ಯಳಂದೂರು(ನಾಗರಾಜ ವೈ.ಕೆ.ಮೊಳೆ): ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ನಡೆದ ಅಗ್ನಿ ಅನಾಹುತದಿಂದಾಗಿ ಅಂಗಡಿ ಮಳಿಗೆಯನ್ನಿಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಹಲವರ ಬದುಕು ಬೀದಿಗೆ ಬಂದಿದೆ. ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಮುಂದೇನು ಮಾಡುವುದೆಂಬ ಚಿಂತೆಯಲ್ಲಿದ್ದಾರೆ.
ಇದೀಗ ಈ ನಿರಾಶ್ರಿತರ ನೆರವಿಗೆ ಸಂಘ ಸಂಸ್ಥೆಗಳು ಮುಂದೆ ಬರಬೇಕಿದೆ. ಇದೀಗ ಬೆಂಕಿಗೆ ಭಸ್ಮವಾದ ನಿರಾಶ್ರಿತರಿಗೆ ತಾಲ್ಲೂಕು ನಾಯಕ ಮಂಡಳಿಯ ವತಿಯಿಂದ ತಲಾ 10 ಸಾವಿರ ರೂಪಾಯಿ ಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮುರಳಿ ಕೃಷ್ಣ ಅಂಬಳೆ ಟೌನ್ ಪಂಚಾಯಿತಿ ಮಾಜಿ ಸದಸ್ಯ ಉಮಾಶಂಕರ್ ಉಮೇಶ್ ಚಂಗಚಹಳ್ಳಿ ಮಹದೇವಸ್ವಾಮಿ ಮಾದು ಅಗರ ನಾರಾಯಣಸ್ವಾಮಿ ಮಾಜಿ ಗ್ರಾಂ ಪಂ ಅಧ್ಯಕ್ಷ ಕಾಂತ ಪ್ರದೀಪ್ ಗೋಪಾಲ್ ರಂಗನಾಥ ಇತರರು ಹಾಜರಿದ್ದರು.
ಏನಿದು ಘಟನೆ…?

ಬಿಳಿಗಿರಿರಂಗನ ಬೆಟ್ಟದ ಸರ್ಕಲ್ ನಲ್ಲಿ ಅಂಗಡಿ, ಮುಂಗಟ್ಟುಗಳು, ಜ್ಯೂಸ್ ಸೆಂಟರ್, ಟೀ ಅಂಗಡಿ, ಬಜ್ಜಿ ಬೋಂಡ ಅಂಗಡಿ, ಹೀಗೆ ಹತ್ತಾರು ವ್ಯಾಪಾರ ಮಳಿಗೆಗಳಿದ್ದು, ಸಮೀಪದಲ್ಲಿಯೇ ಪಶುಸಂಗೋಪನ ಇಲಾಖೆಯ ಕಚೇರಿ ಹಾಗೂ ಸ್ವಲ್ಪ ದೂರದಲ್ಲಿ ಬಸ್ ನಿಲ್ದಾಣವೂ ಇದೆ. ಹೀಗಾಗಿ ವ್ಯಾಪಾರ ವಹಿವಾಟುಗಳು ಈ ಸಂರ್ಕಲ್ ನಲ್ಲಿ ಜೋರಾಗಿ ನಡೆಯುತ್ತಿದ್ದು, ವ್ಯಾಪಾರಸ್ಥರು ಇದೇ ಅಂಗಡಿ ಮಳಿಗೆಗಳಿಂದ ಬದುಕು ಕಟ್ಟಿಕೊಂಡಿದ್ದರು.
ಗುರುವಾರ(ಜ.8) ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ತಮ್ಮ ಮನೆಗೆ ತೆರಳಿದ್ದರು. ಆದರೆ ಅವರೆಲ್ಲರೂ ಜ.9ರ ಮುಂಜಾನೆ ಸಿಹಿ ನಿದ್ದೆಯಲ್ಲಿದ್ದಾಗಲೇ ಅಘಾತ ಸುದ್ದಿ ಅವರ ಕಿವಿಗೆ ಬಂದು ಬಡಿದಿದೆ. ಬೆಳಗ್ಗಿನ 3.30ರ ಸಮಯದಲ್ಲಿ ಇಲ್ಲಿ ಕಾಣಿಸಿಕೊಂಡ ಬೆಂಕಿ ಒಮ್ಮೆಲೆ ಹತ್ತಿ ಉರಿಯಲಾರಂಭಿಸಿತು. ಇದ್ದಕ್ಕಿದ್ದಂತೆ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆ ಹರಡಿ ಅಂಗಡಿ ಮುಂಗಟ್ಟುಗಳು ಬೆಂಕಿಯಲ್ಲಿ ಭಸ್ಮವಾಗಿದ್ದವು.








