ಕನ್ನಡ ಸಿನಿಮಾರಂಗದಲ್ಲಿ ಏನೆಲ್ಲಾ ಆಗಿದೆ ಎಂಬುದರ ಬಗ್ಗೆ ಮೆಲುಕು ಹಾಕುತ್ತಾ ಹೋದಂತೆ ಹತ್ತು ಹಲವು ವಿಚಾರಗಳು ನಮ್ಮ ಮುಂದೆ ಸರಿಯುತ್ತಾ ಹೋಗುತ್ತದೆ. ಆಗಿನ ಕಲಾವಿದರ ಬದುಕಿನ ಕಥೆಯೂ ರೋಚಕವಾಗಿತ್ತು. ಇಂತಹವರ ಪೈಕಿ ರಿಯಲ್ ಹೀರೋ ಕೆಂಪರಾಜ ಅರಸು ಒಬ್ಬರಾಗಿದ್ದಾರೆ.
ಮೈಸೂರಿನ ಮಹಾರಾಜ ಒಡೆಯರ್ ಕುಟುಂಬಕ್ಕೆ ತೀರ ಹತ್ತಿರ ಸಂಬಂಧಿ ಆಗಿದ್ದ ನವಯುವಕ ಕೆಂಪರಾಜ್ ಅರಸ್ ಹುಣಸೂರು ಬಳಿ ಕಲ್ಲಹಳ್ಳಿ ಗ್ರಾಮದಲ್ಲಿ ದಿ.5.2.1917ರಂದು ಜನಿಸಿದರು. ಅರಸು ಮನೆತನಕ್ಕೆ ಸೇರಿದ 6 ಅಡಿಗೂ ಮೀರಿ ಎತ್ತರವಿದ್ದ ಆಜಾನುಬಾಹು ಕೆಂಪರಾಜ್ ಅರಸ್ ಕೇವಲ ಶೋಕಿಗಾಗಿ ಸಿನಿಮಾ ನಟನಾದವರು. ಮೈಸೂರು ರಾಜ್ಯವನ್ನು ’ಕರ್ನಾಟಕ’ ಎಂದು ಪುನರ್ ನಾಮಕರಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಸೋದರ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ
English Literature ಪದವೀಧರನಾದ ತಮ್ಮ ಮಗನನ್ನು ಅರಮನೆ, ಸರ್ಕಾರಿ ಹುದ್ದೆಗೆ ಸೇರಿಸಲು ಅಥವಾ ಲಾಯರ್, ಡಾಕ್ಟರ್, ಇಂಜಿನಿಯರ್, ಮಾಡಿಸಲು ಇವರ ತಂದೆ ತಾಯಿ ಆಸೆ ಪಟ್ಟಿದ್ದರು. ಆದರೆ, ಪೋಷಕರ ಶ್ರಮ ವ್ಯರ್ಥಗೊಳಿಸಿ ಅವರ ಇಷ್ಟಕ್ಕೆ ವಿರುದ್ಧ ರೆಬೆಲ್ ಆಗಿ ತಮ್ಮಇಷ್ಟದಂತೆ ಹೇ(ಕೇ)ಳದೆ ರಾತ್ರೋರಾತ್ರಿ ಬಾಂಬೆಗೆ ಪಯಣ ಬೆಳೆಸಿದ ಭೂಪ(ತಿ). ಗೊತ್ತು ಗುರಿಯಿಲ್ಲದ ಮುಂಬೈನಲ್ಲಿ ಹಲವಾರು ದಿನಗಳು ಅಲೆದಲೆದು ಕಡೆಗೆ ಮೆಹಬೂಬ್ ಫಿಲಂ ಸ್ಟುಡಿಯೋ ತಲುಪಿದರು. ಬಾಲಿವುಡ್‌ನ ಅತಿರಥ ಮಹಾರಥ ನಟರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಡೈಲಾಗ್ ಡೆಲಿವರಿ ಮತ್ತು ಆಕ್ಷನ್ ತೋರಿಸಿ ಶಹಬ್ಬಾಸ್‌ಗಿರಿ ಪಡೆದ ಕನ್ನಡಿಗ.
