ಸಫಾರಿ ಆರಂಭಿಸಿರುವುದನ್ನು ಖಂಡಿಸಿ ರೈತರಿಂದ ಮೈಸೂರಿನ ಅರಣ್ಯ ಭವನಕ್ಕೆ ಮುತ್ತಿಗೆಗೆ ಯತ್ನ, ಪ್ರತಿಭಟನೆ

ಮೈಸೂರು: ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿ ಪುನರಾರಂಭಿಸಿರುವುದನ್ನು ಖಂಡಿಸಿ, ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು, ಸರ್ಕಾರ ಪ್ರಾಣಿಗಳು ಹಾಗೂ ಅರಣ್ಯ ವಿರೋಧಿಯಾಗಿದೆ ಎಂದು ಆರೋಪಿಸಿದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಧಾನಸೌಧದಲ್ಲಿ ಹಂತ ಹಂತವಾಗಿ ಬಂಡಿಪುರ, ನಾಗರಹೊಳೆ ವ್ಯಾಪ್ತಿಯಲ್ಲಿ ಹಗಲು ವೇಳೆ ಸಫಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟ ಆಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಕೇವಲ ಬಂಡವಾಳಶಾಹಿಗಳು, ಶ್ರೀಮಂತರ ಪರವಾಗಿ ಮೋಜು ಮಸ್ತಿ ಮಾಡಲು ಅವಕಾಶ ಕಲ್ಪಿಸಿ, ಕಾಡಿನೊಳಗೆ ಪ್ರವೇಶ ನೀಡಲು ಮುಂದಾಗಿರುವುದು ಸರಿಯಲ್ಲ. ಈ ಹಣದಿಂದ ಸರ್ಕಾರ ನಡೆಸುವ ದರಿದ್ರ ರಾಜ್ಯ ಸರ್ಕಾರಕ್ಕೆ ಬಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರೈತರ ಮಕ್ಕಳ ಸಮಾಧಿ ಮೇಲೆ ಗ್ಯಾರೆಂಟಿಗೆ ಹಣ ಒದಗಿಸಲು ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂದಿದೆ. ಸಚಿವರು, ಶಾಸಕರು, ಸಂಸದರು ಕಾಡಿನಲ್ಲಿ ವಾಸ ಮಾಡುತ್ತಿಲ್ಲ, ಕಾಡಿನ ಹಂಚಿನಲ್ಲೂ ವ್ಯವಸಾಯ ಮಾಡುತ್ತಿಲ್ಲ. ಕೇವಲ ಕಾಡನ್ನು ನೋಡಿ ಮನೆ ಸೇರುತ್ತಾರೆ.

ಕಾಡಂಚಿನ ಪ್ರದೇಶದಲ್ಲಿರುವ ರೈತರು, ಅವರ ಮಕ್ಕಳು ಸಫಾರಿಯಿಂದ ನೊಂದ ಪ್ರಾಣಿಗಳ ಆಕ್ರೋಶಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಫಾರಿ ಬಂದ್ ಆದ ಮೇಲೆ ಯಾವುದೇ ಮಾನವ-ಪ್ರಾಣಿ ಸಂಘರ್ಷ ವರದಿಯಾಗಿಲ್ಲ. ಸಫಾರಿಯಿಂದ ಕಾಡಿನಲ್ಲಿ ವಾಸ ಮಾಡುವ ಪ್ರಾಣಿಗಳ ವೈವಿಧ್ಯತೆಗೆ ತೊಂದರೆ ಉಂಟಾಗುತ್ತದೆ. ಸ್ಥಳೀಯ ರೈತರೊಂದಿಗೆ ಚರ್ಚಿಸದೆ ಈ ನಿರ್ಧಾರ ತೆಗೆದುಕೊಂಡಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಫಾರಿ ಹೋಗುವಾಗ ಉಂಟಾಗುವ ಕರ್ಕಶ ಶಬ್ದ ಮತ್ತು ವಾಹನಗಳಿಂದ ದಿಕ್ಕೆಟ್ಟ ಕಾಡು ಪ್ರಾಣಿಗಳು ನಾಡಿಗೆ ಬರಲು ಪ್ರಾರಂಭಿಸುತ್ತವೆ ಸ್ಥಳೀಯ ರೈತರ ಜೊತೆ ಚರ್ಚಿಸದೆ ಈ ನಿರ್ಧಾರ ರಾಜ್ಯ ಸರ್ಕಾರ ತೆಗೆದುಕೊಂಡಿರುವುದು ರೈತ ವಿರೋಧಿ ನಿರ್ಧಾರವಾಗಿದೆ ಯಾವುದೇ ಕಠಿಣ ಕ್ರಮ ಸರ್ಕಾರ ಕೈಗೊಂಡಿಲ್ಲ ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾದರೆ ವೈಜ್ಞಾನಿಕ ಬೆಲೆ ನಷ್ಟ ಕೊಡುವ ನಿರ್ಧಾರವಿಲ್ಲ ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಕೇವಲ 20 ಲಕ್ಷ ರೂ ನೀಡುವ ನಿರ್ಧಾರ ವೈಜ್ಞಾನಿಕ ತೀರ್ಮಾನವಲ್ಲ ಅಂತಹ ಪ್ರಕರಣ ಸಂಭವಿಸಿದೆ ಒಂದು ಕೋಟಿ ನಷ್ಟ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ನಿಯಮ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಡಿಸಿಎಫ್ ಪರಮೇಶ್ ಅವರಿಗೆ ಹಕ್ಕು ಒತ್ತಾಯ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ಸಂಚಾಲಕ ಹನುಮಯ್ಯ, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಪ್ರಕಾಶ್ ಗಾಂಧಿ, ಎಚ್.ಗುಂಡ್ಲ ಚಿದಂಬರ್, ಮುದ್ದಳ್ಳಿ ಮಧು, ಅಂಡುವಿನಹಳ್ಳಿ ಜಗದೀಶ್, ಮಹೇಶ್, ದೇವಣ್ಣ, ಚೇತನ್, ನವೀನ, ಬಸವಣ್ಣ, ಮಂಜು, ಮುಳ್ಳೂರು ಕುಮಾರ್ ನಾಯಕ, ಜಗದೀಶ್, ಮಹದೇವಸ್ವಾಮಿ, ಗಣೇಶ, ಧರ್ಮೇಂದ್ರ, ಮಂಜುನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು.







