ಸರಗೂರು: ಪಟ್ಟಣದಲ್ಲಿ ವಿಕಲಚೇತನರ ಹಿತರಕ್ಷಣೆಗೆ ಇರುವ ಕಾನೂನುಗಳ ಸೌಲಭ್ಯಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ಯಾನೆಲ್ ವಕೀಲ ಹಾಗೂ ತಾಲೂಕು ವಕೀಲರ ಸಂಘದ ಸಹ ಕಾರ್ಯದರ್ಶಿ ಮಣಿರಾಜು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸರಗೂರು ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ವಿಶೇಷ ವಿಕಲಚೇತನರ ದಿನ ಹಾಗೂ ಇಂದು ರಕ್ಷಿಸಿ ನಾಳೆ ಸುರಕ್ಷಿತ ಎಂಬ ಪರಿಸರ ಕಾನೂನು ಸಾಕ್ಷರತೆ ವಿಷಯವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರು ಸರ್ಕಾರದ ಉದ್ಯೋಗಾವಕಾಶಗಳು ಹಾಗೂ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸ್ಥಳೀಯ ನ್ಯಾಯಾಲಯದ ಮೂಲಕ ಉಚಿತ ಕಾನೂನು ನೆರವು ಪಡೆಯುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಕಲಚೇತನರಿಗೆ ಸರಕಾರದಿಂದ ಸಿಗುವ ಅನುದಾನಗಳು ಸರಿಯಾಗಿ ತಲುಪುವಂತೆ ಎಲ್ಲರೂ ಶ್ರಮಿಸಬೇಕೆಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಓ ಪ್ರೇಮ್ ಕುಮಾರ್, ವಿಕಲಚೇತನರಿಗಾಗಿ ನಾಲ್ಕು ಹಂತದ ಕಾರ್ಯಕ್ರಗಳನ್ನು ಜಾರಿಗೊಳಿಸುವ ಅಗತ್ಯವಿದೆ. 0–6 ವರ್ಷದ ಮಕ್ಕಳಿಗೆ ಶೀಘ್ರ ಪತ್ತೆ ಹಚ್ಚುವಿಕೆ, 6–14 ವರ್ಷದ ಮಕ್ಕಳಿಗೆ ಶಿಕ್ಷಣ, ಯುವಜನರಿಗೆ ಉದ್ಯೋಗಾಧಾರಿತ ಕಾರ್ಯಕ್ರಮಗಳು ಹಾಗೂ ಇತರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಕಲಚೇತನರ ಸಂಯೋಜಕ ಜವರಾಜು ಹೆಚ್.ಎಸ್ ಕಳೆದ ಹಲವು ವರ್ಷಗಳಿಂದ ವಿಕಲಚೇತನ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ಬಾರಿ ವಿಭಿನ್ನ ವಿಷಯಗಳ ಮೇಲೆ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು. ವಿಕಲಚೇತನರು ಸರ್ಕಾರದ ಸೌಲಭ್ಯ ಪಡೆಯಲು ಯುಡಿಆರ್ ಕಾರ್ಡ್ ಮಾಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಾರ್ಡ್ ಮಾಡಲಾಗುತ್ತಿದ್ದು, ಇದರಿಂದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಸರಗೂರು ಆರೋಗ್ಯ ಇಲಾಖೆಯ ಆಡಳಿತ ಅಧಿಕಾರಿ ಡಾ” ಪಾರ್ಥಸಾರಥಿ ಯುಡಿಆರ್ ಕಾರ್ಡ್ ಬಗ್ಗೆ ವಿಕಲಚೇತನರಿಗೆ ಯಾವ ರೀತಿ ಪಡೆಯಬೇಕೆಂದು ವಿವರವಾಗಿ ತಿಳಿಸಿದರು. ಸರಗೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಂತೋಷ್ ಎಸ್ ಕೆ, ಪ್ಯಾನೆಲ್ ವಕೀಲ ಮಹೇಶ್ ಕುಮಾರ್ ಬಿ.ಎನ್ ಹಾಗೂ ವಕೀಲ ಶ್ರೀಕಂಠಮೂರ್ತಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್ (ವೀರೇಶ್), ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಹೆಚ್.ಡಿ.ಕೋಟೆ ವಿಕಲಚೇತನರ ಸಂಯೋಜಕ ಎಸ್.ಎಸ್.ಮಹಾದೇವಯ್ಯ, ತಾಲೂಕು ಕಾನೂನು ಸೇವಾ ಸಮಿತಿ ಸಿಬ್ಬಂದಿಗಳಾದ ಕವಿತಾ, ಶೃತಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಸೋಮೇಶ್, ಬಸವರಾಜು, ಮಾದೇವಮೂರ್ತಿ, ಕೆಂಡಗಣ್ಣ, ಸಂತೋಷ್, ಚಿನ್ನಪ್ಪ, ನಾಗರಾಜು, ಕುಮಾರಸ್ವಾಮಿ ಸೇರಿದಂತೆ ಅನೇಕ ಮುಖಂಡರು ಹಾಗೂ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









