ರಾಷ್ಟ್ರಕವಿ ಕುವೆಂಪು ಮತ್ತು ಅವರ ಕುಟುಂಬದ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ. ಅವರ ಸೊಸೆ, ಡಾ. ಪೂರ್ಣ ಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಬಗ್ಗೆ ಮತ್ತು ಅವರ ಮದುವೆ, ಮಕ್ಕಳು ಹೀಗೆ ಎಲ್ಲವನ್ನೂ ಸಾಹಿತಿ, ಪತ್ರಕರ್ತರಾಗಿರುವ ಎಸ್. ಪ್ರಕಾಶ್ ಬಾಬು ಅವರು ಮೆಲುಕು ಹಾಕಿದ್ದಾರೆ ಅದನ್ನು ಇಲ್ಲಿ ಯಥಾ ಸ್ಥಿತಿಯಲ್ಲಿ ನಿಮ್ಮ ಮುಂದೆ ತೆರೆದಿಡಲಾಗಿದೆ…
ಡಾ. ಪೂರ್ಣ ಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರನ್ನು 2010ರಲ್ಲಿ ಸಂದರ್ಶನ ಮಾಡಿದ್ದೆ. ತೇಜಸ್ವಿ ಮತ್ತು ರಾಜೇಶ್ವರಿ ಇಬ್ಬರೂ ಮೈಸೂರ್ ವಿವಿ ಸಹಪಾಠಿಗಳು. ಇಬ್ಬರ ನಡುವೆ ಪ್ರೇಮಾoಕುರವಾಗುವವರೆಗೂ, ಇಬ್ಬರ ಪೋಷಕರು ಯಾರೂ ಎಂದಾಗಲಿ, ಜಾತಿ ಯಾವುದು ಎಂಬುದಾಗಲಿ ಪರಸ್ಪರ ಗೊತ್ತೇ ಇರಲಿಲ್ಲ. ಕೊನೆಗೆ ಕುವೆಂಪು ಮಗ ಅಂತ ಗೊತ್ತಾದಾಗ ರಾಜೇಶ್ವರಿ ಎದೆ ದಸಕ್ ಎಂದಿತ್ತಂತೆ.

ಇಷ್ಟು ದೊಡ್ಡ ಮನುಷ್ಯರ ಮಗ ಬೆಂಗಳೂರಿನ ಸರ್ಕಾರಿ ಗುಮಾಸ್ತ ರಂಗಪ್ಪರ ಮಗಳನ್ನು ಮದುವೆಯಾಗಲು ಸಾಧ್ಯವೇ? ಅದರಲ್ಲೂ ಬಹಳ ಹಿಂದುಳಿದ ಜಾತಿಗೆ ಸೇರಿದ ತಮ್ಮನ್ನು ಒಕ್ಕಲಿಗರಾದ ಕುವೆಂಪು ತಮ್ಮ ಸೊಸೆಯಾಗಿ ಒಪ್ಪಿಕೊಳ್ಳಲಾರರೆಂದು ಭಾವಿಸಿದ್ದರಂತೆ. ಹೀಗಾಗಿ, ರಾಜೇಶ್ವರಿ ಅವರೇ ತೇಜಸ್ವಿಯಿಂದ ದೂರ ಇರಲು ಪ್ರಯತ್ನಿಸುತ್ತಿದ್ದರು. ಆದರೇ, ತೇಜಸ್ವಿ ಅವರೇ ಹತ್ತಿರ ಬಂದು “ನಾನೂ ಮದುವೆ ಆಗುವುದಾದರೆ ನಿನ್ನನ್ನೇ ಅಂತ ಮನೆಯಲ್ಲಿ ಹೇಳಿದ್ದೇನೆ”ಎಂದು ಸ್ಪಷ್ಟವಾಗಿ ಹೇಳಿ, ಅವರ ಆತಂಕ ದೂರ ಮಾಡಿದ್ದರು .
