LatestSports

ದುಬಾರೆಯಲ್ಲಿ ರಿವರ್ ರಾಫ್ಟಿಂಗ್… ಭೋರ್ಗರೆದು ಹರಿಯುವ ಕಾವೇರಿ ನದಿಯಲ್ಲಿ ಸವಾರಿ ಮಾಡುವುದೇ ರೋಮಾಂಚಕಾರಿ ರಸಾನುಭವ.. ಇದು ಮಳೆಗಾಲದ ಸ್ಪೆಷಲ್…

ಈ ಬಾರಿ ಯಾರೂ ಊಹಿಸದ ರೀತಿಯಲ್ಲಿ ಮುಂಗಾರು ಆರಂಭದ ಹೊತ್ತಿನಲ್ಲಿಯೇ ಭಾರಿ ಮಳೆ ಸುರಿದಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಬಹುಶಃ ನಡು ಮಳೆಗಾಲದಲ್ಲಿಯೂ ಇಷ್ಟೊಂದು ಮಳೆ ಸುರಿಯುವುದಿಲ್ಲವೇನೋ? ಅಷ್ಟರ ಮಟ್ಟಿಗೆ ಮಳೆ ಸುರಿದಿದ್ದು, ನದಿ, ಜಲಪಾತ, ಹಳ್ಳಕೊಳ್ಳಗಳಲ್ಲಿ ಜೀವಕಳೆ ತಂದಿದೆ. ಬೇಸಿಗೆಯಲ್ಲಿ ನೀರಿನ ಮಟ್ಟ ಕುಸಿತ ಕಂಡಿದ್ದ ಕಾವೇರಿ ನದಿ ಇದೀಗ ಧುಮ್ಮಿಕ್ಕಿ ಹರಿಯಲು ಆರಂಭಿಸಿದೆ. ಹೀಗಾಗಿ ಕೊಡಗಿನ ದುಬಾರೆಯಲ್ಲಿ ಮತ್ತೆ ರಿವರ್ ರಾಫ್ಟಿಂಗ್ ಶುರುವಾಗಿದೆ. ಭೋರ್ಗರೆಯುವ ನದಿಯಲ್ಲಿ ಸಾಹಸಮಯ ಕ್ರೀಡೆ ನೋಡುಗರ ಮೈಜುಮ್ಮೆನಿಸಿದರೆ, ರಾಫ್ಟಿಂಗ್ ನಲ್ಲಿ ವಿಹಾರ ಮಾಡುವವರಿಗೆ ಮರೆಯಲಾರದ ಅನುಭವ ನೀಡುತ್ತಿದೆ.

ಕೊಡಗಿನಲ್ಲಿ ಮುಂಗಾರು ಮಳೆ ಆರಂಭವಾದರೆ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಬೇಸಿಗೆಯಲ್ಲಿ ಮದುವೆ, ಕ್ರೀಡೆ ಎನ್ನುತ್ತಾ ಜಾಲಿಯಾಗಿ ದಿನಕಳೆದವರು ಗದ್ದೆ, ತೋಟದ ಕೆಲಸದತ್ತ ಹೊರಳುತ್ತಾರೆ. ಹಾಗೆಂದು ಮಳೆಗಾಲದಲ್ಲಿ ಕ್ರೀಡೆಗೆ ವಿರಾಮ ಹೇಳುವ ಜಾಯಮಾನ ಇವರದಲ್ಲ. ಏನಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಲ್ಳುವ ಸಲುವಾಗಿಯೇ ಕೆಸರುಗದ್ದೆಯನ್ನೇ ಕ್ರೀಡಾಂಗಣವನ್ನಾಗಿ ಮಾಡುವ ಇಲ್ಲಿನ ಕ್ರೀಡಾಪ್ರೇಮಿಗಳು ಅಲ್ಲೇ ವಿವಿಧ ಕ್ರೀಡೆಗಳನ್ನು ಆಡಿ ಖುಷಿ ಪಟ್ಟರೆ ಮತ್ತೆ ಕೆಲವರು ತುಂಬಿ ಹರಿಯುವ ಕಾವೇರಿ ನದಿಯಲ್ಲಿ ರಿವರ್ ರಾಫ್ಟಿಂಗ್‌ ನಂತಹ ಸಾಹಸಮಯ ಕ್ರೀಡೆಯತ್ತ ಒಲವು ತೋರುತ್ತಾರೆ.

