Editor choiceLatest

ಇವತ್ತು ರವಿಬೆಳೆಗೆರೆ ನೆನಪಾದ್ರು…   ಮಾರ್ಚ್ 15 ಅವರ ಹುಟ್ಟುಹಬ್ಬ… ಹ್ಯಾಪಿ ಬರ್ತ್ ಡೇ ರವೀ… ಸರ್..

ರವಿಬೆಳಗೆರೆ ಇವತ್ತು ನಮ್ಮೊಂದಿಗಿದ್ದಿದ್ದರೆ 68 ವರ್ಷಗಳು ತುಂಬಿ ಹೋಗುತ್ತಿತ್ತು.. ಆದರೆ ಇವತ್ತು ಅವರಿಲ್ಲ ನೆನಪುಗಳಿವೆ.. ಅವರು ಬರೆದಿಟ್ಟ ಪುಸ್ತಕಗಳು, ಲೇಖನಗಳು, ಯೂಟ್ಯೂಬ್ ಗಳಲ್ಲಿ ಸಿಗುವ ಬದುಕಿಗೆ ಜೀವ ತುಂಬುವ, ಸಮಾಧಾನ ಹೇಳುವ ಮಾತುಗಳಿವೆ… ಇವು ಅವರು ಎಲ್ಲಿಯೂ ಹೋಗಿಲ್ಲ ನಮ್ಮೊಂದಿಗಿದ್ದಾರೆ ಎಂಬ ಸಮಾಧಾನ ನೀಡುತ್ತವೆ…

ಅದ್ಯಾಕೋ ಗೊತ್ತಿಲ್ಲ ಬರವಣಿಗೆ ವಿಚಾರ ಬಂದಾಗ ಅವರು ಇಷ್ಟವಾಗುತ್ತಾ ಹೋಗುತ್ತಾರೆ… ಅವರನ್ನು ಸಾಹಿತಿಯಾಗಿ, ಬರಹಗಾರರಾಗಿ ನೋಡುವುದಕ್ಕಿಂತಲೂ ಹೆಚ್ಚಾಗಿ ನಮ್ಮಂಥವರು ಒಬ್ಬ ಪತ್ರಕರ್ತನಾಗಿ ನೋಡುವುದಕ್ಕೆ ಇಷ್ಟಪಡುತ್ತಾರೆ.. ಇದಕ್ಕೆ ಕಾರಣ ಅವರ ಪತ್ರಿಕೆ ಹಾಯ್ ಬೆಂಗಳೂರ್ ಮತ್ತು ಅದರಲ್ಲಿ ಬರುತ್ತಿದ್ದ ವರದಿಗಳು, ಲೇಖನಗಳು, ಅಂಕಣಗಳು.. ಒಬ್ಬ ಪತ್ರಕರ್ತನಿಗೆ ಅದರಲ್ಲೂ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಜಮಾನದಲ್ಲಿ ಅವರಂತೆ ನಾವು ಬರೆಯಬೇಕು.. ಅವರಂತೆ ಪತ್ರಕರ್ತನಾಗಿ ಬೆಳೆಯಬೇಕೆಂದು ಕೊಂಡವರಿಗೆ ಅವರೇ ರೋಲ್ ಮಾಡಲ್…

ಸುಮಾರು ಎರಡೂವರೆ ದಶಕಗಳ ಹಿಂದೆ ಟ್ಯಾಬ್ಲಾಯ್ಡ್ ಪತ್ರಿಕೆಗಳನ್ನು ಓದುವ ದೊಡ್ಡದೊಂದು ಓದುಗರ ಬಳಗವಿತ್ತು.. ಅವತ್ತಿನ ಕಾಲಕ್ಕೆ ಲಂಕೇಶ್, ಈ ವಾರ, ಮುಂಗಾರು, ಪೊಲೀಸ್ ನ್ಯೂಸ್ ಸೇರಿದಂತೆ ಹತ್ತಾರು ಪತ್ರಿಕೆಗಳು ಪ್ರತಿ ಪುಸ್ತಕದಂಗಡಿಯಲ್ಲಿ ನೇತಾಡುತ್ತಿದ್ದವು.. ಅವುಗಳನ್ನೆಲ್ಲ ಕೊಂಡು ಓದುವುದು ಒಂಥರಾ ಮಜಾ ಕೊಡುತ್ತಿತ್ತು.. ಅದರಲ್ಲೂ ಹಾಯ್ ಬೆಂಗಳೂರ್ ಬಂದ ನಂತರ ಟ್ಯಾಬ್ಲಾಯ್ಡ್  ಪತ್ರಿಕಾವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಯಿತು. ಕಪ್ಪುಬಿಳುಪು ಪತ್ರಿಕೆ ಹೊಸ ಓದುಗರನ್ನು ಹುಟ್ಟು ಹಾಕಿತು..