ಸುಮಾರು 4ವರ್ಷಗಳ ನಂತರ, ಮೂಡಿಗೆರೆಯಲ್ಲಿ ತೇಜಸ್ವಿ ಖರೀದಿಸಿದ “ಚಿತ್ರ ಕೂಟ “ತೋಟದಲ್ಲೇ ಅವರ ಮದುವೆ ನಡೆಯಿತು. ಬೀಗರಾದ ಕುವೆಂಪು ಮತ್ತು ರಂಗಪ್ಪ ಮಂತ್ರ ಮಾಂಗಲ್ಯದ ಮೂಲಕ 1966ರ ನವಂಬರ್. 24ರಲ್ಲಿ ಧಾರೆ ಎರೆದುಕೊಟ್ಟಿದ್ದರು. ಈ ದಂಪತಿಗೆ ಸುಶ್ಮಿತಾ ಮತ್ತು ಈಶಾನ್ಯೆ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು. ಅವರೂ ಸಹ ಅಂತರ್ ಜಾತಿ, ಅಂತರ್ ಭಾಷಿಕರನ್ನೇ ಮದುವೆ ಆಗಿದ್ದಾರೆ. ಸುಶ್ಮಿತಾ ದೀಪಕ್ ಶೆಣೈ ರನ್ನು, ಈಶಾನ್ಯೆ ಜ್ಞಾನೇಶ್ ಖಾನೋಲ್ಕರ್ ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರೂ ಪ್ರಾಢಶಾಲೆವರೆಗೂ ಮೈಸೂರಿನ ಮಹಾಜನ ದಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ್ದರು ಎಂದರೆ, ಕುವೆಂಪು ಕುಟುಂಬ ಬಾಯಿ ಮಾತಿಗೆ ಕನ್ನಡ ಪ್ರೀತಿ ತೋರಿಸಿಲ್ಲ ಅನ್ನೋದು ಮನದಟ್ಟಾಗುತ್ತೆ.

ಆದರೇ ಅವರಿಬ್ಬರೂ ಕಾಲೇಜಿಗೇ ಬಂದಾಗ ಇಂಗ್ಲಿಷ್ ಮಾಧ್ಯಮ ಕಷ್ಟವಾಗಿ ನಮ್ಮಂತೆ ಪರಿತಪಿಸಿದ್ದರಂತೆ. ಅದರಲ್ಲೂ ಈಶಾನ್ಯೆ ಇಂಗ್ಲಿಷ್ ಕಲಿಕೆ ಕಷ್ಟವಾಗಿ ಅಳುತ್ತಿದ್ದಳಂತೆ. ಸಹ ಪಾಠಿ ಗೆಳತಿಯರೆಲ್ಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬಂದವರಾಗಿದ್ದರಿಂದ ಅವರೊಂದಿಗೆ ಮಾತಾಡಲು ಮುಜುಗರವಾಗುತ್ತೆ ಅಂತ ಅಮ್ಮನೊಂದಿಗೆ ಹೇಳಿಕೊಂಡು ಪರಿತಪಿಸಿದ್ದರಂತೆ. ಹೀಗೇ ಇಂಗ್ಲಿಷ್ ಭೂತಕ್ಕೆ ಹೆದರಿದ್ದ ಈಶಾನ್ಯೆ, ಅದನ್ನು ಪಳಗಿಸಿಕೊಂಡು, ಲಾರೆನ್ಸ್ ಇಂಗಲ್ಸ್ ಮತ್ತು ಗೆರಾಲ್ಡ್ ಡ್ಯೂರಲ್ ನ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಇದನ್ನು ಓದಿ…. ಬಣ್ಣ ಹಚ್ಚೋದು ಕಲಿತೆ, ಬದುಕೋದು ಕಲಿಯಲಿಲ್ಲ… ಇದು ಕಣ್ಮರೆಯಾದ ನಟ ಉಮೇಶ್ ರವರ ಸ್ವಗತ..
