‘ರವಿಕೆ ಪ್ರಸಂಗ’ದ ನಂತರ ಸಂತೋಷ್ ಕೊಡೆಂಕೇರಿಯವರ ಹೊಸ ಚಿತ್ರ ಯಾವುದು? ಚಿತ್ರೀಕರಣಕ್ಕೆ ಸಿದ್ಧತೆ!

ಬೆಂಗಳೂರು: ‘ರವಿಕೆ ಪ್ರಸಂಗ’ ಚಿತ್ರದ ನಂತರ ಹೊಸ ಚಿತ್ರವೊಂದನ್ನು ನಿರ್ದೇಶಕ ಸಂತೋಷ್ ಕೊಡೆಂಕೇರಿ ಘೋಷಿಸಿದ್ದಾರೆ ಹೀಗಾಗಿ ಸಿನಿಮಾ ಪ್ರೇಮಿಗಳಲ್ಲಿ ಹೊಸ ಕಾತರ ಶುರುವಾಗಿದೆ… ಈ ಚಿತ್ರ ಉತ್ತರ ಕರ್ನಾಟಕದ ಬದುಕು, ಸಂಸ್ಕೃತಿ ಮತ್ತು ದೈನಂದಿನ ಜೀವನವನ್ನು ಆಧರಿಸಿದ ಸಾಮಾಜಿಕ ಕಾಮಿಡಿ- ಡ್ರಾಮಾ ಆಗಿದೆ ಎನ್ನುವ ಸುಳಿವನ್ನು ಚಿತ್ರ ನಿರ್ದೇಶಕ ಬಿಟ್ಟುಕೊಟ್ಟಿದ್ದಾರೆ.
ಫಾರ್ಮುಲಾಗಳ ಹಿಂದೆ ಓಡದೇ, ಕಥೆಗಳನ್ನು ಕಟ್ಟುವ ಪ್ರಯತ್ನವೇ ತಮ್ಮ ಸಿನಿಮಾಗಳ ಮೂಲ ತತ್ವ ಎಂದು ಹೇಳುವ ನಿರ್ದೇಶಕ ಸಂತೋಷ್ ಕೊಡೆಂಕೇರಿ ಅವರ ಹೊಸ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಅವರ ಪತ್ನಿ ಹಾಗೂ ಲೇಖಕಿ ಪಾವನಾ ಸಂತೋಷ್ ಬರೆಯುತ್ತಿದ್ದಾರೆ. ಸಾಮಾನ್ಯ ಬದುಕಿನ ಸನ್ನಿವೇಶಗಳು, ಪರಿಚಿತ ಪಾತ್ರಗಳು ಮತ್ತು ದಿನನಿತ್ಯದ ಅನುಭವಗಳ ಮೂಲಕ ಕಥೆಯನ್ನು ಕಟ್ಟುವ ಪ್ರಯತ್ನ ಈ ಚಿತ್ರದಲ್ಲಿದೆ. ಉತ್ತರ ಕರ್ನಾಟಕದ ಸಾಮಾಜಿಕ ವಾತಾವರಣ, ಸಾಂಸ್ಕೃತಿಕ ಆಚರಣೆಗಳು ಹಾಗೂ ನೈಸರ್ಗಿಕ ಸೌಂದರ್ಯ ಈ ಚಿತ್ರದ ಪ್ರಮುಖ ಅಂಶಗಳಾಗಿವೆ. ವಿಷಯಕ್ಕೆ ನಿಷ್ಠರಾಗಿರುವುದೇ ತಮ್ಮ ಮೊದಲ ಆದ್ಯತೆ ಎನ್ನುತ್ತಾರೆ ಸಂತೋಷ್ ಕೊಡೆಂಕೇರಿ.

“ನಾವು ಫಾರ್ಮುಲಾಗಳ ಹಿಂದೆ ಓಡೋದಿಲ್ಲ, ಕಥೆಗಳನ್ನು ಕಟ್ಟ್ತೇವೆ. ವಿಷಯಾಧಾರಿತ ಸಿನಿಮಾ ಮಾಡೋದಕ್ಕೆ ಧೈರ್ಯ ಬೇಕು—ನಿಜವಾದ ಕಥೆಗಳನ್ನು ಹೇಳುವ, ಕಠಿಣ ಪ್ರಶ್ನೆಗಳನ್ನು ಕೇಳುವ ಮತ್ತು ಪ್ರೇಕ್ಷಕರ ಮನಸ್ಸಿಗೆ ತಲುಪುವ ಧೈರ್ಯ. ಅದೇ ನಾನು ಮಾಡಬೇಕೆನ್ನುವ ಸಿನಿಮಾ ಎನ್ನುತ್ತಾರೆ. ಅತಿರಂಜಿತ ದೃಶ್ಯಗಳು ಮತ್ತು ಗಿಮಿಕ್ ಗಳ ಬದಲು, ಮಾನವೀಯ ಕ್ಷಣಗಳು, ಸ್ಥಳೀಯ ಸಂಪ್ರದಾಯಗಳು ಮತ್ತು ಉತ್ತರ ಕರ್ನಾಟಕದ ಬದುಕಿನ ನೈಜ ಸೌಂದರ್ಯದಿಂದಲೇ ಈ ಚಿತ್ರ ತನ್ನ ಬಲ ಪಡೆಯುತ್ತದೆ. ಪ್ರೇಕ್ಷಕರು ತಮ್ಮದೇ ಬದುಕಿನ ಪ್ರತಿಬಿಂಬವನ್ನು ಪರದೆಯ ಮೇಲೆ ಕಾಣುವಂತೆ ಮಾಡುವುದೇ ಚಿತ್ರದ ಉದ್ದೇಶ.
ಇದೀಗ ನಿರ್ಮಾಣ ಸಂಸ್ಥೆ ಉತ್ತರ ಕರ್ನಾಟಕದ ನಟರು ಮತ್ತು ನಟಿಯರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಆಯ್ಕೆ ಪ್ರಕ್ರಿಯೆಗೆ ಆಹ್ವಾನ ನೀಡಿದೆ. ಸ್ಥಳೀಯ ಪ್ರತಿಭೆಗಳು ಮತ್ತು ಹೊಸ ಮುಖಗಳು ಚಿತ್ರದ ನೈಜತೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎನ್ನುತ್ತಾರೆ. ಪ್ರಸ್ತುತ ಚಿತ್ರವು ಪೂರ್ವ ತಯಾರಿ ಹಂತದಲ್ಲಿದ್ದು, ಮುಂದಿನ ಹಂತದ ಚಿತ್ರೀಕರಣದತ್ತ ತಂಡ ಸಿದ್ಧಗೊಳ್ಳುತ್ತಿದೆ. ಪಾತ್ರಗಳ ಆಯ್ಕೆ ಮತ್ತು ಚಿತ್ರೀಕರಣ ವೇಳಾಪಟ್ಟಿಯ ಕುರಿತು ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದೆಂದು ತಿಳಿಸಿದ್ದಾರೆ.