ರಾಜಕೀಯ, ಕ್ರೈಂ, ತನಿಖಾವರದಿಗಳಾಚೆಗೆ ಅಂಕಣಗಳು, ಧಾರವಾಹಿಗಳು ಮಾತ್ರವಲ್ಲದೆ ಯುವ ಓದುಗರಿಗೆ ಇಷ್ಟವಾಗುವ ಲವ್ ಲವಿಕೆ… ನೊಂದವರ ತಲೆ ಸವರಿ ಸಮಾಧಾನ ಹೇಳುವಂತಿದ್ದ ಬಾಟಮ್ ಐಟಮ್… ಬದುಕಿನ ಕಷ್ಟಕೋಟಲೆಗಳನ್ನು ತೆರೆದಿಡುವ ಖಾಸ್ ಬಾತ್..  ಎಲ್ಲವೂ ಯುವ ಓದುಗರನ್ನು ಸೆಳೆಯಲಾರಂಭಿಸಿತು. ಒಬ್ಬ ಸಂಪಾದಕ ಓದುಗರನ್ನು ಹೀಗೂ ತಲುಪಬಹುದು ಅಷ್ಟೇ ಅಲ್ಲ ಹತ್ತಿರವೂ ಆಗಬಹುದು ಎಂಬುದನ್ನು ರವಿಬೆಳಗೆರೆ ತೋರಿಸಿಕೊಟ್ಟರು…

ಸಂಪಾದಕನನ್ನು ಏಕವಚನದಲ್ಲಿ ಸಂಭೋದಿಸಿ ಪತ್ರ ಬರೆಯುವ ಮಟ್ಟಿಗೆ ಅವರು ಓದುಗರ ಹೃದಯಕ್ಕೆ ಹತ್ತಿರವಾಗಿ ಬಿಟ್ಟರು… ಜಯಂತ್ ಕಾಯ್ಕಿಣಿ, ವಿಶ್ವೇಶ್ವರ ಭಟ್, ಜೋಗಿ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರ ಅಂಕಣಗಳು ಪತ್ರಿಕೆಗೆ ಜೀವ ತುಂಬಲಾರಂಭಿಸಿದವು… ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಪತ್ರಿಕೆ ರಾರಾಜಿಸಲಾರಂಭಿಸಿತು.. ಬಸ್, ಟೆಂಪೋ, ಟ್ರೈನ್ ಹೀಗೆ ಪ್ರಯಾಣಿಸುವ  ಪ್ರಯಾಣಿಕರ ಕೈನಲ್ಲೂ ಪತ್ರಿಕೆ ಕಾಣಲಾರಂಭಿಸಿತ್ತು..

ಅವತ್ತಿನ ದಿನಗಳಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಪತ್ರಕರ್ತರಿಗೆ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಕೆಲಸ ಮಾಡಬೇಕೆಂಬ ಬಯಕೆ ಇಲ್ಲದಿರಲಿಲ್ಲ. ಅದಕ್ಕೆ ಸಾಕ್ಷಿಯಾಗಿದ್ದು ವರದಿಗಾರರ ಹುದ್ದೆಗೆ ಕರೆದಿದ್ದ ಸಂದರ್ಶನ… ಅವತ್ತಿನ ಸಂದರ್ಶನಕ್ಕೆ ನೂರಾರು ಮಂದಿ ಬಂದಿದ್ದರು… ಪದ್ಮನಾಭನಗರದ ಅವರ ಕಚೇರಿ ತುಂಬಾ ಸಂದರ್ಶನಕ್ಕೆ ಬಂದಿದ್ದ ವರದಿಗಾರರೇ ಗಿಜಿಗುಟ್ಟುತ್ತಿದ್ದರು…