ಈ ಸಂದರ್ಭದಲ್ಲಿ ನನ್ನ ಕಾಲೇಜು ದಿನದಲ್ಲಿ ನಡೆದ ಘಟನೆಯೊಂದನ್ನು ಇಲ್ಲಿ ಹೇಳಲೇ ಬೇಕು. ಅದೂ 1986. ಪ್ರಥಮ ಪಿಯುಸಿಯಲ್ಲಿದ್ದೆ. ಮೈಸೂರು ಜೂನಿಯರ್ ಕಾಲೇಜು ಪಕ್ಕಾನೇ ಮಹಾರಾಣಿ ಕಾಲೇಜು. ಇಲ್ಲೇ ತೇಜಸ್ವಿ-ರಾಜೇಶ್ವರಿ ಕಿರಿಯ ಮಗಳು ಈಶಾನ್ಯೆ ಓದುತ್ತಿದ್ದರು. ಮಹಾಜನ ಪ್ರಾಢಶಾಲೆಯಲ್ಲಿ akeyab ಸಹಪಾಠಿ ಗಳಾಗಿದ್ದ ಮಂಜುನಾಥ್ ಮತ್ತು ರಮೇಶ ಒಮ್ಮೆ ಮಹಾರಾಣಿ ಕಾಲೇಜು ಬಳಿ ಸ್ನೇಹಿತೆಯರೊಂದಿಗೆ ಹೋಗುತ್ತಿದ್ದ ಈಶಾನ್ಯೆಯನ್ನು ನಮಗೆ ತೋರಿಸಿ, ಪೂರ್ಣ ಚಂದ್ರ ತೇಜಸ್ವಿ ಮಗಳು ಅಂತ ಹೇಳಿದರು.

ಅಷ್ಟಕ್ಕೆ ನಮ್ಮ ಗುಂಪಿನ ರಸಿಕ ಪಿಳ್ಳೆ ಪ್ರಸನ್ನ, ನಮಗೆ ನಾನ್ ಡೀಟೇಲ್ ಆಗಿದ್ದ ಕರ್ವಾಲೋ ಕಾದಂಬರಿಯಲ್ಲಿ ತೇಜಸ್ವಿ ಮುಸ್ಲಿಮರಿಗೇ ಅವಮಾನ ಆಗೋ ರೀತಿ ಸಂಭಾಷಣೆ ಬರೆದವ್ರೆ, ಅದನ್ನ ತೆಗೆಯಬೇಕು ಅಂತ ನಮ್ಮ ಮಸೀದಿಯಲ್ಲಿ ಮಾತಾಡ್ತಿದ್ರು ” ಎಂದು ನಮ್ಮ ಸಹಪಾಠಿ ಮೊಹಮ್ಮದ್ ಗೌಸ್ ಹೇಳಿದ್ದು ನೆನಪಾಗಿ ತಕ್ಷಣವೇ ಈಶಾನ್ಯೆ ಬಳಿ ಹೋಗಿ “ತೇಜಸ್ವಿ ಅವರೂ ಕರ್ವಾಲೋ ದಲ್ಲಿ ಮುಸ್ಲಿಮರಿಗೆ ಅವಮಾನ ಆಗೋ ರೀತಿ ಬರೆದಿದ್ದಾರೆ ಅಂತ ಮುಸ್ಲಿಮರೆಲ್ಲ ಗರಂ ಆಗೋವ್ರೇ ” ಅಂತ ಗಾಬರಿ ಪಡಿಸುವ ಮಾತಾಡಿದ್ದ.
