CrimeLatest

ಹೆಂಡತಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪಾಪಿ ಗಂಡ ಅರೆಸ್ಟ್… ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ

ಸರಗೂರು(ದಾಸೇಗೌಡ): ಹೆಂಡತಿಯನ್ನು ಹೊಡೆದು ಕೊಂದು ಬಳಿಕ ಸೀರೆಯಿಂದ ನೇತು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿ ತಲೆಮರೆಸಿಕೊಂಡಿದ್ದ ಗಂಡನನ್ನು ಘಟನೆ ನಡೆದ ಆರು ಗಂಟೆಯೊಳಗೆ ಬಂಧಿಸುವಲ್ಲಿ ಸರಗೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ಬಿದರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಕೇರಳಾಪುರ ಗ್ರಾಮದ ನಿವಾಸಿಯಾದ ಜಗದೀಶ್(45) ಬಂಧಿತ ಆರೋಪಿ. ಈತ ಹೊಸ ಬಿದರಹಳ್ಳಿ ಗ್ರಾಮದಲ್ಲಿ ಚಿನಿವಾರ ಅಂಗಡಿ ವ್ಯಾಪಾರ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದನು. ಸುಮಾರು 12 ವರ್ಷಗಳ ಹಿಂದೆ ಈತ ಹುಣಸೂರು ತಾಲ್ಲೂಕು ಚಾಬಗೆರೆ ಗ್ರಾಮದ ನಿವಾಸಿ ದಿವಂಗತ ಸೋಮಶೇಖರಾಚಾರಿ ರವರ ಪುತ್ರಿ ಶ್ರುತಿ(29) ಎಂಬಾಕೆಯನ್ನು ಮದುವೆಯಾಗಿದ್ದು,  ಮೋನಿಕ ಮತ್ತು ನವೀನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಏ.2ರಂದು ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ಮನೆಗೆ ಬಂದ ಜಗದೀಶ್ ಹೆಂಡತಿಯ ಮೇಲೆ ಅನುಮಾನಗೊಂಡು ಜಗಳ ತೆಗೆದಿದ್ದು, ಇದು ಅತಿರೇಖಕ್ಕೆ ಹೋಗಿ ಆಕೆಗೆ ಕೈಯಿಂದ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಇದರಿಂದ ಭಯಗೊಂಡ ಆತ ಶವವನ್ನು ಮನೆಯ ತೊಲೆಗೆ ಸೀರೆಯಿಂದ ನೇಣು ಹಾಕಿ ಅಲ್ಲಿಂದ ತಲೆಮರೆಸಿಕೊಂಡಿದ್ದನು.

ಘಟನೆ ಬಗ್ಗೆ ಸರಗೂರು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಬಾವಮೈದುನ ಕಾರ್ತಿಕ್ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹುಣಸೂರು ಪೊಲೀಸ್ ಉಪಾಧೀಕ್ಷಕರಾದ   ರವಿ ರವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಆರೋಪಿಯನ್ನು ಬಂಧಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಈ ಸಂಬಂಧ ಸರಗೂರು ವೃತ್ತ ನಿರೀಕ್ಷಕ ಪ್ರಸನ್ನಕುಮಾರ್  ನೇತೃತ್ವದಲ್ಲಿ ಸರಗೂರು ಪೊಲೀಸ್ ಠಾಣೆಯ ಪಿಎಸ್‌ಐ ಗಳಾದ   ಕಿರಣ್ ಆರ್, ಗೋಪಾಲ ಎಲ್ ಹಾಗೂ ಅಂತರಸಂತೆ ಠಾಣೆ ಪಿಎಸ್‌ಐ ಕುಮಾರ ಆರ್ ಹಾಗೂ ಸರಗೂರು ಠಾಣೆಯ ಎಎಸ್‌ಐಗಳಾದ ಕೃಷ್ಣಕುಮಾರ, ಶ್ರೀಕಂಠಸ್ವಾಮಿ ಹಾಗೂ ಸಿಬ್ಬಂದಿಗಳಾದ ಇಮ್ರಾನ್ ಅಹಮದ್, ಗೋಪಾಲಕೃಷ್ಣ, ಜಗದೀಶ, ಸುನೀಲ್ ಕುಮಾರ್ ಕೆ ವೈ, ನವೀನ್, ಸುನೀಲ್ ರಮೇಶ, ವಿನಯ್ ದೇವರಾಜು, ನಂದೀಶ್, ಗಣೇಶ್, ಬಾಲಕೃಷ್ಣ ಆನಂದ ಮತ್ತು ಶಿವಪ್ಪ ಹಾಗೂ ಮಹಿಳಾ ಮುಖ್ಯ ಪೇದೆ ಶ್ರೀಮತಿ ಶೋಭಾ ಅವರುಗಳಿದ್ದ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.

ಈ  ತಂಡವು ಆರೋಪಿಯ ಬಂಧನಕ್ಕೆ ಬಲೆ ಬೀಸಿತ್ತು. ಈ ನಡುವೆ ಆರೋಪಿ ಜಗದೀಶ್ ನಂಜನಾಥನಪುರದಲ್ಲಿರುವುದನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸುವಲ್ಲಿ ತನಿಖಾ ತಂಡವು ಯಶಸ್ವಿಯಾಗಿದೆ. ಘಟನೆ ನಡೆದ ಆರು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿರುವ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿರುವ  ಎಸ್ಪಿ ವಿಶೇಷ ಬಹುಮಾನವನ್ನು ಘೋಷಿಸಿದ್ದಾರೆ.

admin
the authoradmin

Leave a Reply

Translate to any language you want