ಹುಣಸೂರು: ತಾಲೂಕಿನ ರತ್ನಪುರಿ ಗ್ರಾಮದಲ್ಲಿ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾದ ಆಂಜನೇಯ ಸ್ವಾಮಿ ಹಾಗೂ ಜಮಾಲ್ ಬೀಬೀ ಜಾತ್ರೆ ಅಂಗವಾಗಿ ಭಾನುವಾರ ರಾತ್ರಿ ಜಮಾಲ್ ಬೀಬೀ ಅಮ್ಮನವರ ಉರುಸ್ (ಗಂಧೋತ್ಸವ ) ಅದ್ದೂರಿಯಾಗಿ ಜರುಗಿತು. ರಾತ್ರಿ 8 ಗಂಟೆಗೆ ಹುಣಸೂರಿನ ಧರ್ಮ ಗುರು ಮುರ್ಷದ್ ನೇತೃತ್ವದಲ್ಲಿ ಉರುಸ್ ಗೆ ಪಕ್ಕದ ಗ್ರಾಮಗಳಾದ ಕುಡೀನೀರು ಮುದ್ದನಹಳ್ಳಿ, ಹುಣಸೂರಿನಿಂದ ಗಂಧವನ್ನು ಮೆರವಣಿಗೆಯಲ್ಲಿ ತಂದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಇಸ್ಲಾಂ ಧರ್ಮ ಗುರುಗಳು ಹಾಗೂ ಹರಕೆ ಹೊತ್ತ ಭಕ್ತರು ಕಬ್ಬಿಣದ ಅಯುಧಗಳಿಂದ ಮೈಗೆ ಚುಚ್ಚಿಕೊಂಡು ಭಕ್ತರಲ್ಲಿ ಆಚ್ಚರಿ ಮೂಡಿಸಿದರು. ಜಮಾಲ್ ಬೀ ಬೀ ದರ್ಗಾದಲ್ಲಿ ಹಿಂದೂ ಧರ್ಮದವರು ಚಾದರ್ ಹೊದಿಸಿ ಹರಕೆ ಸಲ್ಲಿಸಿದರು. ಹರಕೆ ಹೊತ್ತ ಮುಸ್ಲಿಂ ಹಾಗೂ ಹಿಂದು ಧರ್ಮದವರು ಸಿಹಿ ಬೂಂದಿ ಹಾಗೂ ಹೂವನ್ನು ಜಮಾಲ್ ಬೀಬೀ.ಅಮ್ಮನ ಸನ್ನಿಧಾನಕ್ಕೆ ನೀಡಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ. ಹರಕೆ ಹೊತ್ತ ಹಿಂದೂ ಧರ್ಮದ ಮಹಿಳೆಯರು ಕೂಡ ಹೂವು, ಸಿಹಿಬೂಂದಿ ಅಂಗಡಿಗಳ ಹತ್ತಿರ ಸರತಿ ಸಾಲಿನಲ್ಲಿ ನಿಂತು ಖರೀದಿಸಿ ಹರಕೆ ತೀರಿಸಿದರು.

ಕುಡಿನೀರು ಮುದ್ದನಹಳ್ಳಿ, ಹಳ್ಳದಕೊಪ್ಪಲು ನಂಜಾಪುರ, ಗೌರಿಪುರ, ಸಿಬಿಟಿ ಕಾಲೋನಿ, ಧರ್ಮಾಪುರ, ಸಂತೆಕೆರೆಕೊಡಿ, ತರಿಕಲ್ಲು, ಗದ್ದಿಗೆ, ಉದ್ದೂರು, ವಿನೋಭ ಕಾಲೋನಿ ಸೇರಿದಂತೆ ತಾಲ್ಲೂಕು ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿ ಜಮಾಲ್ ಬೀ ಅಮ್ಮನವರ ದರ್ಶನ ಪಡೆದರು.
