LatestPolitical

ಕೆ.ಆರ್.ನಗರ ಕ್ಷೇತ್ರ  ಪುತ್ರ ಧನುಷ್ ಗೆ ಬಿಟ್ಟು ಕೊಡ್ತಾರಾ ಸಾ ರಾ ಮಹೇಶ್? ಹೇಗಿದೆ ತಯಾರಿ?

ಬೆಂಗಳೂರು: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಶಾಸಕರಾಗಿ, ಸಚಿವರಾಗಿ ರಾಜಕೀಯ ಕ್ಷೇತ್ರದಲ್ಲಿ ಅದರಲ್ಲೂ ಜೆಡಿಎಸ್ ಪಕ್ಷದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡು ದೇವೇಗೌಡರ ಕುಟುಂಬಕ್ಕೆ ಆತ್ಮೀಯವಾಗಿರುವ ಸಾ ರಾ ಮಹೇಶ್ ಅವರು ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ತಾವು ಸ್ಪರ್ಧಿಸುತ್ತಿದ್ದ ಕೆ.ಆರ್.ನಗರ ಕ್ಷೇತ್ರವನ್ನು ತಮ್ಮ ಪುತ್ರ ಸಾ.ರಾ.ಧನುಷ್ ಗೆ ಬಿಟ್ಟುಕೊಟ್ಟು ತಾವು ಮೈಸೂರಿನ ಚಾಮುಂಡೇಶ್ವರಿ ಅಥವಾ ಚಾಮರಾಜ ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆಯಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿವೆ..

ರಾಜಕೀಯ ನಾಯಕರ ಪೈಕಿ ಹೆಚ್ಚಿನವರು ತಾವು ಪಕ್ಷದಲ್ಲಿ ಹಿಡಿತ ಸಾಧಿಸಿ ಪ್ರಭಾವಿ ನಾಯಕರಿದ್ದಾಗಲೇ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಎಳೆದು ತಂದು ಗೆಲ್ಲಿಸಿಕೊಂಡು ಬರುವ ನಿರ್ಧಾರ ಮಾಡುವುದು ಸಾಮಾನ್ಯವಾಗಿದೆ. ಹೀಗಾಗಿಯೇ ಎಲ್ಲ ಪಕ್ಷಗಳಲ್ಲಿ ಅಪ್ಪ, ಮಕ್ಕಳು, ಅಣ್ಣತಮ್ಮಂದಿರು ಹೀಗೆ ಎಲ್ಲರೂ ಇದ್ದಾರೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳದ್ದು ಒಂದೇ ತೂಕವಾಗಿದೆ. ಕುಟುಂಬ ರಾಜಕಾರಣ ಎನ್ನುವುದು ಈಗ ಮಾಮೂಲಿಯಾಗಿದೆ. ಆ ಬಗ್ಗೆ  ಒಬ್ಬರು ಮತ್ತೊಬ್ಬರತ್ತ ಬೊಟ್ಟು ಮಾಡಿ ತೋರಿಸುವಂತೆಯೇ ಇಲ್ಲ…

ಕೇಂದ್ರದಿಂದ ಹಿಡಿದು ರಾಜ್ಯದ ತನಕ ಇಂತಹ ಕುಟುಂಬ ರಾಜಕಾರಣ ನಡೆಯುತ್ತಲೇ  ಬರುತ್ತಿದೆ. ಕರ್ನಾಟಕದ ಮಟ್ಟಿಗೆ ದೇವೇಗೌಡರ ಕುಟುಂಬದ ಬಗ್ಗೆ ಹೇಳುತ್ತಾ ಅವರನ್ನು ಟೀಕಿಸುತ್ತಾ ಬಂದ ಹಲವು ನಾಯಕರು ಬಳಿಕ ಅದನ್ನೇ ಮಾಡಿದ್ದು, ಮಾಡುತ್ತಲೇ ಇದ್ದಾರೆ. ನಾಯಕರೆಲ್ಲರೂ ಅವರ ಮಕ್ಕಳನ್ನೇ ರಾಜಕೀಯಕ್ಕೆ ಎಳೆದು ತಂದು ಅವರನ್ನು ಎಂಎಲ್ ಎ, ಎಂಎಲ್ ಸಿ, ಸಂಸದರನ್ನಾಗಿ ಮಾಡಿ ಕೂರಿಸಿ ಬಿಡುತ್ತಾರೆ. ಹೀಗಾಗಿ ಬ್ಯಾನರ್ ಕಟ್ಟಿ, ಸಮಾವೇಶಕ್ಕೆ ಜನ ಸೇರಿಸಿ… ಹೀಗೆ ಪಕ್ಷಕ್ಕಾಗಿ ಹಗಲಿರುವ ದುಡಿದವರು ಮುಖಂಡರಾಗಿ, ಕಾರ್ಯಕರ್ತರಾಗಿ ಉಳಿದು ಬಿಡುತ್ತಾರೆ.