ಅಂದಿನ ಕಾಲಕ್ಕೆ ಅಪರೂಪವಾಗಿದ್ದ ಸ್ಟಂಟ್ ಹೀರೋಗಳಲ್ಲಿ ಅಗ್ರಸ್ಥಾನ ಗಿಟ್ಟಿಸಿದ್ದ ಹವ್ಯಾಸಿ ಕಲಾವಿದ. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಇವರನ್ನು tall fellow the real hero ಎನ್ನುತ್ತಿದ್ದರು. ಒಮ್ಮೆ, ಮುಂಬೈನ ಖ್ಯಾತ ನಿರ್ಮಾಪಕ- ನಿರ್ದೇಶಕರಾಗಿದ್ದ ಹಿಮಾಂಶುರಾಯ್ ಬಳಿ ಹಿಂದಿ ಚಿತ್ರದಲ್ಲಿ ನಟಿಸಲು ಛಾನ್ಸ್ ಕೇಳಿದಾಗ, ರಾಯ್ ಪತ್ನಿ ಚೊಚ್ಚಲ ಫ಼ಾಲ್ಕೆಪ್ರಶಸ್ತಿ ವಿಜೇತ ನಟಿ ದೇವಿಕಾ ರಾಣಿಯು ಅರಸ್‌ರನ್ನು ದಿಟ್ಟಿಸಿ ನೋಡುತ್ತ “you are too tall” ಎಂದಾಗ ತಕ್ಷಣವೆ ಕೆಂಪರಾಜ್ ಅರಸ್ no, no, madam, you are too short ಎಂಬ ದಿಟ್ಟ ಉತ್ತರ ನೀಡಿ ಆಕೆಯನ್ನು ಆಶ್ಚರ್ಯ ಚಕಿತಗೊಳಿಸಿದ ಧೀರ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು
ಕೇವಲ ಶಿಫ಼ಾರಸ್ಸು, ಹಣ, ರಾಜಕೀಯ, ಇತ್ಯಾದಿ ಆಧಾರದ ಮೇಲೆ ಮಣೆ ಹಾಕುತ್ತಿದ್ದ ಮತ್ತು ಪ್ರತಿಭೆಗೆ ಪುರಸ್ಕಾರ ಸಿಗದ ಮುಂಬೈ ಚಿತ್ರರಂಗಕ್ಕೆ ಬೈಬೈ ಹೇಳಿದ ಕೆಂಪರಾಜ್ ಅರಸ್ ಬಂದ ದಾರಿಗೆ ಸುಂಕವಿಲ್ಲದಂತೆ ಮೈಸೂರಿಗೆ ಹಿಂದಿರುಗಿದರು. ಅನಿವಾರ್ಯವಾಗಿ ಟೈಗರ್ ವರದಾಚಾರ್ಯರ ನಾಟಕ ಕಂಪನಿ ಸೇರಿ ಹಳೇ ಮೈಸೂರು ರಾಜ್ಯಾದ್ಯಂತ ಜನಪ್ರಿಯ ನಟರಾದರು. ಪೌರಾಣಿಕ ಐತಿಹಾಸಿಕ ಅಥವಾ ಸಾಮಾಜಿಕ ನಾಟಕದ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿ ಬೊಂಬಾಟ್ ಖುಷಿಪಡಿಸುತ್ತಿದ್ದ ಪ್ರತಿಭಾವಂತ ನಟ.
ಬ್ರಿಟಿಷ್ ಕಲೆಕ್ಟರಿಂದ Rare & Efficient ciniman ಎಂದು ಪಬ್ಲಿಕ್ ಕಾಂಪ್ಲಿಮೆಂಟ್ಸ್ ಪಡೆದ ಟಿಪಿಕಲ್ Actor! ನೂರಾರು ಪ್ರದರ್ಶನ ಕಂಡಿದ್ದ ರಾಜಾವಿಕ್ರಮ ನಾಟಕದಲ್ಲಿ ವಿಕ್ರಮನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದೇಶಾದ್ಯಂತ ಖ್ಯಾತರಾದರು. ಈ ನಾಟಕವು1954ರಲ್ಲಿ ಸಿನಿಮಾ ರೂಪದಲ್ಲಿ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಂಡು ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆವ ಮೂಲಕ ದಾಖಲೆ ಮಾಡಿದ್ದು ಇತಿಹಾಸ! ಸಿನಿಮಾದಲ್ಲೂ ರಾಜಾವಿಕ್ರಮನ ಪಾತ್ರದಲ್ಲಿ ಶ್ರೇಷ್ಠ ಅಭಿನಯ ನೀಡಿ ಪ್ರಶಸ್ತಿ ಪುರಸ್ಕಾರ ಪಡೆದರು!
ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..
ಸ್ವತಃ ನಿರ್ಮಾಪಕ- ನಿರ್ದೇಶಕರಾಗಿ ’ಕಾರ್ಕೋಟ್ಟೈ’ ಮತ್ತು ’ಅಳಗರ್ ಮಲೈ ಕಳವನ್’ ತಮಿಳು ಚಿತ್ರಗಳನ್ನು ಹಾಗೂ ನಳ ದಮಯಂತಿ ಚಿತ್ರವನ್ನು ಕನ್ನಡ, ತೆಲುಗು, ತಮಿಳ್ ಮೂರೂ ಭಾಷೆಗಳಲ್ಲಿ ನಿರ್ಮಿಸಿ, ನಿರ್ದೇಶಿಸಿ, ನಟಿಸಿ ದ.ಭಾರತದಾದ್ಯಂತ ಬಿಡುಗಡೆಗೊಳಿಸಿ ನೂತನ ದಾಖಲೆ ನಿರ್ಮಿಸಿದರು. ಬಾಕ್ಸಾಫೀಸ್ ರೆಕಾರ್ಡ್ ಜತೆಗೆ ಪ್ರಶಸ್ತಿಯನ್ನೂ ಗಳಿಸಿತು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನ್ನಡಪುತ್ರ ಚಂದನವನದ ಚಾಣಾಕ್ಷ ಹೀರೋ ಕೆಂಪರಾಜ್ ಅರಸ್ 18.5.1982ರಂದು ತಮ್ಮ 66ನೇ ವಯಸ್ಸಲ್ಲಿ ಬೆಂಗಳೂರಲ್ಲಿ ನಿಧನರಾದರು!
ಕೆಂಪರಾಜ್ ಅರಸ್ ನಟಿಸಿದ ಸಿನಿಮಾಗಳು ಯಾವುದೆಂದರೆ, ಜೀವನನಾಟಕ, ಕೃಷ್ಣಲೀಲ, ಮಹಾನಂದ, ಭಕ್ತರಾಮದಾಸ, ಶಿವಪಾರ್ವತಿ, ತಿಲೋತ್ತಮೆ, ಶ್ರೀನಿವಾಸಕಲ್ಯಾಣ(1952), ರಾಜಾವಿಕ್ರಮ, ಜಲದುರ್ಗ, ನಳದಮಯಂತಿ, ರತ್ನಗಿರಿ ರಹಸ್ಯ, ರಾಜಾಸತ್ಯವ್ರತ, ನವಕೋಟಿ ನಾರಾಯಣ, ನವಜೀವನ(1964,ಕಡೇಚಿತ್ರ).