ಜಮಾಲ್ ಬೀಬೀ. ಅಮ್ಮನವರ ದರ್ಗಾಕ್ಕೆ ಭೇಟಿ ನೀಡಿದ ಮಾತನಾಡಿದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಅವರು 30 ವರ್ಷಗಳಿಂದ ಈ ಜಾತ್ರೆಗೆ ಬರುತ್ತಿದ್ದೇನೆ. ಎಲ್ಲಿಯೂ ಈ ರೀತಿಯ ಕೋಮು ಸೌಹಾರ್ದದಿಂದ ನಡೆಯುತ್ತಿರುವ ಜಾತ್ರೆ ದೇಶಕ್ಕೆ ಮಾದರಿಯಾಗಿದೆ. ಇಡೀ ರಾಜ್ಯದಲ್ಲೇ ಹಿಂದೂ-ಮುಸ್ಲಿಮರ ಬಾವ್ಯಕೃತ ಮರವ ಇಂಥ ವಿಶಿಷ್ಟತೆಯ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿರುವುದು ಹಾಗೂ ಎರಡು ಧರ್ಮದವರು ಒಗ್ಗೂಡಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಜನಾಬ್ ಅಜೀಜುಲ್ಲಾ ಅಜ್ಜು ಜಾತ್ರೆಗೆ ಆಗಮಿಸಿ ದರ್ಗಾಗೆ ಭೇಟಿ ನೀಡಿ ಚಾದರ್ ಹೊದಿಸಿ ಮಾತನಾಡಿ, ಈ ಜಾತ್ರೆ ಕರ್ನಾಟಕಕ್ಕೆ ಮಾದರಿ, ನಾನು ಅಧ್ಯಕ್ಷನಾದ ಮೇಲೆ ಮೊದಲ ಬಾರಿ ಈ ಜಾತ್ರೆಗೆ ಭೇಟಿ ನೀಡಿ ಇಲ್ಲಿನ ಸೌಹಾರ್ದತೆ ನನಗೆ ಬಹಳ ಖುಷಿ ನೀಡಿದೆ, ಜಮಾಲ್ ಬೀಬೀ ಮಾ ರವರ ಅಭಿವೃದ್ಧಿಗೆ ಈಗಾಗಲೇ 30 ಲಕ್ಷ ಅನುದಾನ ನೀಡಿದ್ದು, ಇನ್ನು ಇಲ್ಲಿ ವಸತಿ ಸಮಸ್ಯೆ ಇದ್ದು, ಬರುವ ಭಕ್ತಾಧಿಗಳಿಗೆ ವಸತಿ ನಿಲಯ ನಿರ್ಮಿಸಲು ಶೀಘ್ರದಲ್ಲೇ ಹೆಚ್ಚಿನ ಅನುದಾನ ಕೊಡಿಸುತ್ತೇನೆ ಎಂದರು.
ಹುಡಾ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್ ಜಾತ್ರೆಗೆ ಭೇಟಿ ನೀಡಿ, ಈ ಜಾತ್ರೆ ಎಲ್ಲರಿಗೂ ಮಾದರಿ, ಆಂಜನೇಯಸ್ವಾಮಿ ಉತ್ಸವ ಹಾಗೂ ಜಮಾಲ್ ಬೀ ಬೀ ಅಮ್ಮನವರ ಉರುಸ್ (ಗಂಧೋತ್ಸವ) ನೋಡಲು ಒಂದು ದಿನ ಮುಂದನೇ ಭಕ್ತರು ರಾಜ್ಯದಲ್ಲೆಡೆಯಿಂದ ಆಗಮಿಸುತ್ತಾರೆ. ಹಿಂದೂ-ಮುಸ್ಲಿಂ ಎಂಬ ಭೇದಭಾವವಿಲ್ಲದೆ ಸೌಹಾರ್ದ ದಿಂದ ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಅದರಿಂದ ನಾನು ಪ್ರತಿ ವರ್ಷ ತಪ್ಪದೇ ಭಾಗವಹಿಸುತ್ತೇನೆ ಎಂದರು.

ಗಂಧೋತ್ಸವದಲ್ಲಿ ಜಾಮೀಯ ಕಮಿಟಿಯ ಅದ್ಯಕ್ಷ ಎಸ್.ಪಿ.ಚಾಂದ್, ಗ್ರಾಂ.ಪಂ.ಸದಸ್ಯ ಕಾರ್ಯದರ್ಶಿ ಇರ್ಷಾದ್ ಅಲಿ ಖಾನ್, ಮುಂಖಡರಾದ ತಾ.ಪಂ.ಮಾ.ಸದಸ್ಯ ಅಜ್ಗರ್ ಪಾಷ, ವಿಜೇಂದ್ರಕುಮಾರ್, ಅಲ್ತಾಪ್ ಷರೀಫ್, ನೂರ್ ಅಹಮದ್, ಬಾಷಿರ್ ಅಹಮದ್, ಅನ್ವರ್ ಪಾಷ, ಸಾಧಿಕ್, ಮಹಮದ್ ಚಾಂದ್, ಸೇರಿದಂತೆ ಗಣ್ಯರು ಭಾಗವಹಿಸಿದ್ದರು.