ರವಿಬೆಳೆಗೆರೆ ಏನೇ ಮಾಡಿದರೂ ಅದು ಇತರರಗಿಂತ ಭಿನ್ನವಾಗಿರುತ್ತಿತ್ತು… ಅವರು ನಡೆಸುತ್ತಿದ್ದ ಸಂದರ್ಶನವೂ ಅಷ್ಟೇ… ಅದಕ್ಕಿಂತ ಹೆಚ್ಚಾಗಿ ಅವರು ವರದಿಗಾರರ ಹುದ್ದೆಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ ಬಳಿಕ ಅರ್ಜಿ ಸಲ್ಲಿಸುವ ವರದಿಗಾರರಿಗೆ ಸಂದರ್ಶನಕ್ಕೆ ಕರೆಯುತ್ತಿದ್ದ ಆ ಪತ್ರ ತುಂಬಾ ವಿಭಿನ್ನವಾಗಿರುತ್ತಿತ್ತು.. ಅದನ್ನು ಓದಿದರೆ ಸಂದರ್ಶನಕ್ಕೆ ಕರೆದಂತೆ ಭಾಸವಾಗುತ್ತಿರಲಿಲ್ಲ.. ಕುಶಲೋಪರಿ ಜತೆಗೆ  ಕೊನೆಯಲ್ಲಿ ತಪ್ಪದೆ ಬರುತ್ತೀರಲ್ಲ… ಎಂಬ ವಾಕ್ಯವೂ ಸೇರಿರುತ್ತಿತ್ತು… ಅದಾಗಲೇ (ಇವತ್ತಿಗೂ) ಪೊಲೀಸ್ ನ್ಯೂಸ್ ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ನನಗೂ ಹಾಯ್ ಬೆಂಗಳೂರ್ ನಲ್ಲಿ ಕೆಲಸ ಮಾಡುವ ಬಯಕೆ ಹುಟ್ಟಿದ್ದು ಸುಳ್ಳಲ್ಲ..

ಸಂದರ್ಶನಕ್ಕೆಂದು ಅವರ ಕಚೇರಿ ಹುಡುಕಿಕೊಂಡು ತಲುಪುವ ಹೊತ್ತಿಗೆ ಸುಸ್ತಾಗಿತ್ತು. ಇವತ್ತು ಲೋಕೇಶನ್ ಹಾಕಿಕೊಂಡು ಸುಲಭವಾಗಿ ತಲುಪಬಹುದು… ಆದರೆ ಅವತ್ತು ಹಾಗಿರಲಿಲ್ಲ.. ದಾರಿಯಲ್ಲಿ ಸಿಕ್ಕವರನ್ನು ಕೇಳಿಕೊಂಡು ಹೋಗಬೇಕಾಗುತ್ತಿತ್ತು… ಹೀಗೆ ದಾರಿ ಹೇಳಿಕೊಡುತ್ತಿದ್ದವರ ಪೈಕಿ ದಾರಿ ತಪ್ಪಿಸುತ್ತಿದ್ದವರೇ ಜಾಸ್ತಿ ಇದ್ದರು.. ಆಗೂ ಹೀಗೂ ಕಚೇರಿಯನ್ನು ತಲುಪಿಯಾಗಿತ್ತು.. ಆದರೆ ಸಂದರ್ಶನಕ್ಕೆ ಬಂದಿದ್ದ ವರದಿಗಾರರನ್ನು ನೋಡಿದಾಗ ಅಚ್ಚರಿಯಾಗಿತ್ತು..  ಎಲ್ಲರೂ ಹಾಯ್ ಬೆಂಗಳೂರ್ ನ್ನು ಹಿಡಿದುಕೊಂಡು ಓದುವವರೇ… ಎಲ್ಲರ ಮನಸ್ಸಿನಲ್ಲಿ ಇದ್ದದ್ದು ಪ್ರಶ್ನೆ ಕೇಳುತ್ತಾರೆ ಅದಕ್ಕೆ ಉತ್ತರಿಸಲು ತಯಾರಾಗಿರ ಬೇಕೆನ್ನುವುದು.. ಅದಕ್ಕಿಂತ ಹೆಚ್ಚಾಗಿ ತಾವು ಬರೆದಿದ್ದ ಲೇಖನ, ವರದಿಗಳು ಪ್ರಕಟವಾಗಿದ್ದ ಪತ್ರಿಕೆಗಳನ್ನು ಹೊತ್ತು ತಂದವರಿಗೂ ಕೊರತೆಯಿರಲಿಲ್ಲ…

