ಇವತ್ತು ಇದ್ದವರು, ನಾಳೆ ಇರುತ್ತಾರೋ, ಇಲ್ಲವೋ ಎನ್ನುವ ಗ್ಯಾರಂಟಿ ಇಲ್ಲ:ಬ್ರಹ್ಮಾಕುಮಾರಿ ದಾನೇಶ್ವರೀಜೀ

ಚಾಮರಾಜನಗರ: ಬದುಕಿದ್ದಷ್ಟು ದಿನ, ಪ್ರತಿಕ್ಷಣವೂ ಪ್ರತಿಯೊಬ್ಬ ಅರ್ಹರನ್ನು ಗೌರವಿಸಿ, ಪ್ರೀತಿಸಿ, ಸಾಧ್ಯವಾದರೆ ವಂಚಿತರ ಕಣ್ಣೊರೆಸಿ. ಇವತ್ತು ನಮ್ಮೊಟ್ಟಿಗೆ ಇದ್ದವರು, ನಾಳೆ ಇರುತ್ತಾರೋ ಇಲ್ಲವೋ,ಎನ್ನುವ ಯಾವುದೇ ಗ್ಯಾರಂಟಿ ಇಲ್ಲ ಎಂದು ಮನೋಬಲ ತರಬೇತುದಾರೆ ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು.

ಅವರು ನಗರದ ಪ್ರಕಾಶ ಭವನದಲ್ಲಿ ನಡೆದ ಪತ್ರಿಕಾ ವಿತರಕ ಮಂಜುನಾಥ ಆರಾಧ್ಯರವರ ಮಾತೃಶ್ರೀ ದಿವಂಗತ ರತ್ನಮ್ಮ ಬಸವರಾಧ್ಯ ರವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅನೇಕ ಜನರು ಜೀವನವು ತುಂಬಾ ಚಿಕ್ಕದಾಗಿದೆ ಎಂದು ಹೇಳುತ್ತಾರೆ. ಇಷ್ಟು ಕಡಿಮೆ ಜೀವನದಲ್ಲಿ ಅನೇಕ ಜನರು ಸಣ್ಣ ವಿಚಾರಗಳಿಂದ ಪ್ರಭಾವಿತರಾಗುತ್ತಾರೆ ಅಸೂಯೆ ಮತ್ತು ದ್ವೇಷದಿಂದ ಅಮೂಲ್ಯವಾದ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ. ಎಲ್ಲರೂ ನಾನು ಸರಿ ಎಂದು ಹೇಳುತ್ತಾರೆ. ಆದರೆ ಪರಸ್ಪರ ಹೊಂದಿಕೊಳ್ಳುವ ಸಾಧ್ಯತೆ ಇಲ್ಲ. ಈ ಅಂತರದಿಂದಾಗಿ ಸಂತೋಷ ಮತ್ತು ಶಾಂತಿಯೂ ಕಳೆದು ಹೋಗುತ್ತದೆ.
ನಾನು ನೋಡಿದ ಹಾಗೆ ರತ್ನಮ್ಮನವರು, ಎಂದೂ ಸಹ ಎದೆಗುಂದದೆ ತಮ್ಮ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸಂತೋಷಮಯ ಜೀವನವನ್ನಾಗಿ ಮಾಡಿಕೊಂಡು ನಮಗೆ ಮಾದರಿಯಾಗಿದ್ದರು ಎಂದು ತಿಳಿಸಿದರು. ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ ಯಾವುದೇ ವ್ಯಕ್ತಿ ಎಷ್ಟೇ ಬಡವನಾಗಿರಲಿ, ಶ್ರೀಮಂತನಾಗಿರಲಿ, ಸಮಾಜದಲ್ಲಿ ಬಂಧು ಬಾಂಧವರ ಜೊತೆಗೆ ಯಾವ ರೀತಿಯಲ್ಲಿ ನಡೆದುಕೊಂಡರು ಎಂಬುದೇ ಮುಖ್ಯವಾಗುತ್ತದೆ. ಅದನ್ನೇ ಪ್ರತಿಯೊಬ್ಬರೂ ನೆನೆಸುತ್ತಾರೆ. ಅಂತ ಒಂದು ಮಹಾನ್ ವಿಭೂತಿ ರತ್ನಮ್ಮನವರ ಸ್ಮರಣೆ ಬಹಳ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವೀಸ್ ನ ಬಿ.ಕೆ.ಆರಾಧ್ಯ, ಪುಟ್ಟಶೇಖರಮೂರ್ತಿಸಿದ್ದಯ್ಯ, ಶ್ರೀನಿವಾಸ್, ಶಿವಕುಮಾರ್, ಸತೀಶ್, ನಾಗರಾಜ್, ಅರ್ಜುನ್, ಗುರುಮಲ್ಲಪ್ಪ,ಪುಷ್ಪ, ಗೀತಾ,ಮರುಗ ತಮ್ಮ, ಜ್ಯೋತಿ, ತ್ರಿವೇಣಿ, ಕುಮಾರಿ, ಮುಂತಾದವರು ಹಾಜರಿದ್ದರು.