ಕೊಡಗಿನ ಮಳೆ ಇತರೆಡೆಗೆ ಹೋಲಿಸಿದರೆ ಸ್ವಲ್ಪ ಭಿನ್ನ ಎಂದರೆ ತಪ್ಪಾಗಲಾರದು. ಏಕೆಂದರೆ ಒಮ್ಮೆ ಪ್ರಾರಂಭವಾಯಿತೆಂದರೆ ಧೋ… ಎಂದು ಇಲ್ಲವೆ ಜಿಟಿ…ಜಿಟಿ…ಸುರಿಯುತ್ತಲೇ ಇರುತ್ತದೆ. ಈ ಮಳೆಗೆ ಮನೆಯಿಂದ ಹೊರಬರುವುದೇ ಒಂದು ಸಾಹಸ. ಅದರಲ್ಲಿಯೂ ಮಳೆಗೆ ಆಟವಾಡುವುದೆಂದರೆ ಸುಲಭದ ಮಾತಲ್ಲ. ಆದರೆ ಕೊಡಗಿನವರು ಹಾಗಲ್ಲ ಸುರಿಯುವ ಮಳೆಗೆ, ಬೀಸುವ ಗಾಳಿಗೆ, ಕೊರೆಯುವ ಚಳಿಗೆ ಮನೆಯೊಳಗೆ ಕಂಬಳಿ ಹೊದ್ದು ಕೂರುವವರಲ್ಲ. ಏನಾದರೊಂದು ಸಾಹಸಮಯ ಕಾರ್ಯ ಮಾಡುತ್ತಲೇ ಇರುತ್ತಾರೆ. ಹೀಗಾಗಿಯೇ ದುಬಾರೆಯಲ್ಲಿ ಕಳೆದ ಒಂದೂವರೆ ದಶಕದ ಹಿಂದೆ ಆರಂಭವಾದ ರಿವರ್ ರಾಫ್ಟಿಂಗ್ ಇವತ್ತು ಜನಪ್ರಿಯವಾಗುತ್ತಾ ಮುನ್ನಡೆಯುತ್ತಿದೆ.

ರಿವರ್ ರಾಫ್ಟಿಂಗ್ ಗಾಗಿಯೇ ಜಿಲ್ಲೆಯ ಜನ ಮಾತ್ರವಲ್ಲದೆ, ಹೊರ ಜಿಲ್ಲೆ, ರಾಜ್ಯಗಳಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಉತ್ತೇಜನ ನೀಡಿದೆ. ಮೊದಲೆಲ್ಲ ಮಳೆಗಾಲದಲ್ಲಿ ಕೊಡಗಿನತ್ತ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಮಾನ್ಸೂನ್ ಟ್ರಿಪ್ ಜನಪ್ರಿಯವಾಗುತ್ತಿರುವುದರಿಂದ ರಿವರ್ ರಾಫ್ಟಿಂಗ್ ಗಾಗಿಯೇ ಹೆಚ್ಚಿನವರು ದುಬಾರೆಯತ್ತ ಮುಖ ಮಾಡುತ್ತಿದ್ದಾರೆ.

ಜಿಲ್ಲೆಯ ಸಾಹಸಿ ಕ್ರೀಡಾಪ್ರೇಮಿಗಳಿಗಾಗಿಯೇ ಕಾವೇರಿ ನದಿಯಲ್ಲಿ ಆರಂಭವಾದ ರಿವರ್ ರಾಫ್ಟಿಂಗ್ ಇವತ್ತು ಗಡಿ ಮೀರಿ ಬೆಳೆದು ನಿಂತಿದೆ. ಪ್ರತಿವರ್ಷವೂ ಈ ಸಾಹಸ ಕ್ರೀಡೆ ಆರಂಭವಾಗಬೇಕಾದರೆ ಧೋ ಎಂದು ಮಳೆ ಸುರಿಯ ಬೇಕು. ಕಾವೇರಿ ನದಿ ಉಕ್ಕಿ ಹರಿಯಬೇಕಿತ್ತು ಹೀಗಾಗಿ. ಅಂತಹ ದಿನಗಳಿಗಾಗಿ  ಜೂನ್, ಜುಲೈ ತನಕ ಕಾಯಬೇಕಾಗಿತ್ತು. ಆದರೆ ಈ ಬಾರಿ ಮೇ ತಿಂಗಳಲ್ಲಿಯೇ ಮಳೆ ಅಬ್ಬರಿಸಿದ ಕಾರಣದಿಂದಾಗಿ ಕಾವೇರಿ ನದಿ ಉಕ್ಕಿ ಹರಿದಿದ್ದು ರಿವರ್ ರಾಫ್ಟಿಂಗ್ ಆರಂಭಕ್ಕೆ ಮುನ್ನುಡಿ ಬರೆದಾಗಿದೆ.