ರಾಜಕೀಯ ಮಾಡುವುದು ಇವತ್ತು ಸುಲಭವಾಗಿ ಉಳಿದಿಲ್ಲ. ಅದಕ್ಕೆ ಗಾಡ್ ಫಾದರ್, ಜತೆಗೆ ಹಣಬಲ, ತೋಳ್ಬಲ ಎಲ್ಲವೂ ಬೇಕಾಗಿದೆ. ಹೀಗಾಗಿ ಇದೆಲ್ಲ  ಇರುವವರು ಮಾತ್ರ  ರಾಜಕೀಯದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿರುವುದರಿಂದ ಅದೆಲ್ಲವೂ ಇರುವ ನಾಯಕರು ಬೇರೆಯವರನ್ನು ಬೆಳೆಸುವ ಗೋಜಿಗೆ ಹೋಗದೆ ತಮ್ಮ ಮಕ್ಕಳನ್ನೇ ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಸುಳ್ಳೇನಲ್ಲ.. ಆದ್ದರಿಂದ ಜವಾಹರಲಾಲ್ ನೆಹರುರಿಂದ ರಾಹುಲ್ ಗಾಂಧಿ ತನಕ ತಲೆಮಾರಿನಿಂದ ತಲೆ ಮಾರಿಗೆ ಎಲ್ಲ ಪಕ್ಷಗಳಲ್ಲಿ ಮುನ್ನಡೆಯುತ್ತಾ ಸಾಗುತ್ತಿದೆ.

ಹಾಗೆನೋಡಿದರೆ ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ  ಪ್ರಾದೇಶಿಕ ಪ್ರದೇಶಗಳಲ್ಲಿ ಕುಟುಂಬ ರಾಜಕಾರಣ ತುಸು ಜಾಸ್ತಿಯೇ ಎನ್ನಬೇಕು. ಇವತ್ತು ಕರ್ನಾಟಕದಲ್ಲಿ ಈ ಆರೋಪ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರ ಕುಟುಂಬದ ಮೇಲಿದೆ. ಆ ಕುಟುಂಬದ ರಾಜಕೀಯವನ್ನು ನೋಡಿದ್ದೇ ಆದರೆ  ಅಪ್ಪ, ಮಕ್ಕಳು, ಸೊಸೆ, ಮೊಮ್ಮಕ್ಕಳು ಎಲ್ಲರೂ ರಾಜಕೀಯವನ್ನು ನೋಡಿದವರೇ.. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕೆಲವು ಕುಟುಂಬಕ್ಕೆ ರಾಜಕೀಯ ಹಿನ್ನಲೆ ಇರುವುದರಿಂದ ಆ ಕುಟುಂಬದಲ್ಲಿ ಯಾರೇ ಚುನಾವಣೆಗೆ ಸ್ಪರ್ಧಿಸಿದರೂ ಗೆಲ್ಲುವ ತಾಕತ್ ಇರುತ್ತದೆ. ಜತೆಗೆ ನಾಯಕರ ಕೊರತೆಯೂ ಕೆಲವೊಮ್ಮೆ ತಮ್ಮದೇ ಕುಟುಂಬದವರು ಸ್ಪರ್ಧೆ ಮಾಡುವ ಅನಿವಾರ್ಯತೆಗೆ ತಳ್ಳಿ ಬಿಡುತ್ತದೆ.

ಇದೆಲ್ಲದರ ನಡುವೆ ಬಹುತೇಕ  ಹಿರಿಯ ನಾಯಕರು ತಮ್ಮ ಮಗ ಅಥವಾ ಮಗಳನ್ನು ರಾಜಕೀಯಕ್ಕೆ ತಂದಿದ್ದಾರೆ. ಕೆಲವರು ಯಶಸ್ಸಾದರೆ ಮತ್ತೆ ಕೆಲವರು ವಿಫಲರಾಗಿದ್ದಾರೆ. ಆದರೆ ಮಕ್ಕಳನ್ನು ರಾಜಕೀಯದಲ್ಲಿ ಗೆಲ್ಲಿಸಿಕೊಂಡು ಬರುವ ಅವರ ಬಯಕೆ ಮಾತ್ರ ನಿಂತಿಲ್ಲ. ಇದೀಗ ಜೆಡಿಎಸ್ ನಲ್ಲಿ ಪ್ರಭಾವಿ ನಾಯಕರಾಗಿರುವ ಸಾ ರಾ ಮಹೇಶ್ ಕೂಡ ತಮ್ಮ ಪುತ್ರ ಮೂಳೆತಜ್ಞ ಡಾ. ಸಾರಾ ಧನುಷ್ ಅವರನ್ನು ರಾಜಕೀಯಕ್ಕೆ ತರುವ ಯತ್ನ ನಡೆಸುತ್ತಿರುವುದು ಕಂಡು ಬರುತ್ತಿದೆ.

