ಸರಗೂರು(ಸರಗೂರು ದಾಸೇಗೌಡ್ರು): ತಾಲೂಕಿನ ಸಾಗರೆ ಗ್ರಾಮದಲ್ಲಿ ಶ್ರೀಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ದನಗಳ ಜಾತ್ರೆ, ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ, ದೇವರ ವಿಗ್ರಹಕ್ಕೆ ವಿವಿಧ ಅಭಿಷೇಕ ನಡೆಸಲಾಯಿತು. ದೇವರನ್ನು ಗಂಗೆ (ನದಿ)ಗೆ ಕರೆದುಕೊಂಡು ಹೋಗಿ ಪೂಜಾ ಪುನಸ್ಕಾರಗಳನ್ನು ನೆರವೇರಿಸಲಾಯಿತು. ಹಾಲು ಹರವಿ ಸೇವೆ, ನದಿಯಿಂದ ಕಳಸ ಹಾಗೂ ಹುಲಿವಾಹನದಲ್ಲಿ ಮಹದೇಶ್ವರಸ್ವಾಮಿ ವಿಗ್ರಹವನ್ನು ಅಲಂಕರಿಸಿಕೊಂಡು ಉತ್ಸವ, ಕಂಸಾಳೆ ಪದ, ವೀರಗಾಸೆ, ನಂದಿ ಧ್ವಜಾದೊಡನೆ ವಾದ್ಯಗೋಷ್ಠಿಗಳೊಂದಿಗೆ ಕರೆತರಲಾಯಿತು.

ಉತ್ಸವಮೂರ್ತಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂದು ದೇವಸ್ಥಾನವನ್ನು ಸೇರಿತು. ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಹದೇಶ್ವರಸ್ವಾಮಿ ದೇವರ ಬಿರುದು ಹೊತ್ತ ಅರ್ಚಕರು ಕೊಂಡ ಹಾಯ್ದರು. ಭಕ್ತರು ಕೊಂಡೊತ್ಸವ ಕಣ್ತುಂಬಿಕೊಂಡರು. ಭಕ್ತರು ತೆಂಗಿನಕಾಯಿ ಮತ್ತು ದವಸ ಧಾನ್ಯಗಳನ್ನು ಕೊಂಡಕ್ಕೆ ಹಾಕಿ ಪೂಜೆ ಸಲ್ಲಿಸಿದರು.

ಮುಂಜಾನೆ 3ಗಂಟೆ ವೇಳೆಗೆ ಕರ್ಪೂರದಿಂದ ಕೊಂಡ ಹಚ್ಚಲಾಯಿತು. ಮಹದೇಶ್ವರ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಹರಕೆ ಪೂಜೆ ಸಲ್ಲಿಸಿದರು. ಜಾತ್ರೆ ಪ್ರಾರಂಭ ದಿಂದ ಹಿಡಿದು ಜಾತ್ರೆ ಮುಗಿಯುವ ತನಕ ಪ್ರತಿ ನಿತ್ಯವೂ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

ಸಂಜೆ ಹುಲಿವಾಹನ ಉತ್ಸವ ಮೂರ್ತಿ, ಮಹದೇಶ್ವರಸ್ವಾಮಿ ಉತ್ಸವ ಮೂರ್ತಿ ಮತ್ತು ಬಿರುದು ಬಾವಲಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಜೋಡಿಲಿಂಗ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಬಿದ್ದಿತು.

ಈ ಜಾತ್ರೆಯಲ್ಲಿ ಆರೋಗ್ಯ ಇಲಾಖೆ, ಪಶುವೈದ್ಯ ಇಲಾಖೆಯವರು ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಜಾತ್ರೆ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸರಗೂರಿನ ಆರಕ್ಷಕ ಉಪ ನಿರೀಕ್ಷಕ ಕಿರಣ್ ರವರು ಹಾಗೂ ಸಿಬ್ಬಂದಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಿದ್ದರು.

ಇದೇ ಸಂದರ್ಭದಲ್ಲಿ ದನಗಳ ಪ್ರದರ್ಶನವನ್ನು ನಡೆಸಲಾಯಿತು. ರೈತರು ಅವುಗಳ ಜೊತೆ ದಾರಿ ಉದ್ದಕ್ಕೂ ವಾದ್ಯಗೋಷ್ಠಿ ಮೂಲಕ ಕುಣಿದು ಕುಪ್ಪಳಿಸಿದರು. ಚಿಕ್ಕೆರೆಯೂರು ವೆಂಕಟೇಶ್ ಬಿನ್ ತಿಮ್ಮೆಗೌಡ ರ ಎರಡು ಹಲ್ಲು ಹೋರಿಗೆ ಪ್ರಥಮ ಬಹುಮಾನವಾಗಿ ಕಲ್ಯಾಣ ರಾಜ್ಯ ರೈತ ಸಂಘದ ಅಧ್ಯಕ್ಷ ಚಂದನ್ ಗೌಡ ರವರು 15 ಸಾವಿರವನ್ನು ನೀಡಿದರು. ಎರಡನೇ ಬಹುಮಾನ ಬೀಚನಹಳ್ಳಿಯ ತೇಜಶ್ ಕಾಶಿಪತಿ ಎರಡನೇ ಬಹುಮಾನ ಸರಗೂರು ಎಪಿಎಂಸಿ ವತಿಯಿಂದ 10 ಸಾವಿರ ರೂ ಗಳನ್ನು ನೀಡಿದರು.

ಮೂರನೇ ಬಹುಮಾನವನ್ನು ಎಚ್ ಡಿ ಕೋಟೆಯ ವೀರಭದ್ರೇಗೌಡ ಕಮಿಟಿ ವತಿಯಿಂದ 7500 ರೂ ಗಳನ್ನು ನೀಡಲಾಯಿತು. ಸಮಾನಕರ ಬಹುಮಾನವಾಗಿ ಮೊತ್ತ ಗ್ರಾಮದ ಮಣಿಕಂಠಸ್ವಾಮಿ ಬಿನ್ ಮಲ್ಲಿಕಾರ್ಜುನ ರವರಿಗೆ ಎಪಿಎಂಸಿ ವತಿಯಿಂದ 5 ಸಾವಿರ ರೂಗಳನ್ನು, ಜಕ್ಕಳ್ಳಿ ಮಾಳದ ಜೆ.ಕೆ ರವಿಗೌಡ ಬಿನ್ ಕೂಸೇಗೌಡ ರವರಿಗೆ ಕಮಿಟಿಯ ವತಿಯಿಂದ 5 ಸಾವಿರ ರೂಗಳನ್ನು, ಕಂದೇಗಾಲ ಗ್ರಾಮದ ಸೋಮಯ್ಯ ಬಿನ್ ಗೋಪಾಲಯ್ಯರವರಿಗೆ ಎಪಿಎಂಸಿ ವತಿಯಿಂದ 5 ಸಾವಿರ ರೂಗಳನ್ನು ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಇದಲ್ಲದೆ ಜಾತ್ರಾ ಮಹೋತ್ಸವ ಅಂಗವಾಗಿ ವಾಲಿಬಾಲ್, ಕಬ್ಬಡಿ, ಕ್ರಿಕೆಟ್ ನಡೆಸಿದ್ದು ವಿಶೇಷವಾಗಿತ್ತು.

ಸಾಗರೆ ಗ್ರಾಮದ ಎಲ್ಲಾ ಸಮಾಜದ ಯಜಮಾನರುಗಳು ಹಾಗೂ ಮುಖಂಡರುಗಳು, ಯುವ ಮುಖಂಡರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.








