ಒಂದು ಕಾಲದಲ್ಲಿ ಕೊಡಗಿನಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿದ್ದ ಶ್ರೀಗಂಧದ ಮರಗಳು ಇದೀಗ ಮಾಯವಾಗಿವೆ. ಅಳಿದುಳಿದರೂ ಅವುಗಳನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಇನ್ನು ಅರಣ್ಯದಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಲ್ಲುವ ಈ ಶ್ರೀಗಂಧದ ಗಿಡಗಳಿಗೆ ರಕ್ಷಣೆ ಇಲ್ಲದ ಕಾರಣ ಬೆಳೆಯುವ ಹಂತದಲ್ಲಿಯೇ ಕಟುಕರ ಕತ್ತಿ ಏಟಿಗೆ ಸಿಲುಕಿ ನಲುಗುತ್ತಿದೆ. ಹೀಗಿರುವಾಗ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆಯಿಂದ ಭೈರಪ್ಪನಗುಡಿಯವರೆಗೂ ಬೆಟ್ಟದೊಪಾದಿಯಲ್ಲಿ ಇರುವ ಸಾಲು, ಸಾಲು ಗುಡ್ಡ ಪ್ರದೇಶದಲ್ಲಿ ಹೇರಳವಾಗಿ ಬೆಳೆದುನಿಂತಿರುವ ಈ ಶ್ರೀಗಂಧದ ಗಿಡಗಳು ಕಟುಕರಿಂದ ನಮ್ಮನ್ನು ರಕ್ಷಿಸಿ – ಪೋಷಿಸಿ ಎಂದು ಅಂಗಲಾಚುತ್ತಿರುವಂತೆ ನೋಡುಗರಿಗೆ ಭಾಸವಾಗುತ್ತದೆ.
ಅರಣ್ಯ ಅಧಿಕಾರಿಗಳು ಹಾಗೂ ರೈತರಲ್ಲಿ ಒಡಂಬಡಿಕೆ ಅಗತ್ಯವಾಗಿದೆ. ಏಕೆಂದರೆ ಅರಣ್ಯದಂತೆ ಕಾಣುವ ಹೆದ್ದಾರಿಯ ಉದ್ದಕ್ಕೂ ಇರುವ ಇಲ್ಲಿನ ಗುಡ್ಡ ಪ್ರದೇಶಗಳಲ್ಲಿ ಬೆಳೆದು ನಿಂತ ವನಸಿರಿ ಶ್ರೀಗಂಧದ ಗಿಡಗಳು ರೈತರಿಗೆ ಸೇರಿದ ಹಕ್ಕಿನ ಭೂಮಿಯಲ್ಲಿ ಬೆಳೆದಿರುವ ಕಾರಣ ಆ ಗಿಡಗಳ ರಕ್ಷಣೆ ಅವರಿಂದ ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಇಲ್ಲಿನ ಶ್ರೀಗಂಧದ ಕೃಷಿಕರಿಗೆ ಅಭಯ ನೀಡಿ ಪೂರಕವಾದ ಸಹಕಾರ ನೀಡಿದಲ್ಲಿ ಈ ಅಮೂಲ್ಯ ಸಂಪತ್ತನ್ನು ಸಂರಕ್ಷಿಸಬಹುದಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲ ವಾಗುತ್ತದೆ.