ಇನ್ನು ದುಬಾರೆಯಲ್ಲಿ ನಡೆಯುವ ರಿವರ್ ರಾಫ್ಟಿಂಗ್ ಬಗ್ಗೆ ಹೇಳಬೇಕೆಂದರೆ ಪ್ರತಿ ವರ್ಷ ಮಳೆಗಾಲದಲ್ಲಿ ಕುಶಾಲನಗರ ಸಮೀಪದ ದುಬಾರೆಯ ಆನೆ ಶಿಬಿರದ ಬಳಿ ರಿವರ್ ರ‍್ಯಾಫ್ಟಿಂಗ್ ಆರಂಭವಾಗುತ್ತದೆ. ಸುರಿಯುವ ಮಳೆಗೆ ಮೈಯೊಡ್ಡಿ, ಉಕ್ಕಿಹರಿಯುವ ನದಿಯಲ್ಲಿ ತೇಲಾಡುತ್ತಾ… ಏಳುತ್ತಾ….ಬೀಳುತ್ತಾ…. ಸಾಗುವ ರ‍್ಯಾಫ್ಟಿಂಗ್‌ ನ್ನು ದೂರದಿಂದ ನೋಡುವಾಗಲೇ ಮೈ ರೋಮಾಂಚನಗೊಳ್ಳುತ್ತದೆ. ಇನ್ನು ತಾವೇ ಕುಳಿತು ವಿಹರಿಸಿದರೆ ಅದೊಂದು ಮರೆಯಲಾರದ ರಸಾನುಭವ ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಂದೂವರೆ ದಶಕಗಳ  ಹಿಂದೆ ಮೊದಲ ಬಾರಿಗೆ ಬಿಟ್ಟಂಗಾಲದ ಕೂರ್ಗ್ ಅಡ್ವೆಂಚರ್ ಕ್ಲಬ್  ದುಬಾರೆಯಲ್ಲಿ ರಿವರ್ ರಾಫ್ಟಿಂಗ್ ಆರಂಭಿಸಿದಾಗ ಇದಕ್ಕೆ ಜಂಗಲ್ ಲಾಡ್ಜ್  ಸಹಕಾರವೂ ನೀಡಿತ್ತು. ಆರಂಭದಲ್ಲಿ ಪ್ರಚಾರದ ಕೊರತೆ, ಮತ್ತಿತರ ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಅದು ನಡೆಯಲಿಲ್ಲ. ಆದರೆ ನಂತರದ ವರ್ಷಗಳಲ್ಲಿ ಜನಪ್ರಿಯವಾಗ ತೊಡಗಿತು. ಮೊದಲ ವರ್ಷದಲ್ಲಿ ನೂರರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಂದಿ ಇತ್ತೀಚಿಗಿನ ವರ್ಷಗಳಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೇಸಿಗೆಯಲ್ಲಿ ಕಾವೇರಿ ನದಿಯಲ್ಲಿ ನೀರು ಕಡಿಮೆಯಾದಾಗ ಮಾತ್ರ ಇದು ನಿಲ್ಲುತ್ತದೆ. ಉಳಿದಂತೆ ಎಲ್ಲ ದಿನಗಳಲ್ಲಿಯೂ ನಡೆಯುತ್ತದೆ.