ಕೊಡಗಿನಿಂದ ಹೋದವರ ಪೈಕಿ ನಾನು ಯೂನಸ್ ಮಾತ್ರ ಇದ್ದದ್ದು… ಮಧ್ಯಾಹ್ನ ಶುರುವಾದ ಸಂದರ್ಶನ ಮುಂದುವರೆದಿತ್ತು. ಮಧ್ಯಾಹ್ನ ನಾವಿಬ್ಬರೂ ಪಕ್ಕದಲ್ಲಿದ್ದ ಹೋಟೆಲ್ ಗೆ ಹೋಗಿ ಊಟ ಮಾಡಿ ಬಂದು ಕುಳಿತು ಕೊಂಡೆವು… ಸಂದರ್ಶನ ಮುಗಿಸಿಕೊಂಡು ಬಂದವರನ್ನು ಎಲ್ಲರೂ ಮುತ್ತಿಕೊಂಡು ಏನು ಕೇಳಿದರು? ಎಂದು ಪ್ರಶ್ನಿಸುತ್ತಿದ್ದರು.. ಅದಕ್ಕಿಂತ ಹೆಚ್ಚಾಗಿ ಎಲ್ಲರ ಜೊತೆಗೂ ರವಿ ಬೆಳಗೆರೆ ಅವರು ಕನಿಷ್ಟ ಕಾಲುಗಂಟೆಗೂ ಹೆಚ್ಚು ಹೊತ್ತು ಮಾತನಾಡುತ್ತಿದ್ದರು.. ಹೀಗಾಗಿ ಸಂದರ್ಶನ ಮುಗಿಸಿಕೊಂಡು ಬಂದವರು ಅಲ್ಲಿಟ್ಟಿದ್ದ ನೀರನ್ನು ಕುಡಿದು ಸುಧಾರಿಸಿಕೊಳ್ಳುತ್ತಿದ್ದರು…

ಸಂಜೆ ಹೊತ್ತಿಗೆ ನಮ್ಮ ಸರದಿ ಬಂದಿತ್ತು… ಬೆಳಿಗ್ಗೆ ಯಿಂದ ಐವತ್ತಕ್ಕೂ ಹೆಚ್ಚು ಜನರೊಂದಿಗೆ ಮಾತನಾಡಿದ್ದರೂ ಅವರ ಮುಖದಲ್ಲಿ ಬಳಲಿಕೆ ಕಾಣುತ್ತಿರಲಿಲ್ಲ.. ಬದಲಿಗೆ ಒಂಥರಾ ಲವಲವಿಕೆ… ಅವರು ಪ್ರಶ್ನೆಗಳನ್ನು ಕೇಳುತ್ತಾರೆಂದುಕೊಂಡಿದ್ದೆ.. ಆದರೆ ಅವರು ಮಾಮೂಲಿಯಾಗಿಯೇ ಕುಶಲೋಪರಿಗಳನ್ನು ವಿಚಾರಿಸಿದರು… ಕೊಡಗು ಅಲ್ಲಿನ ಟಿಂಬರ್ ಮಾಫಿಯಾ.. ರೋಜರ್ ಚಿಟ್ಟಿಚ್ಚಾ? ಕ್ರೈಂ ವಿಚಾರಗಳು ಹೀಗೆ ಎಲ್ಲದರ ಬಗ್ಗೆಯೂ ಮಾತನಾಡಿದರು.. ಅವತ್ತು ಅವರ ಕ್ಯಾಬೀನ್ ನಲ್ಲಿ ಅವರೊಂದಿಗೆ ಚಾಮರಾಜ ಸವಡಿ ಕುಳಿತಿದ್ದರು… ಚಾಮರಾಜಸವಡಿ ಮಿತಭಾಷಿ ಅವರು ರವಿಬೆಳಗೆರೆ ಅವರ ಮಾತಿಗೆ ತಲೆದೂಗುತ್ತಿದ್ದರಷ್ಟೆ..

