ಸರಗೂರು(Saraguru Dasegowda): ಪಟ್ಟಣದ ಸಮೀಪವಿರುವ ಗೊಂತಗಾಲಹುಂಡಿ ಗ್ರಾಮದಲ್ಲಿ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಉದ್ಘಾಟನೆ, ಕಳಸ ಪ್ರತಿಷ್ಠಾಪನಾ ಮಹೋತ್ಸವ ಭಾರೀ ವಿಜೃಂಭಣೆಯಿಂದ ಅದ್ಧೂರಿಯಾಗಿ ನೆರವೇರಿತು.
ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನೂತನ ಬಿಳಿಗಿರಿ ಶ್ರೀ ರಂಗನಾಥ ಸ್ವಾಮಿ ದೇವರ ಮೂರ್ತಿಯನ್ನು ನದಿಗೆ ಕೊಂಡೊಯ್ದು ವಿಗ್ರಹಕ್ಕೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ನಂತರ ನದಿಯಿಂದ ಕಂಡಾಯ, ಸತ್ತಿಗೆ, ಸುರಪಾಣಿ, ಕಂಸಾಳೆ ನೃತ್ಯ, ಮಂಗಳವಾದ್ಯದೊಂದಿಗೆ ಗುಡ್ಡಪ್ಪರವರುಗಳು ಮಣೆಸೇವೆ ಮಾಡಿ ಪ್ರಮುಖ ರಸ್ತೆ ಮುಖಾಂತರ ಇಲ್ಲಿನ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ದೇವರ ಉತ್ಸವ ಮೂರ್ತಿ ದೇವಸ್ಥಾನದ ಬಳಿಗೆ ಬಂದ ಕೂಡಲೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ನಂತರ ಇಳಿ ತೆಗೆದು ಸ್ವಾಗತಿಸಿದರು. ಮೂರ್ತಿಯನ್ನು ದೇವಸ್ಥಾನದ ಒಳಗೆ ಕೊಂಡೊಯ್ದು ವಿಧಿ ವಿಧಾನದಂತೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಲಾಯಿತು. ಇದಕ್ಕೂ ಮುನ್ನ ದೇವರ ಬಿರುದು ಹೊತ್ತ ಭಕ್ತರು ಬಿಳಿಗಿರಿ ಶ್ರೀ ರಂಗನಾಥ ಸ್ವಾಮಿಯನ್ನು ಭಕ್ತಿ ಭಾವದಿಂದ ನೆನೆದರು. ದೇವರ ಗುಡ್ಡರು ಬಹುಪರಾಕ್ ಘೋಷಣೆ ಕೂಗಿದರು.
ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ದೇವಸ್ಥಾನದ ಈ ಪೂಜಾ ಮಹೋತ್ಸವದ ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ಹರೀಶ್ ರವರ ನೇತೃತ್ವದಲ್ಲಿ ನಡೆಸಲಾಯಿತು. ಇಲ್ಲಿನ ಅರ್ಚಕರಾದ ಮಾದೇವನಾಯಕ ಹಾಜರಿದ್ದರು. ಈ ನೂತನ ದೇವಸ್ಥಾನದ ಸಂಪೂರ್ಣ ನೇತೃತ್ವವನ್ನು ಈ ಗ್ರಾಮದ ಬಿಳಿಗಿರಿ ಶ್ರೀ ರಂಗನಾಥ ಸ್ವಾಮಿ ಕಮಿಟಿ ವತಿಯಿಂದ ಯಜಮಾನರು ಹಾಗೂ ಚಿಕ್ಕ ಯಜಮಾನ್ರು, ಇಲ್ಲಿನ ಎಲ್ಲ ಗ್ರಾಮಸ್ಥರು ವಹಿಸಿಕೊಂಡಿದ್ದರು.

ಭಕ್ತರು ದರ್ಶನ ಮಾಡಲು ಅನುವು ಮಾಡಿಕೊಡಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಅನ್ನ ಸಂತರ್ಪಣೆ ನೆರವೇರಿತು. ಈ ನೂತನ ದೇವಸ್ಥಾನದ ಪೂಜಾ ಮಹೋತ್ಸವ ಭಾರಿ ವಿಜೃಂಭಣೆಯಿಂದ ಅತ್ಯಂತ ಭಕ್ತಿ, ಶ್ರದ್ಧೆಯಿಂದ ನಡೆಯಿತು, ನೂರಾರು ಭಕ್ತರ ಸಾನ್ನಿಧ್ಯದಲ್ಲಿ ಧಾರ್ಮಿಕ ಆಚರಣೆಗಳು ಸಂಭ್ರಮದಿಂದ ಜರುಗಿದವು.
ಇಲ್ಲಿನ ಬಿಳಿಗಿರಿ ಶ್ರೀರಂಗನಾಥ ಸ್ವಾಮಿ ದೇವಾಲಯವನ್ನು ಹಿಂದಿನ ದಿನದಿಂದಲೇ ದೇವಾಲಯವನ್ನು ತಳಿರು-ತೋರಣ, ಬಣ್ಣ ಬಣ್ಣದ ರಂಗೋಲಿ ಹಾಗೂ ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಬಗೆ ಬಗೆಯ ಹೂವುಗಳಿಂದ ಹಾಗೂ ದೇವಸ್ಥಾನ ಸೇರಿದಂತೆ ಸುತ್ತ ಮುತ್ತಲು ವಿದ್ಯುತ್ ದೀಪಗಳಿಂದ ಇಡಿ ಗೊಂತಗಾಲಹುಂಡಿ ಗ್ರಾಮ ಜಗಮಗಿಸುತ್ತಿತ್ತು.

ಶಾಸಕ ಅನಿಲ್ ಚಿಕ್ಕಮಾದು ಹಾಗೂ ಮುಖಂಡ ಕೃಷ್ಣ ನಾಯಕ ಇನ್ನಿತರರು ಭೇಟಿ ನೀಡಿದ್ದರು. ಈ ಸಂಬಂಧ ಇಲ್ಲಿನ ಯಜಮಾನರಾದ ಮಾದೇವರವರು, ಚಿಕ್ಕ ಯಜಮಾನ ಮಾದಪ್ಪ, ಗಡಿ ಯಜಮಾನ ಚಿಕ್ಕನಾಯಕ, ಚೆನ್ನಪ್ಪನಾಯಕ, ನಿಂಗನಾಯಕ, ನಾಗರಾಜು, ರಾಮನಾಯಕ, ಮಾದೇವನಾಯಕ, ಚಿಕ್ಕಣ್ಣ, ರವಿಕಿಚ್ಚ, ಸೋಮೇಶ್ ನಾಯಕ, ಸಿದ್ದನಾಯಕ, ಹಾಲನಾಯಕ, ಮರಿಗಂಡನಾಯಕ, ಲಕ್ಷ್ಮಣ, ಬೈರನಾಯಕ, ನಾಗರಾಜನಾಯಕ, ಕರಿಯ, ನಿಂಗಪ್ಪ, ಹುಚ್ಚಪ್ಪ, ಮಹೇಶ್, ರಮೇಶ್ ಸೇರಿದಂತೆ ಸರಗೂರು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು.








