಭಾಗವಹಿಸಿದ್ದರು.