ಒಬ್ಬ ಪತ್ರಿಕೆಯ ಸಂಪಾದಕ ಹೀಗೂ ಸಂದರ್ಶನ ಮಾಡಬಹುದಾ? ಎಂಬ ಪ್ರಶ್ನೆ ಕಾಡಲಾರಂಭಿಸಿತು.. ಕೆಲಸ ಕೊಟ್ಟರೆ ಬೆಂಗಳೂರಿಗೆ ಬರಬೇಕು ಕಚೇರಿಯಲ್ಲಿಯೇ ಉಳಿದುಕೊಳ್ಳಬೇಕು… ನಾವು ನಿಮಗೆ ಸ್ಲೇಟ್ ಕೊಟ್ಟು ಹೊಸದಾಗಿ ಬರೆಯೋದನ್ನು ಕಲಿಸುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿ… ಹೋಗಿ ಕೊಡಗಿನ ಟಿಂಬರ್ ಮಾಫಿಯಾದ ಬಗ್ಗೆ ವರದಿ ಬರೆದು ಕಳಿಸಿ ಎಂದಿದ್ದರು… ಜತೆಗೆ ಬಸ್ ಭತ್ಯೆ ಕೊಡಲು ಮರೆತಿರಲಿಲ್ಲ… ಅದೊಂದು ಅದ್ಭುತ ಅನುಭವ ನೀಡಿತು…

ಆ ದಿನಗಳಲ್ಲಿ ಕೊಡಗನ್ನು ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ… ಅವರನ್ನು ಹತ್ತಿರದಿಂದ ನೋಡಿ ಮಾತಾಡಿದ ಸಂತಸವಿತ್ತು… ಇದಾದ  ಬಹಳ ವರ್ಷಗಳ ನಂತರ 2005ರಲ್ಲಿ ಮೈಸೂರು ಮಿತ್ರ ಪತ್ರಿಕೆಗೆ ಸೇರ್ಪಡೆಗೊಂಡಾಗ ಅದೇ ವರ್ಷ ಪತ್ರಿಕೆಯ 25ನೇ ವರ್ಷದ ವಾರ್ಪಿಕೋತ್ಸವ ಸಮಾರಂಭ ಮೈಸೂರಿನ ಕ್ರಾಫರ್ಡ್  ಹಾಲ್ ನಲ್ಲಿ ನಡೆದಿತ್ತು… ಈ ಸಮಾರಂಭಕ್ಕೆ ಅವರನ್ನು ಅತಿಥಿಗಳಾಗಿ ಕರೆಯಿಸಲಾಗಿತ್ತು… ಅವತ್ತು ಕೊನೆಯದಾಗಿ ನೋಡಿದ್ದು…  ಇವತ್ತು(ಮಾ.15) ರವಿಬೆಳೆಗೆರೆ ಅವರ ಹುಟ್ಟು ಹಬ್ಬ ಒಂದೆರಡು ದಶಕಗಳ ಹಿಂದಿನ ನೆನಪು ಹಾಗೆ ಜಾರಿ ಬಂತು… ಹ್ಯಾಪಿ ಬರ್ತ್ ಡೇ ರವೀ… ಸರ್..

B M Lavakumar

admin
the authoradmin

Leave a Reply

Translate to any language you want