ರೈತರಿಂದ ಖರೀದಿಸುವ ಗಂಧಕ್ಕೆ ಪ್ರತಿ ಕೆಜಿ ಗೆ 12 ಸಾವಿರ ರೂಗಳಿಂದ 13,700 ರೂಗಳತನಕ ಬೆಲೆ ನಿಗಧಿ ಮಾಡಿ ಖರೀದಿಸಲಾಗುತ್ತದೆ. ಅತ್ಯುತ್ತಮ ಗುಣಮಟ್ಟದ ಶ್ರೀಗಂಧಕ್ಕೆ ಒಂದು ಕೆಜಿಗೆ 17,700 ರೂ ಗಳೂ ಕೂಡ ಇದೆ. ರೈತರ ಭೂಮಿಯಲ್ಲಿ ಬೆಳೆದ ಶ್ರೀಗಂಧಕ್ಕೆ ಬೆಲೆ ನಿಗಧಿ ಮಾಡುವಾಗ ಹಾರ್ಟ್ ವುಡ್ ಅನ್ನು 20 ವರ್ಗಗಳಾಗಿ ಮಾಡಲಾಗುತ್ತದೆ.ಅದರ ಕಾಂಡವನ್ನು ಎ,ಬಿ,ಸಿ ಎಂದು ಮೂರು ವರ್ಗ ಮಾಡಲಾಗುತ್ತದೆ. ಹಾಗೆಯೇ ಇದರ ಎಲೆ, ಚಕ್ಕೆ, ತೊಗಟೆ, ಬೇರು ಆಧರಿಸಿ ಗುಣಮಟ್ಟ ನಿಗಧಿಯಾಗುತ್ತದೆ. ರೈತರು ಅರಣ್ಯ ಇಲಾಖೆಯ ಗಂಧದ ಕೋಠಿಗೆ ತಂದು ಕೊಟ್ಟ 6 ತಿಂಗಳ ಒಳಗಾಗಿ ಸರ್ಕಾರದಿಂದ ಬರುವ ಅನುದಾನದ ಲಭ್ಯತೆಯ ಮೇಲೆ ಹಣ ನೀಡಲಾಗುತ್ತಿದೆ. ಉತ್ಪನ್ನದ ಶೇ.10 ರಷ್ಟು ಹಣವನ್ನು ಪರಿಶೀಲನೆ ಶುಲ್ಕ ವಾಗಿ ಇಲಾಖೆ ಇಟ್ಟುಕೊಳ್ಳುತ್ತದೆ. ಉಳಿದ ಶೇ. 90 ರಷ್ಟು ಹಣವನ್ನು ರೈತರಿಗೆ ನೀಡಲಾಗುತ್ತದೆ ಎಂದು ಮೈಸೂರು ಶ್ರೀಗಂಧದ ಕೋಠಿಯ ಅರಣ್ಯಾಧಿಕಾರಿ ವಿನೀತಾ ಹೇಳುತ್ತಾರೆ.
ಕುಶಾಲನಗರದ ಬಳಿಯ ಗ್ರಾಮವೊಂದರಲ್ಲಿ ರೈತರೊಬ್ಬರು ಅವರ ಮನೆಯಂಗಳದ ಎರಡು ಎಕರೆ ಭೂಮಿಯಲ್ಲಿ ಶ್ರೀಗಂಧ ಬೆಳೆದಿದ್ದು ಇದೀಗ ಇದಕ್ಕೆ 15 ವರ್ಷಗಳಾಗುತ್ತಿದೆ. ಈಗಾಗಲೇ ದುಷ್ಕರ್ಮಿಗಳ ಕತ್ತಿಗೆ ಕೆಲವೊಂದು ಶ್ರೀಗಂಧದ ಮರಗಳು ಉರುಳಿದ್ದರಿಂದ ತೋಟದ ಸುತ್ತಲೂ ತಡೆಗೋಡೆ ಕಟ್ಟಲಾಗಿದೆ. ಹಾಗೆಯೇ ವಿದ್ಯುತ್ ಸಂಪರ್ಕ ಗೊಳಿಸಿ ರಾತ್ರಿ ಪಾಳಿ ಕಾವಲು ಕಾಯಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಶ್ರೀಗಂಧದ ಮರ ಗಿಡಗಳನ್ನು ಕದ್ದೊಯ್ದ ಬಗ್ಗೆ ಇಲಾಖೆಯಲ್ಲಿ ಇದೂವರೆಗೂ ಕೇವಲ 49 ಪ್ರಕರಣಗಳು ದಾಖಲಾಗಿವೆ. 27 ಮಂದಿ ಮರಗಳ್ಳರನ್ನು ಬಂಧಿಸಲಾಗಿದೆ. 1500 ಕೆಜಿ ಶ್ರೀಗಂಧವನ್ನು ಈ ಖದೀಮರಿಂದ ವಶಕ್ಕೆ ಪಡೆಯಲಾಗಿದೆ. ಆದರೆ, ಶ್ರೀಗಂಧದ ಕಳವು ಪ್ರಕರಣಗಳು ಕೇವಲ 49 ಅಲ್ಲದೇ ಬಹಳಷ್ಟು ಸಂಖ್ಯೆಯಲ್ಲಿದ್ದು, ಹಲವು ಮಂದಿ ದೂರು ನೀಡಲು ಹಿಂದೇಟು ಹಾಕುತ್ತಿರುವ ಕಾರಣ ದಾಖಲಾಗುವ ಪ್ರಕರಣಗಳ ಸಂಖ್ಯೆ ಕ್ಷೀಣಿಸಿದೆ ಎಂದು ಹೇಳಲಾಗುತ್ತಿದೆ.