ಆಗಷ್ಟೇ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ “ಈಡಿಯಟ್ ಮೊಹಮ್ಮದ್ “ಎಂಬ ಮಲಯಾಳಿ ಅನುವಾದಿತ ಕತೆ ಪ್ರಕಟವಾಗಿ, ಮೈಸೂರ್ ಬೆಂಗಳೂರಿನಲ್ಲಿ ಕೋಮು ಗಲಭೆಯಾಗಿ ಹತ್ತಾರು ಜನ ಗೋಲಿ ಬಾರ್ ಗೇ ಸತ್ತಿದ್ದ ಘಟನೆ ನಡೆದಿತ್ತು. ಈ ಕಾರಣಕ್ಕೊ ಏನೋ, ಈಶಾನ್ಯೆಗೂ ಸ್ವಲ್ಪ ಭಯವಾಗಿ “ನನ್ನ ತಂದೆಯವರತ್ರ ಮಾತಾಡಿ”ಅಂತ ಹೇಳಿ ಹೋದರು.

ಹೀಗೇ ಈಶಾನ್ಯೆಯೊಂದಿಗೆ ಮಾತಾಡಿದ ಪ್ರಸನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿ ಆಗಿದ್ದ. ಕಳೆದ 2021ರ ಜುಲೈ. 12ರಂದು ಕೊರೋನಾ ಕ್ರಿಮಿಗೆ ಬಲಿಯಾಗಿ ಹೋದ. ಪ್ರಸನ್ನನ ತಂದೆ ಶ್ರೀರಂಗಮೂರ್ತಿ ಪೋಸ್ಟ್ ಮಾಸ್ಟರ್ ಹುದ್ದೆ ಜೊತೆಗೆ ಸಿನಿಮಾ ನಾಟಕದಲ್ಲೂ ತೊಡಗಿಸಿಕೊಂಡಿದ್ದರು. ಡಾ. ರಾಜ್ ಕುಮಾರ್ ಅವರಿಗೇ ಕಷ್ಟದಲ್ಲಿ ನೆರವಾಗಿದ್ದ ಶ್ರೀರಂಗ ಮೂರ್ತಿ ಅವರಿಗೇ ತಮ್ಮ ನೂರನೇ ಚಿತ್ರ “ಭಾಗ್ಯದ ಬಾಗಿಲು” ಚಿತ್ರದ ಕತೆ ಸೇರಿದಂತೆ ಸಂಪೂರ್ಣ ನಿರ್ಮಾಣದ ಜವಾಬ್ದಾರಿ ನೀಡಿದ್ದರು. ಚಿತ್ರದ ಆರಂಭದಲ್ಲಿ ಬರುವ ವೈದ್ಯನ ಪಾತ್ರಧಾರಿಯೇ ಶ್ರೀ ರಂಗ ಮೂರ್ತಿ.

ಅಂದ ಹಾಗೇ, ಡಿಸೇಂಬರ್. 14ಕ್ಕೆ ರಾಜೇಶ್ವರಿ ಅವರು ನಿಧನರಾಗಿ 4 ವರ್ಷವಾಯಿತು. ಇದಕ್ಕೂ ಮೊದಲು ತೇಜಸ್ವಿ 2007ರ ಏಪ್ರಿಲ್. 5ರಂದು ಥಟ್ಟಂತ ಹೋಗಿ ಬಿಟ್ಟರು. ಅವರು ಇನ್ನೊಂದಿಷ್ಟು ವರ್ಷ ಬದುಕಿದ್ದರೆ, ಖಂಡಿತ ಜ್ಞಾನ ಪೀಠ ಪ್ರಶಸ್ತಿ ಬಂದಿರುತ್ತಿತ್ತು. ಹೀಗೇ ಆಗಿದ್ದರೆ ತಂದೆ -ಮಗ ಇಬ್ಬರೂ ಜ್ಞಾನ ಪೀಠ ಪ್ರಶಸ್ತಿ ಪಡೆದ ದಾಖಲೆ ಕನ್ನಡ ಸಾರಸ್ವತ ಲೋಕದಲ್ಲುಳಿಯುತ್ತಿತ್ತು.








