ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಮೂಲಕ ತಾಲೂಕು ಕೇಂದ್ರಕ್ಕೆ ಅಭಿವೃದ್ಧಿಯ ಮುನ್ನುಡಿ ಬರೆಯಲಾಗಿದೆ ಎಂದು ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ಸಾಲಿಗ್ರಾಮ ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು. ಅಧಿಕಾರ ಯಾರಿಗೂ ಶಾಶ್ವತವಲ್ಲ ನಾವು ಉನ್ನತ ಸ್ಥಾನಕ್ಕೆ ಏರಿದ ನಂತರ ಜನರ ಮನಸ್ಸಿನಲ್ಲಿ ಉಳಿಯುವಂತೆ ಕೆಲಸ ಮಾಡಿದಾಗ ಮಾತ್ರ ಆ ಸ್ಥಾನ ನೀಡಿದ ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಗೌರವ ಸಲ್ಲಿಸಿದಂತೆ ಆಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿದ್ದರೂ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಅವಳಿ ತಾಲೂಕಿನಲ್ಲಿ ಸುಮಾರು 700 ಕೋಟಿಗಳಿಗೂ ಅಧಿಕ ಅನುದಾನ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು. ಕ್ಷೇತ್ರದಲ್ಲಿ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿ ಕೆಲಸ ಮಾಡದೆ ಕಳೆದ 15 ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದ ಕೆಲ ಗ್ರಾಮಗಳನ್ನು ಸೇರಿದಂತೆ ಎಲ್ಲಾ ಗ್ರಾಮಗಳ ಮೂಲ ಸೌಕರ್ಯಗಳ ಜತೆಗೆ ಸಮುದಾಯ ಭವನಗಳು ದೇಗುಲಗಳ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.
ವಿಶೇಷವಾಗಿ ಸಾಲಿಗ್ರಾಮ ಪಟ್ಟಣದ ಸಾರ್ವಜನಿಕ ಆರೋಗ್ಯ ಕೇಂದ್ರವನ್ನು ಸುಮಾರು 42 ಕೋಟಿ ರೂಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ತಾಲೂಕು ಕಚೇರಿಯ ನೂತನ ಕಟ್ಟಡಕ್ಕೆ ಸುಮಾರು 8 ಕೋಟಿ ಅನುದಾನ ನೀಡಲಾಗಿದ್ದು ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ ಇದರ ಜತೆಗೆ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು ಇದೀಗ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ದು ಇನ್ನು ಮುಂದೆ ಹೆಚ್ಚಿನ ಅನುದಾನ ಒದಗಿಸಿ ತಾಲೂಕು ಕೇಂದ್ರಕ್ಕೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಚಂದ್ರು, ಸಣ್ಣಪ್ಪ, ಅಸ್ಲಾಂ ಪಾಷಾ, ಸಂತೋಷ್, ಕಂಠಿ ಕುಮಾರ್, ಕಲಾಮೂರ್ತಿ, ಏನ್ ಸಿ ಪ್ರಸಾದ್, ಭೂ ನ್ಯಾಯ ಮಂಡಳಿ ಸದಸ್ಯರಾದ ಗೋವಿಂದ್ ರಾಜ್, ರಜನಿಕಾಂತ್ ಸೋಮಶೇಖರ್, ಎಲ್ ಐ ಸಿ ಮಹದೇವ, ಡೇರಿ ಮಾದು, ರಮೇಶ್, ಪಣಿತ್, ಹನಸೋಗೆ ನವೀನ್, ಪರಮೇಶ್, ಪಾಲಾಕ್ಷ, ಜಯರಾಮ ನಾಯಕ, ಪ್ರಭಾ, ಕೊತ್ವಾಲ್ ಮಂಜು ಸೇರಿದಂತೆ ನಾನಾ ಭಾಗದ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.