ಶ್ರೀಗಂಧದ ಕೃಷಿ ರೈತರಿಗೆ ಕಷ್ಟವೇನಲ್ಲ. ಒಮ್ಮೆ ಒಂದೆಡೆ ಸಸಿ ತಂದು ನೆಟ್ಟು ಒಂದೆರಡು ವರ್ಷ ಆರೈಕೆ ಮಾಡಿದರಾಯಿತು. ಆದರೆ, ವರ್ಷಗಳು ಕಳೆದಂತೆ ಆ ಗಿಡಗಳು ಸೊಂಪಾಗಿ ಬೆಳೆದಂತೆ ಅವುಗಳನ್ನು ಕಟುಕರಿಂದ ರಕ್ಷಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಜೊತೆಗೆ ಬೆಳವಣಿಗೆ ಆದ ಶ್ರೀಗಂಧವನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆವುದು ಕೂಡ ಸಾಹಸದ ಕೆಲಸ. ಎಷ್ಟೆಲ್ಲಾ ಗುದ್ದಾಡಿ ಕೊನೆಗೆ ಶ್ರೀಗಂಧದ ಕೋಠಿಗೆ ಸಾಗಿಸಿದರೂ ಕೂಡ ಅಲ್ಲಿ ಮರಗಳ ಹರಾಜು ನಡೆದು, ಅದು ಮಾರಾಟವಾಗಿ ಬೆಳೆಗಾರರ ಕಿಸೆಗೆ ಹಣ ಸೇರಲು ವರ್ಷಗಳೇ ಕಳೆಯುತ್ತವೆ ಎಂಬ ಕೊರಗು ಕೃಷಿಕರಲ್ಲಿದೆ. ಸ್ವಾಭಾವಿಕ ವಾಗಿ ಬೆಳೆದು ನಿಂತ ಸಾಲು ಸಾಲು ಶ್ರೀಗಂಧದ ಗಿಡಗಳನ್ನು ಸಂರಕ್ಷಿಸಿ ಈ ಪ್ರದೇಶವನ್ನು ಶ್ರೀಗಂಧದ ಪಾರ್ಕ್ ಆಗಿ ಮಾಡುವ ಮೂಲಕ ಈ ಪ್ರದೇಶವನ್ನು ವಿಶೇಷ ವಲಯವಾಗಿ ರೂಪಿಸುವ ಹೊಣೆಗಾರಿಕೆಯನ್ನು ಅರಣ್ಯ ಇಲಾಖೆ ಕೈಗೊಂಡರೆ ಅಪಾರ ಕೃಷಿಕರ ಬದುಕಲ್ಲಿ ಖುಷಿ ಮೂಡುತ್ತದೆ. ಒಟ್ಟಾರೆ, ಪರಿಮಳ ಯುಕ್ತ ಶ್ರೀಗಂಧ ವನ್ನು ಸಾಹಸ ಪಟ್ಟು ಬೆಳೆಯುವ ರೈತರ ಬದುಕಲ್ಲಿ ಅರಣ್ಯ ಇಲಾಖೆ ಪರಿಶ್ರಮ ನೀಡುತ್ತಿರುವುದು ಮಾತ್ರ ವಿಪರ್ಯಾಸ.
-ಕೆ.ಎಸ್.ಮೂರ್ತಿ, ಕುಶಾಲನಗರ








