ಮೈಸೂರು: ಸಮಾಜದ ಪ್ರಗತಿಗೆ ಬಹುದೊಡ್ಡ ತೊಡಕಾಗಿರುವ ಹಾಗೂ ಜನಸಾಮಾನ್ಯರ ಬದುಕನ್ನು ಸದಾ ಕಾಡುತ್ತಿರುವ ಭ್ರಷ್ಟಾಚಾರದ ಪಿಡುಗನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಯುವಜನರು ಮತ್ತು ವಿದ್ಯಾರ್ಥಿಗಳು ಸಂಘಟಿತ ಹೋರಾಟ ಮಾಡಬೇಕು ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ತಾಲ್ಲೂಕಿನ ದೊಡ್ಡಕಾನ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜಯಲಕ್ಷ್ಮೀಪುರಂನ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ‘ಯೂತ್ ಫಾರ್ ಮೈ ಭಾರತ್’ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ‘ವಿದ್ಯಾರ್ಥಿ ಯುವಜನರು ಮತ್ತು ಭ್ರಷ್ಟಾಚಾರ ನಿರ್ಮೂಲನೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಅನಾದಿ ಕಾಲದಿಂದಲೂ ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಜಾತೀಯತೆ, ಧರ್ಮಾಂಧತೆ, ಭ್ರಷ್ಟಾಚಾರ ಪ್ರಮುಖವಾಗಿವೆ. ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಹಾಗೂ ಜನರ ನೆಮ್ಮದಿ ದೂರಾಗಿದೆ. ಅದರಲ್ಲೂ ಭ್ರಷ್ಟಾಚಾರದಿಂದಾಗಿ ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾದ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಯಾವುದೇ ಸರ್ಕಾರಿ ಅಧಿಕಾರಿ ಅಥವಾ ನೌಕರ ಸಕಾಲಕ್ಕೆ ನ್ಯಾಯಯುತವಾದ ತಮ್ಮ ಕೆಲಸ ಕಾರ್ಯ ಮಾಡಿಕೊಡದೆ ವಿಳಂಬ ಮಾಡಿದರೆ, ನಿರ್ಲಕ್ಷ್ಯ ತೋರಿದರೆ, ಲಂಚಕ್ಕಾಗಿ ಒತ್ತಾಯಿಸಿದರೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಬೇಕು. ಪ್ರತಿ ಸರ್ಕಾರಿ ಕಚೇರಿಯಲ್ಲಿ ಲೋಕಾಯುಕ್ತವನ್ನು ಸಂಪರ್ಕಿಸಲು, ಅದರ ದೂರವಾಣಿ ಸಂಖ್ಯೆ ಮತ್ತು ಕಚೇರಿ ವಿಳಾಸದ ಫಲಕ ಹಾಕಲಾಗಿರುತ್ತದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಮಗೆ ಸಂವಿಧಾನ ಹಲವು ಹಕ್ಕುಗಳನ್ನು ನೀಡಿದೆ. ಅದರಲ್ಲಿ ಅಭಿವ್ಯಕ್ತಿ ಸ್ವಾತಂತ್ಯ ಹಾಗೂ ಮಾಹಿತಿ ಹಕ್ಕು ಗಮನಾರ್ಹವಾಗಿವೆ. ಯುವಜನರು ಈ ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿ ಅನ್ಯಾಯವನ್ನು ಪ್ರಶ್ನಿಸಬೇಕು. ಜೊತೆಗೆ ಮಾಹಿತಿ ಹಕ್ಕು ಅಸ್ತ್ರ ಬಳಸಿ ಭ್ರಷ್ಟಾಚಾರಿಗಳ ಜಾತಕ ಬಯಲು ಮಾಡಬೇಕು. ಆ ಮೂಲಕ ಲಂಚ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ನುಡಿದರು.
ಸ್ವಜನ್ಯ ಕಲಾ ವೇದಿಕೆಯ ಅಧ್ಯಕ್ಷ ಎಸ್. ಶಿಶಿರಂಜನ್ ಮಾತನಾಡಿ ತರಗತಿಯ ಪಾಠಗಳು, ಪರೀಕ್ಷೆಗಳು ಹಾಗೂ ಹೆಚ್ಚು ಅಂಕಗಳ ಗಳಿಕೆಯ ಒತ್ತಡದಲ್ಲಿ ಮುಳುಗಿರುವ ವಿದ್ಯಾರ್ಥಿಗಳಿಗೆ ಪ್ರಚಲಿತ ಸಾಮಾಜಿಕ ವಿದ್ಯಮಾನಗಳ ಅರಿವಿಲ್ಲ. ಸಾಮಾಜಿಕ ಪ್ರಜ್ಞೆಯ ಮನೋಭಾವವಂತೂ ಇಲ್ಲವೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಶಿಕ್ಷಣವು ವಿದ್ಯಾರ್ಥಿಗಳನ್ನು ಅಕ್ಷರಸ್ಥರನ್ನಾಗಿ, ಬುದ್ಧಿವಂತರನ್ನಾಗಿ ಮಾಡಿದರೆ, ಎನ್.ಎಸ್.ಎಸ್. ಶಿಬಿರಗಳು ಅವರಲ್ಲಿ ಸಾಮಾಜಿಕ ಪ್ರಜ್ಞೆ, ಕಾಳಜಿ, ಸೇವಾ ಮನೋಭಾವ ಬೆಳೆಸುವ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ವೇದಿಕೆಯಲ್ಲಿ ಎನ್.ಎಸ್.ಎಸ್. ಶಿಬಿರಾಧಿಕಾರಿ ಎಸ್. ಆನಂದ್, ಸಹ ಶಿಬಿರಾಧಿಕಾರಿಗಳಾದ ಎಂ.ಆರ್. ಮೇಘನ ಮತ್ತು ಬಿ.ಎಸ್. ಆಶಾ, ಉಪನ್ಯಾಸಕ ಧರ್ಮೇಂದ್ರ, ಟಿ. ನರಸೀಪುರ ವಿದ್ಯೋದಯ ಕಾಲೇಜಿನ ಗ್ರಂಥಪಾಲಕ ಶಿವಮೂರ್ತಿ, ಗ್ರಾಮದ ಮುಖಂಡರಾದ ಮಹದೇವಪ್ಪ, ವಿವೇಕಾನಂದ, ಮಲ್ಕಣ್ಣ, ಶಿವಮೂರ್ತಿ ಉಪಸ್ಥಿತರಿದ್ದರು.