ಕೆ.ಆರ್.ನಗರ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಕಳೆದ ಬಾರಿ ಸೋಲು ಕಂಡಿರುವ ಸಾ ರಾ ಮಹೇಶ್ ಅವರು ಮುಂದಿನ 2028ಕ್ಕೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಮೈಸೂರಿನ ಚಾಮುಂಡೇಶ್ವರಿ ಅಥವಾ ಚಾಮರಾಜ ಕ್ಷೇತ್ರದತ್ತ ಮುಖ ಮಾಡಲಿದ್ದು ಕೆ.ಆರ್.ನಗರ ಕ್ಷೇತ್ರಕ್ಕೆ ತಮ್ಮ ಪುತ್ರನನ್ನು ತರುವ ಚಿಂತನೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಡಾ.ಸಾ ರಾ ಧನುಷ್ ಸಾಲಿಗ್ರಾಮ, ಕೆ ಆರ್ ನಗರ ತಾಲ್ಲೂಕುಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿರುವುದು, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ.

ಇನ್ನು ಸಾರಾ ಮಹೇಶ್ ಅವರ ರಾಜಕೀಯ ಜೀವನವನ್ನು ನೋಡಿದ್ದೇ ಆದರೆ ಅವರು  ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಮಾಡಿಕೊಂಡು ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ, ನಗರಾಧ್ಯಕ್ಷ ಕಾರ್ಯದರ್ಶಿ ಸೇರಿದಂತೆ ವಿಧ ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದವರು, 2004ರಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 25 ಸಾವಿರ ಮತ ಪಡೆದು ಸೋಲುಂಡರು ಆದರೆ ಛಲ ಬಿಡದೆ ರಾಜಕೀಯದಲ್ಲಿ ತೊಡಗಿಸಿಕೊಂಡ ಅವರಿಗೆ ರಾಜಕೀಯವಾಗಿ ತಿರುವು ಸಿಕ್ಕಿದ್ದು ಜೆಡಿಎಸ್ ಪಕ್ಷದಲ್ಲಿ ಪ್ರಭಾವಿ ನಾಯಕ, ಶಾಸಕರಾಗಿದ್ದ ದಿವಂಗತ ಮಂಚನಹಳ್ಳಿ ಮಹದೇವ್ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ ಬಳಿಕವೇ..

ಅವತ್ತು ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ನೆಲಕಚ್ಚುವ ಸ್ಥಿತಿಯಲ್ಲಿದ್ದಾಗ  ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ದಿವಂಗತ ಎಸ್ ನಂಜಪ್ಪನವರ ನೇತೃತ್ವದಲ್ಲಿ ಸಾ ರಾ ಮಹೇಶ್ ಅವರನ್ನು ಜೆಡಿಎಸ್ ಪಕ್ಷಕ್ಕೆ ತರಲಾಯಿತು. ಆ ನಂತರ ಅವರ ರಾಜಕೀಯ ಭವಿಷ್ಯ ಬದಲಾಯಿತು. ಅಲ್ಲಿಂದ ಮೂರು ಬಾರಿ ಅವರು ಜೆಡಿಎಸ್ ನಿಂದ ಗೆದ್ದು ಶಾಸಕರು, ಸಚಿವರಾದರು. ಆದರೆ 2023 ಚುನಾವಣೆಗೆ ಅವರ ಫ್ರಭಾವ ಕುಗ್ಗಿತ್ತು. ಜನ ಕ್ಷೇತ್ರದಲ್ಲಿ ಹೊಸ ಮುಖವನ್ನು ನೋಡುವ ಮನಸ್ಸು ಮಾಡಿದರು ಪರಿಣಾಮ ಸೋಲು ಕಂಡರು.

ಇದೀಗ ಕೆ.ಆರ್.ನಗರ ಕ್ಷೇತ್ರದಿಂದ ಪುತ್ರ ಸಾ.ರಾ ಧನುಷ್ ನ್ನು ಜೆಡಿಎಸ್ ನಿಂದ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ಚಿಂತನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಗೆ ಇನ್ನು ಎರಡು ವರ್ಷ ಬಾಕಿಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.

 

B M Lavakumar

admin
the authoradmin

ನಿಮ್ಮದೊಂದು ಉತ್ತರ

Translate to any language you want