CinemaLatest

ಏ.17ಕ್ಕೆ ತೆರೆಗೆ ಬರಲಿದೆ ಭಕ್ತಿಪ್ರಧಾನ ಚಲನಚಿತ್ರ ‘ಸಂಕೀರ್ತನ’… ಇದು ಅದ್ಭುತ ಸಾಧನೆಯ ಚಿತ್ರ!

ಬೆಂಗಳೂರು:  ಕೆ ಪದ್ಮಕಲಾ ಗುಂಡೂರಾವ್   ಅರ್ಪಿಸುವ  ಸಾಫಲ್ಯ ಮೂವೀಸ್ ಅವರ ‘ಸಂಕೀರ್ತನ’ ಎಂಬ ಭಕ್ತಿಪ್ರಧಾನ ಚಲನಚಿತ್ರ  ಇದೆ ಏ.17ರಂದು ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ಡಿ.ಎಸ್. ಮಂಜುನಾಥ್(ಕಲಾ ಗಂಗೋತ್ರಿ ಮಂಜು) ಹೇಳಿದರು.

ದಾಸ ಶ್ರೇಷ್ಠರ ಮಹಿಮೆಯ ಕೀರ್ತನೆಗಳ ಸಂಗಮವೇ ‘ಸಂಕೀರ್ತನ’ ಚಿತ್ರ. ಕರ್ನಾಟಕದ ಸುವರ್ಣಯುಗ ಎನ್ನಲಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಅವತರಿಸಿದ ಯತಿ ಶ್ರೇಷ್ಠರ, ಕವಿ ಶ್ರೇಷ್ಠರ ಪರಸ್ಪರ ಸಮಾಗಮ, ಮಹಿಮಾ ಪ್ರದರ್ಶನ, ಕೀರ್ತನ ಗಾಯನದ ಅದ್ಭುತ ಚರಿತ್ರೆಯ ಕೆಲವು ಭಾಗಗಳನ್ನು ಬೇಲೂರು ಕೇಶವ ದಾಸರ ‘ಭಕ್ತ ವಿಜಯ’ ಮತ್ತಿತರ ಗ್ರಂಥ ಹಾಗೂ ಐತಿಹ್ಯಗಳನ್ನು ಅನುಸರಿಸಿ ಈ ಚಿತ್ರವನ್ನು ಸಿದ್ಧಪಡಿಸಲಾಗಿದೆ.

ಬೆಳ್ಳಿತೆರೆಯ ಇತಿಹಾಸದಲ್ಲಿಯೇ ಇದೊಂದು ಅಭೂತಪೂರ್ವ ಸಾಧನೆ ಎನ್ನಬಹುದು. ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ವೈಕುಂಠ ದಾಸರು, ಪುರಂದರದಾಸರು,  ಕನಕದಾಸರು ಮತ್ತು ಕುಮಾರವ್ಯಾಸ, ತಿಮ್ಮಣ್ಣ ಕವಿಯ ಈ ಯತಿ ಶ್ರೇಷ್ಠರ ಮಹಿಮೆ ಸಂಕೀರ್ತನಗಳ ಮಹಾಸಂಗಮವೇ ‘ಸಂಕೀರ್ತನ’ ಚಲನಚಿತ್ರ. ಈ ಚಿತ್ರವನ್ನು ಎಲ್ಲ ಸಮಾಜ ಬಂಧುಗಳು  ನೋಡಿ ಭಕ್ತಿ ಸಾಗರವನ್ನು ಉಳಿಸಿ ಬೆಳೆಸಬೇಕೆಂದು ನಿರ್ಮಾಪಕರಾದ ಕೆ.ಪದ್ಮಕಲಾ ಗುಂಡೂರಾವ್ ಹೇಳಿದರು.

ತಾರಾಗಣದಲ್ಲಿ  ಶ್ರೀಪಾದರಾಜರ ಪಾತ್ರದಲ್ಲಿ ಚಿತ್ರರಂಗದ ಹಿರಿಯ ಕಲಾವಿದರಾದ ರಮೇಶ್ ಭಟ್, ವ್ಯಾಸರಾಯರ ಪಾತ್ರದಲ್ಲಿ  ಡಾ.ಶ್ರೀಧರ್, ವಾದಿರಾಜರ ಪಾತ್ರದಲ್ಲಿ ನಟರಾಜ, ಪುರಂದರದಾಸರ ಪಾತ್ರದಲ್ಲಿ ವಿಜಯಾನಂದ ನಾಯಕ್, ವೈಕುಂಠ ದಾಸರ ಪಾತ್ರದಲ್ಲಿ  ರಾಮಕೃಷ್ಣ , ಸೌಮ್ಯ ನಾಯಕಿ ಪಾತ್ರದಲ್ಲಿ ಶ್ರೀಮತಿ ಕೆ. ಪದ್ಮಕಲಾ ಗುಂಡೂರಾವ್, ಕನಕದಾಸರ ಪಾತ್ರದಲ್ಲಿ ನಂಜುಂಡ ಅಜಯರಾಜ, ರವಿಕುಮಾರ ವಿಷ್ಣು ತೀರ್ಥ ಜೋಷಿ, ಅಶೋಕ ಬಿ.ಎ, ಶ್ರೀಹರಿ ಇತರ ಹಲವು ಕಲಾವಿದರು ನಟಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಎಂ.ಎಸ್.ಸಿದ್ಧರಾಜು,  ಜೆ.ಎಂ.ಪ್ರಹ್ಲಾದ ಕಥೆ- ಚಿತ್ರಕಥೆ ಬರೆದಿದ್ದು, ಪ್ರವೀಣ್ ಡಿ ರಾವ್ ಸಂಗೀತ ನಿರ್ದೇಶನ,  ಸುರೇಶ್ ಅರಸ್ ಸಂಕಲನ, ವಿಎಫ್ ಎಕ್ಸ್- ಆರ್.ಅನಿಲಕುಮಾರ್,  ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ನಿರ್ಮಾಣ ಮತ್ತು ನಿರ್ವಹಣೆ ವಿಜಯ್ ಭಾಸ್ಕರ್ ಹರಪನಹಳ್ಳಿ, ಚಿತ್ರದ ನಿರ್ಮಾಪಕರು ಕೆ.ಪದ್ಮಕಲಾ ಗುಂಡೂರಾವ್, ಜೆ.ಎಂ.ಪ್ರಹ್ಲಾದ, ಡಿ.ಎಸ್.ಮಂಜುನಾಥ, ಹೆಚ್.ವಿಜಯ್‌ಭಾಸ್ಕರ್ ಆಗಿದ್ದಾರೆ. ಇದೀಗ ಚಿತ್ರತಂಡ ರಾಜ್ಯಾದ್ಯಂತ ತಂಡದೊಂದಿಗೆ ಪ್ರಚಾರಕಾರ್ಯ ಆರಂಭಿಸಿದ್ದು ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕೆಂದು ನಿರ್ದೇಶಕ ಕಲಾಗಂಗೋತ್ರಿ ಮಂಜು ತಿಳಿಸಿದ್ದಾರೆ.

admin
the authoradmin

Leave a Reply

Translate to any language you want