ವಿಶೇಷ ಏನೆಂದರೆ ಈ ಬಾರಿ ಮೇ ತಿಂಗಳಲ್ಲಿಯೇ ಮುಂಗಾರು ಆರ್ಭಟಕ್ಕೆ ಕಾವೇರಿ ನದಿ ಧುಮ್ಮಿಕ್ಕಿದ್ದರಿಂದ ಬಹುಬೇಗವೇ ಚಾಲನೆ ಸಿಕ್ಕಿದೆ. ದುಬಾರೆಯ ಆನೆ ಶಿಬಿರದಿಂದ ಪ್ರಾರಂಭವಾಗುವ ರಾಫ್ಟಿಂಗ್ ಹೊಸಪಟ್ಟಣ, ಗುಡ್ಡೆಹೊಸೂರು, ಕಾವೇರಿ ನಿಸರ್ಗಧಾಮದ ಸುಮಾರು 11 ಕಿ.ಮೀ ಸಾಗಿ ಪಾಲಿಟೆಕ್ನಿಕ್  ಬಳಿ ಅಂತ್ಯಗೊಳ್ಳುತ್ತದೆ. ಉಕ್ಕಿಹರಿಯುವ ನದಿಯಲ್ಲಿ ಇಷ್ಟೊಂದು ದೂರ ಕ್ರಮಿಸುವುದು ಹುಡುಗಾಟವಲ್ಲ  ಇದಕ್ಕೆ ಧೈರ್ಯ ಬೇಕು. ಇನ್ನು ರಾಫ್ಟೊಂದರಲ್ಲಿ ಆರು ಮಂದಿ ಒಮ್ಮೆಗೆ ಕುಳಿತು ರ‍್ಯಾಫ್ಟಿಂಗ್ ಮಾಡಬಹುದಾಗಿದೆ.

ರ‍್ಯಾಫ್ಟಿಂಗ್ ಮಾಡುವ ಸಂದರ್ಭ ಜೊತೆಯಲ್ಲಿ ಪರಿಣಿತರು ಇರುವುದರಿಂದ ಭಯಪಡಬೇಕಾಗಿಲ್ಲ. ರಿವರ್  ರಾಫ್ಟಿಂಗ್ ಮಾಡುವವರಿಗೆ ಮೊದಲಿಗೆ ಜೀವರಕ್ಷಕ ಜಾಕಿಟ್ ತೊಡಿಸಲಾಗುತ್ತದೆ. ಜೊತೆಗೆ ಹೆಲ್ಮೆಟ್ ನೀಡಲಾಗುತ್ತದೆ. ಇಲ್ಲಿ ಪುರುಷರು, ಮಹಿಳೆಯರು ಎಲ್ಲರೂ ಪಾಲ್ಗೊಳ್ಳಬಹುದಾಗಿದೆ. ಕೊಡಗಿನ ಮಟ್ಟಿಗೆ ಇದೊಂದು ಗಮನಾರ್ಹ ಮತ್ತು ಜನಪ್ರಿಯ ಕ್ರೀಡೆಯಾಗಿ ಇಲ್ಲಿ ಗಮನಸೆಳೆಯುತ್ತದೆ.

ಕೆಲಸದ ಒತ್ತಡದಲ್ಲಿ ದಿನ ಕಳೆಯುವವರು ಮಲೆನಾಡಿನ ಮಳೆಗೆ ಮೈಕೊಟ್ಟು ಎಂಜಾಯ್ ಮಾಡುತ್ತಾ ಬಿಸಿ ಬಿಸಿಯಾಗಿ ಕಾಫಿ ಹೀರುತ್ತಾ ಎಂಜಾಯ್ ಮಾಡುವ ಸಲುವಾಗಿ ಇಲ್ಲಿಗೆ ಬರುತ್ತಿದ್ದು, ಹಾಗೆಯೇ ಭೋರ್ಗರೆಯುವ ಕಾವೇರಿ ನದಿಯಲ್ಲಿ ರಾಫ್ಟಿಂಗ್ ಮೂಲಕ ಸವಾರಿ ಮಾಡಿ ಅದ್ಭುತ, ರೋಮಾಂಚನದ ಕ್ಷಣಗಳನ್ನು ತಮ್ಮೊಂದಿಗೆ ಹೊತ್ತುಕೊಂಡು ಮರಳುತ್ತಾರೆ.. ಇಲ್ಲಿ ಕಳೆದ ಕ್ಷಣಗಳು ರಸದೌತಣವಾಗುವುದರಿಂದ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ.

B.M.Lavakumar

 

admin
the authoradmin

ನಿಮ್ಮದೊಂದು ಉತ್ತರ

Translate to any language you want